ಹಾರರ್ ಹಿಂದಿನ ಕಾಮಿಡಿ ಪುರಾಣ
Team Udayavani, Aug 16, 2019, 5:09 AM IST
‘ಇದು ತುಂಬಾ ಮಜ ಕೊಡುವ ದೆವ್ವ. ಒಮ್ಮೊಮ್ಮೆ ಆ ದೆವ್ವ ಒರಿಜಿನಲ್ಲೋ, ಡೂಪ್ಲಿಕೇಟೋ ಎಂಬ ಅನುಮಾನ ಕೂಡಾ ಬರುತ್ತಿತ್ತು…’
-ಹೀಗೆ ಹೇಳಿ ನಕ್ಕರು ಗಣೇಶ್. ಅವರು ಹೇಳಿಕೊಂಡಿದ್ದು ‘ಗಿಮಿಕ್’ ಬಗ್ಗೆ. ಇದೇ ಮೊದಲ ಸಲ ಗಣೇಶ್ ಹಾರರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬರೀ ಅವರಷ್ಟೇ ಅಲ್ಲ, ನಿರ್ದೇಶಕ ನಾಗಣ್ಣ ಮತ್ತು ಮತ್ತೂಬ್ಬ ನಟ ರವಿಶಂಕರ್‌ಗೌಡ ಅವರಿಗೂ ‘ಗಿಮಿಕ್’ ಮೊದಲ ಹಾರರ್ ಚಿತ್ರ. ಈ ವಾರ ತೆರೆಕಾಣುತ್ತಿರುವ ‘ಗಿಮಿಕ್’ ಅನುಭವದ ಬಗ್ಗೆ ಗಣೇಶ್ ಹೇಳಿದ್ದಿಷ್ಟು.
‘ನನಗೆ ಹಾರರ್ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಹಾಗಂತ, ಈ ಹಿಂದೆ ಒಂದು ಸಂದರ್ಶನದಲ್ಲೂ ಹೇಳಿದ್ದೆ. ಹಾಗೆ ಹೇಳ್ಳೋಕೆ ಕಾರಣ, ನನ್ನ ಮಗಳು. ಮನೆಯಲ್ಲಿರುವಾಗ ಆಗಾಗ ಮಗಳು ‘ಪಪ್ಪಾ ನೀನು ದೆವ್ವ ಸಿನಿಮಾ ಮಾಡು’ ಅಂತ ಹೇಳ್ತಾನೇ ಇದ್ದಳು. ಬಹುಶಃ ಅವಳಿಗೂ ನನ್ನ ಲವ್‌ಸ್ಟೋರಿ ಸಿನಿಮಾಗಳು ಬೋರ್ ಆಗಿರಬೇಕೇನೋ?, ಹಾಗಾಗಿಯೇ ಮಾತನಾಡುವಾಗೆಲ್ಲ, ‘ಪಪ್ಪಾ, ನೀನು ದೆವ್ವದ ಸಿನಿಮಾ ಮಾಡು..’ ಅನ್ನುತ್ತಿದ್ದಳು. ಅವಳು ಹಾಗೆ ಹೇಳಿದ ಹದಿನೈದು ದಿನಕ್ಕೆ ನಿರ್ದೇಶಕ ನಾಗಣ್ಣ ಕಾಲ್ ಮಾಡಿ, ಒಂದು ಸಿನಿಮಾ ಮಾಡೋಣ ಅಂತಾ ಇದ್ದೀನಿ, ಮನೆಗೆ ಬರ್ತೀನಿ ಅಂದ್ರು. ಮನೆಗೆ ಬಂದವರೇ, ‘ಗಿಮಿಕ್’ ಕಥೆ ಹೇಳಿದ್ರು. ನಿಜಕ್ಕೂ ಖುಷಿಯಾಯ್ತು. ಹಾರರ್ ಸಿನಿಮಾ ಓಕೆ. ಅದರ ಜೊತೆಯಲ್ಲಿ ಫನ್ನಿ ಅಂಶಗಳು ಇತ್ತು. ಅದಿನ್ನೂ ಖುಷಿ ಕೊಟ್ಟಿತ್ತು. ನಿಜ ಹೇಳ್ಳೋದಾದರೆ, ಈ ಚಿತ್ರದಲ್ಲಿ ರಿಯಲ್ ಆತ್ಮ ಯಾವುದು, ಡೂಪ್ಲಿಕೇಟ್ ಆತ್ಮ ಯಾವುದು, ನಾಟಕ ಮಾಡ್ತಾ ಇರೋ ಆತ್ಮ ಯಾವುದು ಅನ್ನೋದೇ ಗೊಂದಲವಾಗಿತ್ತು.
