ಮಣಿ ಮ್ಯಾಟರ್!
Team Udayavani, Oct 27, 2017, 1:09 PM IST
“ಸಿಂಹಾದ್ರಿ’ ನಂತರ ಹಿರಿಯ ನಿರ್ದೇಶಕ ಶಿವಮಣಿ ಯಾವೊಂದು ಚಿತ್ರವನ್ನು ನಿರ್ದೇಶಿಸಿರಲಿಲ್ಲ. ಅವರು ಯಾವ ಚಿತ್ರ ನಿರ್ದೇಶಿಸಬಹುದು ಮತ್ತು ಯಾರ ಜೊತೆಗೆ ಕೆಲಸ ಮಾಡಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇತ್ತು. ಹಾಗಿರುವಾಗಲೇ ಅವರು ಮತ್ತೆ ಬಂದಿದ್ದಾರೆ. ಈ ಬಾರಿ ನಿರ್ದೇಶಕರಾಗಲ್ಲ, ನಟರಾಗಿ. “ಟೈಗರ್ ಗಲ್ಲಿ’ ಚಿತ್ರದಲ್ಲೊಂದು ನೆಗೆಟಿವ್ ಪಾತ್ರ ಮಾಡುವ ಮೂಲಕ ಹೊಸ ಲುಕ್‌ನಲ್ಲಿ, ಹೊಸ ಹುಮ್ಮಸ್ಸಿನಲ್ಲಿ ವಾಪಸ್ಸು ಬಂದಿದ್ದಾರೆ. ಸತೀಶ್ ನೀನಾಸಂ ನಾಯಕನಾಗಿ ನಟಿಸುತ್ತಿರುವ ಈ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಹಾಗಾಗಿ ಆ ಚಿತ್ರದ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ ಶಿವಮಣಿ.
“ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದೀನಿ …’ ಶಿವಮಣಿ ಅವರಿಗೆ ನಟನೆ ಹೊಸದಲ್ಲ. ಹಲವು ವರ್ಷಗಳ ಹಿಂದೆಯೇ ಅವರು “ಲವ್ ಯು’ ಎಂಬ ಸಿನಿಮಾದಲ್ಲಿ ಹೀರೋ ಆಗಿದ್ದರು. ಆ ನಂತರ “ಖಾಕಿ’ ಮತ್ತು “ಬೆಳ್ಳಿ ಬೆಟ್ಟ’ ಚಿತ್ರಗಳಲ್ಲಿ ನಟಿಸಿದ್ದರು. ಆ ನಂತರ ಅದೇನಾಯಿತೋ ಗೊತ್ತಿಲ್ಲ. ಆ ಕಡೆ ನಟನೆಯೂ ದೂರಾಯಿತು, ಈ ಕಡೆ ನಿರ್ದೇಶನವೂ ವಿರಳವಾಯಿತು. ಈಗ ಅವರು ಹೊಸ ವಿಶ್ವಾಸದಿಂದ, ಹೊಸ ಗೆಟಪ್‌ನಲ್ಲಿ “ಟೈಗರ್ ಗಲ್ಲಿ’ ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ. ಈ ಚಿತ್ರದಲ್ಲಿ ಅವರದ್ದು ನೆಗೆಟಿವ್
ಪಾತ್ರ. ವೈಟ್ ಕಾಲರ್ಡ್ ವಿಲನ್ ಆಗಿ ನಟಿಸಿರುವ ಶಿವಮಣಿ, ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.
