ದೇವ್ರಂಥವನು ಬುಡು ಗುರು!
Team Udayavani, Mar 31, 2017, 11:27 AM IST
ಗರಿಗರಿ ಸಿಲ್ಕ್ ಪಂಚೆ-ಶರ್ಟು ತೊಟ್ಟು, ಆ ಕಡೆಯಿಂದ ಈ ಕಡೆಗೆ ಓಡಾಡುತ್ತಲೇ ಇದ್ದರು ಪ್ರಥಮ್. ಫೋನ್‌ನಲ್ಲಿ ಮಾತಾಡುತ್ತಾ,
ಯಾರಿಗೋ ಸಲಹೆ ಕೊಡುತ್ತಾ, ಬಂದವರನ್ನು ವಿಚಾರಿಸುತ್ತಾ … ವೇದಿಕೆ ತುಂಬೆಲ್ಲಾ ಅವರು ಹೆಜ್ಜೆ ಹಾಕುತ್ತಿದ್ದರು. ಮುಖದಲ್ಲಿ
ಟೆನ್ಶನ್ ಇತ್ತು. ಯಾರದೋ ಬರುವಿಕೆಗೆ ಅವರು ಕಾಯುತ್ತಿದ್ದರು.
ಕೊನೆಗೆ ಗೊತ್ತಾಗಿದ್ದೇನೆಂದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅಂದಿನ ಸಮಾರಂಭಕ್ಕೆ ಬರುತ್ತಾರೆ, ಚಿತ್ರದ ಹೆಸರನ್ನು
ಅನಾವರಣಗೊಳಿಸುತ್ತಾರೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹೀರೋ ಆಗ ಹೊರಟಿರುವ ಪ್ರಥಮ್‌ನ ಆಶೀರ್ವದಿಸುತ್ತಾರೆ ಎಂದು.
ಆದರೆ, ಗೌಡರು ಯಲಹಂಕಕ್ಕೆ ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದಾರೆ, ಅವರ ಅನುಪಸ್ಥಿತಿಯಲ್ಲೇ ಚಿತ್ರದ ಟೈಟಲ್
ಬಿಡುಗಡೆಯಾಗುತ್ತದೆ ಮತ್ತು ನಿಧಾನಕ್ಕೆ ಬಂದು ಕಾರ್ಯಕ್ರಮ ಸೇರಿಕೊಳ್ಳುತ್ತಾರೆ ಎಂದು ಹ್ಯಾಪುಮೋರೆ ಹಾಕಿಕೊಂಡೇ ಪ್ರಥಮ್
ಹೇಳಿಕೊಂಡರು. ಈ ಹ್ಯಾಪುಮೋರೆಯಲ್ಲೇ ಅವರು ಟೈಟಲ್ ಬಿಡುಗಡೆಗೆ ಸಾಕ್ಷಿಯಾದರು.
ಅವರ ಮುಖದಲ್ಲಿ ಸ್ವಲ್ಪ ಗೆಲುವು ಕಾಣಿಸಿಕೊಂಡಿದ್ದು, ದೇವೇಗೌಡರು ಬಂದಾಗಲೇ, ಬಂದು ಆಶೀರ್ವಾದ ಮಾಡಿದಾಗಲೇ.
ಇವೆಲ್ಲಾ ಆಗಿದ್ದು “ದೇವ್ರಂಥಾ ಮನುಷ್ಯ – ಸಂಜೆ ಮೇಲೆ ಸಿಗಬೇಡಿ’ ಎಂಬ ಚಿತ್ರದ ಟೈಟಲ್ ಬಿಡುಗಡೆ ಸಮಾರಂಭ ಕಂ
ಪತ್ರಿಕಾಗೋಷ್ಠಿಯಲ್ಲಿ. ಈಗಾಗಲೇ ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಚಿತ್ರ ಶುರುವಾಗಿದೆ. ಶ್ರೀ ಶಿವಕುಮಾರಸ್ವಾಮಿಗಳು ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ಕೊಟ್ಟಾಗಿದೆ. ಆ ವಿಷಯದ ಜೊತೆಗೆ, ಚಿತ್ರದ ಬಗ್ಗೆ ಇನ್ನೊಂದಿಷ್ಟು ಮಾಹಿತಿ ನೀಡುವುದಕ್ಕೆ ಚಿತ್ರತಂಡದವರು ಅಂದು ಬಂದಿದ್ದರು. ಈ ಚಿತ್ರವನ್ನು ಮಂಜುನಾಥ್, ವೆಂಕಟ್ ಗೌಡ ಮತ್ತು ಸುರೇಶ್ ಎನ್ನುವವರು ಸೇರಿ ನಿರ್ಮಿಸುತ್ತಿದ್ದಾರೆ. ಕಿರಣ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ.