ಇಡೀ ಚಿತ್ರ ಮನರಂಜನೆಯ ಜೊತೆಗೇ, ಭಯವನ್ನೂ ಹುಟ್ಟಿಸುತ್ತಾ ಸಾಗುತ್ತದೆ. ಒಮ್ಮೊಮ್ಮೆ ನಾನು ನಿರ್ದೇಶಕರನ್ನ ಕೇಳುತ್ತಿದ್ದೆ, ‘ಸರ್, ಇಲ್ಲಿ ಒರಿಜಿನಲ್ ದೆವ್ವ ಯಾವುದು, ಡೂಪ್ಲಿಕೇಟ್ ದೆವ್ವ ಯಾವುದು’ ಅಂತ. ನಾಗಣ್ಣ, ‘ಸರ್ ಅದು ಡೂಪ್ಲಿಕೇಟ್ ದೆವ್ವ. ಆದರೆ, ಸೀನ್ ಒರಿಜಿನಲ್ ಸರ್’ ಅನ್ನೋರು. ಹಾರರ್ ಎಷ್ಟು ಇಷ್ಟ ಪಡ್ತಾ ಇದ್ನೋ, ಅಷ್ಟೇ ಅದ್ಭುತವಾದ ಹಾರರ್ ಸಬ್ಜೆಕ್ಟ್‌ನಲ್ಲಿ ಕಾಣಿಸಿಕೊಂಡಿರುವುದಕ್ಕೂ ನನಗೆ ಹೆಮ್ಮೆ ಎನಿಸುತ್ತಿದೆ. ಇಡೀ ಚಿತ್ರತಂಡದ ಜೊತೆಗಿನ ಅನುಭವ ಮರೆಯಲಾರದ್ದು’ ಎಂದು ಹಾರರ್ ನೆನಪುಗಳನ್ನು ಬಿಚ್ಚಿಟ್ಟರು ಗಣೇಶ್.
ರಾತ್ರಿ ಪಯಣ
ಗಣೇಶ್ ಶೂಟಿಂಗ್‌ನಲ್ಲಿರಲಿ, ಮನೆಯಲ್ಲಿರಲಿ ರಾತ್ರಿ ಸುಮಾರು 10.30 ರ ಹೊತ್ತಿಗೆ ಮಲಗಿಬಿಡುತ್ತಾರೆ. ಅದು ಅವರ ಅಭ್ಯಾಸ. ಆದರೆ, ‘ಗಿಮಿಕ್’ ಚಿತ್ರೀಕರಣ ಆಗಿದ್ದು, 20 ದಿನ ರಾತ್ರಿ! ಹಾಗಾದರೆ, ಗಣೇಶ್ ಇಡೀ ರಾತ್ರಿಯೆಲ್ಲಾ ಎಚ್ಚರಗೊಂಡಿದ್ದರಾ? ಹೀಗೊಂದು ಪ್ರಶ್ನೆ ಅವರ ಮುಂದಿಟ್ಟರೆ, ‘ನನಗೆ ರಾತ್ರಿ 10.30ಕ್ಕೆ ಮಲಗಿ ಅಭ್ಯಾಸ ನಿಜ. ಆದರೆ, ಇದು ಹಾರರ್ ಚಿತ್ರ. ರಾತ್ರಿ ವೇಳೆಯೇ ಚಿತ್ರೀಕರಿಸಬೇಕು. ಅದರಲ್ಲೂ 20 ದಿನಗಳ ರಾತ್ರಿ ಚಿತ್ರೀಕರಣವೆಂದರೆ, ನನ್ನ ಪರಿಸ್ಥಿತಿ ಹೇಗಿರಬೇಡ. ಆದರೂ, ನಾನು ಆಗಾಗ ಕಳ್ಳಾಟ ಆಡ್ಕೊಂಡು, ‘ಸರ್, ಯಾಕೋ ತಲೆನೋವು, ತುಂಬಾ ಸುಸ್ತಾಗ್ತಾ ಇದೆ. ಸರ್, ಕೆಲಸ ಬೇಗ ಮುಗಿಸಿ, ನಾನು ಹೊರಡುತ್ತೇನೆ’ ಅನ್ನುತ್ತಿದ್ದೆ. ನಿರ್ದೇಶಕರು, ನನ್ನ ಮಾತನ್ನು ಆಲಿಸಿ, ಎರಡು ನಿಮಿಷ ಯೋಚಿಸಿ, ‘ಒಂದೇ ಒಂದು ಶಾಟ್ ಇದೆ. ಮುಗಿಸಿಕೊಂಡು ಹೊರಡಿ’ ಅನ್ನುತ್ತಿದ್ದರು. ಹೀಗೆ, ದಿನ ರಾತ್ರಿ ಏನಾದರೊಂದು ನೆಪ ಹುಡುಕುತ್ತಿದ್ದೆ.
