ರಾಜಕುಮಾರ ನನ್ನ ಪಾಲಿನ ಅದೃಷ್ಟ
Team Udayavani, Mar 10, 2017, 3:45 AM IST
ಇದು ಅಪ್ಪಾಜಿ ಸಿನಿಮಾ ಅಲ್ಲ; ಅವರ ಮೌಲ್ಯವಿರುವ ಸಿನಿಮಾ
“ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ…’
– ಈ ಹಾಡು ಕೇಳಿದಾಗ ನನಗೆ ನನ್ನ ತಂದೆ ಮತ್ತೆ ಮತ್ತೆ ನೆನಪಾದರು…’ ಹೀಗೆ ಹೇಳುತ್ತಲೇ ಗೊತ್ತಾಗದಂತೆ ಕಣ್ತುಂಬಿಕೊಂಡರು ಪುನೀತ್ ರಾಜಕುಮಾರ್.
ಸಂದರ್ಭ, “ರಾಜಕುಮಾರ’ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ.
“ರಾಜಕುಮಾರ’ ಶುರುವಾದಾಗಿನಿಂದಲೂ ಅವರು ಮಾತಿಗೆ ಸಿಕ್ಕಿರಲಿಲ್ಲ. ಅದು “ರಾಜಕುಮಾರ’ನ ಮೊದಲ ಮಾತುಕತೆ. ಅಲ್ಲಿದ್ದ ಎಲ್ಲರಿಗೂ ಅಲ್ಲಿ ಹತ್ತಾರು ಪ್ರಶ್ನೆಗಳು ಕಾಡುತ್ತಿದ್ದವು. “ರಾಜಕುಮಾರ’ ಅಣ್ಣಾವ್ರ ಕುರಿತಾದ ಚಿತ್ರವೇ? ಪುನೀತ್ ಹೆಗಲ ಮೇಲೆ ಪಾರಿವಾಳವಿದೆ, ಚಿತ್ರದ ಹಾಡೊಂದರಲ್ಲಿ ನಗುನಗುತ್ತಿರುವ ಆಡುತ್ತಿರುವ ಉರುಳಿ ಬೀಳದಿರುವ ಗೊಂಬೆಯೂ ಇದೆ. “ಕಸ್ತೂರಿ ನಿವಾಸ’ ಚಿತ್ರದ ಸಿಗ್ನೇಚರ್ ಟ್ಯೂನೂ ಇದೆ. “ಆಡಿಸಿಯೇ ನೋಡು, ಬೀಳಿಸಿಯೇ ನೋಡು ಎಂದೂ ಸೋಲದು, ಸೋತು ತಲೆಯ ಬಾಗದು…’ ಎಂಬ ಅರ್ಥಪೂರ್ಣ ಸಾಲುಗಳೂ ಇವೆ. ಇಷ್ಟಿದ್ದ ಮೇಲೂ “ರಾಜಕುಮಾರ’ ಯಾವ ಕಾರಣಕ್ಕೂ ಅಪ್ಪಾಜಿ ಕುರಿತಾದ ಸಿನಿಮಾ ಅಲ್ಲ…’ ಎಂದು ಸ್ಪಷ್ಟಪಡಿಸುತ್ತಾ ಹೋದರು ಪುನೀತ್‌ರಾಜ್‌ಕುಮಾರ್.
ಗುಡಿಸಲೆ ಆಗಲಿ ಅರಮನೆ ಆಗಲಿ ಆಟ, ಎಂದೂ ಆಟ ನಿಲ್ಲದು
ಹಿರಿಯರೆ ಇರಲಿ, ಕಿರಿಯರೇ ಬರಲಿ ಭೇದ ತೋರದು, ಎಂದೂ ಭೇದ ತೋರದು
ಎಲ್ಲಾ ಇದ್ದು ಏನೂ ಇಲ್ಲದ ಹಾಗೆ ಬದುಕಿರುವ ರಾಜಕುಮಾರ
ಒಂದು ಮುತ್ತಿನ ಕಥೆ ಹೇಳಿತು ಈ ಗೊಂಬೆ, ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ
ಸೂರ್ಯ ಒಬ್ಬ ಚಂದ್ರ ಒಬ್ಬ ರಾಜನೂ ಒಬ್ಬ ಈ ರಾಜಕುಮಾರನೂ ಒಬ್ಬ …
ಎಂಬ ಸಾಲುಗಳನ್ನು ಕೇಳಿದವರ್ಯಾರೂ ಇದು ಅಣ್ಣಾವ್ರ ಕುರಿತ ಸಿನಿಮಾ ಅನ್ನದೇ ಇರಲಾರರು. ಆದರೆ, ಪುನೀತ್ ರಾಜಕುಮಾರ್ ಮಾತ್ರ “ರಾಜಕುಮಾರ’ ಬರೀ ರಾಜಕುಮಾರ ಸಿನಿಮಾ ಅಷ್ಟೇ. ಅದು ಅಪ್ಪಾಜಿಗೆ ಸಂಬಂಧಿಸಿದ್ದಲ್ಲವೇ ಅಲ್ಲ ಅನ್ನುತ್ತಲೇ “ರಾಜಕುಮಾರ’ನ ಕಡೆ ವಾಲಿದರು.
