ಮುಂಗಾರು ಸಂಜೆಯಲ್ಲೊಂದು ಸಂಗೀತದ ಮಳೆ ಗಮನವಿಟ್ಟು ಕೇಳಿ!
Team Udayavani, Jun 23, 2017, 1:33 PM IST
ಹಾಡುಗಳನ್ನು ಗಣ್ಯರಿಂದ ಬಿಡುಗಡೆ ಮಾಡಿಸುವುದು ವಾಡಿಕೆ. ಆದರೆ, “ದಯವಿಟ್ಟು ಗಮನಿಸಿ’ ಚಿತ್ರದ ಹಾಡುಗಳನ್ನು ಸಂಗೀತಗಾರರಿಂದಲೇ ಬಿಡುಗಡೆ ಮಾಡಿಸಬೇಕು ಎಂದು ಚಿತ್ರತಂಡದವರು ಡಿಸೈಡ್ ಮಾಡಿಬಿಟ್ಟಿದ್ದರು. ಅದರಂತೆ ಗಿಟಾರ್ ಶ್ರೀನಿವಾಸ್, ಫೂಟ್ ರಮೇಶ್, ಶೆಹನಾಯ್ ರುದ್ರೇಶ್, ವೊಯಲಿನ್ ಮಣಿಭಾರತಿ, ಕೀಬೋರ್ಡ್ ಉಮೇಶ್, ಡ್ರಮ್ಸ್ ಮಂಜು ಮುಂತಾದವರನ್ನು ವೇದಿಕೆ ಮೇಲೆ ಕರೆಸಲಾಯಿತು.
ಹಾಗಂತ ಅವರು ಸಿಡಿಗಳನ್ನು ಬಿಡುಗಡೆ ಮಾಡಿದರು ಎಂದುಕೊಳ್ಳಬೇಡಿ. ಅದಾಗಿದ್ದು ಕೊನೆಗೆ. ಅದಕ್ಕೂ ಮುನ್ನ
ಅವರೆಲ್ಲರೂ ಲೈವ್ ಕಾರ್ಯಕ್ರಮ ಕೊಟ್ಟರು. ಲೈವ್ ಆರ್ಕೆಸ್ಟ್ರಾ ಮತ್ತು ಚಿತ್ರತಂಡದವರ ಮಾತುಗಳು ಮುಗಿಯುತ್ತಿದ್ದಂತೆ ಹಾಡುಗಳು ಬಿಡುಗಡೆಯಾದವು.
“ದಯವಿಟ್ಟು ಗಮನಿಸಿ’ ಚಿತ್ರವನ್ನು ಕೃಷ್ಣ ಸಾರ್ಥಕ್ ಎನ್ನುವವರು ನಿರ್ಮಿಸಿದರೆ, “ಆಟಗಾರ’ ಮುಂತಾದ ಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದ ರೋಹಿತ್ ಪದಕಿ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಘು ಮುಖರ್ಜಿ, ಭಾವನಾ ರಾವ್, ಸಂಗೀತ ಭಟ್, ಮೇಘನಾ ರಾಜ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಂದು ಅವರೆಲ್ಲರೂ ಸಮಾರಂಭದಲ್ಲಿದ್ದರು.
ಹಾಡುಗಳ ಬಿಡುಗಡೆಗೆ ಕಾದಿದ್ದರು. ಅದೇ ಕಾರಣಕ್ಕೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕಾಲಿಡಲ್ಲಿಕ್ಕಾಗದಷ್ಟು ಜನ
ತುಂಬಿದ್ದರು. ಅವರೆಲ್ಲರೂ ಮಾತಾಡುವ ಮುನ್ನ ಅನನ್ಯ ಭಟ್, ಪಂಡಿತ್ ಪರಮೇಶ್ವರ ಹೆಗಡೆ, ಅನೂಪ್ ಸೀಳಿನ್ ಮುಂತಾದವರು ಚಿತ್ರದ ಹಾಡುಗಳನ್ನು ಹಾಡಿದರು.
