ಋಣಮುಕ್ತ
Team Udayavani, Oct 20, 2017, 11:15 AM IST
“ನಾನು ರೈತಾಪಿ ಕುಟುಂಬದಿಂದ ಬಂದವನು. ನನ್ನ ಹಿಂದೆ ಹಲವು ಕುಟುಂಬಗಳಿವೆ. ಅವರಿಗಾಗಿ ನಾನು ದುಡಿಯಬೇಕು. ಎಷ್ಟೇ ಸೋಲುಂಡರೂ, ಮೇಲೇಳಲೇಬೇಕು …’ ಹೀಗೆ ಏನನ್ನೋ ಕಳಕೊಂಡ ನೋವಲ್ಲಿ, ಮತ್ತೇನನ್ನೋ ಪಡೆಯುವ ಉತ್ಸಾಹದಲ್ಲಿ ಹೇಳುತ್ತಾ ಹೋದರು ನೀನಾಸಂ ಸತೀಶ್. ಮುಂದಿನ ವಾರ ಸತೀಶ್ ಅಭಿನಯದ “ಟೈಗರ್ ಗಲ್ಲಿ’ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ಬಗ್ಗೆ ಅವರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.
ಆ ಚಿತ್ರ ತಮಗೆ ದೊಡ್ಡ ಗೆಲುವು ತಂದುಕೊಡಬಹುದು ಎಂಬ ನಂಬಿಕೆಯಲ್ಲಿದ್ದಾರೆ. ಅದಕ್ಕೆ ಸರಿಯಾಗಿ ಅವರಿಗೊಂದು ದೊಡ್ಡ ಗೆಲುವಿನ ಅವಶ್ಯಕತೆಯೂ ಇದೆ. ಏಕೆಂದರೆ, ಇತ್ತೀಚಿನ ಅವರ ಚಿತ್ರಗಳು, ಹೆಸರು ತಂದುಕೊಟ್ಟರೂ, ದೊಡ್ಡ ಮಟ್ಟದ ಯಶಸ್ಸು ತಂದುಕೊಡಲಿಲ್ಲ. ಇನ್ನು ತಾವೇ ನಿರ್ಮಿಸಿದ “ರಾಕೆಟ್’ ಚಿತ್ರ ನೆಲಕಚ್ಚಿ ಅದರಿಂದ ವಾಪಸ್ಸು ಬರುವುದಕ್ಕೆ ಸಾಕಷ್ಟು ಸಮಯವೇ ಹಿಡಿಯಿತು. ಆ ಸಂದರ್ಭದಲ್ಲಿ ತಮಗಾದ ನೋವನ್ನು ಅವರು ಇನ್ನೂ ಮರೆತಿಲ್ಲ.
ತಮಗಾದ ಸೋಲು, ಅನುಭವಿಸಿದ ಅವಮಾನಗಳು, ತನ್ನ ಮುಂದಿರುವ ಗೆಲುವಿನ ಹಾದಿ … ಇವೆಲ್ಲವನ್ನೂ ಮೆಲುಕು ಹಾಕಿದರು ಸತೀಶ್. “ನಾನು ಎಲ್ಲರನ್ನೂ ಪ್ರೀತಿಸ್ತೀನಿ. ಸೋಲಿರಲಿ, ಗೆಲುವಿರಲಿ ಒಂದೇ ರೀತಿ ಇರಿನಿ. ನನ್ನಲ್ಲೂ ರೋಷಾವೇಷವಿದೆ. ಆದರೆ, ಪರಿಸ್ಥಿತಿಗಳಿಗೆ ಅನುಗುಣವಾಗಿ ಬದುಕು ನಡೆಸಬೇಕು. ಇಲ್ಲಿಗೆ ಬಂದಿದ್ದು, ಸುಂದರ ಬದುಕು ಕಟ್ಟಿಕೊಳ್ಳುವುದಕ್ಕೆ. ಇನ್ನೂ ಅದೇ ಪ್ರಯತ್ನದಲ್ಲಿದ್ದೇನೆ. ನಾನೊಬ್ಬ ರೈತ ಕುಟುಂಬದಿಂದ ಬಂದವನು. ನನ್ನೊಂದಿಗೆ ದೊಡ್ಡ ಕುಟುಂಬವಿದೆ.