“ನಟನೆಗೆ ಆಫರ್‌ಗಳು ಬರುತ್ತಲೇ ಇದ್ದವು. ಆದರೆ, ಸುಮ್ಮನೆ ಹೀಗೆ ಬಂದು, ಹಾಗೆ ಹೋಗೋಕೆ ಇಷ್ಟವಿಲ್ಲ. ಲೀಡ್ ಅಲ್ಲಿದ್ದರೂ, ನೆಗೆಟಿವ್ ಆದರೂ ಪರವಾಗಿಲ್ಲ. ಒಂದು ಪ್ರಮುಖ ಪಾತ್ರ ಇದ್ದರೆ ಚೆನ್ನ ಎಂದು ಕಾಯುತ್ತಿದ್ದೆ. ಆ ಸಂದರ್ಭದಲ್ಲಿ ರವಿ ಶ್ರೀವತ್ಸ ಬಂದರು. ಅವರು ನನ್ನ ಜೊತೆಗೆ “ಲಾ ಆ್ಯಂಡ್ ಆರ್ಡರ್’, “ನಕ್ಸಲೈಟ್’ ಮುಂತಾದ ಚಿತ್ರಗಳಿಗೆ ಕೆಲಸ ಮಾಡಿದ್ದರು. ಒಡನಾಟ, ವೇವ್‌ಲೆಂಥ್ ಎಲ್ಲವೂ ಚೆನ್ನಾಗಿತ್ತು. ಈ ಪಾತ್ರವನ್ನ ನೀವೇ ಮಾಡಿದರೆ ಚೆನ್ನ ಎಂದು ನನ್ನಿಂದ ಮಾಡಿಸಿದರು. ತಂಡ ಚೆನ್ನಾಗಿತ್ತು. ರವಿ ಸಹ ಒಂದು ಗ್ಯಾಪ್ ನಂತರ ಫೈರ್‌ನೊಂದಿಗೆ ಬಂದಿದ್ದಾರೆ. ಈ ಚಿತ್ರದ ಮೇಲೆ ಒಂದಿಷ್ಟು ನಿರೀಕ್ಷೆಗಳಿವೆ. ಚಿತ್ರ ಬಿಡುಗಡೆಯಾಗಲಿ ಎಂದು ಕಾಯುತ್ತಿದ್ದೇನೆ. ಚಿತ್ರ ಬಿಡುಗಡೆ ನೋಡಿಕೊಂಡು, ಇನ್ನಷ್ಟು ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೀನಿ’ ಎಂದು ಮಾತು ಶುರು ಮಾಡಿದರು ಶಿವಮಣಿ.
ಹಾಗಾದರೆ ಅವರು ಇನ್ನು ನಿರ್ದೇಶನ ಮಾಡುವುದಿಲ್ಲವಾ? ಎಂಬ ಪ್ರಶ್ನೆ ಬರಬಹುದು. ನಿರ್ದೇಶನ ನಿಲ್ಲಿಸುವುದಿಲ್ಲವಂತೆ. ಆದರೆ, ಹೊಟ್ಟೆಪಾಡಿಗಾಗಿ ಮಾಡುವುದಿಲ್ಲವಂತೆ. “ಸುಮ್ಮನೆ ಚಿತ್ರ ಮಾಡಬೇಕು ಅಂತ ಮಾಡುವುದಿಲ್ಲ. ಎಕ್ಸೆ„ಟಿಂಗ್ ಎನಿಸಿದರೆ ಮಾತ್ರ ಮಾಡುತ್ತೀನಿ. ಸದ್ಯಕ್ಕೆ ಒಂದೆರೆಡು ಚಿತ್ರಗಳ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ ಅಭಿನಯಕ್ಕೆ ಒಳ್ಳೆಯ ಅವಕಾಶಗಳು ಬಂದರೆ
ಖಂಡಿತಾ ಮಾಡುತ್ತೀನಿ. ನಾನು ಮೊದಲಿನಿಂದಲೂ ದೊಡ್ಡ ಹೀರೋಗಳ ಜೊತೆಗೆ ಕೆಲಸ ಮಾಡಿದವನು. ಈಗ ದೊಡ್ಡ ಹೀರೋಗಳೆಲ್ಲಾ ಎರಡೂ¾ರು ವರ್ಷಗಳ ಕಾಲ ಬುಕ್ ಆಗಿದ್ದಾರೆ. ಎಲ್ಲರೂ ಅವರವರ ಕೆಲಸಗಳಲ್ಲಿ, ಚಿತ್ರಗಳಲ್ಲಿ ಬಿಝಿಯಾಗಿದ್ದಾರೆ. ಆ ಸಂದರ್ಭದಲ್ಲಿ ನಾನೇನು ಮಾಡಲಿ? ಸುಮ್ಮನೆ ಕೂರೋಕೆ ಸಾಧ್ಯವಿಲ್ಲ. ಆಗ ಒಂದಿಷ್ಟು ಒಳ್ಳೆಯ ಪಾತ್ರಗಳು ಸಿಕ್ಕರೆ ನಟಿಸುತ್ತೀನಿ’
ಎನ್ನುತ್ತಾರೆ ಶಿವಮಣಿ.
