ಮನಮೋಹನ
Team Udayavani, Jan 18, 2019, 12:30 AM IST
ಹೀರೋಗಳಿಗೆ ಸ್ಟೆಪ್ ಹಾಕಿಸೋದು ನೃತ್ಯ ನಿರ್ದೇಶಕರು. ಕನ್ನಡದಲ್ಲಿ ನೃತ್ಯ ನಿರ್ದೇಶನದಲ್ಲಿ ಹೆಸರು ಮಾಡಿದ ಪೈಕಿ ಇಮ್ರಾನ್ ಸರ್ದಾರಿಯಾ ಹಾಗೂ ಎ.ಹರ್ಷ ಕೂಡಾ ಇದ್ದಾರೆ. ಬೇಡಿಕೆಯ ನೃತ್ಯ ನಿರ್ದೇಶಕರಾಗಿದ್ದ ಅವರು ಈಗ ನೃತ್ಯ ನಿರ್ದೇಶನದ ಜೊತೆಗೆ ಸಿನಿಮಾ ನಿರ್ದೇಶನದಲ್ಲೂ ಬಿಝಿಯಾಗಿದ್ದಾರೆ. ಈಗ ಅವರಿಬ್ಬರ ಶಿಷ್ಯಂದಿರು ನೃತ್ಯ ನಿರ್ದೇಶಕರಾಗಿ ಹೆಸರು ಮಾಡುತ್ತಿದ್ದಾರೆ. ಹರ್ಷ ಶಿಷ್ಯ ಮೋಹನ್ ಹಾಗೂ ಇಮ್ರಾನ್ ಶಿಷ್ಯ ಧನಂಜಯ್ ಸದ್ಯ ಕನ್ನಡ ಚಿತ್ರರಂಗದ ಬೇಡಿಕೆ ನೃತ್ಯ ನಿರ್ದೇಶಕರಾಗುತ್ತಿದ್ದಾರೆ. ಈ ಇಬ್ಬರ ಜರ್ನಿ ಕುರಿತು ಒಂದು ಒಂದು ರೌಂಡಪ್ …
ಡ್ಯಾನ್ಸ್ ಮಾಸ್ಟರ್ ಹರ್ಷ ಇದ್ದಾರೆಂದರೆ ಅಲ್ಲಿ ಮೋಹನ್ ಇರದೇ ಇರುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಇವರ ಕಾಂಬಿನೇಷನ್ ಮೋಡಿ ಮಾಡುತ್ತಿತ್ತು. ಸರಿ ಸುಮಾರು ಒಂದುವರೆ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿರುವ ನೃತ್ಯ ನಿರ್ದೇಶಕ ಹರ್ಷ ಅವರ ಜೊತೆ ಮೋಹನ್ ಕೂಡ ಇದ್ದವರು. ಅಷ್ಟು ವರ್ಷಗಳಿಂದಲೂ ತಮ್ಮ ಗುರು ಹರ್ಷ ಜೊತೆ ಹಾಡುಗಳಿಗೆ ಸ್ಟೆಪ್ ಹಾಕಿದ್ದಷ್ಟೇ ಅಲ್ಲ, ಅದೆಷ್ಟೋ ಸ್ಟಾರ್ ಗಳಿಗೂ ಸ್ಟೆಪ್ ಹೇಳಿಕೊಟ್ಟಿದ್ದೂ ಹೌದು. ಇಷ್ಟು ವರ್ಷದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಸ್ಟೆಪ್ ಹಾಕಿದ ಖುಷಿ ಮೋಹನ್ ಅವರದು. ಡಾ.ರಾಜಕುಮಾರ್ ಅವರನ್ನು ಬಿಟ್ಟು, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಕನ್ನಡದ ಬಹುತೇಕ ಸ್ಟಾರ್ ನಟರುಗಳಿಗೂ ಸ್ಟೆಪ್ ಹೇಳಿಕೊಟ್ಟ ಹೆಮ್ಮೆ ಮೋಹನ್‌ಗಿದೆ. ಹರ್ಷ ಜೊತೆ ಕೆಲಸ ಮಾಡಿಕೊಂಡಿದ್ದ ಮೋಹನ್, ಈಗ ಸ್ವತಂತ್ರ ನೃತ್ಯ ನಿರ್ದೇಶಕರಾಗಿದ್ದಾರೆ. ಅಷ್ಟೇ ಅಲ್ಲ, ಯಾವಾಗ ಸ್ವತಂತ್ರ ನೃತ್ಯ ನಿರ್ದೇಶಕರಾಗಿಬಿಟ್ಟರೋ, ಇಲ್ಲಿಯವರೆಗೆ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಿಗೆ ಡ್ಯಾನ್ಸ್ ಮಾಸ್ಟರ್ ಆಗಿ ಕೆಲಸ ಮಾಡಿದ್ದಾರೆ. ಹರ್ಷ ನಿರ್ದೇಶನದಲ್ಲಿ ಬಿಜಿಯಾಗುತ್ತಿದ್ದಂತೆಯೇ ಅತ್ತ, ಶಿಷ್ಯ ಮೋಹನ್‌ಗೆ ಅವಕಾಶ ಹೆಚ್ಚಾಗುತ್ತಾ ಬಂತು. ಅತ್ತ ಹರ್ಷ ಕೂಡ ಮೋಹನ್‌ಗೆ ಬೆಂಬಲಿಸುವ ಮೂಲಕ ಸ್ವತಂತ್ರ ನೃತ್ಯ ನಿರ್ದೇಶಕರಾಗಿ ನೆಲೆನಿಲ್ಲಲು ಸಹಕಾರಿಯಾಗಿದ್ದಾರೆ.
