ನಾಯಕಿ ಬಿಚ್ಚಿಟ್ಟ ರಂಗನಾಯಕಿಯ ಕಥೆ..
ಅಪ್ಪ ಇಷ್ಟಪಟ್ಟ ಕಥೆಯಲ್ಲಿ ಮಗಳ ಕನಸು
Team Udayavani, Nov 1, 2019, 5:30 AM IST
ಇಲ್ಲಿಯವರೆಗೆ ಗ್ಲಾಮರಸ್ ಲುಕ್‌ನಲ್ಲಿ ಸಿನಿಪ್ರಿಯರ ಗಮನ ಸೆಳೆದಿದ್ದ ನಟಿ ಅದಿತಿ ಪ್ರಭುದೇವ ಮೊದಲ ಬಾರಿಗೆ, ಮಹಿಳಾ ಪ್ರಧಾನ “ರಂಗನಾಯಕಿ’ಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ನೈಜ ಘಟನೆಯಿಂದ ಸ್ಫೂರ್ತಿ ಪಡೆದುಕೊಂಡು ತಯಾರಾಗಿರುವ “ರಂಗನಾಯಕಿ’ ಇದೇ ನವೆಂಬರ್ 1ರಂದು ತೆರೆಗೆ ಬರುತ್ತಿದ್ದು, ಚಿತ್ರದ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕ ಅದಿತಿ “ರಂಗನಾಯಕಿ’ ಯ ವಿಶೇಷತೆಗಳ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ. ಅದು ಅವರ ಮಾತುಗಳಲ್ಲೇ …
ನಾನು ಇತ್ತೀಚೆಗೆ ಮಾಡಿದ ಬಹುತೇಕ ಪಾತ್ರಗಳು ಗ್ಲಾಮರಸ್ ಆಗಿರುತ್ತಿದ್ದವು. ಜನ ಕೂಡ ನನ್ನನ್ನು ಹಾಗೆಯೇ ಗುರುತಿಸುತ್ತಿದ್ದರು. ಆದರೆ ಕಲಾವಿದೆಯಾಗಿ ನಾನು ಹೊಸಥರದ ಪಾತ್ರಗಳನ್ನು ನಿರೀಕ್ಷಿಸುತ್ತೇನೆ. ನನಗೊಂದು ಬದಲಾವಣೆ ಬೇಕಿತ್ತು. ಆ ಬದಲಾವಣೆಯ ನಿರೀಕ್ಷೆಯಲ್ಲಿದ್ದಾಗಲೇ ಸಿಕ್ಕ ಚಿತ್ರ “ರಂಗನಾಯಕಿ’. ಇದರಲ್ಲಿ ಇಲ್ಲಿಯವರೆಗೂ ಯಾರೂ ನೋಡಿರದ ಅದಿತಿಯನ್ನು “ರಂಗನಾಯಕಿ’ಯಾಗಿ ನೋಡಬಹುದು’
ಸಿನಿಮಾರಂಗದಲ್ಲಿ ಇರಬೇಕು ಅಂದ್ರೆ, ಖಂಡಿತ ಕಮರ್ಷಿಯಲ್ ಸಿನಿಮಾಗಳನ್ನ ಮಾಡಲೇಬೇಕು. ಆದರೆ ಅವಕಾಶ ಸಿಕ್ಕಾಗಲಾದರೂ, ನಮಗೆ ಆತ್ಮ ತೃಪ್ತಿ ನೀಡುವಂಥ ಸಿನಿಮಾಗಳನ್ನ, ಮನಸ್ಸಿನಲ್ಲಿ ಉಳಿಯುವಂಥ, ಹೃದಯ ತಟ್ಟುವಂಥ ಪಾತ್ರಗಳನ್ನ ಮಾಡಬೇಕು. ಎಲ್ಲವೂ ಕೂಡಿ ಬಂದಿದ್ದರಿಂದ ಅಂಥದ್ದೊಂದು ಅವಕಾಶವನ್ನ “ರಂಗನಾಯಕಿ’ ನನಗೆ ತಂದುಕೊಟ್ಟಿದೆ. ಬಹುದಿನಗಳ ಕನಸು “ರಂಗನಾಯಕಿ’ಯ ಮೂಲಕ ನನಸಾಗಿದೆ.
