ಸಿನಿಮಾಗೆ ರಾಜಕೀಯ ಬೆರೆಸಬೇಡಿ
Team Udayavani, Jan 25, 2019, 12:30 AM IST
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿವರಿಗೆ ರಾಜಕೀಯ ಜೊತೆಗೆ ಸಿನಿಮಾ ನಂಟು ಚೆನ್ನಾಗಿಯೇ ಇದೆ. ನಿರ್ಮಾಪಕರಾಗಿ, ವಿತರಕರಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಪುತ್ರ ನಿಖೀಲ್ ಕುಮಾರ್ ಕೂಡಾ ಚಿತ್ರರಂಗ ಪ್ರವೇಶಿಸಿರುವುದು ನಿಮಗೆ ಗೊತ್ತೇ ಇದೆ. “ಜಾಗ್ವಾರ್’ ಮೂಲಕ ಹೀರೋ ಆಗಿ ಎಂಟ್ರಿಕೊಟ್ಟ ನಿಖೀಲ್, ಈಗ ತಮ್ಮ ಎರಡನೇ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ನಿಖೀಲ್ ನಾಯಕರಾಗಿರುವ “ಸೀತಾರಾಮ ಕಲ್ಯಾಣ’ ಚಿತ್ರ ಇಂದು ತೆರೆಕಾಣುತ್ತಿದೆ. ಔಟ್ ಅಂಡ್ ಔಟ್ ಫ್ಯಾಮಿಲಿ ಸಿನಿಮಾವಾಗಿರುವ “ಸೀತಾರಾಮ …’ ಬಗ್ಗೆ ನಿಖೀಲ್ ಇಲ್ಲಿ ಮಾತನಾಡಿದ್ದಾರೆ ….
ಎರಡನೇ ಇಂದು ಬಿಡುಗಡೆಯಾಗುತ್ತಿದೆ. ಈ ಸಂದರ್ಭ ಹೇಗಿದೆ?
ನಾವು ಅಂದುಕೊಂಡಂತೆ ಸಿನಿಮಾ ಬಂದಿದೆ. ಮುಂಬೈಗೆ ಹೋಗಿ ಫೈನಲ್ ಕಾಪಿ ನೋಡಿಕೊಂಡು ಬಂದಿದ್ದೇನೆ. ಖುಷಿಯಾಯಿತು. ಕೌಟುಂಬಿಕ ಚಿತ್ರ. ಈ ತರಹ ಚಿತ್ರ ಬಂದು ತುಂಬಾ ವರ್ಷಗಳೇ ಆಗಿದೆ. “ಸೀತಾರಾಮ ಕಲ್ಯಾಣ’ ಸಾಮಾಜಿಕ ವಿಷಯಗಳಿರುವ ಒಂದು ಕಮರ್ಷಿಯಲ್ ಸಿನಿಮಾ ಎನ್ನಬಹುದು.
ಚಿತ್ರದ ಹಾಡು, ಟ್ರೇಲರ್ ನೋಡಿದಾಗ, ನಿಮ್ಮ ಮೊದಲ “ಜಾಗ್ವಾರ್’ಗಿಂತ ಚಿತ್ರಕ್ಕಿಂತ ಸಂಪೂರ್ಣ ಭಿನ್ನವಾಗಿ ಕಾಣುತ್ತದೆ?
ಜೀವನದ ಪ್ರತಿ ಹಂತಗಳಲ್ಲೂ ಕಲಿಯುತ್ತಿರುತ್ತೇವೆ. ಮೊದಲ ಸಿನಿಮಾ ಸ್ವಲ್ಪ ರಾ ಆಗಿತ್ತು. ಈಗ ಬದಲಾವಣೆ ಆಗಿದೆ. ಸಾಕಷ್ಟು ವಿಭಿನ್ನತೆಯಿಂದ ಪಾತ್ರ ಪೋಷಣೆ ಮಾಡಲಾಗಿದೆ. ದೊಡ್ಡ ತಾರಾಗಣವಿದೆ. ಎಲ್ಲರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ.
ನಿಖೀಲ್‌ಗೆ ಕಥೆ ಒಪ್ಪಿಸೋದು ಕಷ್ಟ ಎಂಬ ಮಾತಿದೆಯಲ್ಲ?
