ಗಡಿನಾಡ ಲವ್ ಸ್ಟೋರಿ
ಮರಾಠಿ ಹುಡುಗಿ ಕನ್ನಡ ಹುಡುಗ
Team Udayavani, Oct 25, 2019, 5:38 AM IST
ಕನ್ನಡದ ಅನೇಕ ಚಿತ್ರಗಳಲ್ಲಿ ನಾಡಿನ ಸಮಸ್ಯೆ ಕುರಿತ ವಿಷಯಗಳು ಬಂದಿವೆ. ಅದಕ್ಕೆ ತಕ್ಕ ಪರಿಹಾರವನ್ನೂ ಆ ಸಿನಿಮಾದಲ್ಲೇ ಸೂಚಿಸುವ ಪ್ರಯತ್ನವೂ ಆಗಿದೆ. ಈಗ ಆ ಸಾಲಿಗೆ ಗಡಿನಾಡ ಭಾಗದಲ್ಲಿರುವ ಸಮಸ್ಯೆಗಳ ಬಗ್ಗೆ ಹೇಳುವ ಮತ್ತು ತೋರಿಸುವ ಸಿನಿಮಾವೊಂದು ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದೆ. ಅಂದಹಾಗೆ, ಆ ಚಿತ್ರದ ಹೆಸರು “ಗಡಿನಾಡು’. ಈ ಹಿಂದೆ “ಗುಣ’ ಹಾಗೂ “ನಿರುದ್ಯೋಗಿ’ ಚಿತ್ರಗಳನ್ನು ನಿರ್ದೇಶಿಸಿದ್ದ ನಾಗ್ ಹುಣಸೋಡು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಅವರದೇ. ಇನ್ನು, ವಸಂತ್ ಮುರಾರಿ ದಳವಾಯಿ ನಿರ್ಮಾಪಕರು. ಚಿತ್ರಕ್ಕೆ ಪ್ರಭು ಸೂರ್ಯ ಹೀರೋ. ಅವರಿಗೆ ಸಂಚಿತಾ ಪಡುಕೋಣೆ ನಾಯಕಿ. ತಮ್ಮ ಚಿತ್ರದ ಅನುಭವ ಹೇಳಲೆಂದೇ ಅವರು ಪತ್ರಕರ್ತರ ಮುಂದೆ ಬಂದಿದ್ದರು.
ನಿರ್ದೇಶಕ ನಾಗ್ ಹುಣಸೋಡು ಮಾತಿಗಿಳಿದು, “ಕಥೆ ಮಾಡಿಕೊಂಡ ಬಳಿಕ ಶೀರ್ಷಿಕೆ ಬಗ್ಗೆ ಸಾಕಷ್ಟು ಚರ್ಚೆಯಾಯ್ತು. ಇದು ನಾಡಿನ ಗಡಿಭಾಗದ ಸಮಸ್ಯೆ ಕುರಿತಾದ ಸಿನಿಮಾ ಆಗಿರುವುದರಿಂದ “ಗಡಿನಾಡು’ ಟೈಟಲ್ ಸೂಕ್ತವೆನಿಸಿ, ಅದನ್ನು ಪಕ್ಕಾ ಮಾಡಿದೆವು. ಹಲವು ಹೀರೋಗಳನ್ನು ಅಪ್ರೋಚ್ ಮಾಡಲಾಯಿತು. ಆದರೆ, ಯಾರೊಬ್ಬರೂ ಸರಿಯೆನಿಸಲಿಲ್ಲ. ಕೊನೆಗೆ ಪ್ರಭುಸೂರ್ಯ ಆಯ್ಕೆಯಾಯಿತು. “ಗಡಿನಾಡು’ ಅಂದರೆ, ಅದೊಂದು ಸಮಸ್ಯೆ ಬಗ್ಗೆ ಹೇಳಹೊರಟಿರುವ ಚಿತ್ರ. ಬೆಳಗಾವಿಯಲ್ಲಿ ಇಂದು ಸಮಸ್ಯೆಗಳು ಸಾಕಷ್ಟಿವೆ. ಅದು ಭಾಷೆ ಸಮಸ್ಯೆ ಇರಬಹುದು, ಗಡಿ ಸಮಸ್ಯೆ ಇರಬಹುದು ಹೀಗೆ ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದರ ಜೊತೆಯಲ್ಲಿ ಪರಿಹಾರವನ್ನೂ ಸೂಚಿಸುವ ಪ್ರಯತ್ನ ಮಾಡಲಾಗಿದೆ. ಇದರೊಂದಿಗೆ ಮರಾಠಿ ಹುಡುಗಿ ಜೊತೆ ಕನ್ನಡ ಹುಡುಗನ ಪ್ರೀತಿ ಶುರುವಾಗುತ್ತೆ. ಅದು ಇನ್ನೊಂದು ಸಮಸ್ಯೆಗೂ ಕಾರಣವಾಗುತ್ತೆ. ಆಮೇಲೆ ಏನೆಲ್ಲಾ ನಡೆದುಹೋಗುತ್ತೆ ಎಂಬುದು ಕಥೆ’ ಎಂಬುದು ನಿರ್ದೇಶಕರ ವಿವರ.
