ಗಂಡ ಹೆಂಡತಿ ಮತ್ತು ಮುನಿಸು
ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದೇನು ಗೊತ್ತಾ?
Team Udayavani, Sep 27, 2019, 5:00 AM IST
ಕನ್ನಡದಲ್ಲಿ ಈಗಾಗಲೇ ಬರುತ್ತಿರುವ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳ ಸಾಲಿಗೆ ಮತ್ತೂಂದು ಹೊಸ ಚಿತ್ರ ಸೇರ್ಪಡೆಯಾಗಿದೆ. ಅದೊಂದು ಮಿಸ್ಟ್ರಿ ಸ್ಟೋರಿ ಹೊಂದಿರುವ ಸಿನಿಮಾ. ಹೆಸರು “ಅಮೃತ್ ಅಪಾರ್ಟ್‌ಮೆಂಟ್ಸ್’. ಹೌದು, ಇದೇ ಮೊದಲ ಬಾರಿಗೆ ಗುರುರಾಜ ಕುಲಕರ್ಣಿ ಅವರು ನಿರ್ದೇಶನ ಮಾಡಿದ್ದಾರೆ. ನಿರ್ಮಾಣವೂ ಅವರದೇ. ಈ ಹಿಂದೆ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಗುರುರಾಜ ಕುಲಕರ್ಣಿ ಅವರಿಗೆ ಇದು ಮೂರನೇ ಸಿನಿಮಾ. ಕಥೆ ಬರೆದು ಮೊದಲ ಸಲ ನಿರ್ದೇಶನಕ್ಕಿಳಿದಿರುವ ಗುರುರಾಜ ಕುಲಕರ್ಣಿ, ತಮ್ಮ ಚಿತ್ರದ ಬಗ್ಗೆ ಹೇಳಲೆಂದೇ ಇತ್ತೀಚೆಗೆ ತಮ್ಮ ಚಿತ್ರತಂಡದ ಜೊತೆ ಪತ್ರಕರ್ತರ ಮುಂದೆ ಬಂದಿದ್ದರು ಗುರುರಾಜ ಕುಲಕರ್ಣಿ.
ಅಂದು ಮೊದಲು ಮಾತು ಶುರು ಮಾಡಿದ್ದು ನಿರ್ದೇಶಕರು. “ಈ ಚಿತ್ರ ಮಾಡೋಕೆ ಕಾರಣ ಕಥೆ. ಆ ಬಗ್ಗೆ ಹೇಳುವುದಾದರೆ, ಹೊಸದಾಗಿ ಮದುವೆಯಾದ ಗಂಡ, ಹೆಂಡತಿ ನಡುವಿನ ಕಥೆ ಇದು. ಪ್ರೀತಿಸಿ ಮದುವೆ ಮಾಡಿಕೊಂಡ ಜೋಡಿ, ಆರು ತಿಂಗಳಲ್ಲೇ ವಾದ, ವಿವಾದಗಳಿಂದ ಬೇಸತ್ತು, ಇನ್ನೇನು ಬೇರೆ ಆಗಬೇಕು ಎಂಬ ಸಂದರ್ಭದಲ್ಲಿ ಒಂದು ಘಟನೆ ನಡೆಯುತ್ತದೆ. ಅಲ್ಲೊಂದು ತನಿಖೆ ಶುರುವಾಗುತ್ತೆ. ಆಮೇಲೆ ಏನೆಲ್ಲಾ ಆಗುತ್ತೆ, ಆ ಘಟನೆ ಏನು ಎಂಬುದು ಸಸ್ಪೆನ್ಸ್. ಸುಮಾರು 60 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಡಬ್ಬಿಂಗ್ ಮುಗಿಸಿ, ಈಗ ಸಂಕಲನ ಕೆಲಸದಲ್ಲಿದೆ’ ಎಂದು ವಿವರ ಕೊಟ್ಟರು ಅವರು.