ಅವರು ಅಷ್ಟೇ ನಾಜೂಕಾಗಿ ಶಾಟ್ ಮುಗಿಸುವ ಜೊತೆಗೆ ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಾನು 6-7 ತರಗತಿ ಓದುವಾಗಲೇ, ಅವರ ನಿರ್ದೇಶನದ ‘ಸಾಮ್ರಾಟ್’ ಚಿತ್ರ ನೋಡಿದ್ದೆ. ಅವರ ಸಿನಿಮಾ ನೋಡಿ ಬೆಳೆದವನು, ಅವರ ಜೊತೆ ಕೆಲಸ ಮಾಡಿದ್ದು ಹೆಮ್ಮೆ ಎನಿಸುತ್ತಿದೆ’ ಎಂಬುದು ಗಣೇಶ್ ಮಾತು.
ಮಿಡ್ಲ್ಕ್ಲಾಸ್ ಹುಡುಗನ ಗಿಮಿಕ್
ಚಿತ್ರದ ಪಾತ್ರದ ಬಗ್ಗೆ ಮಾತನಾಡುವ ಗಣೇಶ್, ‘ಇಲ್ಲಿ ನಾನೊಬ್ಬ ಮಿಡ್ಲ್ಕ್ಲಾಸ್ ಹುಡುಗನ ಪಾತ್ರ ಮಾಡಿದ್ದೇನೆ. ಒಬ್ಬ ಶ್ರೀಮಂತ ಹುಡುಗಿಯನ್ನು ಪ್ರೀತಿಸುತ್ತಾನೆ. ಆಮೇಲೆ ಅವಳ ಕಡೆಯಿಂದ ಬರುವ ಪ್ರಶ್ನೆಗಳಿಗೂ ಉತ್ತರವಾಗುತ್ತಾ ಹೋಗುತ್ತಾನೆ. ನಂತರ ಬರುವ ಕೆಲವು ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾನೆ, ಹೇಗೆಲ್ಲಾ ಇಕ್ಕಟ್ಟಿಗೆ ಸಿಲುಕುತ್ತಾನೆ ಅನ್ನೋದೇ ಸಿನಿಮಾ. ನನಗೆ ಹಾರರ್ ಸಿನಿಮಾಗಳಿಗಿಂತ ಹೆಚ್ಚು ಸಸ್ಪೆನ್- ಥ್ರಿಲ್ಲರ್ ಮತ್ತು ಆ್ಯಕ್ಷನ್ ಸಿನಿಮಾಗಳಿಷ್ಟ. ಆದರೆ, ಇಲ್ಲಿ ಹಾರರ್ ಸಿನಿಮಾ ಮಾಡಿದ್ದು, ಹೊಸ ಅನುಭವ ಕಟ್ಟಿಕೊಟ್ಟಿದೆ. ಫ್ಯಾಮಿಲಿ ಅಥವಾ ಫ್ರೆಂಡ್ಸ್ ಜೊತೆ ಹಾರರ್ ಚಿತ್ರ ನೋಡುವಾಗ ನಾನು ಎಲ್ಲವೂ ಸೈಲೆಂಟ್ ಆಗಿದ್ದಾಗಲೇ, ನಾನು ಜೋರಾಗಿ ಕಿರುಚಿ, ಹೆದರಿಸ್ತೀನಿ. ಅದು ನನಗೆ ಬಹಳ ಖುಷಿ ಕೊಡುವಂತಹ ಸಂದರ್ಭ’ ಎಂದು ಹಾರರ್ ಬಗೆಗಿನ ಅನುಭವ ಹೇಳುತ್ತಾರೆ ಗಣೇಶ್.