ಮೊದಲೇ ನಾನು ಎಮೋಶನಲ್ ಹುಡುಗಿ. ಫಸ್ಟ್‌ಟೈಮ್ “ರಂಗನಾಯಕಿ’ಯ ಕಥೆ ಕೇಳಿದಾಗ ನಾನು ಫುಲ್ ಎಮೋಶನಲ್ ಆಗಿದ್ದೆ. ನಮ್ಮ ಜೊತೆಯಲ್ಲಿ ಕಥೆ ಕೇಳಲು ಕುಳಿತಿದ್ದ ನಮ್ಮ ಅಪ್ಪ ಕೂಡ ಕಥೆ ಚೆನ್ನಾಗಿದೆ. ಈ ಥರದ ಸಿನಿಮಾ ಮಾಡಬೇಕು ಅಂದ್ರು. ತಲೆಯಲ್ಲಿ ಬರುವ ಅಭಿಪ್ರಾಯಗಳು, ನಿರ್ಧಾರಗಳು ಹೆಚ್ಚು ಹೊತ್ತು ಉಳಿಯುವುದಿಲ್ಲ. ಆದ್ರೆ “ರಂಗನಾಯಕಿ’ ಮಾಡ್ಬೇಕು ಅನ್ನೋದು ನನ್ನ ಹೃದಯದಿಂದ ಬಂದ ಯೋಚನೆ. ಹಾಗಾಗಿ ತಡ ಮಾಡದೆ “ರಂಗನಾಯಕಿ’ಯಾದೆ’ ಮನಸ್ಸಿಂದ ಬಂದವು ಶಾಶ್ವತವಾಗಿ ಉಳಿಯುತ್ತದೆ.
ಸಾಮಾನ್ಯವಾಗಿ ಗ್ಲಾಮರಸ್ ರೋಲ್ಸ್ ಅಂದ್ರೆ ಅಲ್ಲಿ ಮೇಕಪ್ ಮೆನ್, ಡಿಸೈನರ್, ಡಿಫರೆಂಟ್ ಕಾಸ್ಟೂéಮ್ಸ್ ಎಲ್ಲವೂ ಇರುತ್ತದೆ. ಆದರೆ “ರಂಗನಾಯಕಿ’ಯಲ್ಲಿ ಅದ್ಯಾವುದೂ ಇಲ್ಲ. ಯಾಕೆಂದ್ರೆ, ಇಲ್ಲಿ ಬಾಹ್ಯ ಸೌಂದರ್ಯಕ್ಕಿಂತ ಅಭಿನಯಕ್ಕೆ ಹೆಚ್ಚು ಮಹತ್ವವಿತ್ತು. ಹಾಗಾಗಿ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಿತ್ತು. ದೈಹಿಕ ದೌರ್ಜನಕ್ಕೆ ಒಳಗಾಗ ಹೆಣ್ಣೊಬ್ಬಳ ಮಾನಸಿಕತೆ ಹೇಗಿರುತ್ತದೆ, ಅನ್ನೋದನ್ನ ಅಭಿನಯದಲ್ಲೇ ತೋರಿಸಬೇಕಿತ್ತು.
ಈ ಸಿನಿಮಾವನ್ನು ನೋಡಿ ಸಾವಿರಾರು ವಿಕೃತ ಮನಸ್ಸುಗಳಲ್ಲಿ ಒಂದು ಮನಸ್ಸು ಬದಲಾವಣೆಯಾದ್ರೂ, ನಮ್ಮ ಪ್ರಯತ್ನ ಸಾರ್ಥಕ ಅಂತ ಭಾವಿಸುತ್ತೇನೆ. ಈಗಾಗಲೇ ಬಿಡುಗಡೆಯಾಗಿರುವ “ರಂಗನಾಯಕಿ’ಯ ಪೋಸ್ಟರ್, ಟೀಸರ್, ಟ್ರೇಲರ್, ಹಾಡುಗಳು ಎಲ್ಲದಕ್ಕೂ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ನೂರರಲ್ಲಿ ತೊಂಬತ್ತೈದು ಜನ “ರಂಗನಾಯಕಿ’ಯ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ. ಉಳಿದ ಐದು ಜನರ ಬಗ್ಗೆ ನಾನೇನೂ ಹೇಳಲಾರೆ.