ಬಡತನವನ್ನೇ ಸವೆದು ಬಂದ ಫ್ಯಾಮಿಲಿಗಾಗಿ ನಾನು ಏನನ್ನಾದರು ಮಾಡಬೇಕೆಂಬ ಆಸೆ ಇದೆ. ಅವರಿಗಾಗಿಯೇ ದುಡಿಯಬೇಕು. ಈ ಬಡತನ ನನ್ನ ಜನರೇಷನ್‌ಗೆ ಕೊನೆಯಾಗಬೇಕು. ಬಡತನದಿಂದ ಆಚೆ ಬರಬೇಕು. ಅದಕ್ಕಾಗಿ ಸೋಲುಂಡರೂ ಒಂದು ಗೆಲುವಿಗಾಗಿ ಇಷ್ಟೆಲ್ಲಾ ಪ್ರಯತ್ನ …’ ಎನ್ನುತ್ತಾರೆ ಸತೀಶ್. “ನಾನು “ರಾಕೆಟ್’ ಮಾಡಿ ಒಂದಷ್ಟು ಕಳೆದುಕೊಂಡೆ. ತುಂಬಾ ಕನಸು ಕಟ್ಟಿಕೊಂಡು, ಆಸೆ ತುಂಬಿಕೊಂಡು ಮಾಡಿದ ಚಿತ್ರವದು.
ಆದರೆ, “ರಾಕೆಟ್’ ನನ್ನ ನಿರೀಕ್ಷೆ ಮಟ್ಟಕ್ಕೆ ಹಾರಲಿಲ್ಲ. ಆಗ ಸುಮಾರು ಒಂದುವರೆ ವರ್ಷ ಕಾಲ ನಾನು ಹೆಂಗಾಗಿದ್ದೆ ಅಂದರೆ, ನನ್ ಕಿವಿಯಲ್ಲಿ ಬರೀ “ರಾಕೆಟ್’, “ರಾಕೆಟ್’ ಅನ್ನೋ ಪದಾನೇ ಗಿರಕಿ ಹೊಡೆಯುತ್ತಿತ್ತು. ಆ ಸಮಯದಲ್ಲಿ ಸೋಲೆಂಬುದು ನನ್ನನ್ನು ಇನ್ನಷ್ಟು ಕುಸಿಯುವಂತೆ ಮಾಡಿದ್ದು ಸುಳ್ಳಲ್ಲ. ಆದರೆ, ಕಣ್ಣ ಮುಂದೆ ನನ್ನ ಕುಟುಂಬ ಕಂಡಿತು. ಬಡತನ ದೂರ ಮಾಡಲೇಬೇಕು ಅನ್ನೋ ಹಠ ಬಂತು. ಆಗ ನಾನು ಸುಮಾರು ಒಂದು ತಿಂಗಳ ಕಾಲ ಮನೆಗೆ ಹೋಗಿರಲಿಲ್ಲ.
ಎಲ್ಲೋ ಒಂದು ಕಡೆ ಕೂತವನು ಆಚೆಯೂ ಬರಲಿಲ್ಲ. ಅತ್ತು ಅತ್ತು ನನ್ ಕಣ್‌ಗುಡ್ಡೆಗಳೇ ಸಣ್ಣದ್ದಾಗಿದ್ದವು. ಒಂದು ಸೋಲು ನನಗೆಲ್ಲಾ ಪಾಠ ಕಲಿಸಿತು. ಆಗ ಒಂದು ತಿಂಗಳ ಕಾಲ ಕುಳಿತು ಒಂದಷ್ಟು ಸಿನಿಮಾಗಳನ್ನು ನೋಡಲು ಶುರುಮಾಡಿದೆ. ಬೇರೆ ಭಾಷೆಗಳಲ್ಲಿ ಏನೇನು ಸಿಗುತ್ತೆ ಅನ್ನೋದನ್ನು ಹುಡುಕಲು ಹೊರಟೆ. ನಾನು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇನೆ ಅಂತ ಮೊದಲು ಮನಗಂಡೆ. ಕ್ರಮೇಣ ನನ್ನ ಕೈಗೆ ಒಂದಷ್ಟು ಸಿನಿಮಾಗಳು ಬಂದವು. ಆ ವೇಳೆ “ಬ್ಯೂಟಿಫುಲ್ ಮನಸುಗಳು’ ಚಿತ್ರ ಬಂತು.