“”ರಾಜಕುಮಾರ’ ಹೆಸರು ಇಟ್ಟಿರೋದು ಒಂದು ಕಡೆ ಖುಷಿಯಾದರೆ, ಇನ್ನೊಂದು ಕಡೆ ಭಯ. ಯಾಕೆಂದರೆ, ಎಲ್ಲರಿಗೂ “ರಾಜಕುಮಾರ’ ಮೇಲೆ ನಿರೀಕ್ಷೆ ಜಾಸ್ತಿ ಇರುತ್ತೆ. ಬಹಳಷ್ಟು ಜನ ಇದು ಅಪ್ಪಾಜಿ ಅವರ ಬಯೋಗ್ರಫಿ ಇರುವ ಸಿನಿಮಾ ಇರಬಹುದಾ ಅಂದುಕೊಂಡಿದ್ದಾರೆ. ಆದರೆ, ಇದು ಅಪ್ಪಾಜಿ ಮೇಲಿನ ಸಿನಿಮಾ ಅಲ್ಲ. ಸಿನಿಮಾ ಹೆಸರಷ್ಟೇ “ರಾಜಕುಮಾರ’. ಈ ಚಿತ್ರದಲ್ಲಿ ನಟನೆ ಮಾಡಿರೋದು ಡಾ.ರಾಜಕುಮಾರ್ ಮಗ ಪುನೀತ್ ರಾಜಕುಮಾರ್ ಅಷ್ಟೇ. ಅಪ್ಪಾಜಿಗೂ ಈ ಚಿತ್ರದ ಶೀರ್ಷಿಕೆಗೂ ಸಂಬಂಧವಿಲ್ಲ. ಇದು ಅಪ್ಪಾಜಿ ಸಿನಿಮಾ ಅಲ್ಲ, ಆದರೆ, ಅವರ ವ್ಯಕ್ತಿತ್ವದ ಕೆಲ ಎಳೆಗಳು ಇಲ್ಲಿವೆ. ಅಪ್ಪಾಜಿಯ ಆದರ್ಶ, ಮೌಲ್ಯಗಳನ್ನು ಕಾಣಬಹುದು. ತುಂಬಾನೇ ಮೌಲ್ಯಗಳಿರುವ ಸಿನಿಮಾ. ಆ್ಯಕ್ಷನ್ ಪ್ಯಾಕ್ ಇದೆ. ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಕೂಡ ಉಂಟು. ಇವೆಲ್ಲದರ ಜತೆಯಲ್ಲಿ ಹೊಸ ಬಗೆಯ ಅಂಶಗಳು “ರಾಜಕುಮಾರ’ನ ಹೈಲೆಟ್ಸ್’ ಎನ್ನುತ್ತಾ ಪುನಃ ಹಾಡಿನ ಕುರಿತು ಹೇಳಿಕೊಂಡರು.
“ಚಿತ್ರದಲ್ಲಿ “ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ’ ಹಾಡು ಕೇಳಿ ಅಪ್ಪಾಜಿಯನ್ನು ತುಂಬಾ ನೆನಪಿಸಿಕೊಳ್ಳುವಂತಾಯ್ತು. ಗಾಯಕ ವಿಜಯ್‌ಪ್ರಕಾಶ್ ಅದ್ಭುತವಾಗಿ ಹಾಡಿದ್ದಾರೆ. ಅಷ್ಟೇ ಚೆನ್ನಾಗಿ ಹರಿಕೃಷ್ಣ ರಾಗ ಸಂಯೋಜಿಸಿದ್ದಾರೆ. ಸಾಹಿತ್ಯ ಕೂಡ ಮನಮುಟ್ಟುವಂತಿದೆ. ಈ ಹಾಡಲ್ಲಿ “ಕಸ್ತೂರಿ ನಿವಾಸ’ ಚಿತ್ರದ “ಆಡಿಸಿ ನೋಡು ಬೀಳಿಸಿ ನೋಡು’ ಹಾಡಿನ ಸಿಗ್ನೇಚರ್ ಟ್ಯೂನ್ ಬಳಸಿಕೊಳ್ಳಲಾಗಿದೆ. ಅದು ಅಪ್ಪಾಜಿ ಮೇಲಿನ ಪ್ರೀತಿಗೆ ತಂಡ ಖುಷಿಯಿಂದ ಬಳಸಿಕೊಂಡಿದೆಯಷ್ಟೇ. ಇಲ್ಲೊಂದು ಅದ್ಭುತ ಬಾಂಧವ್ಯವಿದೆ. ಅದನ್ನು ಸಿನಿಮಾದಲ್ಲೇ ನೋಡಿ’ ಎಂದು “ರಾಜಕುಮಾರ’ನ ಬಗ್ಗೆ ಹೇಳಿಕೊಂಡ ಪುನೀತ್, ಪ್ಯಾಂಟ್ ಜೇಬಲ್ಲಿದ್ದ ಒಂದು ಲಿಸ್ಟ್ ಹೊರ ತೆಗೆದರು.
