ಪ್ರೀತಿ ಹಂಚುವ ಯಜಮಾನ
Team Udayavani, Feb 1, 2019, 12:30 AM IST
ದರ್ಶನ್ ಅಭಿನಯದ ಚಿತ್ರಗಳಿಗೆ ಅತೀ ಹೆಚ್ಚು ಸಂಗೀತ ಕೊಟ್ಟವರು ಅಂದಾಕ್ಷಣ, ನೆನಪಾಗೋದೇ ವಿ.ಹರಿಕೃಷ್ಣ. ಹೌದು, ದರ್ಶನ್ ಅವರ 25 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. “ಯಜಮಾನ’ ಅವರ 25 ನೇ ಸಿನಿಮಾ. ಈ ಚಿತ್ರದ ಮೂಲಕ ಅವರು ನಿರ್ದೇಶಕರೂ ಆಗಿದ್ದಾರೆ ಅನ್ನೋದು ಮತ್ತೂಂದು ವಿಶೇಷ. ಅಲ್ಲಿಗೆ ಹರಿಕೃಷ್ಣ ಅವರದು ಡಬಲ್ ಧಮಾಕ. ಅವರ ಕಣ್ಣಲ್ಲಿ “ಯಜಮಾನ’ ಬೇರೆಯದ್ದೇ ರೂಪ. ಆ ಕುರಿತು ಸ್ವತಃ ಹರಿಕೃಷ್ಣ ಮಾತಾಡಿದ್ದಾರೆ.
“ಸದ್ಯಕ್ಕೆ “ಯಜಮಾನ’ನ ಜಪ ಹೊರತು ಬೇರೇನೂ ಇಲ್ಲ… ಎನ್ನುತ್ತಲೇ ಮಾತಿಗಿಳಿಯುತ್ತಾರೆ ಹರಿಕೃಷ್ಣ. ಎಲ್ಲಾ ಸರಿ, ನಿಮ್ಮ “ಯಜಮಾನ’ ಹೇಗೆ? ಈ ಪ್ರಶ್ನೆಗೆ ಹರಿಕೃಷ್ಣ ಒಂದೇ ವಾಕ್ಯದಲ್ಲಿ ಉತ್ತರ ಕೊಟ್ಟಿದ್ದು ಹೀಗೆ. “ಪ್ರೀತಿ ಹಂಚುವ ಯಜಮಾನ, ಮಾತು ತಪ್ಪದ ಯಜಮಾನ. ಜೀವನದಲ್ಲಿ ಕೆಳಗೆ ಬಿದ್ದವನು ಹೇಗೆ ಮೇಲೆದ್ದು ನಿಲ್ಲುತ್ತಾನೆ ಎಂಬುದೇ “ಯಜಮಾನ’ನ ಸ್ಪೆಷಲ್’ ಎಂಬುದು ಹರಿಕೃಷ್ಣ ಮಾತು. ಚಿತ್ರದ ಪೋಸ್ಟರ್ ಮತ್ತು ತುಣುಕು ನೋಡಿದರೆ ಇಲ್ಲಿ ದರ್ಶನ್ ರೈತನಾ ಅಥವಾ ಕುಸ್ತಿಪಟು ಇರಬಹುದ್ದಾ ಎಂಬ ಗೊಂದಲದ ಪ್ರಶ್ನೆ ಮೂಡುತ್ತೆ. ಆದರೆ, ಹರಿಕೃಷ್ಣ ಹೇಳುವಂತೆ, “ಯಾರಿಗೂ ಯಾವುದೇ ಗೊಂದಲ ಬೇಡ. ಅವರಿಲ್ಲಿ ರೈತರೂ ಆಗಿಲ್ಲ, ಕುಸ್ತಿಪಟುವೂ ಅಲ್ಲ. ಇದು ಕುಸ್ತಿ ಕುರಿತಾದ ಸಿನಿಮಾನೂ ಅಲ್ಲ. ಆದರೆ, ಮಾತು ತಪ್ಪದ ಯಜಮಾನ ಅಂದುಕೊಂಡರೆ ಎಲ್ಲವೂ ಅರ್ಥವಾಗುತ್ತೆ’ ಎನ್ನುತ್ತಾರೆ ಅವರು.