ನಿರ್ದೇಶಕ ನಾಗಣ್ಣ ಅವರಿಗೂ ಇದು ಮೊದಲ ಹಾರರ್ ಚಿತ್ರ. ಆ ಬಗ್ಗೆ ಹೇಳುವ ಅವರು, ‘ಸಾಮಾನ್ಯವಾಗಿ ಹಾರರ್ ಅಂದಾಗ, ಒಂದು ಪ್ಯಾಟರ್ನ್ ಇರುತ್ತೆ. ಒಂದು ಬಂಗಲೆ, ಆ ಬಂಗಲೆಗೆ ನಾಲ್ಕು ಜನರ ಫ್ಯಾಮಿಲಿ ಹೋಗುತ್ತೆ. ಅಲ್ಲಿ ಒಬ್ಬೊಬ್ಬರದೇ ಸಾವಾಗುತ್ತೆ, ಅಲ್ಲಿ ದೆವ್ವ, ಭೂತ ಇದೆ ಎಂಬ ಸುದ್ದಿ ಹರಡಿ, ಕುತೂಹಲಕ್ಕೆ ಕಾರಣವಾಗುತ್ತೆ. ಇದು ಹಾರರ್ ಸಿನಿಮಾಗಳ ಸಿದ್ಧಸೂತ್ರ. ಆದರೆ, ‘ಗಿಮಿಕ್’ ಕಥೆಯಲ್ಲಿ ಅದಿಲ್ಲ. ಇಲ್ಲಿ ಭಯವೂ ಇದೆ, ನಗುವೂ ಇದೆ. ನೋಡೋರಿಗೊಂದು ಮಜವಾದ ಥ್ರಿಲ್ ಇದೆ. ಸಿನಿಮಾದ ನಾಯಕ ಒರಿಜಿನಲ್ ದೆವ್ವದ ಜೊತೆ ಸೇರಿ ಒಂದು ‘ಗಿಮಿಕ್’ ಮಾಡುತ್ತಾರೆ. ಅದು ಏನೆಂಬುದೇ ಸಸ್ಪೆನ್ಸ್’ ಎನ್ನುತ್ತಾರೆ ನಾಗಣ್ಣ.
ಚಿತ್ರೀಕರಣವನ್ನು ಸಕಲೇಶಪುರ ಸುತ್ತಮುತ್ತ ಮಾಡಬೇಕು ಎಂಬ ಯೋಚನೆ ಚಿತ್ರತಂಡಕ್ಕಿತ್ತಂತೆ. ಆದರೆ, ನಿರ್ಮಾಪಕ ದೀಪಕ್ ಸಾಮಿ ಅವರು, ಶ್ರೀಲಂಕಾದಲ್ಲೊಂದು ಬಂಗಲೆ ಇದೆ. ಅಲ್ಲೇ ಹೋಗಿ ಚಿತ್ರೀಕರಣ ಮಾಡೋಣ ಅಂತ ಕರೆದುಕೊಂಡು ಹೋಗಿ ಚಿತ್ರೀಕರಣ ಮಾಡಿಸಿದ್ದಾರೆ.
ನಟ ರವಿಶಂಕರ್‌ಗೌಡ ಅವರಿಲ್ಲಿ ಗಣೇಶ್ ಗೆಳೆಯರಾಗಿ ನಟಿಸಿದ್ದಾರೆ. ಅವರಿಗೂ ಹಾರರ್ ಮೊದಲ ಅನುಭವ. ಆ ಬಗ್ಗೆ ಹೇಳುವ ಅವರು, ‘ಶ್ರೀಲಂಕಾದ ಬಂಗಲೆಯೊಂದರಲ್ಲಿ ಚಿತ್ರೀಕರಣಗೊಂಡಿದೆ. ನಾವು ಶೂಟಿಂಗ್‌ಗೆ ಹೋದ ದಿನ ಆ ಬಂಗಲೆಗೆ ನೂರು ವರ್ಷ ತುಂಬಿತ್ತು. ಚಿತ್ರದ ಪ್ರಮುಖ ಭಾಗವಾಗಿ ಆ ಬಂಗಲೆ ಕಾಣಿಸಿಕೊಂಡಿದೆ. ಪೋಸ್ಟರ್ ನೋಡಿದವರಿಗೆ ಭಯ ಹುಟ್ಟಬಹುದು. ಆದರೆ, ಕಲಾವಿದರನ್ನು ನೋಡಿದಾಗ, ಅವರೆಲ್ಲರೂ ಭಯ ಹುಟ್ಟಿಸುತ್ತಾರಾ ಎಂಬ ಅನುಮಾನ ಸಹಜ. ಆದರೆ, ಇದು ಪಕ್ಕಾ ಭಯಪಡಿಸುವುದರ ಜೊತೆಗೆ ಮನರಂಜನೆಯನ್ನೂ ಕೊಡುತ್ತದೆ’ ಎನ್ನುತ್ತಾರೆ ರವಿಶಂಕರ್ ಗೌಡ.
ನಿರ್ಮಾಪಕ ದೀಪಕ್ ಸಾಮಿ ಅವರು ಈ ಹಿಂದೆ ತೆಲುಗು, ತಮಿಳು ಚಿತ್ರಗಳನ್ನು ವಿತರಣೆ ಮಾಡಿದ್ದಾರೆ. ಬಸವರಾಜ್ ಚಿತ್ರ ವಿತರಣೆ ಮಾಡುತ್ತಿದ್ದು, ಸುಮಾರು 250 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಲಿದ್ದಾರೆ.
•ವಿಭ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.