ಸೋಶಿಯಲ್ ಮೀಡಿಯಾ ಸಿನಿಮಾಕ್ಕೆ ಎಷ್ಟು ಪೂರಕ?
ಲೈಕ್ಸ್ , ಶೇರ್, ಕಾಮೆಂಟ್ಸ್ ವರ್ಕೌಟ್ ಆಗುತ್ತಾ ಗುರು
Team Udayavani, Apr 19, 2019, 7:49 AM IST
ಇಂದು ಎಲ್ಲಿ ನೋಡಿದರೂ ಸೋಶಿಯಲ್ ಮೀಡಿಯಾಗಳದ್ದೇ ಜಮಾನ. ಏನೇ ಆದರೂ, ಏನೇ ಮಾಡಿದರೂ, ಅದರ ಮೊದಲ ಪೋಸ್ಟ್ ಸೋಷಿಯಲ್ ಮೀಡಿಯಾಗಳಲ್ಲಿ ಬಿದ್ದರೇನೆ ಮನಸ್ಸಿಗೆ ಏನೋ ಸಮಾಧಾನ. ಇನ್ನು ಹಾಕಿದ ಪೋಸ್ಟ್‌ಗಳಿಗೆ ಒಂದಷ್ಟು ಲೈಕ್ಸ್, ಶೇರ್, ಕಾಮೆಂಟ್ಸ್ ಬಂದರಂತೂ ಕೇಳ್ಳೋದೆ ಬೇಡ. ಚಿತ್ರರಂಗ ಕೂಡ ಇಂಥದ್ದೇ ಸೋಷಿಯಲ್ ಮೀಡಿಯಾಗಳ ಸಮೂಹ ಸನ್ನಿಗೆ ಒಳಗಾಗದೇ ಉಳಿದಿಲ್ಲ. ಚಿತ್ರಗಳ ಟೈಟಲ್ ಅನೌನ್ಸ್, ಮುಹೂರ್ತ, ಫಸ್ಟ್‌ಲುಕ್, ಶೂಟಿಂಗ್ ಪ್ರೋಗ್ರೆಸ್, ಆಡಿಯೋ, ಟೀಸರ್, ಟ್ರೇಲರ್ ನಿಂದ ಹಿಡಿದು ಕೊನೆಗೆ ಸಿನಿಮಾ ಗೆದ್ದರೆ ಸಕ್ಸಸ್‌ಮೀಟ್, ಸೋತರೆ ಅಳಲು ತೋಡಿಕೊಳ್ಳುವವರೆಗೆ ಎಲ್ಲರಿಗೂ ಸೋಷಿಯಲ್ ಮೀಡಿಯಾಗಳೇ ಅಚ್ಚುಮೆಚ್ಚು. ಇನ್ನು ಕನ್ನಡ ಚಿತ್ರರಂಗ ಕೂಡ ಸೋಶಿಯಲ್ ಮೀಡಿಯಾಗಳ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಈಚೆಗೆ ಚಿತ್ರತಂಡಗಳು ತಮ್ಮ ಚಿತ್ರದ ಪ್ರಚಾರ, ಮತ್ತಿತರ ಕಾರ್ಯಗಳಿಗೆ ಸೋಷಿಯಲ್ ಮೀಡಿಯಾಗಳನ್ನು ಗರಿಷ್ಟ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿವೆ.
ಅದರಲ್ಲೂ ಹಳಬರಿಗಿಂತ, ಹೊಸದಾಗಿ ಚಿತ್ರರಂಗದ ಕದ ತಟ್ಟುವವರು ಮೊದಲು ಮುಖ ಮಾಡುವುದೇ ಸೋಷಿಯಲ್ ಮೀಡಿಯಾ ಕಡೆಗೆ. ಅದರಲ್ಲೂ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಚಿತ್ರದ ಬಗ್ಗೆ ಹಾಕುವ ಪೋಸ್ಟ್‌ಗೆ ಎಷ್ಟು ಲೈಕ್ಸ್ ಆಗಿದೆ. ಎಷ್ಟು ಕಾಮೆಂಟ್ಸ್ ಬಂದಿದೆ, ಎಷ್ಟು ಜನ ಶೇರ್ ಮಾಡಿದ್ದಾರೆ ಎನ್ನುವ ಸಂಗತಿಗಳೇ ಚಿತ್ರ ಎಷ್ಟು ಜನರನ್ನು ತಲುಪಿದೆ ಎನ್ನುವುದಕ್ಕೆ ಮಾನ ದಂಡವಾದಂತೆ ಇದೆ.
