KTM movie review; ಪ್ರೇಮದೂರಿನಲ್ಲಿ ಗೆದ್ದೋನೇ ಹಮ್ಮೀರ
Team Udayavani, Feb 16, 2024, 10:22 AM IST
ಸಾಮಾನ್ಯವಾಗಿ ಹಳ್ಳಿಯಿಂದ ಬೆಂಗಳೂರಿಗೆ ಬಂದು ಕಾಲೇಜು ಸೇರಿ, ಅಲ್ಲೊಂದು ಲವ್ ಆಗಿ, ಅದು ಫೇಲ್ ಆಗಿ, ದೇವದಾಸನಾಗುವ ಯುವಕರ ಕಥೆಗಳನ್ನು ಸಾಕಷ್ಟು ನೋಡಿರುತ್ತೇವೆ. ಆದರೆ, ಲವ್ ಫೇಲ್ಯೂರ್ ಆದ ನಂತರವೂ ಸುಂದರ ಬದುಕು ಕಟ್ಟಿಕೊಳ್ಳಬಹುದು ಎಂಬ ಒಂದು ಚೆಂದದ ಲೈನ್‌ನೊಂದಿಗೆ ಯುವ ಮನಸ್ಸುಗಳನ್ನು ಮುಟ್ಟುವ ಚಿತ್ರ “ಕೆಟಿಎಂ’. ಸಿನಿಮಾದ ಟೈಟಲ್ ಗೂ ಬೈಕ್‌ಗೂ ಸಂಬಂಧವಿಲ್ಲ. ಆ ಟೈಟಲ್‌ನಲ್ಲೇ ಇಡೀ ಕಥೆ ಇದೆ. ಅದೇನು ಎಂಬುದನ್ನು ತೆರೆಮೇಲೆ ನೋಡಬೇಕು.
“ಕೆಟಿಎಂ’ ಒಂದು ಯುವ ಮನಸ್ಸುಗಳ ಸುತ್ತ ಸಾಗುವ ಸಿನಿಮಾ. ಆರಂಭದಲ್ಲಿ ಎಲ್ಲಾ ಸಿನಿಮಾಗಳಂತೆ ಪ್ರೀತಿ, ಪ್ರೇಮ, ಸ್ನೇಹ ಎಂದೇ ಆರಂಭವಾಗುವ ಸಿನಿಮಾ, ನೋಡ ನೋಡುತ್ತಿದ್ದಂತೆ ಮಗ್ಗುಲು ಬದಲಿಸಿ, ಹೊಸ ಪಥ “ಸಂಚಲನ’ ಮಾಡುತ್ತದೆ. ಅದೇ ಕಾರಣದಿಂದ “ಕೆಟಿಎಂ’ ರೆಗ್ಯುಲರ್ ಲವ್ ಸ್ಟೋರಿಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಇಲ್ಲೂ ನಾಯಕ ಒಂದು ಹಂತಕ್ಕೆ ದೇವದಾಸನಾಗುತ್ತಾನೆ. ಆದರೆ, ನಿರ್ದೇಶಕರು ಅದನ್ನೇ ಮುಂದುವರೆಸದೇ, ಕಥೆಯಲ್ಲೊಂದು ಟ್ವಿಸ್ಟ್ ನೀಡಿ, ಮತ್ತೆ ಲವಲವಿಕೆಯಿಂದ ಸಾಗುವಂತೆ ಮಾಡಿದ್ದಾರೆ. ತಾನು ಏನು ಹೇಳುತ್ತಿದ್ದೇನೆ ಮತ್ತು ಅದನ್ನು ಹೇಗೆ ಹೇಳಬೇಕು ಎಂಬ ಸ್ಪಷ್ಟ ಕಲ್ಪನೆ ನಿರ್ದೇಶಕರಿಗಿದ್ದ ಕಾರಣದಿಂದಲೇ “ಕೆಟಿಎಂ’ ಹಾದಿ ಸುಗಮ. ಚಿತ್ರದಲ್ಲಿ ಪ್ರೇಮಿಗಳಿಗೆ, ಸ್ನೇಹಿತರಿಗೆ ಹಾಗೂ ಪಾಲಕರಿಗೆ ಒಂದು ಸಣ್ಣ ಸಂದೇಶವನ್ನು ಕೂಡಾ ನೀಡಲಾಗಿದೆ.
ನಾಯಕ ದೀಕ್ಷಿತ್ ಶೆಟ್ಟಿ ಇಲ್ಲಿ ಹಲವು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಅವರು ಹಾಕಿರುವ ಶ್ರಮ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಉಳಿದಂತೆ ನಾಯಕಿಯರಾದ ಕಾಜಲ್ ಕುಂದರ್ ಹಾಗೂ ಸಂಜನಾ ದಾಸ್ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಅದರಲ್ಲೂ ಸಂಜನಾ ದಾಸ್ “ಮರ್ಸಿ’ ಪಾತ್ರದಲ್ಲಿ ಮಿಂಚಿ, ಭರವಸೆ ಮೂಡಿಸಿದ್ದಾರೆ. ಉಳಿದಂತೆ ಉಷಾ ಭಂಡಾರಿ, ರಘು ರಮಣಕೊಪ್ಪ, ಪ್ರಕಾಶ್ ತುಮ್ಮಿನಾಡು, ಬಾಬು ಹಿರಣ್ಣಯ್ಯ, ಶಾನಿಲ್ ಗುರು, ದೇವ್ ದೇವಯ್ಯ, ಅಭಿಷೇಕ್ ನಟಿಸಿ ದ್ದಾರೆ. ಒಂದು ಯೂತ್‌ಫುಲ್ ಸಿನಿಮಾವಾಗಿ ಕೆಟಿಎಂ ಒಳ್ಳೆಯ ಸಿನಿಪ್ರೇಮಿಗಳಿಗೆ ಒಳ್ಳೆಯ ಆಯ್ಕೆಯಾಗಬಹುದು.
ರವಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.