ಈ ಹಿಂದೆ ಸಹ ಅವರು ಮೂರು ಚಿತ್ರಗಳಲ್ಲಿ ನಟಿಸಿದವರು. ಆದರೆ, “ಬೆಳ್ಳಿ ಬೆಟ್ಟ’ ಚಿತ್ರದ ನಂತರ ಅವರು ನಟನೆಯನ್ನು
ಮುಂದುವರೆಸಲಿಲ್ಲ. “ನಾನು “ಲವ್ ಯು’ ಮಾಡುವಾಗಲೇ ಜಯಶ್ರೀದೇವಿ ಸೇರಿದಂತೆ ದೊಡ್ಡ ನಿರ್ಮಾಪಕರು ಆಫರ್ ಕೊಟ್ಟಿದ್ದರು. ಆದರೆ, “ಲವ್ ಯು’ ಕಾರಣಾಂತರಗಳಿಂದ ನಿಧಾನವಾಯಿತು. ನಿಜ ಹೇಳಬೇಕೆಂದರೆ, ನಟನೆ ಮಾಡುವ ಆಸೆ ಇತ್ತೇ ಹೊರತು, ನಾನು ಹೀರೋ ಆಗಬಹುದು ಎಂದು ನಿರೀಕ್ಷಿಸಿರಲಿಲ್ಲ. ಆಗ ಉಪೇಂದ್ರ, ನಾರಾಯಣ್, ಮಹೇಂದರ್ ಎಲ್ಲಾ ಹೀರೋ ಆಗಿದ್ದರು. ಆಗ ಯಾರೋ ನನ್ನನ್ನ ಹೀರೋ ಮಾಡಿದರು. ಆ ನಂತರ ಏನೇನೋ ಆಯ್ತು. ಚಿತ್ರ ದೊಡ್ಡದಾಗಿ ಶುರುವಾಗಿತ್ತು. ಅದನ್ನು ಮುಂದುವರೆಸುವ ಜವಾಬ್ದಾರಿ ಇತ್ತು. ಇದೆಲ್ಲದರಿಂದ ಚಿತ್ರಕ್ಕೆ ಸ್ವಲ್ಪ ಏಟು ಬಿತ್ತು. ಆ ನಂತರ ನಟಿಸುವುದಕ್ಕೆ ಅವಕಾಶ ಬಂತಾದರೂ, ಕಮಿಟ್‌ಮೆಂಟ್ ದೊಡ್ಡದಿತ್ತು.
ನಟನೆ ಮಡಿ ಅದನ್ನು ತೀರಿಸೋದು ಸಾಧ್ಯವಿರಲಿಲ್ಲ ಮೇಲಾಗಿ ಪಾತ್ರಗಳೂ ಅಷ್ಟಾಗಿ ಕಾಡದಿದ್ದರಿಂದ, ಇಲ್ಲಿ ಕಳೆದು ಹೋಗುತ್ತೀನಿ ಎಂದನಿಸಿ ನಿರ್ದೇಶನ ಮುಂದುವರೆಸಿದೆ’ ಎಂದು ಮತ್ತೆ ನಿರ್ದೇಶನಕ್ಕೆ ಹೊರಳಿದ ಬಗ್ಗೆ ಹೇಳುತ್ತಾರೆ ಶಿವಮಣಿ. ತಾವೇ ನಿರ್ಧಾರ ತೆಗೆದುಕೊಂಡು ನಿರ್ದೇಶನದ ಕಡೆ ಹೊರಳಿ, ಆ ನಂತರ ಬ್ರೇಕ್ ತೆಗೆದುಕೊಂಡಿದ್ದು ಯಾಕೆ? ಈ ಪ್ರಶ್ನೆಗೆ ಶಿವಮಣಿಗೆ ಅವರದ್ದೇ ಆದ ಕಾರಣಗಳಿವೆ. “ನಾನು 24ನೇ ವಯಸ್ಸಿಗೆ ನಿರ್ದೇಶಕನಾದೆ. ಬಹಳ ಕಡಿಮೆ ಸಮಯದಲ್ಲಿ “ರಾಜಕೀಯ’, “ಗೋಲಿಬಾರ್’, “ಶಿವಸೈನ್ಯ’, “ದೊರೆ’ ಮುಂತಾದ ಹಲವು ಚಿತ್ರಗಳನ್ನು ಕೊಟ್ಟೆ. ಕಡಿಮೆ ಅವಧಿಯಲ್ಲಿ 25-30 ಚಿತ್ರಗಳನ್ನು ನಿರ್ದೇಶಿಸಿದೆ. ಒಂದು ಸಿನಿಮಾ ಮುಗಿಯುತ್ತಿದ್ದಂತೆ ಇನ್ನೊಂದು ಶುರು ಮಾಡುತ್ತಿದ್ದೆ. ಎಲ್ಲಾ ಜಾನರ್‌ನ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದೆ. ಇನ್ನೇನಾದರೂ ಹೊಸದು ಮಾಡಬೇಕಿತ್ತು. ಒಂದು ಹಂತದಲ್ಲಿ ನನಗೇ ಎಕ್ಸೆ„ಟ್ ಆಗುತ್ತಿರಲಿಲ್ಲ. ಕಾರಣ ಸತತ ಕೆಲಸಗಳಿಂದ
