ನಾನು ರಾಜಕಾರಣದ ಆರಾಧಕ ಅಲ್ಲ ಯೋಗರಾಜ್ ಭಟ್
Team Udayavani, Jul 31, 2020, 10:43 AM IST
ಸಾಮಾನ್ಯವಾಗಿ ಸಿನಿಮಾಕ್ಕೂ, ರಾಜಕಾರಣಕ್ಕೂ ಗೊತ್ತೋ, ಗೊತ್ತಿಲ್ಲದೆಯೋ ಒಂದು ನಂಟು ಯಾವಾಗಲೂ ಅಂಟಿಕೊಂಡಿರುತ್ತದೆ. ಎರಡರ ನಡುವೆಯೂ ಒಂದು ನಿಕಟ ಸಂಬಂಧವಂತೂ ಇದ್ದೇ ಇರುತ್ತದೆ. ಆದರೆ ಕೆಲವೊಮ್ಮೆ ಒಂದೇ ವಿಷಯಕ್ಕೆ ಸಿನಿಮಾ ಮತ್ತು ರಾಜಕಾರಣ ಎರಡೂ ತಳುಕು ಹಾಕಿಕೊಂಡು, ಸಿನಿಮಾದವರನ್ನೂ ರಾಜಕಾರಣಕ್ಕೆ ಎಳೆದುತರುವ ಸಾಧ್ಯತೆಯೂ ಇರುತ್ತದೆ. ಇದಕ್ಕೆ ಇತ್ತೀಚಿನ ಉದಾಹರಣೆ ನಿರ್ದೇಶಕ ಯೋಗರಾಜ್. ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿ ನಿರ್ದೇಶಕ ಯೋಗರಾಜ ಭಟ್, ಇಂದಿನ ರಾಜಕಾರಣ, ರಾಜಕೀಯ
ಪರಿಸ್ಥಿತಿ, ನಾಯಕರ ಮನೋಭಾವ, ಜಾತಿ ಲೆಕ್ಕಚಾರ ಇದೆಲ್ಲವನ್ನು ಇಟ್ಟುಕೊಂಡು ಎಂದಿನಂತೆ ತಮ್ಮದೇ ಧಾಟಿಯಲ್ಲಿ ಕವಿತೆಯೊಂದನ್ನು ಬರೆದಿದ್ದರು. ಈ ಕವಿತೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಮತ್ತು ನೋಡುಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅನೇಕರು ಭಟ್ಟರ ಈ ಕವಿತೆಗೆ ಮೆಚ್ಚುಗೆ ಸೂಚಿಸಿ, ಸೋಶಿಯಲ್ ಮೀಡಿಯಾಗಳಲ್ಲಿ ಅದನ್ನು ಶೇರ್ ಕೂಡ ಮಾಡಿದ್ದರು.