ಅಷ್ಟಕ್ಕೂ ಮೋಹನ್‌ಗೆ ಸ್ವತಂತ್ರ ನೃತ್ಯ ನಿರ್ದೇಶಕನಾಗಿ ಬಂದ ಮೊದಲ ಅವಕಾಶ ಯಾವುದು? ಈ ಬಗ್ಗೆ
ಉತ್ತರಿಸುವ ಮೋಹನ್, “ಹರ್ಷ ಮಾಸ್ಟರ್ ಜೊತೆ “ಅಂಜನಿಪುತ್ರ’ ಚಿತ್ರಕ್ಕೆ ನನ್ನ ಕೊನೆಯ ಕೆಲಸ. ಅದಾದ ಬಳಿಕ ನಾನು ಸ್ವತಂತ್ರ ನೃತ್ಯ ನಿರ್ದೇಶಕನಾಗಿ ಕೆಲಸ ಶುರುಮಾಡಿದ್ದು “ಅಥರ್ವ’ ಚಿತ್ರದ ಮೂಲಕ. ಆ ಬಳಿಕ “ಮಾಸ್ ಲೀಡರ್’, “ಕ್ರ್ಯಾಕ್’,”ಲೈಫ್ ಜೊತೆ ಒಂದ್ ಸೆಲ್ಫಿ’,”ಭೈರಾದೇವಿ’, “ಯಜಮಾನ’ ಸೇರಿದಂತೆ ಹಲವು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದೇನೆ. “ಕೆಜಿಎಫ್’ ಚಿತ್ರದ “ಸಲಾಂ ರಾಕಿ ಭಾಯ್’ ಹಾಡಿಗೂ ನೃತ್ಯ ನಿರ್ದೇಶನ ಮಾಡಿದ್ದೇನೆ.
ಮುಂದೆ “ಭರಾಟೆ’, “ಒಡೆಯ’ ಸೇರಿದಂತೆ ಒಂದಷ್ಟು ಚಿತ್ರಗಳಿವೆ. ಹಾಗೆ ನೋಡಿದರೆ, ನನಗೆ “ಮಾಸ್ ಲೀಡರ್’, “ಪ್ರೇಮ ಬರಹ”, “ಅಯೋಗ್ಯ’ ಮತ್ತು “ಕೆಜಿಎಫ್’ ಚಿತ್ರಗಳು ಒಳ್ಳೆಯ ಹೆಸರು ತಂದುಕೊಟ್ಟಿವೆ. ಈಗ “ಯಜಮಾನ’ ಚಿತ್ರದ ಹಾಡಿಗೂ ನನ್ನ ನೃತ್ಯ ನಿರ್ದೇಶನವಿದೆ. ಸುದೀಪ್ ಅವರ ಚಿತ್ರಗಳಲ್ಲಿ ಕೆಲಸ ಮಾಡುವ ಅವಕಾಶವೂ ಸಿಗುತ್ತಿದೆ. ಹಿಂದೆ ಹರ್ಷ ಸರ್ ಜೊತೆ ಕೆಲಸ ಮಾಡಿದ್ದೇನೆ. ಆದರೆ, ಸ್ವತಂತ್ರವಾಗಿ ಮಾಡುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ’ ಎನ್ನುತ್ತಾರೆ ಮೋಹನ್.
ಹರ್ಷ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡುವ ಮೋಹನ್, “ಹರ್ಷ ಜೊತೆ ನಾನು ಸ್ಟೇಜ್ ಶೋ ಮಾಡುವಾಗಿನಿಂದಲೂ ಜೊತೆಗಿದ್ದವನು. ಅವರೇ ನನ್ನನ್ನು ಜೊತೆಗೆ ಬೆಳೆಸಿಕೊಂಡು ಬಂದವರು. ಈಗಲೂ ಅವರು ಬಿಜಿ ಆಗಿರುವುದರಿಂದ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನನಗೂ ಡ್ಯಾನ್ಸ್ ಅನ್ನೋದು ಹುಚ್ಚು. ಮೊದಲಿನಿಂದಲೂ ಡ್ಯಾನ್ಸ್ ಬಗ್ಗೆ ಹೆಚ್ಚು ಒಲವು ಇದ್ದುದರಿಂದ ಇದನ್ನೇ ಆಯ್ಕೆ ಮಾಡಿಕೊಂಡೆ. ಬಿಕಾಂ ಫೇಲ್ ಆದಾಗ, ನಾನು ಯೋಚನೆ ಮಾಡಲಿಲ್ಲ. ಕಾರಣ, ನನಗೆ ಡ್ಯಾನ್ಸ್ ಗೊತ್ತಿತ್ತು. ಇಲ್ಲೇ ಬದುಕು ಕಟ್ಟಿಕೊಳ್ತೀನಿ ಎಂಬ ನಂಬಿಕೆಯೂ ಇತ್ತು. ಈಗ ಅದು ಸಾಧ್ಯವಾಗಿದೆ’ ಎಂದು ಖುಷಿಯಿಂದ ಹೇಳುತ್ತಾರೆ ಮೋಹನ್.
ಸಾಮಾನ್ಯವಾಗಿ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡುವುದು ಸುಲಭದ ಕೆಲಸವಂತೂ ಅಲ್ಲ, ದೊಡ್ಡ ಬಜೆಟ್ ಚಿತ್ರಗಳಿರಲಿ, ಸಣ್ಣ ಬಜೆಟ್ ಚಿತ್ರಗಳೇ ಇರಲಿ, ಒಂದೇ ಎಫರ್ಟ್ ಇರುತ್ತೆ ಎನ್ನುವ ಮೋಹನ್, “ಯಾವುದೇ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಿದರೂ ಮೊದಲ ಹಾಡು ಅಂದುಕೊಂಡೇ ಕೆಲಸ ಮಾಡ್ತೀನಿ. ಅದರಲ್ಲೂ ಹೊಸಬರಿದ್ದರೆ ಪ್ರಯೋಗ ಮಾಡ್ತೀನಿ. ಸ್ಟಾರ್ ಸಿನಿಮಾ ಅಂದಾಗ ಕೊಂಚ ಭಯ ಇದ್ದೇ ಇರುತ್ತೆ. ಏನಾಗಿಬಿಡುತ್ತೋ ಎಂಬ ಸಣ್ಣ ಅಳುಕಿನಲ್ಲೇ ಕೆಲಸ ಮಾಡ್ತೀನಿ. ಇನ್ನು, ಸಣ್ಣ ಬಜೆಟ್ ಚಿತ್ರಗಳಿಗೆ ಒಂದೇ ದಿನದಲ್ಲಿ ಹಾಡು ಮುಗಿಸುವ ಚಾಲೆಂಜ್ ಕೂಡ ಇರುತ್ತೆ. ಅದನ್ನು ಯಶಸ್ವಿಯಾಗಿ, ಅಷ್ಟೇ ಚೆಂದವಾಗಿ ನೃತ್ಯ ನಿರ್ದೇಶನ ಮಾಡಿರುವ ಉದಾಹರಣೆಗಳಿವೆ. ಬಜೆಟ್‌ಗೆ ತಕ್ಕಂತೆ ಫ್ಲೆಕ್ಸಿಬಲ್ ಆಗಿ ಕೆಲಸ ಮಾಡುತ್ತೇನೆ. ನನಗೆ ಯಾರ ಸಿನಿಮಾ ಅನ್ನುವುದಕ್ಕಿಂತ ಸಾಂಗ್ ಮೇಕಿಂಗ್ ಹೇಗೆ ಮಾಡಬೇಕು ಎಂಬುದಷ್ಟೇ ಮುಖ್ಯವಾಗಿರುತ್ತೆ. ಕೇವಲ ಒಂದು ದಿನ, ಒಂದುವರೆ ದಿನದಲ್ಲಿ ಮಾಡಿದ ಹಾಡುಗಳು ಹಿಟ್ ಆಗಿವೆ. “ಅಯೋಗ್ಯ’ ಚಿತ್ರದ “ಏನಮ್ಮಿ ಏನಮ್ಮಿ’, “ಹಿಂದೆ ಹಿಂದೆ ಹೋಗು ಬಾ’ ಹಾಡು ಒಂದುವರೆ ದಿನದಲ್ಲಿ ಮಾಡಿದ್ದು. ಹೆಸರು ತಂದುಕೊಟ್ಟಿದೆ. ಇನ್ನು, ಮಾಂಟೇಜಸ್ ಹಾಡುಗಳಿಗೆ ಸಮಯ ಬೇಕಾಗುತ್ತೆ. ಅದೂ ಕೂಡ ಚಾಲೆಂಜ್’ ಎನ್ನುತ್ತಾರೆ ಮೋಹನ್.
