ಹೋರಾಟದ ಗೆಲುವು ಮತ್ತು ಮಿಲನಾ ನಗು
ಕೈ ಹಿಡಿದ ಲವ್
Team Udayavani, Mar 20, 2020, 10:44 AM IST
“ಇದೊಂಥರ ಹೋರಾಟದ ಗೆಲುವು …’
– ಹೀಗೆ ಹೇಳಿ ನಕ್ಕರು ಮಿಲನಾ ನಾಗರಾಜ್. ಯಾವ ಮಿಲನಾ ಎಂದರೆ “ಲವ್ ಮಾಕ್ಟೇಲ್’ ಚಿತ್ರದ ಬಗ್ಗೆ ಹೇಳಬೇಕು. ಇನ್ನೂ ಅರ್ಥವಾಗದಿದ್ದರೆ “ನಿಧಿ’, “ನಿಧಿಮಾ’ ಎಂದರೆ ಸಿನಿಪ್ರಿಯರಿಗೆ ಬೇಗನೇ ಅರ್ಥವಾಗಬಹುದು. ಹೌದು, ಈ ವರ್ಷದಲ್ಲಿ ಬಿಡುಗಡೆಯಾಗಿ ದೊಡ್ಡ ಹೆಸರು ಮಾಡಿರುವ ಹಾಗೂ ಪ್ರೇಕ್ಷಕ ವಲಯದಲ್ಲಿ ಹೆಚ್ಚು ಚರ್ಚೆಯಾದ ಚಿತ್ರವೆಂದರೆ ಅದು “ಲವ್ ಮಾಕ್ಟೇಲ್’. ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ವಿಮರ್ಶಕರಿಂದ ಆ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಆದರೆ, ಸಿನಿಮಾಕ್ಕೆ ಮಾತ್ರ ಜನ ಬರಲಿಲ್ಲ. ಆದರೆ, ಸಿನಿಮಾ ನೋಡಿದವರಿಂದ ಒಳ್ಳೆಯ ಮಾತುಗಳು ಕೇಳಿಬಂದು, ಆ ಸಿನಿಮಾಕ್ಕೆ ಸಿಕ್ಕ ಬಾಯಿಮಾತಿನ ಪ್ರಚಾರ ದೊಡ್ಡ ವರದಾನವಾಗಿದ್ದು ಸುಳ್ಳಲ್ಲ. ಅಂದಿನಿಂದ “ಲವ್ ಮಾಕ್ಟೇಲ್’ ಚಿತ್ರ ತಿರುಗಿ ನೋಡಲೇ ಇಲ್ಲ. ಸತತ ಹೌಸ್‌ಫುಲ್ ಶೋ ಮೂಲಕ ಹಿಟ್‌ಲಿಸ್ಟ್ ಸೇರಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ, ನಿಧಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಪಡೆದವರು ಮಿಲನಾ ನಾಗರಾಜ್. ನಟನೆಯ ಜೊತೆಗೆ ನಿರ್ಮಾಣದಲ್ಲೂ ಕೈ ಜೋಡಿಸಿದ್ದ ಮಿಲನಾ ಈಗ ಖುಷಿಯಾಗಿದ್ದಾರೆ.
“ನಾನು ತುಂಬಾ ಖುಷಿಯಾಗಿದ್ದೇನೆ. ಮೊನ್ನೆವರೆಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಖುಷಿಪಟ್ಟ ಜನ ಈಗ ಅಮೆಜಾನ್‌ನಲ್ಲಿ ಸಿನಿಮಾ ನೋಡುತ್ತಿದ್ದಾರೆ. ಅನೇಕರು ನನ್ನ ಹೆಸರು ಮಿಲನಾ ಎಂಬುದನ್ನು ಮರೆತೇಬಿಟ್ಟಿದ್ದಾರೆ. ನಿಧಿ, ನಿಧಿಮಾ ಎಂದು ಕರೆಯುವ ಜೊತೆಗೆ ಕೆಲವರು ನಿಧಿ ಎಂದು ಟ್ಯಾಟೋ ಕೂಡಾ ಹಾಕಿಸಿಕೊಂಡಿದ್ದಾರೆ’ ಎನ್ನುತ್ತಾರೆ ಮಿಲನಾ. ಆರಂಭದಲ್ಲಿ ಈ ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಸೆಳೆಯುತ್ತದೆ ಎಂಬುದು ಮಿಲನಾ ಸೇರಿದಂತೆ ಚಿತ್ರತಂಡಕ್ಕೆ ಚೆನ್ನಾಗಿ ಗೊತ್ತಿತ್ತಂತೆ. ಅದೇ ಕಾರಣದಿಂದ ಎದೆಗುಂದದೇ ಸಿನಿಮಾ ಪ್ರಚಾರ ಮಾಡುತ್ತಾ ಬಂದಿದ್ದಾಗಿ ಹೇಳುವ ಮಿಲನಾ, “ಆರಂಭದಲ್ಲಿ ಸ್ಲೋ ಪಿಕ್‌ಆಪ್ ತಗೊಂಡರೂ ಆ ನಂತರ ಆರು ವಾರಗಳಲ್ಲಿ ನಮಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತು. ಬಹುತೇಕ ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡವು. ನಾವಂತು ಖುಷಿಯಾಗಿದ್ದೇವೆ. ಹಾಕಿದ ಬಂಡವಾಳದ ಜೊತೆಗೆ ಒಳ್ಳೆಯ ಲಾಭ ಕೂಡಾ ಬಂತು’ ಎನ್ನುತ್ತಾರೆ ಮಿಲನಾ.
ಸದ್ಯ ಮಿಲನಾ ನಾಗರಾಜ್ ಅವರಿಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಆದರೆ. ಯಾವುದನ್ನೂ ಮಿಲನಾ ಒಪ್ಪಿಲ್ಲವಂತೆ. “ಸಾಕಷ್ಟು ಕಥೆಗಳು ಬರುತ್ತಿವೆ. ಯಾವುದೂ ಇನ್ನೂ ಅಂತಿಮವಾಗಿಲ್ಲ. ಸದ್ಯ ಚಿತ್ರದ ಗೆಲುವಿನ ಖುಷಿಯಲ್ಲಿದ್ದೇನೆ’ ಎನ್ನುತ್ತಾರೆ.
ರವಿ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.