ಯಾವಾಗ ಇದೆಲ್ಲ ಸೋಶಿಯಲ್ ಮೀಡಿಯಾಗಳಲ್ಲಿ ಜನಪ್ರಿಯವಾಯಿತೋ, ಆಗ ಕೆಲ ರಾಜಕೀಯ ಪಕ್ಷಗಳು ಇದನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳಲು ಮುಂದಾಗಿವೆ. ಭಟ್ಟರ ಹೆಸರು ಮತ್ತು ಪೋಟೋ ಜೊತೆಯಲ್ಲಿ ತಮ್ಮ ಪಕ್ಷದ ಚಿಹ್ನೆ, ನಾಯಕರ ಪೋಟೋ ಬಳಸಿ ಅದನ್ನು ಸೋಶಿಯಲ್ ಮಿಡಿಯಾಗಳಲ್ಲಿ ಶೇರ್ ಮಾಡಲಾಗುತ್ತಿದೆ. ಇದು ಈಗ ಭಟ್ಟರ ಗಮನಕ್ಕೂ ಬಂದಿದೆ. ಅನೇಕರು ಈ ಬಗ್ಗೆ ಭಟ್ಟರನ್ನು ಪ್ರಶ್ನಿಸುತ್ತಿದ್ದಾರಂತೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕವಿತೆ ಮತ್ತು ಅವರ ಪೋಟೋಗಳನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಸ್ವತಃ ಯೋಗರಾಜ್ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, “ನಾನು ಯಾವುದೇ ಥರದ ರಾಜಕಾರಣದ ಆರಾಧಕ ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಯೋಗರಾಜ್ ಭಟ್, “ಇದೊಂದು ಸಣ್ಣ ಬಿನ್ನವತ್ತಳೆ. ನಾನು ಯಾವುದೇ ಥರದ ರಾಜಕಾರಣದ ಆರಾಧಕ ಅಲ್ಲ. ಎಡ ಬಲ ಮಧ್ಯೆ ಮೇಲೆ ಕೆಳಗೆ ಜಾತಿ ಪಾತಿ ಯಾವುದಕ್ಕೂ ನಾನು ಸೇರಿಲ್ಲ. ನನ್ನ ಕೆಲವು ಕವನದ ಸಾಲುಗಳನ್ನು, ಗಾದೆ ರೀತಿಯ ಬರಹಗಳನ್ನು ರಾಜಕೀಯ ಪಕ್ಷಗಳು ಸುಮ್ಮನೇ ಬಳಸಿಕೊಳ್ಳುತ್ತಿವೆ. ಅದೊಂಥರ ಹಿಂಸೆ… ಆದ್ದರಿಂದ ಓದುಗರು/ನೋಡುಗರು ನನ್ನನ್ನು ಯಾವುದೇ ಪಕ್ಷಕ್ಕೂ ಸೇರಿಸದೇ, ಜೋಡಿಸದೇ, ನನ್ನ ರಾಜಕೀಯ ನಿರ್ಲಿಪ್ತತೆಯನ್ನು ಕಾಪಾಡಬೇಕಾಗಿ ಪ್ರಾರ್ಥನೆ’ ಎಂದಿದ್ದಾರೆ
“ಇತ್ತೀಚೆಗೆ ನನ್ನ ಫೋಟೋವೊಂದರ ಮೇಲೆ ಕೆಲವೊಂದು ಸಾಲುಗಳನ್ನು ಬರೆದು, ಯಾವುದೋ ಒಂದು ಪಕ್ಷಕ್ಕೆ ಬೆಂಬಲ ನೀಡಿ, ಮತ್ಯಾವುದೋ ಪಕ್ಷಕ್ಕೆ ಬೆಂಬಲ ನೀಡಬೇಡಿ ಎಂದು ಸ್ವತಃ ನಾನೇ ಜನರಲ್ಲಿ ವಿನಂತಿ ಮಾಡುತ್ತಿರುವಂತೆ ಬಿಂಬಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನನಗೆ ಅರ್ಥವಾಗುವುದು ಸಿನಿಮಾದ ಭಾಷೆ ಮಾತ್ರ, ರಾಜಕೀಯಕ್ಕೆ ಸಂಬಂಧಪಟ್ಟ ಯಾವ ಎಡ ಬಲ ಸಿದ್ಧಾಂತಗಳೂ ನನಗೆ ತಿಳಿದಿಲ್ಲ. ಹಾಗಾಗಿ ನನ್ನ ಎಲ್ಲಾ ಗೆಳೆಯ/ ಗೆಳತಿಯರು ಈ ರೀತಿಯ ಯಾವುದೇ ವೈಪರೀತ್ಯಗಳಲ್ಲಿ ನನ್ನ ಪೋಟೋ ಕಂಡುಬಂದಲ್ಲಿ ಅದನ್ನು ನಿರ್ಲಕ್ಷಿಸಬೇಕಾಗಿ ವಿನಂತಿ’ ಎಂದು ಯೋಗರಾಜ್ ಭಟ್ ಹೇಳಿದ್ದಾರೆ.
ಕಾರ್ತಿಕ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.