ಕಷ್ಟ ಎನ್ನುವುದಕ್ಕಿಂತ ಕಥೆ ವಿಚಾರದಲ್ಲಿ ನಾನೇ ಕುಳಿತು ಕೆಲಸ ಮಾಡುತ್ತೇನೆ. ಇದು ಸಿನಿಮಾ ಮೇಕಿಂಗ್‌ನ ಉತ್ತಮ ವಿಧಾನ ಅನ್ನೋದು ನನ್ನ ಅನಿಸಿಕೆ. ಯಾರೋ ಕಥೆ ಮಾಡ್ಕೊಂಡು ಬರ್ತಾರೆ, ಅದನ್ನು ಕೇಳಿ ನಾವು ಕೂಡಲೇ ಸಿನಿಮಾ ಮಾಡೋದಾದರೆ ಅದು ಫ್ಯಾಕ್ಟರಿ ಔಟ್‌ಲೆಟ್ ತರಹ ಆಗಬಹುದು. ಆ ತರಹ ನಾನು ಮಾಡ್ತಾ ಇಲ್ಲ. ತುಂಬಾ ಕೇರ್‌ಫುಲ್ ಆಗಿ ಕಥೆ ಕೇಳಿ ಮಾಡ್ತೀನಿ.
“ಸೀತಾರಾಮ ಕಲ್ಯಾಣ’ ಒಪ್ಪಿಕೊಳ್ಳಲು ಕಾರಣವೇನು?
ಈ ಕಥೆ ಮಾಡಲು ಕಾರಣ ನಮ್ಮ ತಂದೆಯವರ “ಸೂರ್ಯವಂಶ’, “ಚಂದ್ರಚಕೋರಿ’ ಸಿನಿಮಾಗಳು. ಆ ಸಿನಿಮಾದಲ್ಲಿ ಕಾಮಿಡಿ, ಸೆಂಟಿಮೆಂಟ್, ಆ್ಯಕ್ಷನ್ … ಹೀಗೆ ಫ್ಯಾಮಿಲಿಗೆ ಸಂಬಂಧಪಟ್ಟ ಅಂಶಗಳಿದ್ದವು. ಆ ಸಿನಿಮಾಗಳಲ್ಲಿದ್ದ ಅಷ್ಟೂ ಭಾವನೆಗಳನ್ನು ನೀವು “ಸೀತಾರಾಮ ಕಲ್ಯಾಣ’ದಲ್ಲಿ ನೋಡಬಹುದು.ಎಲ್ಲರಿಗೂ ತಲುಪುವಂತಹ ಸಿನಿಮಾ. ನಾನು ಏನೇ ಸಿನಿಮಾ ಮಾಡಿದ್ರೂ ಸಾಮಾಜಿಕ ವಿಷಯಗಳನ್ನಿಟ್ಟುಕೊಂಡೇ ಮಾಡ್ತೀವಿ. ಚಿಕ್ಕ ವಯಸ್ಸಿನಿಂದಲೂ ಅಣ್ಣಾವ್ರವನ್ನು ನೋಡಿಕೊಂಡು ಬೆಳೆದವನು. ಅಣ್ಣಾವ್ರೇ ಪ್ರೇರಣೆ. ಅವರ ಸಿನಿಮಾಗಳಲ್ಲಿ ಸಾಮಾಜಿಕ ಅಂಶಗಳು ಇರುತ್ತಿದ್ದವು.
ಇಡೀ ಸೀತಾರಾಮ ಕಲ್ಯಾಣವನ್ನು ಒನ್‌ಲೈನ್‌ನಲ್ಲಿ ಕಟ್ಟಿಕೊಡಿ?
ಇದು ತುಂಬಾ ಕಷ್ಟ ಕೆಲಸ. ಸಿನಿಮಾದಲ್ಲಿ ಸಾಕಷ್ಟು ವಿಷಯಗಳಿವೆ. ಆದರೂ ಇದೊಂದು ಸಂಪೂರ್ಣ ಕೌಟುಂಬಿಕ ಚಿತ್ರ ಎನ್ನಬಹುದು.
ಸಿನಿಮಾದ ಹೈಲೈಟ್ಸ್ ಮತ್ತು ಟಾರ್ಗೆಟ್ ಆಡಿಯನ್ಸ್ ಬಗ್ಗೆ ಹೇಳಿ?
