ಅಪ್ಪಾಜಿ ನನ್ನ ಲೈಫ್ ನ ಬೆಸ್ಟ್ ಟೀಚರ್
ಶಿವಣ್ಣ ಮೇಸ್ಟ್ರು ಹೇಳಿದ ಸ್ಕೂಲ್ ಡೇಸ್ ಸ್ಟೋರಿ
Team Udayavani, Mar 6, 2020, 5:27 AM IST
“ನನ್ನ ರಿಯಲ್ ಲೈಫ್ ನಲ್ಲಿ ಬೆಸ್ಟ್ ಟೀಚರ್ ಅಂದರೆ, ಅದು ಅಪ್ಪಾಜಿ ಮಾತ್ರ. ಅವರೇ ನನ್ನ ಬದುಕಿನ ಗುರು…’
– ಇದು ಶಿವರಾಜಕುಮಾರ್ ಅವರ ಪ್ರೀತಿಯ ಮಾತು. ಅವರು ಹೀಗೆ ಹೇಳ್ಳೋಕೆ ಕಾರಣ, “ದ್ರೋಣ’. ಹೌದು, “ದ್ರೋಣ’ ಚಿತ್ರದಲ್ಲಿ ಶಿವರಾಜಕುಮಾರ್ ಸ್ಕೂಲ್ ಮಾಸ್ಟರ್ ಪಾತ್ರ ನಿರ್ವಹಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರೊಬ್ಬ ಸರ್ಕಾರಿ ಶಾಲೆಯ ಮೇಷ್ಟ್ರು ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಇಂದು ತೆರೆಕಾಣುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಸ್ಕೂಲ್ ಡೇಸ್ ಕುರಿ ತು ಸಾಕಷ್ಟು ವಿಷಯ ಹಂಚಿಕೊಂಡಿದ್ದಾರೆ.
ಶಿವರಾಜಕುಮಾರ್ ಅಭಿನಯದ “ದ್ರೋಣ’ 121ನೇ ಚಿತ್ರ. ಇದು ಅವರ ಕೆರಿಯರ್‌ನಲ್ಲಿ ಸ್ಪೆಷಲ್ ಸಿನಿಮಾ ಅಂದರೆ ತಪ್ಪಿಲ್ಲ. ಕಾರಣ, ಇದೇ ಮೊದಲ ಬಾರಿಗೆ ಅವರು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಮೇಷ್ಟ್ರು ಪಾತ್ರ ಮಾಡಿದ್ದಾರೆ. ಅಂದಹಾಗೆ, ಈವರೆಗೆ ಲಾಂಗು, ಮಚ್ಚು, ಗನ್ನು ಹಿಡಿದಿದ್ದ ಅವರು ಮೊದಲ ಸಲ ಬೆತ್ತ ಹಿಡಿದಿದ್ದಾರೆ. ಹಾಗಂತ, ಅವರು ಮೊದಲ ಬಾರಿಗೆ ಪೆನ್ ಹಿಡಿದಿಲ್ಲ. ಈ ಹಿಂದೆ “ಸುಂದರಕಾಂಡ’ ಚಿತ್ರದಲ್ಲೂ ಅವರು ಹೈಸ್ಕೂಲ್ ಮೇಷ್ಟ್ರು ಆಗಿ ಕಾಣಿಸಿಕೊಂಡಿದ್ದರು. ಈಗ “ದ್ರೋಣ’ದಲ್ಲೂ ಪೆನ್ ಹಿಡಿದಿದ್ದಾರೆ. ಜೊತೆಗೆ ಕಪ್ಪು ಬೋರ್ಡ್ ಮೇಲೆ ಬಳಪ ಹಿಡಿದು ಪಾಠ ಮಾಡುವ ಮೇಷ್ಟ್ರು ಆಗಿ ಮಕ್ಕಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ. ಆ ಕುರಿತು ಅವರು ಹೇಳುವುದು ಹೀಗೆ. “ನಾನಿಲ್ಲಿ ಬೆತ್ತ ಹಿಡಿದು ಮಕ್ಕಳಿಗೆ ಪಾಠ ಮಾಡಿದ್ದೇನೆ. ಹಾಗಂತ, ಬೆತ್ತ ಹಿಡಿದು ಮಕ್ಕಳಿಗೆ ಒದೆ ಕೊಟ್ಟಿಲ್ಲ. ಬೆತ್ತ ಹಿಡಿದೇ ಮಕ್ಕಳನ್ನು ತಿದ್ದುವ ಪ್ರಯತ್ನ ಮಾಡುತ್ತೇನೆ. ಹಾಗೆ ನೋಡಿದರೆ, ನಿರ್ದೇಶಕ ಪ್ರಮೋದ್ ಚಕ್ರವರ್ತಿಗೆ ಆ್ಯಕ್ಷನ್ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಆ್ಯಕ್ಷನ್ ಸಿನಿಮಾಗಳನ್ನು ಸಾಕಷ್ಟು ನಿರ್ದೇಶಕರು ಮಾಡುತ್ತಲೇ ಇರುತ್ತಾರೆ. ನೀನೂ ಸಹ ಆ ಸಾಲಿಗೆ ಸೇರಬೇಡ, ಏನಾದರೂ ಹೊಸ ಕಥೆ ಮೂಲಕ ವಿಭಿನ್ನ ಚಿತ್ರ ಮಾಡು ಅಂದಾಗ, “ದ್ರೋಣ’ ಕಥೆ ಹಿಡಿದು ಸಿನಿಮಾ ಮಾಡಿದ್ದಾರೆ. ಇಲ್ಲಿ ನಾನು ಕಂಪ್ಲೀಟ್ ಹೊಸ ಗೆಟಪ್‌ನಲ್ಲೇ ಇರುತ್ತೇನೆ. ನನ್ನ ಮ್ಯಾನರಿಸಂ ಕೂಡ ವಿಶೇಷವಾಗಿದೆ. ಫಾರ್ಮಲ್ ಡ್ರೆಸ್ಸು, ಸದಾ ಹೆಗಲಿಗೊಂದು ಬ್ಯಾಗು ಆ ಪಾತ್ರದ ಹೈಲೈಟ್’ ಎಂದು ವಿವರ ಕೊಡುತ್ತಾರೆ ಶಿವರಾಜಕುಮಾರ್.
ಚಿತ್ರದಲ್ಲೊಂದು ವಿಶೇಷವೂ ಇದೆ. ಆ ಬಗ್ಗೆ ಹೇಳುವ ಅವರು, “ಚಿತ್ರದಲ್ಲಿ ನಾನು ಬಲಗೈಗೆ ವಾಚ್ ಕಟ್ಟಿರುವುದು ಸ್ಪೆಷಲ್. ನನ್ನ ಪಾತ್ರ ಬಲಗೈಗೆ ವಾಚ್ ಕಟ್ಟುವುದಕ್ಕೂ ಒಂದು ಕಾರಣವಿದೆ. ಯಾವಾಗ, ನನ್ನ ಬಲಗೈನಿಂದ ಎಡಗೈಗೆ ವಾಚ್ ಶಿಫ್ಟ್ ಆಗುತ್ತೋ, ಆಗ ಅಲ್ಲೊಂದು ಘಟನೆ ನಡೆಯುತ್ತೆ. ಅದು ಫೈಟ್ ಆಗಿರಬಹುದು ಅಥವಾ ಇನ್ನೇನೋ ಇರಬಹುದು. ಹಾಗಾಗಿ, ಇಲ್ಲಿ ವಾಚ್ ಕೂಡ ಪ್ರಮುಖ ಪಾತ್ರ ವಹಿಸಿದೆ’ ಎನ್ನಬಹುದು ಎಂದು ಹೇಳುವ ಶಿವರಾಜಕುಮಾರ್, ಈ ಚಿತ್ರ ನನಗೂ ಸ್ಕೂಲ್ ಡೇಸ್ ನೆನಪು ಮಾಡಿಕೊಟ್ಟಿದೆ. ನಾನೂ ಕೂಡ ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ. ಚಿತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿನ ಸೌಲಭ್ಯ ಹೇಗಿರುತ್ತೆ, ಅಲ್ಲಿನ ಸಮಸ್ಯೆ, ದುಸ್ಥಿತಿ, ಪರಿಸ್ಥಿತಿ ಬಗ್ಗೆ ತೋರಿಸಲಾಗಿದೆ.
