ಜಸ್ಟ್ ಲವ್ ಸ್ಟೋರಿ
Team Udayavani, Apr 27, 2018, 3:45 PM IST
ಹಿರಿಯ ನಿರ್ದೇಶಕ ಎಸ್. ಉಮೇಶ್ ಸದ್ದಿಲ್ಲದೆ ಒಂದಿಲ್ಲೊಂದು ಸಿನಿಮಾ ಮಾಡುತ್ತಲೇ ಇರುತ್ತಾರೆ. ಅವರ ನಿರ್ದೇಶನದ “ಮದುವೆ ದಿಬ್ಬಣ’ ಚಿತ್ರ ಬಿಡುಗಡೆಯಾಗಿ ಒಂದೇ ವಾರದಲ್ಲಿ ಅವರು ಇನ್ನೂ ಒಂದು ಸಿನಿಮಾ ಪ್ರಾರಂಭಿಸಿದ್ದಾರೆ. “ಮದುವೆ ದಿಬ್ಬಣ’ದಲ್ಲಿ ಹಳ್ಳಿ ಕಥೆ ಹೇಳಿದ್ದ ಉಮೇಶ್, ಈ ಬಾರಿ ಪ್ರೇಮಕಥೆಯೊಂದನ್ನು ಹೇಳುವುದಕ್ಕೆ ಹೊರಟಿದ್ದಾರೆ.
ಈ ಚಿತ್ರಕ್ಕೆ ಅವರಿಟ್ಟಿರುವ ಹೆಸರು “ಜಸ್ಟ್ ಮಿಸ್’. ಚಾಮರಾಜಪೇಟೆಯ ಮುನೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು. ಪ್ರೀತಿಯಿಂದ ಹೆತ್ತವರಿಗೆ ಯಾವ ರೀತಿ ನೋವು ಆಗುತ್ತದೆ, ಒಂದು ಪಕ್ಷ ಪ್ರೀತಿಸಿದ ನಂತರ ಏನೆಲ್ಲಾ ಆಗುತ್ತದೆ ಎಂಬುದು ಈ ಚಿತ್ರದ ಸಾರಾಂಶ. ಈ ಚಿತ್ರಕ್ಕೆ ಕಥೆ ಬರೆದಿರುವುದು ನಿರ್ಮಾಪಕ ಮಹದೇವ್.
ಅವರು ಸಹ ಯೌವ್ವನದಲ್ಲಿದ್ದಾಗ ಹುಡುಗಿ ಹಿಂದೆ ಹೋಗಿ, ಮನೆಯವರ ವಿರೋಧ ಕಟ್ಟಿಕೊಂಡಿದ್ದರಂತೆ. ಕೊನೆಗೆ ಅಪ್ಪ-ಅಮ್ಮ ನೋಡಿದ ಹುಡುಗಿಯನ್ನು ಮದುವೆ ಮಾಡಿಕೊಂಡಿದ್ದಾರೆ. ಪ್ರೀತಿಸಿದ ಹುಡುಗಿ ಜಸ್ಟ್ ಮಿಸ್ ಆಗಿದ್ದರಿಂದ, ಕಥೆ ಬರೆದು ಅದೇ ಹೆಸರಿನಲ್ಲಿ ಚಿತ್ರ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ನಿರ್ಮಾಪಕರ ಪುತ್ರ ಸೂರ್ಯ ನಾಯಕನಾಗಿ ನಟಿಸುತ್ತಿದ್ದಾರೆ. ಸೂರ್ಯ ಒಂದಿಷ್ಟು ತರಬೇತಿಯನ್ನು ಪಡೆದೇ, ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದಾರಂತೆ. ಸೂರ್ಯಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು.
ಕಿರುತೆರೆಯ ನವ್ಯಶ್ರೀ ಮತ್ತು ಲೀನಾ ಖುಷಿ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಇವರೊಂದಿಗೆ ಮೈಕೋ ನಾಗರಾಜ್, ರಮೇಶ್ ಭಟ್, ಮಂಡ್ಯ ರಮೇಶ್ ಮತ್ತು ಹಲವು ರಂಗಭೂಮಿ ಕಲಾದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಸಾಹಸ ನಿರ್ದೇಶಕ ಜಂಪರ್ ಕೃಷ್ಣ ಅವರ ಮಗ ಸುಹಾಸ್ ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶನ ಜೊತೆಗೆ ಪಾಲುದಾರರಾಗಿ ಎಸ್. ಉಮೇಶ್ ಹಾಗೂ ನಾಗರತ್ನ ಹಣ ಹೂಡುತ್ತಿದ್ದಾರೆ. ಎ.ಟಿ. ರವೀಶ್ ಅವರ ಸಂಗೀತ ಮತ್ತು ಮುತ್ತುರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.