ಹಾಗಾದರೆ, ನಿಜವಾಗಿಯೂ ಸೋಶಿಯಲ್ ಮೀಡಿಯಾಗಳಲ್ಲಿ ಮೂಡುವ ಅಭಿಪ್ರಾಯ, ಕ್ರೇಜ್, ಟ್ರೆಂಡ್ ನಂಬಿಕೊಂಡು ಎಷ್ಟು ಜನ ಥಿಯೇಟರ್‌ಗೆ ಬರಬಹುದು? ಸೋಷಿಯಲ್ ಮೀಡಿಯಾ ಸಾಮಾನ್ಯ ವ್ಯಕ್ತಿಯೊಬ್ಬನನ್ನು, ಆ ಸಿನಿಮಾದ ಪ್ರೇಕ್ಷಕನನ್ನಾಗಿ ಮಾಡುವಷ್ಟು ಪರಿಣಾಮಕಾರಿಯಾಗಿದೆಯಾ? ಎಂಬ ಪ್ರಶ್ನೆ ಗೆ ಚಿತ್ರರಂಗದಿಂದಲೇ “ಇಲ್ಲ’ ಎಂಬ ಉತ್ತರ ಬರುತ್ತದೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಯೋಗರಾಜ್ ಭಟ್, “ಇವತ್ತು ಕನ್ನಡ ಸಿನಿಮಾದ ಬಗ್ಗೆ ಹಾಕುವ ಒಂದು ಪೋಸ್ಟನ್ನ ಚೆನ್ನಾಗಿ ಕಂಡ್ರೆ ಭಾಷೆ ಗೊತ್ತಿಲ್ಲದವರೂ ನೋಡುತ್ತಾರೆ. ಲೈಕೋ.., ಕಾಮೆಂಟೋ, ಏನೋ ಕೊಡುತ್ತಾರೆ. ಅದ
ನ್ನು ನೋಡಿದವರೆಲ್ಲ ಸಿನಿಮಾ ನೋಡೋದಕ್ಕೂ ಬರುತ್ತಾರೆ ಎನ್ನಲು ಆಗುವುದಿಲ್ಲ. ನಮ್ಮ ಸಿನಿಮಾವನ್ನ ನಮ್ಮ ಭಾಷೆಯ ಜನ ನೋಡಿದ್ರೆ ಮಾತ್ರ ಅದು ಉಪಯೋಗಕ್ಕೆ ಬರುತ್ತದೆ. ಅದರಲ್ಲೂ ಇತ್ತೀಚೆಗೆ ದುಡ್ಡು ಕೊಟ್ರೆ ಲೈಕ್ಸ್, ಶೇರ್‌ಗೂ ಫೇಕ್ ನಂಬರ್ ಕೊಡುತ್ತಾರೆ. ಇವತ್ತು ಒಂದು ಸಿನಿಮಾ ತನ್ನ ಪ್ರಚಾರಕ್ಕೆ ತುಂಬಾ ಮಾರ್ಗಗಳನ್ನು ಕಂಡುಕೊಂಡಿದೆ. ಅದರಲ್ಲಿ ಸೋಷಿಯಲ್ ಮೀಡಿಯಾ ಕೂಡ ಒಂದು. ಇದೆಲ್ಲವೂ ಥಿಯೇಟರ್‌ಗೆ ಜನರನ್ನು ಸೆಳೆಯಲು ಮಾಡುವ ಸರ್ಕಸ್ ಅಷ್ಟೇ.