ಹಾಗಂತ, ಇಲ್ಲಿ ಎಜುಕೇಷನ್ ಸಿಸ್ಟಂ ಬಗ್ಗೆಯಾಗಲಿ, ಪರಿಹಾರದ ಕುರಿತಾಗಲಿ ಹೇಳಿಲ್ಲ. ಆದರೆ, ಅದೆಲ್ಲಕ್ಕಿಂತಲೂ ಒಂದು ಮುಖ್ಯವಾದ ವಿಷಯವನ್ನು ಹೇಳಲಾಗಿದೆ. ಬದಲಾಗಬೇಕು. ಅದು ಆಗಿಬಿಟ್ಟರೆ ಚಿತ್ರ ಮಾಡಿದ್ದಕ್ಕೂ ಸಾರ್ಥಕವಾಗುತ್ತೆ’ ಎನ್ನುತ್ತಾರೆ ಅವರು.
ಸ್ಕೂಲ್‌ನಲ್ಲಿ ತರಲೆ ಹುಡುಗ
ಸಾಮಾನ್ಯವಾಗಿ ಈ ರೀತಿಯ ಪಾತ್ರ ಮಾಡುವಾಗ, ಶಾಲೆಯ ದಿನಗಳು ನೆನಪಾಗುತ್ತವೆ. ಅಂತಹ ನೆನಪುಗಳು ಶಿವರಾಜಕುಮಾರ್ ಅವರನ್ನೂ ಕಾಡಿವೆ. ಆ ಕುರಿತು ಅವರು ಹೇಳಿದ್ದು ಹೀಗೆ. “ಚಿತ್ರೀಕರಣ ಮಾಡುವಾಗಲೇ ನನಗೆ ಶಾಲೆ ದಿನಗಳ ನೆನಪಾಯಿತು. ನನ್ನ ಕಣ್ಣ ಮುಂದೆ ನಾನು ಓದಿದ ಶಾಲೆ, ಆ ದಿನಗಳು, ಟೀಚರ್‌ಗಳ ನೆನಪಾಯಿತು. ನಾನು ಬೇಸಿಕಲಿ ಅಥ್ಲೆಟಿಕ್ ಪ್ಲೇಯರ್. ವಾಲಿಬಾಲ್, ಕ್ರಿಕೆಟ್, 100 ಮೀಟರ್, ಲಾಂಗ್ ಜಂಪ್, ಹೈ ಜಂಪ್ ಎಲ್ಲವನ್ನೂ ಆಡಿದ್ದೇನೆ. ಆದರೆ, ಕಬಡ್ಡಿ ಕ್ರೀಡೆ ಆಡಿರಲಿಲ್ಲ. ಈ ಚಿತ್ರೀಕರಣ ಸಮಯದಲ್ಲಿ ಕಬಡ್ಡಿ , ವಾಲಿಬಾಲ್ ಆಟವಾಡಿದ್ದೇನೆ. ಮಕ್ಕಳಿಗೆ ಡ್ಯಾನ್ಸ್ ಕಲಿಸಿಕೊಟ್ಟಿದ್ದೇನೆ. ಎಲ್ಲೇ ಇರಲಿ, ಅದು ಮಕ್ಕಳಿರಲಿ, ದೊಡ್ಡೋರೇ ಇರಲಿ. ಕ್ರಿಕೆಟ್ ಆಡುತ್ತಿದ್ದರೆ, ಅಲ್ಲಿಗೆ ಈಗಲೂ ಹೋಗಿ ಕ್ರಿಕೆಟ್ ಆಡುತ್ತೇನೆ. ಮನೆಯಲ್ಲಿ ಅಪ್ಪು ಮಕ್ಕಳು ಯಾವುದಾದರೂ ಗೇಮ್ ಆಡುತ್ತಿದ್ದರೆ, ಅವರ ಜೊತೆ ಸೇರಿಕೊಂಡು ಆಡುತ್ತೇನೆ. ಅದೊಂಥರಾ ನನಗೆ ತುಂಬಾ ದೊಡ್ಡ ಖುಷಿ ಕೊಡುತ್ತೆ. ನಾನು ಸ್ಕೂಲ್ ಡೇಸ್‌ನಲ್ಲಿ ಟ್ಯೂಷನ್‌ಗೂ ಹೋಗುತ್ತಿದ್ದೆ. ಆದರೆ, ನನ್ನ ತಲೆಗೆ ಓದು ಹೋಗುತ್ತಿರಲಿಲ್ಲ. ನನಗೆ ಮ್ಯಾಥ್ಸ್ ಸಬೆjಕ್ಟ್ ಅಂದ್ರೆ ತುಂಬಾ ಕಷ್ಟ. ಆದರೆ, ನ್ಪೋರ್ಟ್ಸ್ ವಿಷಯದಲ್ಲಂತೂ ನಾನು ಸದಾ ಮುಂದಿರುತ್ತಿದ್ದೆ. ಎಷ್ಟೋ ಸಲ, ಸ್ಕೂಲ್‌ನಲ್ಲಿ ಸಣ್ಣಪುಟ್ಟ ತರಲೆ ಮಾಡುತ್ತಿದ್ದೆ. ಆಗ, ಟೀಚರ್ “ನಾಳೆ ಸ್ಕೂಲ್‌ಗೆ ನಿಮ್ಮ ಪೇರೆಂಟ್ಸ್ ಕರೊRಂಡ್ ಬಾ’ ಅನ್ನೋರು. ಆಗ, ನಾನು, ನಮ್ಮ ಅಪ್ಪ ಬಿಝಿ ಇರ್ತಾರೆ. ಶೂಟಿಂಗ್ ಹೋಗಿದ್ದಾರೆ ಅಂತ ಮ್ಯಾನೇಜ್ ಮಾಡುತ್ತಿದ್ದೆ. ಯಾವತ್ತಿಗೂ ಪೇರೆಂಟ್ಸ್‌ನ ಸ್ಕೂಲ್‌ವರೆಗೆ ಬರೋಕೆ ಬಿಟ್ಟಿರಲಿಲ್ಲ. ಆ ದಿನಗಳಲ್ಲಿ ನನಗೆ ಐದು ಜನ ಫ್ರೆಂಡ್ಸ್ ಇದ್ದರು. ಈಗಲೂ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ’ ಎಂದು ಸ್ಕೂಲ್ ಡೇಸ್ ಮೆಲುಕು ಹಾಕುತ್ತಾರೆ ಅವರು.
ಈ “ದ್ರೋಣ’ ಅವರಿಗೆ ವಿಶೇಷ ಸಿನಿಮಾವಂತೆ. “ನಾನಿಲ್ಲಿ ಸರ್ಕಾರಿ ಶಾಲೆಯ ಮೇಷ್ಟ್ರು. ಸರ್ಕಾರದ ಕಣ್ ತೆರೆಸೋ ವಿಷಯವೂ ಇದೆ. ಮಕ್ಕಳು, ಪೋಷಕರಿಗೆ ತಿಳಿದುಕೊಳ್ಳುವ ವಿಚಾರವೂ ಇದೆ. ಒಬ್ಬ ಸ್ಕೂಲ್ ಮೇಷ್ಟ್ರು ಸಮಾಜವನ್ನು ಹೇಗೆ ಸುಧಾರಣೆಗೆ ತರಬಲ್ಲ ಎಂಬ ಅಂಶಗಳು ಇಲ್ಲಿವೆ. ನನ್ನ ಕೆರಿಯರ್‌ನಲ್ಲಿ “ದ್ರೋಣ’ ಆತ್ಮತೃಪ್ತಿ ಕೊಟ್ಟಂತಹ ಸಿನಿಮಾ. ನನ್ನ ಸ್ಕೂಲ್ ಡೇಸ್‌ನಲ್ಲಿ ಹಲವು ಟೀಚರ್ ಬಂದು ಹೋಗಿದ್ದರೂ, ನನ್ನ ಬದುಕಿನ ಟೀಚರ್ ಮಾತ್ರ ಅಪ್ಪಾಜಿನೇ. ಅವರೇ ನನ್ನಲೈಫ್ನ ಗುರು’ ಎನ್ನುತ್ತಲೇ ಮಾತು ಮುಗಿಸುತ್ತಾರೆ ಶಿವರಾಜಕುಮಾರ್.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.