ಇದು ಆರ್ಟ್ ಅಥವಾ ಕಮರ್ಷಿಯಲ್ ಅಂಥ ವಿಂಗಡಿಸುವ ಸಿನಿಮಾವಲ್ಲ. ಇದು ಒಂದು ಜಾಗೃತಿ ಮೂಡಿಸುವ ಸಿನಿಮಾ. ನಮ್ಮ ಯೋಚನೆಗಳನ್ನು, ನಮ್ಮ ಮಾನಸಿಕತೆಗಳನ್ನು ಪ್ರಶ್ನೆ ಮಾಡುವ ಸಿನಿಮಾ. ಹಾಗಾಗಿ “ರಂಗನಾಯಕಿ’ಯನ್ನು ಮಾಮೂಲಿ ಸಿನಿಮಾ ಚೌಕಟ್ಟಿನಿಂದ ಹೊರಗೆ ನಿಂತು ನೋಡಿದರೆ, ಅದೆಷ್ಟೋ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲುತ್ತಾಳೆ. ನನ್ನ ಪ್ರಕಾರ “ರಂಗನಾಯಕಿ’ ಮನರಂಜಿಸುವ ಚಿತ್ರಕ್ಕಿಂತ ಮನಮುಟ್ಟುವ ಚಿತ್ರವಾಗಿ ನೋಡುಗರಿಗೆ ಹೆಚ್ಚು ಇಷ್ಟವಾಗುತ್ತದೆ.
ಒಬ್ಬ ಹೀರೋ ಅಥವಾ ಹೀರೋಯಿನ್, ಯಾವುದೋ ಒಂದು ಪಾತ್ರದಲ್ಲಿ ಪಾಪ್ಯುಲರ್ ಆದ್ರೆ ಮತ್ತೆ ಮತ್ತೆ ಅದೇ ಥರದ ಪಾತ್ರಗಳನ್ನು ಮಾಡುತ್ತಲೇ ಇರುವುದು ಕಲಾವಿದರಾದವರಿಗೆ ಒಳ್ಳೆಯದಲ್ಲ. ಒಂದೇ ಥರದ ಗ್ಲಾಮರಸ್ ಪಾತ್ರಗಳಿಂದ ಸ್ವಲ್ಪ ಬದಲಾವಣೆಯಿರಲಿ ಅಂತ “ರಂಗನಾಯಕಿ’ ಥರದ ಪಾತ್ರ ಒಪ್ಪಿಕೊಂಡೆ. ಹಾಗಂತ ಈ ಥರದ ಪಾತ್ರ ಪಾಪ್ಯುಲರ್ ಆದ್ರೆ ಮತ್ತೇ ಇದೇ ಥರದ ಪಾತ್ರಗಳನ್ನು ಮಾಡುತ್ತಲೇ ಇರಲಾರೆ’
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ್ದ “ರಂಗನಾಯಕಿ’ ಅನ್ನೋ ಹೆಸರಿನಲ್ಲಿ ನಮ್ಮ ಸಿನಿಮಾ ಕನ್ನಡ ರಾಜ್ಯೋತ್ಸವದಂದೇ ರಿಲೀಸ್ ಆಗ್ತಿದೆ. ಅಂದಿನ “ರಂಗನಾಯಕಿ’ಯಂತೆ ಇಂದಿನ “ರಂಗನಾಯಕಿ’ಯೂ ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಿ ಹಿಸ್ಟರಿ ಬರೆಯಲಿದೆ ಎಂಬ ವಿಶ್ವಾಸ ನಮ್ಮ ಚಿತ್ರತಂಡದ್ದು. ಹೃದಯ ಮುಟ್ಟುವಂಥ ಒಂದೊಳ್ಳೆ ಸಿನಿಮಾ ಮಾಡಿದ ತೃಪ್ತಿಯಂತೂ ನಮಗಿದೆ. ಮುಂದಿನದ್ದೆಲ್ಲ ಪ್ರೇಕ್ಷಕರಿಗೆ ಬಿಟ್ಟಿದ್ದು.
– ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.