ಓದು, ಟ್ರಾವಲ್ ಯಾವುದೂ ಸಾಧ್ಯವಾಗಿರಲಿಲ್ಲ. ಅವೆಲ್ಲಾ ಇದ್ದರಷ್ಟೇ ಏನಾದರೂ ಹೊಸದು ಕೊಡೋಕೆ ಸಾಧ್ಯ. ಇಲ್ಲವಾದರೆ ಮಾಡಿದ್ದೇ ಮಾಡಬೇಕಾಗುತ್ತೆ. ಒಂಥರಾ ದಿನಾ ಸ್ಕೂಲ್‌ಗೆ ಹೋಗಿ ಬರುವ ಹಾಗಾಗುತಿತ್ತು. ಅದೇ ಕಾರಣಕ್ಕೆ, ಒಂದು ಬ್ರೇಕ್ ಬೇಕೆನಿಸಿ ಬ್ರೇಕ್ ತೆಗೆದುಕೊಂಡೆ. ಈ ಸಂದರ್ಭದಲ್ಲಿ ಒಂದಿಷ್ಟು ಓದಿ, ಪ್ರಯಾಣ ಮಾಡಿ, ರಿಫ್ರೆಶ್ ಆಗಿ ಬಂದೆ. “ಜೋಶ್’ ಚಿತ್ರಕ್ಕೆ
ಸುಮಾರು ಎರಡು ವರ್ಷ ಕೆಲಸ ಮಾಡಿದೆ. ಆರಂಭದಿಂದ ಹಂಡ್ರೆಡ್ ಡೇಸ್ ಫಂಕ್ಷನ್‌ವರೆಗೂ ಜೊತೆಗಿದ್ದೆ. ಅದೊಂದು
ಒಳ್ಳೆಯ ಅನುಭವ’ ಎನ್ನುತ್ತಾರೆ ಅವರು.
ಮಾಡಬೇಕು ಎಂದು ಯಾವ್ಯಾವುದೋ ಚಿತ್ರ ಮಾಡುವುದಕ್ಕೆ ಇಷ್ಟವಿಲ್ಲ ಎನ್ನುತ್ತಾರೆ ಶಿವಮಣಿ. “ಯಾವುದೇ ಹಿನ್ನೆಲೆಯಿಲ್ಲದೆ ಬಂದವನು ನಾನು. ಚಿತ್ರರಂಗದಲ್ಲಿ ಬಹಳ ಒಳ್ಳೆಯ ದಿನಗಳನ್ನು ನೋಡಿದವನು. ನನಗೂ ರೆಡ್ ಕಾಪೆìಟ್ ವೆಲ್‌ಕಮ್ ಸಿಕ್ಕಿದೆ. ನನ್ನದೇ ಆದ ಒಂದಿಷ್ಟು ಮೌಲ್ಯಗಳು, ದಾಖಲೆ ಎಲ್ಲಾ ಇದೆ. ಸಿನಿಮಾ ಮಾಡಬೇಕು ಎನ್ನುವ ಕಾರಣಕ್ಕೆ ಅವನ್ನೆಲ್ಲಾ ಕೆಡಿಸಿಕೊಳ್ಳುವುದಕ್ಕೆ ಇಷ್ಟವಿಲ್ಲ. ಈಗಲೂ ಹಲವು ಜನಪ್ರಿಯ ನಿರ್ದೇಶಕರು ಸಿಕ್ಕಾಗ, ನಿಮ್ಮ ಚಿತ್ರಗಳನ್ನ ನೋಡಿ ಬೆಳೆದವರು ನಾವು ಅಂತಾರೆ. “ಗೋಲಿಬಾರ್’, “ಶಿವಸೈನ್ಯ’ ಚಿತ್ರಗಳನ್ನ ನೆನಪಿಸಿಕೊಳ್ಳುತ್ತಾರೆ. ಹಾಗಿರುವಾಗ ಏನೇನೋ ಮಾಡುವುದಕ್ಕೆ ಹೋಗಬಾರದು. ಚಿತ್ರ ಮಾಡಿದರೆ, ಶಿವಮಣಿ ಇನ್ನಷ್ಟು ಮಾಗಿದ್ದಾನೆ ಅನಿಸಬೇಕೇ ಹೊರತು, ಯಾಕೆ ಮಾಡಿದರು ಅಂತ ಹೇಳಬಾರದು. ಏನು ಮಾಡಿದರೂ ಜವಾಬ್ದಾರಿಯಿಂದ ಮಾಡಬೇಕು. ಅದಕ್ಕೆ ಟೈಮ್ ತಗೊಂಡ್ ಚಿತ್ರ ಮಾಡುತ್ತೀನಿ’ ಎಂದು ಮಾತು ಮುಗಿಸಿದರು ಶಿವಮಣಿ.
ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.