ದರ್ಶನ್ ಅವರ 25 ಚಿತ್ರಗಳಲ್ಲಿ ಕೆಲಸ ಮಾಡಿರುವ ಹರಿಕೃಷ್ಣ, ಮೊದಲ ಸಲ ನಿರ್ದೇಶನ ಮಾಡಿದ್ದಾರೆ. ಆ ತಯಾರಿ ಹೇಗಿತ್ತು? ಈ ಪ್ರಶ್ನೆಗೆ ಉತ್ತರಿಸುವ ಅವರು, “ತಯಾರಿ ಅಂತೇನೂ ಇರಲಿಲ್ಲ. ಎಲ್ಲವೂ ಸುಲಭವಾಗಿ ನಡೆದು ಹೋಯ್ತು. ಅದು ಸಾಧ್ಯವಾಗೋಕೆ ಕಾರಣ ದರ್ಶನ್ ಅವರೊಬ್ಬ ದೊಡ್ಡ ಸ್ಟಾರ್. ನಾನು ಅದೆಷ್ಟೋ ಸ್ಟಾರ್‌ಗಳಿಗೆ ಹಿಟ್ ಸಾಂಗ್ ಕೊಟ್ಟಿದ್ದೇನೆ. ಇದೇ ಮೊದಲ ಸಲ ದರ್ಶನ್ ರಂತಹ ಸ್ಟಾರ್‌ನಟನಿಗೆ ನಿರ್ದೇಶನ ಮಾಡಿದ್ದೇನೆ. ಆದರೆ, ಅವರು ಯಾವತ್ತೂ ಸ್ಟಾರ್ ನಟ ಎಂಬುದನ್ನು ತೋರಿಸಿಕೊಂಡೇ ಇಲ್ಲ. ಅವರು ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ, ಸೆಟ್‌ನಲ್ಲಿ ತುಂಬಾನೇ ಕೂಲ್ ಆಗಿ, ಕೆಲಸ ಮಾಡುತ್ತ, ಮಾಡಿಸುತ್ತಿದ್ದರು. ಸಿನಿಮಾ ಆರಂಭದಿಂದ ಮುಗಿಯುವ ಹಂತದವರೆಗೂ ಜೊತೆಗಿದ್ದು, ಸಾಕಷ್ಟು ಸಲಹೆ ನೀಡಿ, ತಿಳಿಹೇಳಿದ್ದಾರೆ.
ಅವರಿದ್ದುದರಿಂದಲೇ ನನಗೆ ಅಷ್ಟೊಂದು ದೊಡ್ಡ ಸಿನಿಮಾ ಮಾಡುತ್ತಿದ್ದೇನೆ ಎಂಬ ಫಿಲ್ ಬರಲೇ ಇಲ್ಲ. ಅವರಿಂದ ಸಾಕಷ್ಟು ಸಹಾಯವಾಗಿದೆ. ನನ್ನ ಬೆನ್ನ ಹಿಂದೆ ನಿಂತು, ನೀನು ಮುಂದೆ ನಡೆ, ನಾನಿದ್ದೇನೆ ಎಂದು ಪ್ರೋತ್ಸಾಹಿಸಿದ್ದಾರೆ. ಮೊದಲು ನನಗೆ ನಿರ್ದೇಶನ ಮಾಡುವ ಯೋಚನೆಯೇ ಇರಲಿಲ್ಲ. ಆದರೆ, ಕಥೆಯಿಂದಲೂ ಜೊತೆಗಿದ್ದುದರಿಂದ ಎಲ್ಲವನ್ನೂ ಅರ್ಥ ಮಾಡಿಕೊಂಡಿದ್ದರಿಂದ ನಿರ್ದೇಶನ ಮಾಡೋಕೆ ಸಾಧ್ಯವಾಯ್ತು. ಇದಕ್ಕೆ ಮುಖ್ಯ ಕಾರಣ ಶೈಲಜಮ್ಮ, ಸುರೇಶಣ್ಣ ಮತ್ತು ಇಷ್ಟು ವರ್ಷ ನನ್ನ ಹಿಂದೆ ನಿಂತು ಬೆಂಬಲಿಸಿದ ದರ್ಶನ್ ಸರ್. ಈ ಮೂವರಿಂದಲೇ ನಿರ್ದೇಶಕನಾದೆ’ ಎಂಬುದನ್ನು ಹೇಳಲು ಮರೆಯಲಿಲ್ಲ ಹರಿಕೃಷ್ಣ.