ಚಿತ್ರದಲ್ಲಿ ತುಂಬಾ ಮಾಸ್ ಅಂಶಗಳಿವೆ. ಫೈಟ್ಸ್ ಬಗ್ಗೆ ತೆಲುಗು ಸಿನಿಮಾದಲ್ಲಿ ನೋಡಿದ್ದೀವಿ ಎಂಬ ಟೀಕೆ ಬಂದರೂ ಕನ್ನಡದಲ್ಲಿ ನೋಡಿಲ್ವಲ್ಲಾ …. ಅದು ಒಂದು ವಿಶೇಷತೆ ಅಲ್ವಾ. ಇತ್ತೀಚೆಗೆ ಬರುತ್ತಿರುವ ಚಿತ್ರಗಳಲ್ಲಿ ಫ್ಯೂರ್‌ಲವ್‌ಸ್ಟೋರಿಗಳು ಕಡಿಮೆಯಾಗಿವೆ. “ಸೀತಾರಾಮ ಕಲ್ಯಾಣ’ದಲ್ಲಿ ಫ್ಯೂರ್ ಲವ್. ಇದೆ. ಅದನ್ನು ಹರ್ಷ ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ. ನಮ್ಮ ಟಾರ್ಗೆಟ್ ಫ್ಯಾಮಿಲಿ ಆಡಿಯನ್ಸ್.
ಈ ಬಾರಿ ಕನ್ನಡದ ಕಲಾವಿದರಿಗೆ, ತಾಂತ್ರಿಕ ವರ್ಗಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೀರಿ?
ಹೌದು, ಬಹುತೇಕ ಕನ್ನಡ ಕಲಾವಿದರು, ತಂತ್ರಜ°ರು ನಟಿಸಿದ್ದಾರೆ. ಸುಮಾರು 130 ಜನ ಕಲಾವಿದರು ಇದ್ದಾರೆ. ಅವರೆಲ್ಲರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡಿದ ಕ್ರೆಡಿಟ್ ಹರ್ಷ ಹಾಗೂ ಇಡೀ ತಂಡಕ್ಕೆ ಹೋಗಬೇಕು. ಜೊತೆಗೆ ಈ ತರಹದ ಒಂದು ಸಿನಿಮಾ ಮಾಡಲು ಅವಕಾಶ ಕೊಟ್ಟ ನಮ್ಮ ತಂದೆ-ತಾಯಿಗೂ ಸಲ್ಲುತ್ತದೆ.
ನಿಮ್ಮ ತಂದೆ ಈ ಬಾರಿ ಸಿನಿಮಾದಲ್ಲಿ ಹೆಚ್ಚು ತೊಡಗಿಸಿಕೊಂಡಿಲ್ಲ?
ರಾಜ್ಯದ ಮುಖ್ಯಮಂತ್ರಿ ಅವರು. ಅವರ ಜವಾಬ್ದಾರಿ ಬಗ್ಗೆ ನನಗೆ ಗೊತ್ತಿದೆ. ಅವರನ್ನು ಈ ಕಡೆ ಸೆಳೆದರೆ ಜನರಲ್ಲಿ ಕೆಟ್ಟ ಭಾವನೆ ಬರಬಹುದು. “ಏನಪ್ಪಾ ಕುಮಾರಣ್ಣ ರಾಜ್ಯದ ಮುಖ್ಯಮಂತ್ರಿಯಾಗಿ ಮಗನ ಸಿನಿಮಾಕ್ಕೆ ಟೈಮ್ ಕೊಡ್ತಾರಲ್ಲ’ ಎಂಬ ಮಾತು ಬರಬಾರದು ಎಂಬ ಕಾರಣಕ್ಕೆ ನಿರ್ಮಾಣದಲ್ಲೂ ನಾನೇ ತೊಡಗಿಕೊಂಡರ. ಹಾಗಂತ ಸಿನಿಮಾ ಬಗೆಗಿನ ಸಂಪೂರ್ಣ ಅಪ್‌ಡೇಟ್ಸ್ ಅವರು ಕೇಳುತ್ತಿದ್ದರು. ಅವರು ಇಷ್ಟಪಟ್ಟ ನಂತರವೇ ನಾನು ಈ ಸಿನಿಮಾ ಮಾಡಲು ಮುಂದಾಗಿದ್ದು. ಪ್ರತಿ ಹಂತದಲ್ಲೂ ಅವರ ಸಲಹೆ-ಸೂಚನೆಗಳನ್ನು ತಗೊಂಡೇ ಮುಂದುವರಿದಿದ್ದು.
ಸಿನಿಮಾ ನೋಡಿ ಏನಂದ್ರು?