ಬಳಿಕ ಐದಾರು ಚಿತ್ರಗಳಾದವು. ಈ ಪೈಕಿ ನನಗೆ “ಟೈಗರ್ ಗಲ್ಲಿ’ ಯಾಕೆ ಮುಖ್ಯವಾಗುತ್ತೆ ಅಂದರೆ, ವೃತ್ತಿ ಜೀವನದಲ್ಲಿ “ರಾಕೆಟ್’ ನೆಲಕಚ್ಚಿದಾಗ ನಿರ್ಮಾಪಕ ಎಂ.ಎನ್.ಕುಮಾರ್ ಅವರು ಕೈ ಹಿಡಿದರು. “ನಾನಿದ್ದೇನೆ ಧೈರ್ಯವಾಗಿರು’ ಎಂದರು. ನಿಜವಾಗಿಯೂ ನಾನು ಅವರಿಗೆ ಚಿರಋಣಿಯಾಗಿರುತ್ತೇನೆ. ಎಷ್ಟೇ ಎತ್ತರಕ್ಕೆ ಬೆಳೆದರೂ, ಹೀಗೇ ಇರಿ¤àನಿ’ ಎನ್ನುತ್ತಾರೆ ಸತೀಶ್. “ಟೈಗರ್ ಗಲ್ಲಿ’ ಚಿತ್ರವನ್ನು ಸತೀಶ್ ಒಪ್ಪುವುದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ, ಅದು ನಿರ್ದೇಶಕ ರವಿಶ್ರೀವತ್ಸ.
“ಒಂದು ಋಣವಿತ್ತು. “ಮಾದೇಶ’ದಲ್ಲಿ ಒಂದು ಪಾತ್ರ ಕೊಟ್ಟು ಅವಕಾಶ ಕೊಟ್ಟವರು ರವಿ ಶ್ರೀವತ್ಸ. ಇಂದು ನಾನು ಹೀಗಾಗಲು ಅವರ ಕೊಟ್ಟ ಅವಕಾಶ ಕಾರಣ. ಅವರು ಮಾಡಿಕೊಂಡ ಕಥೆಗಾಗಿಯೇ ನಾನು ಸಿನಿಮಾ ಮಾಡಿದೆ. ಅವರು ಕಥೆ ಹೇಳಿದಾಗ, ನಾನು ಕೇಳಿದ್ದು ಒಂದೇ ಪ್ರಶ್ನೆ, ಈ ಪಾತ್ರವನ್ನು ನನ್ನ ಕೈಯಲ್ಲಿ ಮಾಡೋಕ್ಕಾಗುತ್ತಾ ಅಂತ. ಆಗ ಅವರು ಹೇಳಿದ್ದು, “ಮಾದೇಶ’ದಲ್ಲಿ ಒಂದು ಕ್ಷಣ ಬಂದು ಹೋಗ್ತಿರಲ್ಲ, ಆ ರೋಷ, ಆವೇಷ ಹೇಗಿತ್ತೋ, ಅದೇ ಇಲ್ಲಿ ಬೇಕು ಅಂದ್ರು. ನಾನು ಓಕೆ ಅಂದೆ. ಜರ್ನಿ ಶುರುವಾಯ್ತು’ ಎನ್ನುತ್ತಾರೆ ಸತೀಶ್. ಡಬ್ಬಿಂಗ್ ಮಾಡುವ ಸಂದರ್ಭದಲ್ಲಿ, ಜನ ಈ ಚಿತ್ರವನ್ನು ಸ್ವೀಕರಿಸುತ್ತಾರಾ ಎಂಬ ಪ್ರಶ್ನೆ ಎದುರಾಯಿತಂತೆ.
“ಆಗ ಲ್ಯಾಬ್ ರಿಪೋರ್ಟ್‌ನಿಂದ ಬಂದ ಉತ್ತರ ಹೀಗಿತ್ತು. ನೋಡುಗರಿಗೆ ಖಂಡಿತ ಕ್ಲೈಮ್ಯಾಕ್ಸ್‌ನಲ್ಲಿ ಕಣ್ಣು ಒದ್ದೆಯಾಗುತ್ತೆ ಎಂಬ ಉತ್ತರ ಬಂತು. ಇದು ಸೀರಿಯಸ್ ಸಬ್ಜೆಕ್ಟ್. ಹಾಗಂತ ಮನರಂಜನೆಗೇನೂ ಕಡಿಮೆ ಇಲ್ಲ. ನಿಜಕ್ಕೂ ಇದು ಹೊಸ ಜನರೇಷನ್ ಸಿನಿಮಾ’ ಎಂದು ಹೇಳುತ್ತಲೇ, “ಈಗ ತಮಿಳು ಚಿತ್ರರಂಗಕ್ಕೂ ಹೋಗುತ್ತಿದ್ದೇನೆ. “ಮಾದೇಶ’ ಚಿತ್ರದ ಪಾತ್ರದಿಂದ ಹಿಡಿದು ಇಲ್ಲಿಯವರೆಗೂ, ಜನರು ಪ್ರೀತಿಸಿದ್ದಾರೆ. ಆ ಪ್ರೀತಿಯನ್ನು ನಾನು ಸಾಯೋವರೆಗೂ ಇಟ್ಟುಕೊಳ್ಳುತ್ತೇನೆ’ ಎಂದು ಮಾತು ಮುಗಿಸಿದರು ಸತೀಶ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.