ಮರೆಯದ ನೆನಪು
ಇಲ್ಲಿ ಕೆಲಸ ಮಾಡಿದ್ದು ಖುಷಿ ಒಂದಡೆಯಾದರೆ, ಮರೆಯದ ಅನೇಕ ನೆನಪುಗಳ ಗುಚ್ಚ ಇನ್ನೊಂದೆಡೆ. ಮುಖ್ಯವಾಗಿ ನಾನು ನೋಡಿರುವ ದರ್ಶನ್ ಇಲ್ಲಿ ಬೇರೆ ರೀತಿ ಕಂಡರು. ಸೆಟ್ ಗೆ ರೆಡಿಯಾಗಿ ಬರುತ್ತಿದ್ದರು. ನಾನು ಎಲ್ಲವನ್ನೂ ಸಜ್ಜುಗೊಳಿಸುತ್ತಿರುವಾಗ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ನಮಗೆ ಸಾಧ್ಯವೇ ಇಲ್ಲ ಅಂತಂದುಕೊಳ್ಳುವಾಗ, ಅವರು ಸಾಥ್ ಕೊಟ್ಟು ಹಾಗೊಂದು ನಗೆ ಬೀರಿ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದರು. ಸೀನ್ ಇರಲಿ, ಫೈಟ್, ಸಾಂಗ್ ಯಾವುದೇ ಇರಲಿ ಎಲ್ಲವೂ ಸಲೀಸಾಗಿ ಸಾಗುತ್ತಿತ್ತು. ಇನ್ನೊಂದು ವಿಷಯ ಹೇಳಲೇಬೇಕು. ಅವರು ತಮ್ಮ ಸಹನಟರನ್ನು ಕಂಫರ್ಟ್ ಜೋನ್‌ನಲ್ಲಿಡುತ್ತಿದ್ದರು. ಅವರಲ್ಲಿರುವ ಬಿಗ್ ಕ್ವಾಲಿಟಿ ಮರೆಯೋಕೆ ಸಾಧ್ಯವಿಲ್ಲ.
ಇಂಥ ನಿರ್ಮಾಣ ಸಂಸ್ಥೆ ಬೇಕು
ಇಂಥದ್ದೊಂದು ಚಿತ್ರ ಮಾಡಬೇಕಾದರೆ, ಮೊದಲು ನಿರ್ಮಾಣ ಸಂಸ್ಥೆ ಗಟ್ಟಿಯಾಗಿರಬೇಕು. ಅದೊಂದೇ ಅಲ್ಲ, ಡಿಸಿಪ್ಲೀನ್ ಆಗಿರಬೇಕು. ಈ ನಿರ್ಮಾಣ ಸಂಸ್ಥೆ ಒಂದು ಸಣ್ಣ ಸಮಸ್ಯೆಗೂ ಕಾರಣವಾಗಿಲ್ಲ. ಚಿತ್ರೀಕರಣಕ್ಕೂ ಮುನ್ನ, ಎಲ್ಲವನ್ನೂ ರೆಡಿ ಮಾಡಿ ಅನುವು ಮಾಡಿಕೊಡುತ್ತಿತ್ತು. ಶೈಲಜಮ್ಮ ಮತ್ತು ಸುರೇಶಣ್ಣ ಹೇಗೆಂದರೆ, ಇಬ್ಬರಿಗೂ ಹಂಡ್ರೆಡ್ ಪರ್ಸೆಂಟ್ ಕೆಲಸ ಗೊತ್ತು. ಎಲ್ಲಾ ವಿಭಾಗವನ್ನೂ ತಿಳಿದಿದ್ದಾರೆ. ಸೆಟ್‌ನಿಂದ ಹಿಡಿದು, ಕ್ಯಾಮರಾ ಆ್ಯಂಗಲ್, ಡಿಐ, ಸಿಜಿ ಹೀಗೆ ಎಲ್ಲಾ ರೀತಿಯ ಕೆಲಸ ಗೊತ್ತಿದೆ. ಕ್ವಾಲಿಫೈಡ್ ಟೆಕ್ನೀಷಿಯನ್ಸ್ ಪ್ರೊಡಕ್ಷನ್‌ಗೆ ಇಳಿದರೆ ಹೇಗಿರುತ್ತೋ, ಹಾಗೆ ಈ ನಿರ್ಮಾಣ ಸಂಸ್ಥೆ ಇದೆ. ನನ್ನ ಕೆಲಸಕ್ಕೆ ಎಂದೂ ಸಮಸ್ಯೆಯಾಗಿಲ್ಲ. ಯಾವುದಕ್ಕೂ ಕೊರತೆ ಮಾಡಿಲ್ಲ ಎಂಬುದನ್ನು ಪ್ರೀತಿಯಿಂದ ಹೇಳುತ್ತಾರೆ ಹರಿಕೃಷ್ಣ. ಎಲ್ಲವೂ ಹೌದು, ಇಲ್ಲಿ ದರ್ಶನ್ ಫ್ಯಾನ್ಸ್‌ಗೆ ಏನೆಲ್ಲಾ ಇಷ್ಟ ಆಗುತ್ತೆ? “ದರ್ಶನ್ ಪಾತ್ರವೇ ಇಷ್ಟ ಆಗುತ್ತೆ. ಯಾಕೆಂದರೆ, ಆ್ಯಕ್ಷನ್, ಪಂಚಿಂಗ್ ಡೈಲಾಗ್ಸ್, ಸಾಂಗ್ಸ್ ಸೇರಿದಂತೆ ಇಡೀ ಸಿನಿಮಾನೇ ಹೊಸದಾಗಿರುತ್ತೆ. ಈಗಾಗಲೇ ಸಾಂಗ್ಸ್ ಎಷ್ಟು ಜೋಶ್ ತುಂಬಿದೆಯೋ, ಅದಕ್ಕಿಂತ ದೊಡ್ಡ ಜೋಶ್‌ಗೆ “ಯಜಮಾನ’ ಶೀರ್ಷಿಕೆ ಗೀತೆ ಕಾರಣವಾಗುತ್ತೆ. ಸಂತೋಷ್ ಆನಂದ್‌ರಾಮ್ ಬರೆದ “ಪ್ರೀತಿ ಹಂಚುವ ಯಜಮಾನ, ಮಾತು
ತಪ್ಪದ ಯಜಮಾನ’ ಹಾಡು ಸಿನಿಮಾದ ಹೈಲೈಟ್. “ಯಜಮಾನ’ ಅಂದರೆ ಏನು ಅನ್ನೋದನ್ನು ಆ ಹಾಡಲ್ಲಿ ತಿಳಿಯಬಹುದು’ ಎನ್ನುತ್ತಾರೆ.
