ಮತ್ತೆ ಎಳೆಯರಾಟ
Team Udayavani, Sep 22, 2017, 3:05 PM IST
“ಎಳೆಯರು ನಾವು ಗೆಳೆಯರು’ ಎಂಬ ಚಿತ್ರ ಬಂದಿರೋದು ಗೊತ್ತಿರಬಹುದು. “ಡ್ರಾಮಾ ಜೂನಿಯರ್’ ಮಕ್ಕಳು ಜೊತೆಯಾಗಿ ನಟಿಸಿದ ಸಿನಿಮಾವಿದು. ಚಿತ್ರತಂಡ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿತ್ತು. ಆದರೆ, ಅವರ ನಿರೀಕ್ಷೆ ಮಾತ್ರ ಫಲಿಸಲಿಲ್ಲ. ಅದಕ್ಕೆ ಕಾರಣ ಚಿತ್ರದ ರಾಂಗ್ ರಿಲೀಸ್. ಮಕ್ಕಳ ಸಿನಿಮಾಗಳ ಮುಖ್ಯ ಪ್ರೇಕ್ಷಕರಾದ ಮಕ್ಕಳೇ ಆ ಸಿನಿಮಾಕ್ಕೆ ಬರಲಿಲ್ಲ. ಕಾರಣ ಶಾಲಾ ರಜೆ ಮುಗಿದು, ಮಕ್ಕಳು ಶಾಲೆಗೆ ತೆರಳುವಾಗ ಚಿತ್ರ ಬಿಡುಗಡೆಯಾಯಿತು. ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾದರೂ ಚಿತ್ರ ಮಾತ್ರ ಹೆಚ್ಚು ದಿನ ಥಿಯೇಟರ್‌ನಲ್ಲಿ ಉಳಿಯಲಿಲ್ಲ. ತನ್ನ ಕನಸಿನ ಚಿತ್ರವನ್ನು ಜನರಿಗೆ ತಲುಪಿಸಲೇಬೇಕೆಂದು ನಿರ್ಮಾಪಕ ನಾಗರಾಜ್ ಗೋಪಾಲ್ ಮತ್ತೂಮ್ಮೆ ನಿರ್ಧರಿಸಿದ್ದಾರೆ.
ಹೌದು, “ಎಳೆಯರು ನಾವು ಗೆಳೆಯರು’ ಚಿತ್ರ ರೀ-ರಿಲೀಸ್ ಆಗುತ್ತಿದೆ. ಸೆಪ್ಟೆಂಬರ್ 29ರಂದು ಕೆಲವು ಚಿತ್ರಮಂದಿರಗಳಲ್ಲಿ ಮತ್ತೆ ಮಕ್ಕಳಾಟವನ್ನು ನೋಡುವ ಅವಕಾಶ ಸಿಗಲಿದೆ. “ನಮ್ಮ ಸಿನಿಮಾ ಬಗ್ಗೆ ಎಲ್ಲಾ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಚಿತ್ರರಂಗಕ್ಕೆ ನಾವು ಹೊಸಬರಾದ್ದರಿಂದ ನಮಗೆ ರಿಲೀಸ್ ಬಗ್ಗೆ ಗೊತ್ತಿರಲಿಲ್ಲ. ಹಾಗಾಗಿ, ರಾಂಗ್ ರಿಲೀಸ್ ಮಾಡಿದೆವು. ಶಾಲೆ ಶುರುವಾಗುವ ಸಮಯಕ್ಕೆ ನಮ್ಮ ಸಿನಿಮಾ ಬಿಡುಗಡೆಯಾಯಿತು. ಒಳ್ಳೆಯ ಸಿನಿಮಾ ಜನರಿಗೆ ತಲುಪಬೇಕೆಂಬ ಕಾರಣಕ್ಕೆ ಈಗ ಮತ್ತೂಮ್ಮೆ ಬಿಡುಗಡೆ ಮಾಡುತ್ತಿದ್ದೇವೆ. ಈಗಾಗಲೇ ಕೆಲವು ಚಿತ್ರಮಂದಿರಗಳ ಜೊತೆ ಮಾತನಾಡಿದ್ದು, ಚಿತ್ರಮಂದಿರ ನೀಡುವುದಾಗಿ ಹೇಳಿದ್ದಾರೆ. ಚಿತ್ರದ ಬಗ್ಗೆ ಕೆಲವು ಸ್ಕೂಲ್‌ಗಳಿಂದಲೂ ಬೇಡಿಕೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳು ಬಂದು ನೋಡುವ ನಿರೀಕ್ಷೆ ಇದೆ’ ಎಂದು ವಿವರ ಕೊಡುತ್ತಾರೆ ನಿರ್ಮಾಪಕ ನಾಗರಾಜ್ ಗೋಪಾಲ್.
ಅಷ್ಟಕ್ಕೂ ನಾಗರಾಜ್ ಗೋಪಾಲ್ ಅವರು ಈಗ ಬಿಡುಗಡೆ ಮಾಡಲು ಕಾರಣ ದಸರೆ ರಜೆ. ಸೆ.29 ರಿಂದ ಸುಮಾರು ಐದು ದಿನಗಳ ಕಾಲ ರಜೆ ಇದ್ದು, ಈ ರಜೆ ತಮ್ಮ ಸಿನಿಮಾಕ್ಕೆ ಸಹಾಯವಾಗಲಿದೆ ಎಂಬ ವಿಶ್ವಾಸ ಅವರಿಗಿದೆ. ಚಿತ್ರ ಬಿಡುಗಡೆಯಾದ ಎರಡು ವಾರಗಳ ನಂತರ ಡಿಸ್ಕೌಂಟ್‌ನಲ್ಲಿ ಟಿಕೆಟ್ ನೀಡುವ ಆಲೋಚನೆ ಕೂಡಾ ಅವರಿಗಿದೆ. ಅಂದಹಾಗೆ, ಈ ಬಾರಿ ಚಿತ್ರವನ್ನು ಟ್ರಿಮ್ ಮಾಡಲಾಗಿದೆ. ಮೊದಲಾರ್ಧ 11 ನಿಮಿಷ ಟ್ರಿಮ್ ಮಾಡಿದ್ದು, ಪ್ರೇಕ್ಷಕರಿಗೆ ಚಿತ್ರ ಮತ್ತಷ್ಟು ಇಷ್ಟವಾಗಲಿದೆ ಎಂಬ ನಂಬಿಕೆ ಅವರದು.
ಚಿತ್ರವನ್ನು ವಿಕ್ರಮ್ ಸೂರಿ ನಿರ್ದೇಶಿಸಿದ್ದಾರೆ. ಅವರು ಹೆಚ್ಚೇನು ಮಾತನಾಡಲಿಲ್ಲ. ಚಿತ್ರವನ್ನು ಜನರಿಗೆ ತಲುಪಿಸಲು ರೀರಿಲೀಸ್ ಮಾಡುತ್ತಿರುವ ನಿರ್ಮಾಪಕರ ಸಿನಿಮಾ ಪ್ರೀತಿಯನ್ನು ಕೊಂಡಾಡಿದರು. ಚಿತ್ರದಲ್ಲಿ ನಟಿಸಿದ ಮಹತಿ ಸೇರಿದಂತೆ ಇತರ ಮಕ್ಕಳು ಕೂಡಾ ತಮ್ಮ ಅನಿಸಿಕೆ ಹಂಚಿಕೊಂಡರು. ಸಂಗೀತ ನಿರ್ದೇಶಕ ಅನೂಪ್ ಸೀಳೀನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.