ಕರಾವಳಿ ಹುಡುಗನ ಜಿಲ್ಕಕನಸು
ಎರಡು ತಲೆಮಾರಿನ ಪ್ರೀತಿಯ ಹಿಂದೆ ಕವೀಶ್ ಶೆಟ್ಟಿ
Team Udayavani, Dec 27, 2019, 5:32 AM IST
ಮಂಗಳೂರು ಮೂಲದ ಅನೇಕ ಪ್ರತಿಭಾವಂತರು ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಗುರುತಿಸಿಕೊಂಡಿರುವುದು ಗೊತ್ತೇ ಇದೆ. ಹೊಸ ಬಗೆಯ ಸಿನಿಮಾದೊಂದಿಗೆ ತುಳು ನಾಡಿನ ಪ್ರತಿಭೆಗಳ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ “ಜಿಲ್ಕ’ ಚಿತ್ರತಂಡವೂ ಸೇರಿದೆ. ಹೌದು, “ಜಿಲ್ಕ’ ಅನ್ನುವುದು ಆಫ್ರಿಕನ್‌ನ ಸೋಮಾಲಿ ಭಾಷೆಯ ಪದ. ಸೌಂಡಿಂಗ್‌ಗಾಗಿ “ಜಿಲ್ಕ’ ಶೀರ್ಷಿಕೆ ಇಡಲಾಗಿದೆಯಷ್ಟೇ. ಇದು ಎರಡು ತಲೆಮಾರಿನ ಕಥೆ ಹೊಂದಿರುವ ಚಿತ್ರ. ತಮ್ಮ ಚಿತ್ರದ ಕುರಿತು ಹೇಳಲೆಂದೇ ಪತ್ರಕರ್ತರ ಮುಂದೆ ಬಂದಿತ್ತು ಚಿತ್ರತಂಡ.
ಮೊದಲು ಮಾತಿಗಿಳಿದದ್ದು ನಿರ್ದೇಶಕ ಕವೀಶ್ ಶೆಟ್ಟಿ. ಇದು ಇವರ ಮೊದಲ ನಿರ್ದೇಶನದ ಚಿತ್ರ. ಈ ಮೊದಲು “ಮುಂಗಾರು ಮಳೆ-2′ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇದೆ. ನಂತರ ಮುಂಬೈನಲ್ಲೂ ಫಿಲಂ ಕೋರ್ಸ್ ಮಾಡಿ, ಅಲ್ಲೊಂದು ಕಿರುಚಿತ್ರ ಮಾಡುವ ಯೋಚನೆ ಇವರಲ್ಲಿತ್ತು. ಆದರೆ, ಇವರ ಕಥೆ ಇಷ್ಟವಾಗಿದ್ದೇ ತಡ, ಮುಂಬೈ ಮೂಲದ ನಿರ್ಮಾಪಕರು ಕಿರುಚಿತ್ರ ಬದಲು ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ರೆಡಿಯಾಗುತ್ತಿದೆ. ಸಿನಿಮಾ ಬಗ್ಗೆ ಹೇಳುವ ಕವೀಶ್ ಶೆಟ್ಟಿ, “ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನದ ಜೊತೆ ನಟನಾಗಿಯೂ ಕಾಣಿಸಿಕೊಂಡಿದ್ದೇನೆ. ಕನ್ನಡ, ಹಿಂದಿ ಹಾಗು ಮರಾಠಿ ಭಾಷೆಯಲ್ಲಿ ಚಿತ್ರ ತಯಾರಾಗಿದೆ. ಎರಡು ತಲೆಮಾರಿನ ಯುವ ಮನಸ್ಸುಗಳ ತಲ್ಲಣ, ತಳಮಳ, ಪ್ರೀತಿ, ಗೀತಿ ಇತ್ಯಾದಿ ಚಿತ್ರದ ಹೈಲೈಟ್. ಚಿತ್ರದಲ್ಲಿ ನನ್ನ ಪಾತ್ರ ಮೂರು ಶೇಡ್ ಹೊಂದಿದೆ. ಸ್ಕೂಲ್ ಡೇಸ್, ಕಾಲೇಜ್ ಡೇಸ್ ಹಾಗು ಯೌವ್ವನದ ದಿನಗಳಲ್ಲಿರುವ ಪಾತ್ರ ಮಾಡಿದ್ದೇನೆ. ಅದಕ್ಕಾಗಿ ನಾನು ಮೂರು ಬಾರಿ ದೇಹ ತೂಕ ಇಳಿಸಿ, ಹೆಚ್ಚಿಸಿಕೊಂಡಿದ್ದೇನೆ. 58 ಕೆಜಿ, 68 ಕೆಜಿ ಹಾಗು 75 ಕೆಜಿ ತೂಕ ಹೆಚ್ಚಿಸಿಕೊಂಡು ನಟಿಸಿದ್ದೇನೆ. ಇನ್ನು, ಮುಂಬೈ, ಕುಂದಾಪುರ ಹಾಗು ಕರಾವಳಿ ಭಾಗದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಪ್ರಾಂಶು ಜಾ ಸಂಗೀತ ನೀಡಿದ್ದಾರೆ. ನಾಯಕಿ ಲಕ್ಷ ಶೆಟ್ಟಿ ಕಾಲೇಜು ಎಪಿಸೋಡಿನಲ್ಲಿ ಕಾಣಿಸಿಕೊಂಡರೆ, ಮತ್ತೂಬ್ಬ ನಾಯಕಿ ಪ್ರಿಯಾ ಹೆಗ್ಡೆ ಯೌವ್ವನದ ಎಪಿಸೋಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಗೋಪಿಕಾ ದಿನೇಶ್, ಕೃಷ್ಣಮೂರ್ತಿ ಕವಿತಾಳ ಇತರರು ನಟಿಸಿದ್ದಾರೆ.
ಕವೀಶ್ ಶೆಟ್ಟಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಉದಯ ಶೆಟ್ಟಿ, ಕಿಶೋರ್ ಖುಭ್ ಚಂದಾನಿ, ತೇಹ ಸಿಂಗ್ ಸೈನಿ, ಮನೀಶ್ ನಾಗ್‌ದೇವ್ ನಿರ್ಮಾಣ ಮಾಡಿದ್ದಾರೆ. ಈ ಪೈಕಿ ತೇಹ ಸಿಂಗ್ ಸೈನಿ ಸಿನಿಮಾ ಕುರಿತು ಮಾತನಾಡಿದರು. ಸಂದೇಶ್ ಶೆಟ್ಟಿ, ಲಕ್ಷ ಶೆಟ್ಟಿ, ಪ್ರಿಯಾ ಹೆಗ್ಡೆ ಪಾತ್ರ ಕುರಿತು ಹೇಳಿಕೊಂಡರು. ವಿಶ್ವಜೀತ್‌ರಾವ್, ಅಜೇಯ್ ಪಾಲ್ ಸಿಂಗ್ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. ಗಿರಿ ಮಹೇಶ್ ಸಂಕಲನವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.