ಆ ಲಿಸ್ಟ್‌ನಲ್ಲಿ ಏನಿರಬಹುದು ಎಂಬ ಪ್ರಶ್ನೆ ಅಲ್ಲಿದ್ದವರಲ್ಲಿ ಕುತೂಹಲ ಮೂಡಿಸಿತ್ತು. ಅಲ್ಲಿ ಇದ್ದದ್ದು “ರಾಜಕುಮಾರ’ ಚಿತ್ರದಲ್ಲಿ ನಟಿಸಿದವರ ಹೆಸರುಗಳು! ಹೌದು, ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಎಲ್ಲಿ ಒಬ್ಬಿಬ್ಬರ ಹೆಸರು ಹೇಳಿ ಮಿಕ್ಕಿದವರನ್ನು ಮರೆತು ಬಿಡುತ್ತೇನೋ ಎಂಬ ಕಾರಣಕ್ಕೆ, ಪುನೀತ್, ಒಂದು ಚೀಟಿಯಲ್ಲಿ ಎಲ್ಲಾ ಕಲಾವಿದರ ಹೆಸರನ್ನು ಬರೆದುಕೊಂಡು ಬಂದಿದ್ದರು. ಪುಟ್ಟ ಮಕ್ಕಳಂತೆ ಚೀಟಿ ತೆಗೆದು, ವಿನಯವಾಗಿ, ಒಬ್ಬೊಬ್ಬ ನಟರ ಹೆಸರು ಹೇಳುತ್ತಾ ಹೋದರು.
ತಮಿಳಿನ ಜನಪ್ರಿಯ ನಟ ಶರತ್‌ಕುಮಾರ್ ಇಲ್ಲಿ ತಂದೆ ಪಾತ್ರ ಮಾಡಿದ್ದಾರೆ. ಅವರ ಹಲವು ಹಿಟ್ ಸಿನಿಮಾಗಳಿವೆ. ಅವರಿಗೆ ನನ್ನನ್ನು ಕಂಪೈರ್ ಮಾಡಿಕೊಳ್ಳಲಾಗುವುದಿಲ್ಲ. ಅಂತಹ ಸ್ಟಾರ್ ಜತೆ ನಾನು ನಟಿಸಿದ್ದು ಭಾಗ್ಯ. ಚಿತ್ರೀಕರಣದಲ್ಲಿ ಸಾಕಷ್ಟು ಸಲಹೆ ಕೊಡುತ್ತಿದ್ದರು. ಅಂತಹವರ ಜತೆ ನಟಿಸಿದ್ದು ನೆನಪಲ್ಲುಳಿದಿದೆ ಎನ್ನುತ್ತಲೇ ಅವರ ಆಶೀರ್ವಾದ ಬೇಡಿದರು ಪುನೀತ್. ಉಳಿದಂತೆ ಅವರ ಲಿಸ್ಟ್‌ನಲ್ಲಿದ್ದ ಹಿರಿಯ ಕಲಾವಿದರಾದ ಅನಂತ್‌ನಾಗ್,ಅಶೋಕ್, ರಂಗಾಯಣ ರಘು, ಅವಿನಾಶ್, ಹೊನ್ನವಳ್ಳಿ ಕೃಷ್ಣ, ಪ್ರಕಾಶ್ ರೈ , ದತ್ತಣ್ಣ , ಪ್ರಿಯಾ ಆನಂದ್, ಸಾಧು ಕೋಕಿಲ, ಚಿಕ್ಕಣ್ಣ , ಭಾರ್ಗವಿ ನಾರಾಯಣ್, ಅರುಣ ಬಾಲರಾಜ್, ಮನ್‌ದೀಪ್ ರಾಯ್ ಅವರ ಹೆಸರನ್ನು ಹೇಳಿದರು.