ಇವತ್ತು ಎಷ್ಟೇ ಪ್ರಚಾರ ಮಾಡಿದ್ರೂ ಕಣ್ಣಿಗೆ ಕಾಣುತ್ತಿಲ್ಲ. ಹಾಗಾಗಿ ಸದಾ ಕಣ್ಣಿಗೆ ಕಾಣುತ್ತಿರುವಂತೆ ಸೋಷಿಯಲ್ ಮೀಡಿಯಾ ಮಾಡುತ್ತವೆ’ ಎನ್ನುತ್ತಾರೆ. ಇನ್ನು ಸೋಶಿಯಲ್ ಮೀಡಿಯಾ ಪಬ್ಲಿಸಿಟಿ ಬಗ್ಗೆ ಮಾತನಾಡುವ ಮತ್ತೂಬ್ಬ ನಿರ್ದೇಶಕ ಸಿಂಪಲ್ ಸುನಿ, “ಸೋಶಿಯಲ್ ಮೀಡಿಯಾಗಳು
ಸಿನಿಮಾಗಳ ಪ್ರಮೋಷನ್ಸ್‌ಗೆ ಖಂಡಿತಾ ಒಳ್ಳೆಯ ಫ್ಲಾಟ್‌ಫಾರ್ಮ್. ಬೇರೆ ಭಾಷೆಗಳಿಗೆ ಹೋಲಿಸಿದರೆ, ನಮ್ಮಲ್ಲಿ ಸೋಷಿಯಲ್ ಮೀಡಿಯಾ ಬಳಕೆ ಈಗಷ್ಟೇ ಹೆಚ್ಚಾಗುತ್ತಿದೆ. ಹಾಗಂತ ಸೋಷಿಯಲ್ ಮೀಡಿಯಾಗಳಲ್ಲಿ ಸಿಗುವ ರೆಸ್ಪಾನ್ಸ್ ಅನ್ನೇ ಸಿನಿಮಾದವರು ನಂಬಿಕೊಂಡು ಕೂರುವಂತಿಲ್ಲ. ಸಿನಿಮಾದ ಪೋಸ್ಟ್ ಎಷ್ಟು ಜನಕ್ಕೆ ರೀಚ್ ಆಗಿದೆ ಅನ್ನೋದು ಇಲ್ಲಿ ತುಂಬಾ ಕೌಂಟ್ ಆಗುತ್ತೆ. ಅದರಲ್ಲೂ
ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಬರುವ ವೀವ್ಸ್, ಶೇರ್ ನಂಬರ್‌ಗಳೂ ಕೂಡ ಫೇಕ್ ಆಗಿರುವ
ಸಾಧ್ಯತೆಗಳಿರುತ್ತವೆ. ನಮ್ಮಲ್ಲಿ ಇನ್ನೂ ಸೋಶಿಯಲ್ ಮೀಡಿಯಾ ನೋಡಿಕೊಂಡು ಥಿಯೇಟರ್‌ಗೆ ಬರುವಷ್ಟು ದೊಡ್ಡ ಸಂಖ್ಯೆಯ ಆಡಿಯನ್ಸ್ ಸೃಷ್ಟಿಯಾಗಿಲ್ಲ. ಸಿನಿಮಾವನ್ನು ಆಡಿಯನ್ಸ್‌ಗೆ ತಲುಪಿಸಲು ಬೇರೆ ಬೇರೆ ಮಾರ್ಗಗಳನ್ನೂ ಹುಡುಕಿಕೊಳ್ಳುವುದು ಒಳ್ಳೆಯದು’ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಒಟ್ಟಾರೆ ಹಿಂದಿ, ತೆಲುಗು, ತಮಿಳು, ಮಲೆಯಾಳಂನಲ್ಲಿ ಚಿತ್ರರಂಗಕ್ಕೆ ಹೋಲಿಸಿದರೆ, ಕನ್ನಡ ಚಿತ್ರರಂಗದಲ್ಲಿ ಸೋಷಿಯಲ್ ಮೀಡಿಯಾ, ಇಲ್ಲಿನ ಪ್ರೇಕ್ಷಕರ ಮೇಲೆ ಸದ್ಯಕ್ಕೆ ಅಷ್ಟೊಂದು ಪ್ರಭಾವ, ಪರಿಣಾಮ ಬೀರಿಲ್ಲ ಎನ್ನುವುದು ವಾಸ್ತವ ಸತ್ಯ. ಭವಿಷ್ಯದಲ್ಲಿ ಸೋಷಿಯಲ್ ಮೀಡಿಯಾಗಳ ಪ್ರಭಾವ ಹೆಚ್ಚಾದರೂ, ಆಗಬಹುದು ಎನ್ನುತ್ತಾರೆ ಚಿತ್ರೋದ್ಯಮದ ಮಂದಿ. ಅಂತಿಮವಾಗಿ ಎಷ್ಟೇ ಲೈಕ್ಸ್,
ಹಿಟ್ಸ್, ಶೇರ್, ಕಾಮೆಂಟ್ಸ್‌ಬಂದರೂ ಸಿನಿಮಾದಲ್ಲಿ ಒಳ್ಳೆಯ ಸತ್ವವಿದ್ದರೆ, ಸಾರವಿದ್ದರೆ ಮಾತ್ರ ಪ್ರೇಕ್ಷಕ
ಪ್ರಭುಗಳು ಸಿನಿಮಾವನ್ನ ಅಪ್ಪಿಕೊಳ್ಳುವುದು, ಒಪ್ಪಿಕೊಳ್ಳುವುದು ಎನ್ನುವುದರಲ್ಲಿ ಎರಡು ಮಾತಿಲ್ಲ.
ಸೋಶಿಯಲ್ ಮೀಡಿಯಾಗಳಲ್ಲಿ ಫ್ರಿ ಆಫ್ ಕಾಸ್ಟ್‌ನಲ್ಲಿ ಪ್ರಮೋಷನ್ ಮಾಡಬಹುದು. ಹೊಸಬರಿಗೆ, ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡುವವರಿಗೆ ಇದು ತುಂಬ ಅನುಕೂಲ. ತುಂಬಾ ಜನ ಸೋಷಿಯಲ್ ಮೀಡಿಯಾ ಫಾಲೋ ಮಾಡೋದ್ರಿಂದ ಒಂದಷ್ಟು ಜನರಿಗೆ ಸಿನಿಮಾದ ಬಗ್ಗೆ ಗೊತ್ತಾಗುತ್ತೆ. ಹಾಗಂತ ಅಲ್ಲಿ ಸಿಗುವ ವೀವ್ಸ್, ರೆಸ್ಪಾನ್ಸ್ ನೋಡಿ ಸಿನಿಮಾ ರಿಲೀಸ್ ಮಾಡಿದ್ರೆ ನಾವು ಮೂರ್ಖರಾಗುತ್ತೇವೆ. ಸೋಶಿಯಲ್ ಮೀಡಿಯಾದಲ್ಲಿ ರೆಸ್ಪಾನ್ಸ್ ಮಾಡುವವರೆಲ್ಲ, ಆಡಿಯನ್ಸ್ ಆಗಿ ಥಿಯೇಟರ್‌ಗೆ ಬರುವುದಿಲ್ಲ. ಹಾಗೇನಾದ್ರೂ ಆಗಿದ್ರೆ ಸೋಶಿಯಲ್ ಮೀಡಿಯಾದಲ್ಲಿ ಟೀಸರ್, ಟ್ರೇಲರ್, ಸಾಂಗ್ಸ್‌ನಲ್ಲಿ ಮಿಲಿಯನ್ಸ್ ಆಫ್ ವೀವ್ಸ್ ಪಡೆದುಕೊಂಡಿದ್ದ ಎಲ್ಲಾ ಸಿನಿಮಾಗಳು ರಿಲೀಸ್ ಆದ ಮೇಲೆ ಸೂಪರ್ ಹಿಟ್ ಆಗಿರುತ್ತಿದ್ದವು.