ಚಿತ್ರದಲ್ಲಿ ಸೀತಾ ಕೋಟೆ ಅವರು ಇಲ್ಲೊಂದು ವಿಶೇಷ ಪಾತ್ರ ಮಾಡಿದ್ದಾರಂತೆ. ಅವರೇ ಹೇಳುವಂತೆ, “ನನ್ನ ತಂದೆ ಲಾಯರ್ ಆಗಿದ್ದವರು. ನನಗೂ ಲಾಯರ್ ಆಗುವ ಆಸೆ ಇತ್ತು. ಆದರೆ, ನಾನು ಕಲಾವಿದೆ ಆಗಿಬಿಟ್ಟೆ. ಈಗ ಸಿನಿಮಾದಲ್ಲಿ ಮೊದಲ ಸಲ ಲಾಯರ್ ಪಾತ್ರ ಸಿಕ್ಕಿದೆ. ಯಾವುದೇ ಒತ್ತಡವಿಲ್ಲದೆ, ಪಾತ್ರ ಮಾಡಿದ್ದೇನೆ. ಒಂದೊಳ್ಳೆಯ ಚಿತ್ರದಲ್ಲಿ ನಟಿಸಿದ ಖುಷಿ ನನಗಿದೆ’ ಎಂದರು ಸೀತಾ ಕೋಟೆ.
ತಾರಕ್ ಪೊನ್ನಪ್ಪ ನಾಯಕರಾಗಿ ನಟಿಸಿದ್ದು, ಅವರಿಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಪಾತ್ರ ಮಾಡಿದ್ದಾರಂತೆ. “ಮದುವೆಯಾದ ಜೋಡಿ ಮಧ್ಯೆ ನಡೆಯುವ ಸಣ್ಣ ಸಣ್ಣ ಮುನಿಸು, ವಾದ, ವಿವಾದಗಳಿಂದ ಏನೆಲ್ಲಾ ಆಗುತ್ತೆ, ಅವರ ಮಧ್ಯೆ ಒಂದು ಘಟನೆ ಎದುರಾಗಿ, ಅವರು ಎಂತಹ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕುತ್ತಾರೆ’ ಅನ್ನೋದು ಕಥೆ ಎಂದರು ತಾರಕ್. ಚಿತ್ರದಲ್ಲಿ ಮಾನಸ ಜೋಶಿ ಅವರು ಖಡಕ್ ಎಸಿಪಿ ಪಾತ್ರದಲ್ಲಿ ನಟಿಸಿದ್ದಾರಂತೆ. ಇದೇ ಮೊದಲ ಸಲ ಆ ಪಾತ್ರ ಮಾಡಿದ್ದು, ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ ಎಂದರು ಅವರು.
ಮನೋಹರ್ ಬಾಲಾಜಿ ಅವರಿಗೂ ಈ ಕಥೆ ಕೇಳಿದಾಗ, ವಿಶೇಷತೆ ಇದೆ ಎನಿಸಿ, ಸಿನಿಮಾದಲ್ಲಿ ನಟಿಸಲು ಒಪ್ಪಿದ್ದಾರೆ. ಅವರಿಲ್ಲಿ ಒಬ್ಬ ಅಂಬರೀಷ್ ಅಭಿಮಾನಿಯಾಗಿ, ಮಂಡ್ಯ ಮೂಲದ ವ್ಯಕ್ತಿಯಾಗಿ ನಟಿಸಿದ್ದಾರಂತೆ. ಸಿನಿಮಾ ನೋಡುವಾಗ, ಥ್ರಿಲ್ಲರ್ ಎನಿಸುತ್ತದೆ. ಆದರೆ, ನೈಜತೆಗೆ ಹತ್ತಿರವಾಗಿರುವ ಅಂಶಗಳು ಇಲ್ಲಿವೆ’ ಎಂದರು ಅವರು.
ಚಿತ್ರದಲ್ಲಿ ಊರ್ವಶಿ ಗೋವರ್ಧನ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸಂಪತ್‌ಕುಮಾರ್, ಸಿತಾರಾ, ಜಗದೀಶ ಜಾಲ, ಶ್ರವಣ್ ಯತಾಳ್, ಅರುಣ ಮೂರ್ತಿ, ರಾಜು ನೀನಾಸಂ, ಶಂಕರ್ ಇತರರು ಕಾಣಿಸಿಕೊಂಡಿದ್ದಾರೆ.
ಅರ್ಜುನ್ ಅಜಿತ್ ಛಾಯಾಗ್ರಹಣವಿದೆ. ಎಸ್.ಡಿ.ಅರವಿಂದ್ ಮೂರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕೆ.ಕಲ್ಯಾಣ್, ವಿ.ಮನೋಹರ್ ಹಾಗು ಡಾ.ಬಿ.ಆರ್.ಪೋಲಿಸ್ ಪಾಟೀಲ್ ಅವರ ಸಾಹಿತ್ಯವಿದೆ. ಸುನೀಲ್ ಆರ್.ಡಿ. ಮತ್ತು ನರಸಿಂಹ ಕುಲಕರ್ಣಿ ಸಹ ನಿರ್ಮಾಪಕರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.