ಕಿರಣ್ ಶೆಟ್ಟಿ ಈ ಹಿಂದೆ ರೈತರ ಸಮಸ್ಯೆ ಮತ್ತು ಭ್ರಷ್ಟಾಚಾರದ ಕುರಿತು ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳನ್ನು ಮಾಡಿಕೊಂಡಿದ್ದವರು. ಈಗ ಮೊದಲ ಬಾರಿಗೆ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದಕ್ಕೆ ಹೊರಟಿದ್ದಾರೆ. ತಾವು ಭ್ರಷ್ಟಾಚಾರದ ಕುರಿತು ಕಿರುಚಿತ್ರ
ಮಾಡಿದ್ದಾಗಿ ಹೇಳುತ್ತಿದ್ದಂತೆಯೇ, ಪ್ರಥಮ್ ಅದನ್ನು ಖಂಡಿಸಿದರು. ನಿಜ ಸಂಗತಿಯನ್ನೂ ವಿವರಿಸಿದರು. “ಈವಯ್ಯ ಭ್ರಷ್ಟಾಚಾರದ
ವಿರುದ್ಧ ಅದೇನು ಮಾಡಿದ್ದಾರೋ ಗೊತ್ತಿಲ್ಲ. ಇತ್ತೀಚೆಗೆ ಪೊಲೀಸರ ಹತ್ತಿರ ಸಿಕ್ಕಿ, ಫೈನ್ ಕಟ್ಟದೇ ಬಂದರು’ ಎಂದು ನಿರ್ದೇಶಕರ
ಹಣೆಯಲ್ಲಿ ಬೆವರು ಇಳಿಸಿದರು. ಬೆವರೊರೆಸಿಕೊಂಡ ನಿರ್ದೇಶಕರು, ಚಿತ್ರದ ಬಗ್ಗೆ ಒಂದಿಷ್ಟು ವಿವರಗಳನ್ನು ಕೊಟ್ಟರು.
“ಪ್ರಥಮ್ ಚಿತ್ರ ಮಾಡೋಕೆ ಅದೃಷ್ಟ ಮಾಡಿದ್ದೆ. ಇಲ್ಲಿ ನಾಯಕ ದೇವ್ರಂಥಾ ಮನುಷ್ಯ. ಬೆಳಿಗ್ಗೆ ಹೊತ್ತು ಯಾರ ತಂಟೆಗೂ ಹೋಗುವುದಿಲ್ಲ. ಆದರೆ, ಸಂಜೆ ಮಾತ್ರ ಸಿಗಬೇಡಿ ಅಂತ ಹೇಳಿರೋದಕ್ಕೆ ಕಾರಣವಿದೆ. ಅದನ್ನು ನೀವು ಚಿತ್ರದಲ್ಲೇ ನೋಡಬೇಕು.
ಪ್ರಥಮ್ ಮ್ಯಾನರಿಸಂಗೆ ತಕ್ಕ ಹಾಗೆ ಚಿತ್ರ ಮಾಡುತ್ತಿದ್ದೇವೆ. ನಾವು ಕೆಲವೊಮ್ಮೆ ಗೊತ್ತಿಧ್ದೋ, ಗೊತ್ತಿಲ್ಲದೆಯೋ ತಪ್ಪು
ಮಾಡುತ್ತಿರುತ್ತೀವಿ. ಗೊತ್ತಿದ್ದೂ ಮಾಡಿದ ತಪ್ಪಿನ ಪರಿಣಾಮ ಯಾವ ರೀತಿ ಆಗುತ್ತದೆ ಅನ್ನೋದು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದೇವೆ’ ಎಂದರು. ಪ್ರಥಮ್ ಹೆಚ್ಚು ಮಾತಾಡಲಿಲ್ಲ. ಅವರ ಗಮನವೆಲ್ಲಾ ಗೌಡರ ಕಡೆಗೇ ಇತ್ತು.
ಎರಡೂಕಾಲು ಗಂಟೆ ನಗಿಸುವಂಥ ಚಿತ್ರ ಎಂದರು. ಈ ಚಿತ್ರದಲ್ಲಿ ಅವರಿಗೆ ನಯನಾ ಮತ್ತು ಪೂರ್ಣಿಮಾ ಎಂಬ ಇಬ್ಬರು ನಾಯಕಿಯರಿದ್ದಾರೆ. ಕಿರಿಕ್ ಕೀರ್ತಿ ಅತಿಥಿ ಪಾತ್ರದಲ್ಲಿ ಬಂದು ಹೋಗುತ್ತಾರಂತೆ. ಜೊತೆಗೆ ಸುಚೇಂದ್ರ ಪ್ರಸಾದ್, ತಬಲಾ ನಾಣಿ ಮುಂತಾದವರು ಚಿತ್ರದಲ್ಲಿದ್ದಾರೆ. ಏಪ್ರಿಲ್ ಮೂರಕ್ಕೆ ಚಿತ್ರೀಕರಣ ಪ್ರಾರಂಭಿಸಿ, ಜುಲೈನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ತಂಡಕ್ಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.