“ಇಲ್ಲಿಯೂ ಒಂದಷ್ಟು ನೈಜ ಘಟನೆಗಳಿವೆ. ಬೆಳಗಾವಿಯಲ್ಲಿ ಚಿತ್ರೀಕರಣ ಶುರುಮಾಡಿದಾಗಲೇ, ನನಗೆ ಮರಾಠ ಸಂಘದಿಂದ ಬೆದರಿಕೆ ಕರೆ ಬಂದಿದ್ದವು. “ಗಡಿನಾಡು’ ಟೈಟಲ್ ಯಾಕೆ, ಏನಿದೆ ಎಂಬೆಲ್ಲಾ ಮಾತುಗಳು ಜೋರಾಗಿದ್ದವು. ಅದು ಸಚಿವರೊಬ್ಬರ ತನಕವೂ ಹೋಗಿ, ವಿಧಾನಸಭೆಯಲ್ಲಿ “ಗಡಿನಾಡು’ ಸಿನ್ಮಾ ಮೂಲಕ ಭಾಷೆ, ಜಾತಿ ಕುರಿತಂತೆ ಸಮಸ್ಯೆ ಸೃಷ್ಟಿಸಲಾಗುತ್ತೆ. ಕೂಡಲೇ ಆ ಸಿನಿಮಾ ನಿಲ್ಲಿಸಬೇಕು ಅಂತಾನೂ ಒತ್ತಡಗಳಿದ್ದವು. ಕೊನೆಗೆ, ನಾನು ಸಂಬಂಧಿಸಿದವರಿಗೆ ಸಿನಿಮಾ ಕಥೆ ಸಾರಾಂಶ ಹೇಳಿದ ಮೇಲೆ ಎಲ್ಲವೂ ತಣ್ಣಗಾಯಿತು’ ಎಂದು ಹೇಳಿದರು.
ಹೀರೋ ಪ್ರಭುಸೂರ್ಯ ಅವರಿಗೆ ಇದು ಎರಡನೇ ಸಿನಿಮಾ. ಚಿತ್ರದಲ್ಲಿ ಹೀರೋ ಬೆಂಗಳೂರಲ್ಲಿ ವಿದ್ಯಾಭ್ಯಾಸ ಮುಗಿಸಿ, ಬೆಳಗಾವಿಗೆ ಹೋಗುತ್ತಾನೆ. ಅಲ್ಲಿ ಗಡಿ ಸಮಸ್ಯೆಗಳನ್ನು ಕಂಡು, ಒಂದು ಸೇನೆ ಕಟ್ಟುತ್ತಾನೆ. ಅಲ್ಲೊಂದಷ್ಟು ಖಳಟನರು ಎದುರಾಗುತ್ತಾರೆ. ಅದು ಗಲಾಟೆಗೆ ತಿರುಗುತ್ತದೆ. ಆಮೇಲೆ ಏನಾಗುತ್ತೆ ಎಂಬುದು ಕಥೆ’ ಎಂದರು ಪ್ರಭು ಸೂರ್ಯ. ನಾಯಕಿ ಸಂಚಿತಾ ಪಡುಕೋಣೆ ಇಲ್ಲಿ ದಿಶಾ ಎಂಬ ಮರಾಠ ಹುಡುಗಿಯಾಗಿ ನಟಿಸಿದ್ದಾರಂತೆ. ಹೊಸಬರ ಚಿತ್ರದಲ್ಲಿ ಹೊಸತನ ಹೆಚ್ಚಾಗಿದೆ. ಇದೊಂದು ಬೇರೆ ಕಥೆ ಇರುವ, ಸಮಸ್ಯೆಗೆ ಪರಿಹಾರ ಸೂಚಿಸುವ ಸಿನಿಮಾ ಎಂದರು ಸಂಚಿತಾ.
ನಿರ್ಮಾಪಕ ವಸಂತ್ ಮುರಾರಿ ದಳವಾಯಿ ಅವರು ಮೂಲತಃ ಬೆಳಗಾವಿಯವರು. ಅವರಿಗೆ ಕಥೆ ಇಷ್ಟವಾಗಿದ್ದರಿಂದ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ. ಗಡಿನಾಡಲ್ಲಿರುವ ಹಲವು ಸಮಸ್ಯೆಗಳನ್ನು ಇಲ್ಲಿ ತೋರಿಸಲಾಗಿದೆ. ಆದರೆ, ಎಲ್ಲೂ ವಿನಾಕಾರಣ ಕಾಂಟ್ರವರ್ಸಿ ಆಗುವಂತಹ ವಿಷಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ವಿನ್ ಜೋಶ್ವ ಅವರಿಗೆ ಇದು 11 ನೇ ಚಿತ್ರವಂತೆ. ಇಲ್ಲೊಂದು ಕನ್ನಡ ಮೇಲೆ ಹಾಡು ಮಾಡಿದ್ದಾರಂತೆ. ಹಾಡುಗಳು ಕೇಳುಗರಿಗೆ ಇಷ್ಟವಾಗುತ್ತವೆ ಎಂಬ ವಿಶ್ವಾಸ ಅವರದು. ಗೌರಿ ವೆಂಕಟೇಶ್, ರವಿ ಸುವರ್ಣ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಚರಣ್‌ರಾಜ್, ದೀಪಕ್ ಶೆಟ್ಟಿ ಇತರರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.