ಯಜಮಾನನಿಗೆ 2 ವರ್ಷ ಮೀಸಲು
ಹರಿಕೃಷ್ಣ “ಯಜಮಾನ’ ಚಿತ್ರಕ್ಕಾಗಿ ಬೇರೆ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಹಿಂದೆ ಒಪ್ಪಿದ್ದ ಎರಡು ಚಿತ್ರಗಳಿಗೆ ಮಾಡಿದ ಕೆಲಸ ಬಿಟ್ಟರೆ, ಸುಮಾರು
ಒಂದು ಮುಕ್ಕಾಲು ವರ್ಷ ಈ ಚಿತ್ರಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಆ ಬಗ್ಗೆ ಹರಿಕೃಷ್ಣ ಅವರಿಗೆ ಹೆಮ್ಮೆ ಇದೆ. ಇಲ್ಲಿ ಸಂಗೀತ ಮತ್ತು ನಿರ್ದೇಶನ ಎರಡನ್ನೂ ಮಾಡಿರುವುದರಿಂದ ಸಹಜವಾಗಿಯೇ ಒತ್ತಡ ಇದ್ದೇ ಇರುತ್ತೆ. ಹಾಗಂತ, ಅಷ್ಟೊಂದು ಒತ್ತಡದಲ್ಲಿ ಕೆಲಸ ಮಾಡಿಲ್ಲ. ನನ್ನದೇ ಚಿತ್ರ ಆಗಿದ್ದರಿಂದ ಸಮಯ ಮಾಡಿಕೊಂಡು ನೀಟ್ ಆಗಿ ಚಿತ್ರ ಮಾಡಿದ್ದೇನೆ. ಅಂತಹ ವಾತಾವರಣ ಕಲ್ಪಿಸಿಕೊಟ್ಟಿದ್ದು ನಿರ್ಮಾಣ ಸಂಸ್ಥೆ. ಅದೊಂದು ಹೈಲಿ ಕ್ವಾಲಿಫೈಡ್ ಪ್ರೊಡಕ್ಷನ್ ಕಂಪೆನಿ. ನಾನೊಬ್ಬನೇ ಇಲ್ಲಿ ಕಷ್ಟಪಟ್ಟಿಲ್ಲ. ಎಲ್ಲರ ಶ್ರಮ ಇಲ್ಲಿದೆ. ಪ್ರತಿಯೊಬ್ಬರೂ ಪ್ರೀತಿಯಿಂದಲೇ ಕೆಲಸ ಮಾಡಿದ್ದಾರೆ. ಹಾಗಾಗಿ ಈ ಯಜಮಾನ ಎಲ್ಲರಿಗೂ ಪ್ರೀತಿ ಹಂಚುತ್ತಾನೆ ಎಂದು ನಂಬಿದ್ದೇನೆ. ಇನ್ನು, ಪೊನ್‌ಕುಮಾರ್ ಜೊತೆ ಕಥೆಯಿಂದಲೂ ಕೆಲಸ ಮಾಡಿದ್ದೇನೆ. ನನ್ನ ಮೊದಲ ನಿರ್ದೇಶನ ಎಷ್ಟರಮಟ್ಟಿಗೆ ಇದೆ ಎಂಬುದನ್ನು ಜನ ಹೇಳಬೇಕು. ಇಷ್ಟಪಟ್ಟು “ಯಜಮಾನ’ನ ಜೊತೆ ಕೆಲಸ ಮಾಡಿದ್ದೇನೆ. ಮುಂದಿನದ್ದು ಪ್ರೇಕ್ಷಕರಿಗೆ ಬಿಟ್ಟದು’ ಎನ್ನುತ್ತಲೇ ಮಾತು ಮುಗಿಸುತ್ತಾರೆ ಹರಿಕೃಷ್ಣ.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.