ಮೋಹನ್ ಬರೀ ಡ್ಯಾನ್ಸ್ ಮಾಸ್ಟರ್ ಅಲ್ಲ. ಅವರು ಒಳ್ಳೆಯ ಗೀತರಚನೆಕಾರ ಕೂಡ ಹೌದು. “ವಜ್ರಕಾಯ’ ಚಿತ್ರಕ್ಕೆ “ನೋ ಪಾಬ್ಲಿಂ’ ಹಾಡು ಬರೆದು ಗುರುತಿಸಿಕೊಂಡರು. ಅಲ್ಲಿಂದ ಹಾಡು ಬರೆಯುವ ಅವಕಾಶವನ್ನೂ ಪಡೆದರು. “ಭಜರಂಗಿ’ ಚಿತ್ರದ “ಬಾಸು ನಮ್ ಬಾಸು’, “ಮಾರುತಿ 800′ ಸೇರಿದಂತೆ ಹಲವು ಚಿತ್ರಗಳಿಗೆ ಸುಮಾರು ಹದಿನೈದು ಗೀತೆಗಳನ್ನು ಬರೆದಿದ್ದಾರೆ. “ವೈಬುಲ್ ಪಾರ್ಟಿ ಸಾಂಗ್’ ಎಂಬ ಆಲ್ಬಂಗೂ ಗೀತೆ ಬರೆದು, ನೃತ್ಯ ನಿರ್ದೇಶಿಸಿದ್ದಾರೆ. ಇನ್ನು, ಹರ್ಷ ಅವರು ಮೋಹನ್‌ಗಾಗಿ “ಕಪಿಚೇಷ್ಟೆ’ ಚಿತ್ರ ಅನೌನ್ಸ್ ಮಾಡಿದ್ದರು. ಆ ಚಿತ್ರದಲ್ಲಿ ಮೋಹನ್ ಹೀರೋ. ಆದರೆ, ಚಿತ್ರ ತಡವಾಗಿದೆ. ಕಾರಣ, ಅತ್ತ ಹರ್ಷ ನಿರ್ದೇಶನದಲ್ಲಿ ಬಿಜಿ. ಇತ್ತ ಮೋಹನ್ ಸಹ ನೃತ್ಯ ನಿರ್ದೇಶನದಲ್ಲಿ ಬಿಜಿ. ಮುಂದೆ ಅವಕಾಶ ಸಿಕ್ಕಾಗ, “ಕಪಿಚೇಷ್ಟೇ’ ಮಾಡಲಿದ್ದಾರೆ ಮೋಹನ್.
ಎಲ್ಲಾ ಸರಿ, ಗುರು ಹರ್ಷ ಮಾಸ್ಟರ್ ಅವರ ಸ್ಥಾನವನ್ನು ಮೋಹನ್ ತುಂಬುತ್ತಾರೆ ಎಂಬ ಮಾತನ್ನು ಮೋಹನ್ ಒಪ್ಪುವುದಿಲ್ಲ.”ಹರ್ಷ ಅವರ ಸ್ಥಾನ ಹಾಗೇ ಇರುತ್ತೆ. ನನ್ನ ಸ್ಥಾನವನ್ನು ಹೊಸದಾಗಿ ಮಾಡಿಕೊಳ್ಳಬೇಕಿದೆ. ಅದಕ್ಕೆ ಹರ್ಷ ಸರ್ ಬೆಂಬಲವೂ ಇದೆ. ಕಷ್ಟ ಪಡುತ್ತಿದ್ದೇನೆ. ಸ್ಟಾರ್ ನಟರು ಅವಕಾಶ ಕೊಡುವ ಭರವಸೆ ಕೊಟ್ಟಿದ್ದಾರೆ. ಡ್ಯಾನ್ಸ್ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಇದೇ ನನ್ನ ಬದುಕು’ ಎನ್ನುತ್ತಲೇ ಮಾತು ಮುಗಿಸುತ್ತಾರೆ ಅವರು.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.