ಯಕ್ಷಗಾನದ ಬದುಕು;ಕಲೆಗೆ ಜಾತಿ ಇಲ್ಲ; ಧರ್ಮವಿಲ್ಲ…
Team Udayavani, May 12, 2017, 12:16 PM IST
ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ಯಕ್ಷಗಾನ ಪ್ರಸಿದ್ಧ ಕಲೆ. ಯಕ್ಷಗಾನವನ್ನು ಕಲಿಯಬೇಕು, ರಂಗಸ್ಥಳದಲ್ಲಿ ಮಿಂಚಬೇಕು ಎಂದು ಕನಸು ಕಾಣುವವರ ಸಂಖ್ಯೆ ಕಡಿಮೆ ಇಲ್ಲ. ಈಗ ಯಕ್ಷಗಾನದ ಹಿನ್ನೆಲೆ ಇಟ್ಟುಕೊಂಡು ಸಿನಿಮಾವೊಂದು ತಯಾರಾಗಿದೆ. ಅದು “ಬಣ್ಣ ಬಣ್ಣದ ಬದುಕು’. ಈಗ ಆ ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು, ಮುಂದಿನ ವಾರ (ಮೇ 19)ಕ್ಕೆ ಬಿಡುಗಡೆಯಾಗಲಿದೆ. ಇಸ್ಮಾಯಿಲ್ ಮೂಡುಶೆಡ್ಡೆ ಈ ಸಿನಿಮಾದ ನಿರ್ದೇಶಕರು.
“ಮುಸ್ಲಿಂ ಯುವಕನೊಬ್ಬ ಯಕ್ಷಗಾನ ಕಲಿಯಲು ಹೋದಾಗ ಎದುರಾಗುವ ಸಮಸ್ಯೆಗಳು ಮತ್ತು ಆ ವೇಳೆ ಮುಸ್ಲಿಂ ಸಮುದಾಯ ಆತನಿಗೆ ಬೆನ್ನೆಲುಬಾಗಿ ನಿಲ್ಲುವ ಅಂಶಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ಕಲೆಗೆ ಜಾತಿ-ಧರ್ಮ ಇಲ್ಲ ಎಂಬ ಅಂಶದೊಂದಿಗೆ ಸಿನಿಮಾ ಮಾಡಿದ್ದೇನೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ಇಸ್ಮಾಯಿಲ್. ಇದು ತುಂಬಾ ಸೆನ್ಸಿಟಿವ್ ವಿಷಯವಾದರೂ ಯಾರಿಗೂ ನೋವಾಗದಂತೆ ಕಲೆಯನ್ನಷ್ಟೇ ಕೇಂದ್ರಬಿಂದುವಾಗಿಟ್ಟುಕೊಂಡು ಸಿನಿಮಾ ಮಾಡಿದ್ದಾಗಿ ಹೇಳುವ ಅವರು, ಚಿತ್ರೀಕರಣ ಸಮಯದಲ್ಲೂ ನಮಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎನ್ನಲು ಮರೆಯುವುದಿಲ್ಲ. ಕೃಷ್ಣ ನಾಯ್ಕ ಈ ಸಿನಿಮಾ ನಿರ್ಮಾಪಕರು.
ಚಿತ್ರದಲ್ಲಿ ರವಿರಾಜ್ ಶೆಟ್ಟಿ ಪ್ರಮುಖ ಪಾತ್ರ ಮಾಡಿದ್ದು, ಅವರಿಗೆ ಮೊದಲು ಈ ಪಾತ್ರ ಒಪ್ಪಿಕೊಳ್ಳುವಾಗ ಭಯವಾಯಿತಂತೆ. ಏಕೆಂದರೆ, ಪಾತ್ರಕ್ಕೆ ಯಕ್ಷಗಾನ ಕಲಿಯಬೇಕಿತ್ತು. ಕೊನೆಗೆ ಸವಾಲಾಗಿ ಸ್ವೀಕರಿಸಿ ಕೊಟ್ಟ ಪಾತ್ರಕ್ಕೆ ಒದಗಿಸಿದ ಖುಷಿ ಅವರಿಗಿದೆ. ಚಿತ್ರದಲ್ಲಿ ಹಿರಿಯ ನಟ ಸತ್ಯಜಿತ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಆದರೆ, ಚಿತ್ರತಂಡ ಅವರಿಂದ ಡಬ್ಬಿಂಗ್ ಮಾಡಿಸದೇ ಬೇರೆಯವರಿಂದ ಡಬ್ಬಿಂಗ್ ಮಾಡಿಸಿರುವುದು ಬೇಸರ ತಂದಿದೆಯಂತೆ. ತನ್ನಿಂದಲೇ ಡಬ್ಬಿಂಗ್ ಮಾಡಿಸಿ ಎಂದು ಚಿತ್ರತಂಡದವರಲ್ಲಿ ಮನವಿ ಮಾಡಿಕೊಂಡರು ಸತ್ಯಜಿತ್.
ಚಿತ್ರದಲ್ಲಿ ಅನ್ವಿತಾ ಸಾಗರ್, ರಿಯಾ ಮೇಘನಾ, ರಮೇಶ್ ಭಟ್, ಅಪೂರ್ವ, ಹೊನ್ನವಳ್ಳಿ ಕೃಷ್ಣ, ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ರಮೇಶ್ ರೈ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರಕ್ಕೆ ವಿಜಯ್ ಎಸ್ ಛಾಯಾಗ್ರಹಣ, ಎ.ಕೆ. ವಿಜಯ್ ಕೋಕಿಲ ಸಂಗೀತ, ಶಶಿರಾಜ್ ಕಾವುರ್, ಸುರೇಶ್ ಆರ್ ಎಸ್ ಸಾಹಿತ್ಯ, ನಾಗೇಂದ್ರ ಅರಸ್ ಸಂಕಲನ, ಅನುಷಾ ಹೆಗ್ಡೆ ನೃತ್ಯ ನಿರ್ದೇಶನವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.