ಮೊದಲಿಗೆ ಮಾತಾಡಿದ್ದು ಸಂಗೀತ ನಿರ್ದೇಶಕ ಅನೂಪ್ ಸೀಳಿನ್. ಮೊದಲಿಂದಲೂ ಕಂಟೆಂಟ್ ಇರುವ ಸಿನಿಮಾಗಳು ಸಿಗುತ್ತಿರುವುದರಿಂದ, ಅನೂಪ್ ಖುಷಿಪಟ್ಟರು.
“ವಿಜಯ್‌ಪ್ರಸಾದ್, ಚೈತನ್ಯ ಮುಂತಾದ ಹಲವು ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದೇನೆ. ಅವರ ಚಿತ್ರಗಳಲ್ಲಿ ನಾನು ಹಾಡು ಕೊಟ್ಟೆ ಅನ್ನೋದಕ್ಕಿಂತ, ಚಿತ್ರದ ಕಥೆಗೆ ಶರಣಾಗಿದ್ದೇನೆ. ಈ ಚಿತ್ರ ಸಹ ಅದೇ ಮಾದರಿಯ ಚಿತ್ರ. ನನಗೆ ರೋಹಿತ್ ಪದಕಿ ಅವರ ಬರವಣಿಗೆ ಬಹಳ ಇಷ್ಟ. ಅದೊಂದು ದಿನ ಸ್ಕ್ರಿಪ್ಟ್ ತಂದರು. ಈ ಚಿತ್ರವಾಯಿತು’ ಎಂದರು ಅನೂಪ್ ಸೀಳಿನ್.
ರೋಹಿತ್ ಪದಕಿ ಆರಂಭದಲ್ಲಿ ಗೆಲುವಾಗಿಯೇ ಮಾತು ಪ್ರಾರಂಭಿಸಿದರು. ತಮ್ಮ ಟಾರ್ಚರ್ ತಡೆದುಕೊಂಡ ಇಡೀ ಚಿತ್ರತಂಡಕ್ಕೆ ಧನ್ಯವಾದ ಸಲ್ಲಿಸಿದರು. ಈ ಚಿತ್ರ ಬಿಡುಗಡೆಯಾಗುತ್ತಿದೆ ಎಂದರೆ ಅದಕ್ಕೆ ಕಾರಣ ಅನೂಪ್ ಸೀಳಿನ್ ಎಂದು ಹೇಳುವಷ್ಟರಲ್ಲೇ ಅವರ ಸಂಯಮದ ಕಟ್ಟೆ ಒಡೆದಿತ್ತು. ತುಂಬಾನೇ ಎಮೋಷನಲ್ ಆದ ರೋಹಿತ್ ಅಳುತ್ತಲೇ ಮಾತಾಡಿದರು. ಸ್ವಲ್ಪ ಸುಧಾರಿಸಿಕೊಂಡ ಅವರು ಚಿತ್ರದ ಬಗ್ಗೆ ಮಾತಾಡಿದರು. “ಇಲ್ಲಿ ನಾಲ್ಕು ಕಥೆಗಳನ್ನು
ಹೇಳುವುದಕ್ಕೆ ಹೊರಟಿದ್ದೀನಿ. ಇದು ಎಲ್ಲರ ಜೀವನದಲ್ಲೂ ಅಥವಾ ಎಲ್ಲರ ಸುತ್ತ ನಡೆಯ ಬಹುದಾಗಿರುತ್ತವೆ. ಚಿತ್ರ ಚೆನ್ನಾಗಿದೆ ಎನ್ನುವುದಕ್ಕಿಂತ, ಕುತೂಹಲಕ್ಕೆ ನೋಡಿ. ಹಾಡುಗಳಾದರೆ ಶೇರ್ ಮಾಡಿ. ಇಂತಹ ಚಿತ್ರ ಗೆದ್ದರೆ ಹೊಸಬರು ಬೆಳೆಯುತ್ತಾರೆ’ ಎಂದು ಹೇಳಿ, ಸಮಾರಂಭ ಮುಗಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.