ಕೊನೆಯಲ್ಲಿ “ಮಾಸ್ತಿಗುಡಿ’ ಅನಿಲ್ ಬಗ್ಗೆಯೂ ಹೇಳಿಕೊಂಡರು. “ಅನಿಲ್ ಶರೀರ ದೊಡ್ಡದು. ಶಾರೀರ ಮಾತ್ರ ಚಿಕ್ಕದು. ಮುಗ್ಧ ಮನಸ್ಸುಳ್ಳ ಅನಿಲ್ ಇಲ್ಲಿ ಚೆನ್ನಾಗಿ ನಟಿಸಿದ್ದಾರೆ’ ಅಂದರು ಪುನೀತ್. “”ರಾಜಕುಮಾರ’ ನನ್ನ ಪಾಲಿಗೆ ಸಿಕ್ಕ ಅದೃಷ್ಟ. ಈ ಚಿತ್ರದಲ್ಲಿ ದೊಡ್ಡ ಕಲಾವಿದರೊಂದಿಗೆ ನಟಿಸಿ, ಒಂದೊಂದೇ ಕಲಿತಾ ಹೋಗಿದ್ದೇನೆ. ಇಂತಹ ಅನುಭವ ಮರೆಯಲು ಸಾಧ್ಯವಿಲ್ಲ. ಈ ನಿಮ್ಮ “ರಾಜಕುಮಾರ’ನ ಮೇಲೆ ಎಲ್ಲರ ಆಶೀರ್ವಾದ ಇರಲಿ’ ಎಂದಷ್ಟೇ ಹೇಳಿ ಸುಮ್ಮನಾದರು ಪುನೀತ್.
ಇದಕ್ಕೂ ಮೊದಲು “ರಾಜಕುಮಾರ’ ಆಡಿಯೋ ಸಿಡಿ ರಿಲೀಸ್‌ಗೆ ನೂಕುನುಗ್ಗಲಾಗಿತ್ತು. ಕಲರ್‌ಫುಲ್ ವೇದಿಕೆ ಮೇಲೆ ಮೊದಲು ನಟ ಯಶ್, ನಟಿ ರಾಧಿಪಂಡಿತ್ ಹಾಡೊಂದಕ್ಕೆ ಚಾಲನೆ ಕೊಟ್ಟು ಶುಭಾಶಯ ಹೇಳಿದರು. ಶಿವರಾಜಕುಮಾರ್ ಟ್ರೇಲರ್ ರಿಲೀಸ್ ಮಾಡಿ, “ನಾನು ಸಿನಿಮಾ ಮಾಡೋಕೆ ಪುನೀತ್ ಸ್ಫೂರ್ತಿ’ ಅಂದರು. ಜಗ್ಗೇಶ್ ಇನ್ನೊಂದು ಹಾಡಿಗೆ ಚಾಲನೆ ಕೊಟ್ಟು, ಪುಟ್ಟದ್ದೊಂದು ಶಿವ-ಪಾರ್ವತಿ ಕಥೆ ಹೇಳಿ, “ರಾಜಕುಮಾರ ಎಂಬ ಹೆಸರಲ್ಲೇ ಅದ್ಭುತ ಶಕ್ತಿ ಇದೆ’ ಎಂದರು. ರಾಘವೇಂದ್ರ ರಾಜಕುಮಾರ್ ಆಗಮಿಸಿದ ಗಣ್ಯರಿಗೆ “ಗೊಂಬೆ’ ಕಾಣಿಕೆ ನೀಡಿದರು. ನಿರ್ದೇಶಕ ಸಂತೋಷ್ ಆನಂದರಾಮ್, ಶಾಸಕ ಅಶ್ವತ್ಥ್ನಾರಾಯಣ್, ನಿರ್ಮಾಪಕ ವಿಜಯ್ ಕಿರಗಂದೂರು, ಪ್ರಿಯಾ ಆನಂದ್, ಹರಿಕೃಷ್ಣ, ಅವಿನಾಶ್, ರಂಗಾಯಣರಘು, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್‌ಬಾಬು ಇತರರು “ರಾಜಕುಮಾರ’ನ ಆಡಿಯೋ ಸಿಡಿಗೆ ಬಿಡುಗಡೆಗೆ ಸಾಕ್ಷಿಯಾದರು. ಇನ್ನೇನು ಆಡಿಯೋ ಸಿಡಿ ಹೊರತರುವ ಮುನ್ನವೇ ವರುಣ ಕೂಡ ಧರೆಗಿಳಿದು ತಂಪೆರಗಿದ, ಇದು “ಅಣ್ಣಾವ್ರ ಆಶೀರ್ವಾದವೇ …’ ಅಂತಂದುಕೊಂಡ ಚಿತ್ರತಂಡ ಸುರಿವ ಮಳೆಯಲ್ಲಿ ಆಡಿಯೋ ಸಿಡಿ ರಿಲೀಸ್ ಮಾಡಿತು. ಅಷ್ಟೊತ್ತಿಗೆ ಕಾರ್ಯಕ್ರಮಕ್ಕೂ ಬ್ರೇಕ್ ಬಿತ್ತು.
– ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.