ಮೂರ್‍ನಾಲ್ಕು ಬಾರಿ ನೋಡಿದ್ದಾರೆ. ಅವರು ಖುಷಿಪಟ್ಟಿದ್ದಾರೆ. ಜೊತೆಗೆ ನಮ್ಮ ತಾತ-ಅಜ್ಜಿ ಕೂಡಾ ಸಿನಿಮಾ ನೋಡಿದ್ದಾರೆ. ಚಿತ್ರದ ಒಂದಷ್ಟು ದೃಶ್ಯಗಳನ್ನು ನೋಡಿ ತುಂಬಾನೇ ಇಷ್ಟಪಟ್ಟಿದ್ದಾರೆ. ಆ ದೃಶ್ಯಗಳು ಯಾವುವು ಎಂಬುದನ್ನು ನಾನು ಈಗಲೇ ಹೇಳಲ್ಲ.
ನಟನೆ ವಿಚಾರದಲ್ಲಿ ನಿಮ್ಮ ಸ್ಟ್ರೆಂಥ್ ಏನು?
ನನ್ನ ಸ್ಟ್ರೆಂಥ್ ಬಗ್ಗೆ ನಾನು ಹೇಳುವುದಲ್ಲ, ಜನ ಹೇಳಬೇಕು. ಆದರೂ ವೈಯಕ್ತಿಕವಾಗಿ ಹೇಳಬೇಕು ಅಂದ್ರೆ, ನಟನೆಯೇ ನನ್ನ ಶಕ್ತಿ. ನಾನು ಅದನ್ನು ಎಂಜಾಯ್ ಮಾಡುತ್ತೇನೆ. ಒಬ್ಬ ಕಮರ್ಷಿಯಲ್ ಹೀರೋ ಆಗಿ ಹಾಕಿದ ಹಣವನ್ನು ತೆಗೆಯೋದು ಕೂಡಾ ಮುಖ್ಯ. ಕಮರ್ಷಿಯಲ್ ಸಿನಿಮಾಗಳಲ್ಲಿ ಫೈಟ್ ಡ್ಯಾನ್ಸ್ ಏನೇ ಇದ್ರು. ನನಗೆ ನಟನೆ ಇಷ್ಟ.
ಪ್ರೇಕ್ಷಕರಿಗೆ ಏನು ಹೇಳಲು ಇಚ್ಚಿಸುತ್ತೀರಿ?
ಒಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಸಿನಿಮಾವನ್ನು ಎಂಜಾಯ್ ಮಾಡಿ. ರಾಜಕೀಯ ದೃಷ್ಟಿಯಿಂದ ನೋಡಬೇಡಿ. ಸಿನಿಮಾವನ್ನು ಸಿನಿಮಾವಾಗಿ ನೋಡಿ. ಇಲ್ಲಿ ನನ್ನೊಬ್ಬನ ಶ್ರಮ ಇಲ್ಲ. ಸಾವಿರಾರು ಮಂದಿ ಈ ಸಿನಿಮಾಕ್ಕೆ ಶ್ರಮ ಹಾಕಿದ್ದಾರೆ.
ಸಿನಿಮಾ ಬಿಡುಗಡೆ ಮುಂಚೆಯೇ ಸೇಫ್ ಅಂತೆ?
ಹೌದು, ಲಾಭದಲ್ಲಿದ್ದೇವೆ. ಜಯಣ್ಣ ವಿತರಣೆ ಮಾಡುತ್ತಿದ್ದಾರೆ. ನನ್ನ ತಂದೆ ಮತ್ತು ಅವರದು ಹಳೆಯ ಸಂಬಂಧ. ನಾವು ಸಿನಿಮಾರಂಗದಲ್ಲಿ ಗ್ಯಾಪ್ ತೆಗೆದುಕೊಂಡಿದ್ವಿ. ಈ ಬಾರಿ ಜಯಣ್ಣನಿಗೆ ಕೊಟ್ಟಿದ್ದೇವೆ. ಒಳ್ಳೆಯ ಥಿಯೇಟರ್ ಸೆಟಪ್ ಮಾಡಿದ್ದಾರೆ.
ಮುಂದಿನ ಸಿನಿಮಾ?
ನಿರ್ಮಾಪಕ ಜಯಣ್ಣ ಅವರ ಜೊತೆಗೊಂದು ಸಿನಿಮಾ ಮಾಡುತ್ತೇನೆ. ಆ ನಂತರ “2.0′ ಸಿನಿಮಾ ನಿರ್ಮಾಣ ಮಾಡಿದ ಲೈಕಾ ಪ್ರೊಡಕ್ಷನ್ಸ್‌ನಲ್ಲೊಂದು ಸಿನಿಮಾ ಮಾಡಲಿದ್ದೇನೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.