ಶ್ರೀನಿ, ನಟ ಮತ್ತು ನಿರ್ದೇಶಕ
ಕನ್ನಡದಲ್ಲಿ ಮೊದಲಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಿರ್ದೇಶಕರಲ್ಲಿ ನಾನೂ ಒಬ್ಬ. ನನ್ನ ಎಲ್ಲಾ ಸಿನಿಮಾಗಳನ್ನೂ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಮೋಷನ್ ಮಾಡುತ್ತಾ ಬಂದಿದ್ದೇನೆ. ನನ್ನ ಅನುಭವದ ಪ್ರಕಾರ, ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾದ ಪೋಸ್ಟ್, ಒಂದಷ್ಟು ಜನರಲ್ಲಿ ಕುತೂಹಲ ಹುಟ್ಟಿಸಬಹುದು. ಅಲ್ಲಿ ಸಿಗುವ ಫ್ರಿ ಎಂಟರ್‌ಟೈನ್ಮೆಂಟ್ ನಿಂದ ಟ್ರೆಂಡ್ ಕ್ರಿಯೇಟ್ ಆಗಬಹುದು. ಹಾಗಂತ ಅಲ್ಲಿ ವೀವ್ಸ್ ಮಾಡಿರುವವರು ಆಡಿಯನ್ಸ್ ಆಗಿ ಥಿಯೇಟರ್
ಗೆ ಬರುತ್ತಾರೆ ಅಂಥ ಹೇಳ್ಳೋದು ಕಷ್ಟ. ನನ್ನ ಸಿನಿಮಾಗಳು ಸೇರಿದಂತೆ, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಆದ ಅದೆಷ್ಟೋ ಸಿನಿಮಾಗಳಿಗೆ ಥಿಯೇಟರ್ ನಲ್ಲಿ ಆಡಿಯನ್ಸೇ ಇಲ್ಲದಿರುವುದನ್ನು ನೋಡಿದ್ದೇನೆ. ಹಾಗಾಗಿ ಅಂತಿಮವಾಗಿ ಸಿನಿಮಾದ ಕಂಟೆಂಟ್, ಮೌಥ್ ಪಬ್ಲಿಸಿಟಿ, ರಿವ್ಯೂಗಳೇ ಸಿನಿಮಾವನ್ನ ಥಿಯೇಟರ್‌ಗೆ ಬರುವಂತೆ ಮಾಡುವುದು.
ದಯಾಳ್ ಪದ್ಮನಾಭನ್, ನಿರ್ದೇಶಕ ಮತ್ತು ನಿರ್ಮಾಪಕ
ಸೋಶಿಯಲ್ ಮೀಡಿಯಾಗಳು ಸಿನಿಮಾದ ಬಗ್ಗೆ ಜನರಿಗೆ ಒಂದಷ್ಟು ತಿಳಿದುಕೊಳ್ಳಲು ಸಹಾಯಕವಾಗಬಹುದು. ಅದರಿಂದ ಸಿನಿಮಾದ ಸುದ್ದಿಗಳು ಒಂದಷ್ಟು ಜನರಿಗೆ
ರೀಚ್ ಆಗುತ್ತವೆ. ಆದರೆ ಅದನ್ನೆ ನಂಬಿಕೊಂಡು ಸಿನಿಮಾ ರಿಲೀಸ್ ಮಾಡೋದಕ್ಕೆ ಆಗುವುದಿಲ್ಲ. ವಾಸ್ತವ
ಅಂದ್ರೆ, ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಸಿನಿಮಾದ ಪೋಸ್ಟ್‌ಗಳಿಗೆ ವೀವ್ಸ್, ರೆಸ್ಪಾನ್ಸ್ ಮಾಡುವ ಶೇಕಡಾ 90ರಷ್ಟು ಜನ ಥಿಯೇಟರ್‌ಗೆ ಬರೋದಿಲ್ಲ. ಹಾಗಾಗಿ ಸೋಶಿಯಲ್ ಮೀಡಿಯಾ ಅನ್ನೋದು ಒಂಥರ ಸಿನಿಮಾಗಳಿಗೆ ಕೊಡೋ ಸಬ್ಸಿಡಿ ಥರ. ಅದನ್ನ ನೋಡಿಕೊಂಡು ಥಿಯೇಟರ್ ಬಂದ್ರೆ ಬೋನಸ್ ಎನ್ನಬಹುದು.
ಡಾ. ವಿ ನಾಗೇಂದ್ರ ಪ್ರಸಾದ್, ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ
ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.