ಒಂದೇ ಉಸಿರಲ್ಲಿ ಇಂದು ನಾನು ನೀನು…
Team Udayavani, Dec 22, 2017, 6:25 AM IST
ಮೊದಲು ವೇದಿಕೆಗೆ ಮನೋರಂಜನ್ ಹಾಗೂ ಸಹನಟನ ಎಂಟ್ರಿಯಾಯಿತು. ಮೊದಲು ಸಹನಟನ ಡೈಲಾಗ್. ಅದಕ್ಕೆ ಮನೋರಂಜನ್ ಕೌಂಟರ್ ಡೈಲಾಗ್. ಸುಮಾರು ಎರಡು ಪುಟದಷ್ಟು ಡೈಲಾಗ್ ಅನ್ನು ಒಂದೇ ಉಸಿರಿನಲ್ಲಿ ಹೇಳಿಮುಗಿಸಿದರು. ಮೈಕ್ ಕೆಳಗಿಡುತ್ತಿದ್ದಂತೆ ಚಪ್ಪಾಳೆ.
ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದು “ಬೃಹಸ್ಪತಿ’ ಆಡಿಯೋ ಬಿಡುಗಡೆ ಸಮಾರಂಭ. ರವಿಚಂದ್ರನ್ ಪುತ್ರ ಮನೋರಂಜನ್ ನಾಯಕರಾಗಿರುವ “ಬೃಹಸ್ಪತಿ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಮೊದಲು ಮನೋರಂಜನ್ ಲೈವ್ ಪರ್‌ಫಾರ್ಮೆನ್ಸ್ ಮೂಲಕ ರಂಜಿಸಿದರು. ಅಂದಹಾಗೆ, ಇದು ತಮಿಳಿನ “ವಿಐಪಿ’ ಚಿತ್ರದ ರೀಮೇಕ್. ಮನೋರಂಜನ್ ಹೆಚ್ಚೇನು ಮಾತನಾಡಲಿಲ್ಲ. ಸಿನಿಮಾ ಸಮಯದಲ್ಲಿ ಸಹಕರಿಸಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಿದರು. ಇನ್ನು, “ವಿಐಪಿ’ ಚಿತ್ರದ ರೀಮೇಕ್‌ನಲ್ಲಿ ನಟಿಸಬೇಕೆಂದು ಮೊದಲು ಆಫರ್ ಬಂದಾಗ ಮನೋರಂಜನ್‌ಗೆ ಭಯವಾಯಿತಂತೆ. ಏಕೆಂದರೆ “ವಿಐಪಿ’ ಧನುಶ್ ಅವರ 25ನೇ ಸಿನಿಮಾ. ಅವರ 25ನೇ ಸಿನಿಮಾ ತನ್ನ ಎರಡನೇ ಸಿನಿಮಾ ಎಂದಾಗ ಸ್ವಲ್ಪ ಆಲೋಚಿಸಿದರಂತೆ. ಆದರೆ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ನಂದಕಿಶೋರ್ ಅವರ ಸಹಕಾರದಿಂದ ಚೆನ್ನಾಗಿ ಬಂತು ಎಂದರು.
“ವಿಐಪಿ’ ಚಿತ್ರ ಮನೋರಂಜನ್‌ಗೆ ಚೆನ್ನಾಗಿ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಅವರಿಗೆ ಮಾಡಿದ್ದಾಗಿ ಹೇಳಿದರು ರಾಕ್‌ಲೈನ್ ವೆಂಕಟೇಶ್. “ಮನೋರಂಜನ್ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಪಾತ್ರಕ್ಕೆ ಹೊಂದಿಕೊಂಡಿದ್ದು, ಡ್ಯಾನ್ಸ್ ಕೂಡಾ ಚೆನ್ನಾಗಿ ಮಾಡಿದ್ದಾರೆ. ಅವರ ಡ್ಯಾನ್ಸ್‌ಗೆ ಸೆಟ್‌ನಲ್ಲೂ ಎಲ್ಲರೂ ಚಪ್ಪಾಳೆ ಮೂಲಕ ಪ್ರೋತ್ಸಾಹಿಸುತ್ತಿದ್ದರು. ನಿರ್ದೇಶಕ ನಂದ ಕೂಡಾ ಈ ಸಿನಿಮಾವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸುಮಾರು 25 ದಿನಗಳ ರಿಹರ್ಸಲ್ ಮಾಡಿ, ನಟರನ್ನು ಸಿದ್ಧಪಡಿಸಿದ್ದರು’ ಎಂದು ಸಿನಿಮಾ ಬಗ್ಗೆ ಹೇಳಿಕೊಂಡರು. ಚಿತ್ರಕ್ಕೆ “ಬೃಹಸ್ಪತಿ’ ಟೈಟಲ್ ಬಿಟ್ಟುಕೊಟ್ಟ ಯೋಗರಾಜ್ ಭಟ್ ಹಾಗೂ ಶ್ರೀಕಾಂತ್‌ಗೆ ಥ್ಯಾಂಕ್ಸ್ ಹೇಳಲು ರಾಕ್‌ಲೈನ್ ವೆಂಕಟೇಶ್ ಮರೆಯಲಿಲ್ಲ. ನಿರ್ದೇಶಕ ನಂದಕಿಶೋರ್, ರಾಕ್‌ಲೈನ್ ಬ್ಯಾನರ್‌ನಲ್ಲಿ ಸಿನಿಮಾ ಮಾಡಿದ್ದಕ್ಕೆ ಹಾಗೂ ರವಿಚಂದ್ರನ್ ಪುತ್ರ ಮನೋರಂಜನ್‌ಗೆ ಸಿನಿಮಾ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದ್ದಾಗಿ ಹೇಳಿಕೊಂಡರು. ಚಿತ್ರದಲ್ಲಿ ನಟಿಸಿದ ಸಾಧುಕೋಕಿಲ ಕೂಡಾ ಮನೋರಂಜನ್‌ಗೆ ಒಳ್ಳೆಯ ಬ್ಯಾನರ್, ಒಳ್ಳೆಯ ನಿರ್ದೇಶಕ ಸಿಕ್ಕಿದ್ದರಿಂದ ಎಲ್ಲವೂ ಒಳ್ಳೆಯದಾಗುತ್ತದೆ ಎಂದರು.
ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದ ನಟ ಜಗ್ಗೇಶ್, ರವಿಚಂದ್ರನ್ ಅವರು ತಮ್ಮ ಮಕ್ಕಳನ್ನು ಬೆಳೆಸಿದ ರೀತಿ, ಅವರ ಸಿನಿಮಾ ಪ್ರೀತಿ ಬಗ್ಗೆ ಹೇಳಿದರು. ಉಳಿದಂತೆ ನಿರ್ಮಾಪಕರಾದ ಮುನಿರತ್ನ, ಸೂರಪ್ಪ ಬಾಬು, ವಿಕ್ರಮ್ ರವಿಚಂದ್ರನ್ ಸೇರಿದಂತೆ ಅನೇಕರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.