ದೇವರಾಜ್ ಕುಮಾರನ ಪ್ರೀತಿಯ ಕುಮಾರಿ
Team Udayavani, Dec 29, 2017, 10:32 AM IST
ದೇವರಾಜ್ ಪುತ್ರ ಪ್ರಣವ್ “ಕುಮಾರಿ 21′ ಎಂಬ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತು. ಕಳೆದ ಹದಿನೆಂಟು ತಿಂಗಳ ಹಿಂದೆಯೇ ಮುಹೂರ್ತ ಕಂಡಿದ್ದ ಆ ಚಿತ್ರದ ಕೆಲಸ ಇನ್ನೂ ಬಾಕಿ ಇದೆ. ಚಿತ್ರೀಕರಣದಲ್ಲಿ ಇದುವರೆಗೆ ಆದಂತಹ ಅನುಭವ ಕುರಿತು ಒಂದಷ್ಟು ಹೇಳಿಕೊಳ್ಳಲೆಂದೆ ಚಿತ್ರತಂಡ ಪತ್ರಕರ್ತರ ಎದುರು ಬಂದಿತ್ತು. “ಕುಮಾರಿ 21′ ಚಿತ್ರ ಬೆಂಗಳೂರು ಮತ್ತು ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ಮುಗಿಸಿದ್ದು, ಈಗ ಬಿಡುಗಡೆಯ ಕೆಲಸಗಳಲ್ಲಿ ನಿರತವಾಗಿದೆ.
ಪ್ರಣವ್ ದೇವರಾಜ್ ಅವರಿಗೆ ಇದು ಮೊದಲ ಚಿತ್ರ. ಚಿತ್ರದ ಬಗ್ಗೆ ಸಾಕಷ್ಟು ಭರವಸೆ ಇಟ್ಟುಕೊಂಡಿರುವ ಪ್ರಣವ್, ಹೇಳಿದ್ದಿಷ್ಟು. “ಇಲ್ಲಿ ತಂದೆ -ತಾಯಿಯ ಬಾಂಧವ್ಯ, ಪ್ರೀತಿ, ವಾತ್ಸಲ್ಯ, ಗೆಳೆತನ, ಪ್ರಣಯ, ಕೋಪ, ದ್ವೇಷ ಎಲ್ಲವೂ ಇದೆ. ಕಥೆಗೆ ಪೂರಕವಾಗಿರುವ ಹಾಡುಗಳಿವೆ. ಇದೊಂದು ರೊಮ್ಯಾಂಟಿಕ್ ಲವ್‌ಸ್ಟೋರಿಯಾಗಿದ್ದರೂ, ಹೊಸ ನಿರೂಪಣೆಯೊಂದಿಗೆ ಹೇಳಲಾಗಿದೆ. ಅದೇ ಚಿತ್ರದ ವಿಶೇಷ. ಸಾಮಾನ್ಯವಾಗಿ ಲವ್‌ಸ್ಟೋರಿ ಚಿತ್ರದಲ್ಲಿ ಸಾಹಸ ಇದ್ದೇ ಇರುತ್ತೆ. ಇಲ್ಲಿ ಅಂಥದ್ದು ಇಲ್ಲದಿದ್ದರೂ, ಪ್ರತಿಯೊಂದು ದೃಶ್ಯ ಕೂಡ ನೋಡಿಸಿಕೊಂಡು ಹೋಗುತ್ತದೆ’ ಎಂದು ವಿವರಿಸುತ್ತಾರೆ ಪ್ರಣವ್.
ಇನ್ನು, ಚಿತ್ರಕ್ಕೆ ನಿಧಿ ನಾಯಕಿ. ಮಾಡೆಲ್ ಹುಡುಗಿಯೊಬ್ಬಳು ಮುಂಬೈನಿಂದ ಬೆಂಗಳೂರಿಗೆ ಬಂದಾಗ, ಅಲ್ಲಾಗುವ ಪರಿಚಯ ಪ್ರೇಮಕ್ಕೆ ತಿರುಗಿ, ನಂತರ ಪಡೆದುಕೊಳ್ಳುವ ತಿರುವುಗಳಲ್ಲಿ ಅನೇಕ ಘಟನೆಗಳು ಸಂಭವಿಸಿ, ಅದರಿಂದ ಹೇಗೆ ಹೊರಬರುತ್ತಾಳೆ ಎಂಬ ಪಾತ್ರವನ್ನು ನಿಧಿ ಇಲ್ಲಿ ನಿರ್ವಹಿಸಿದ್ದಾರಂತೆ.
“ಜೋಶ್’ನ ಅಕ್ಷಯ್ ಇಲ್ಲಿ ಗೆಳೆಯನ ಪಾತ್ರ ಮಾಡಿದ್ದಾರಂತೆ. ಕ್ಲೈಮ್ಯಾಕ್ಸ್‌ನಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾಗಿ ಹೇಳುತ್ತಾರೆ ಅಕ್ಷಯ್. ಇನ್ನುಳಿದಂತೆ ಚಿತ್ರದಲ್ಲಿ ನಾಯಕನ ಅಮ್ಮನಾಗಿ ಸಂಗೀತ ಕಾಣಿಸಿಕೊಂಡರೆ, ಗೆಳೆಯರಾಗಿ ಮನೋಜ್, ರಿತೇಶ್ ನಟಿಸಿದ್ದಾರೆ.
ನಿರ್ದೇಶಕ ವೇಮುಲ ಅವರು ಕಥೆ ಬರೆದು ಮೊದಲ ಸಲ ನಿರ್ದೇಶಿಸುತ್ತಿರುವ ಚಿತ್ರವಿದು. “ಈ ಚಿತ್ರಕ್ಕೆ ಯಾಕೆ “ಕುಮಾರಿ 21′ ಎಂಬ ಹೆಸರನ್ನಿಡಲಾಗಿದೆ ಎಂಬುದಕ್ಕೆ ಸಿನಿಮಾ ನೋಡಬೇಕು. ಆಗ ಮಾತ್ರ ಶೀರ್ಷಿಕೆ ಇಟ್ಟಿದ್ದರ ಬಗ್ಗೆ ಗೊತ್ತಾಗುತ್ತೆ. ಇದೊಂದು ಹೊಸಬಗೆಯ ಕಥೆ. ಹೊಸ ಶೈಲಿಯ ನಿರೂಪಣೆ ಇದೆ’ ಅನ್ನುತ್ತಾರೆ ವೇಮುಲ.
ಸುಮಾರು 200 ತೆಲುಗು ಚಿತ್ರಗಳನ್ನು ವಿತರಣೆ ಮಾಡಿರುವ ಎ. ಸಂಪತ್‌ಕುಮಾರ್ ಈ ಚಿತ್ರದ ನಿರ್ಮಾಣ ಮಾಡಿದ್ದಾರೆ. ಜನವರಿಯಲ್ಲಿ ಆಡಿಯೋ ಬಿಡುಗಡೆ ಮಾಡಿ, ಫೆಬ್ರವರಿಯಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆ ನಿರ್ಮಾಪಕರದ್ದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.