ನೆಟ್ ಬಂದು ಕೆಟ್ಟೋಯ್ತು! ಹಾಡುಗಳ ದರ್ಬಾರು ಈಗಿಲ್ಲ
Team Udayavani, Jul 7, 2017, 3:50 AM IST
ಒಂದು ಕಾಲಕ್ಕೆ ಪ್ರತಿ ಏರಿಯಾದಲ್ಲೂ ಒಂದು ಜನಪ್ರಿಯ ಆಡಿಯೋ ಕ್ಯಾಸೆಟ್ ಅಂಗಡಿ ಇರುತಿತ್ತು, ಒಂದು ಚಿತ್ರದ ಹಾಡು ಹಿಟ್ ಆಯಿತೆಂದರೆ ಸಾವಿರಾರು ಕ್ಯಾಸೆಟ್‌ಗಳು ಮಾರಾಟವಾಗುತ್ತಿದ್ದವು, ದೊಡ್ಡ ಮಟ್ಟದಲ್ಲಿ ಕ್ಯಾಸೆಟ್ ಬಿಡುಗಡೆ ಸಮಾರಂಭಗಳು ನಡೆಯುತ್ತಿದ್ದವು, ಕೆಲವು ಚಿತ್ರಗಳ ಆಡಿಯೋ ಹಕ್ಕುಗಳನ್ನು ಲಕ್ಷಗಟ್ಟಲೆ ಕೊಟ್ಟು ತೆಗೆದುಕೊಳ್ಳಲಾಗುತ್ತಿತ್ತು…
ಇವೆಲ್ಲಾ ಈಗ ನೆನಪಷ್ಟೇ. ಈಗ ಕ್ಯಾಸೆಟ್‌ಗಳೂ ಇಲ್ಲ, ಅಂಗಡಿಗಳೂ ಇಲ್ಲ. ಕೆಲವೇ ವರ್ಷಗಳಲ್ಲಿ ನೋಡನೋಡುತ್ತಾ ಎಷ್ಟೆಲ್ಲಾ ಬದಲಾವಣೆಗಳು ಆಗಿ ಹೋದವು ಎಂಬುದೇ ಆಶ್ಚರ್ಯ.
ಕೆಲವು ತಿಂಗಳ ಹಿಂದೆ ಮುಂಬೈನ ಪುರಾತನ ಡಿಸ್ಕ್ ಮತ್ತು ಕ್ಯಾಸೆಟ್ ಅಂಗಡಿ ರಿಧಮ್ ಹೌಸ್ ಮುಚ್ಚಿಹೋಯ್ತು. ಕರ್ನಾಟಕದಲ್ಲೂ ಅನೇಕ ಅಂಗಡಿಗಳು ಮುಚ್ಚಿ ಹೋಗಿವೆ ಮತ್ತು ಮುಚ್ಚಿ ಹೋಗುತ್ತಲೇ ಇವೆ. ಇತ್ತೀಚೆಗೊಂದು ದಿನ ಗಾಂಧಿಬಜಾರಿನ ಹಳೆಯ ಕ್ಯಾಸೆಟ್ ಅಂಗಡಿಯ ಮುಂದೆಯೂ “ಕ್ಲೋಸಿಂಗ್ ಶಾಟಿÉì’ ಬೋರ್ಡು ಬಿದ್ದಿದೆ.
ಅಳಿದುಳಿದಿರುವ ಸಿಡಿಗಳನ್ನು ಡಿಸ್ಕೌಂಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದೊಂದೇ ಅಂಗಡಿ ಅಲ್ಲ, ಬೆಂಗಳೂರಿನ ಹಲವು ಕ್ಯಾಸೆಟ್ ಮತ್ತು ಸಿಡಿ ಅಂಗಡಿಗಳು ಮುಚ್ಚುವ ಹಂತಕ್ಕೆ ಬಂದಿವೆ. ಈ ಮೂಲಕ ಒಂದು ಭವ್ಯ ಪರಂಪರೆ ಕೊನೆಯಾಗುತ್ತಿದೆ. ಯಾಕೆ ಅಂತ ಹುಡುಕುತ್ತಾ ಹೊರಟರೆ, ಸಿಗುವ ಉತ್ತರ ಡಿಜಿಟಲ್ ಮಾರ್ಕೆಟ್.
ಮೊದಲು ಗ್ರಾಮಫೋನ್ ತಟ್ಟೆ ಇತ್ತು. ನಂತರ ವಿನೈಲ್ ರೆಕಾರ್ಡ್ ಬಂತು. ಕ್ರಮೇಣ ಕ್ಯಾಸೆಟ್, ಡಿಜಿಟಲ್ ಕ್ಯಾಸೆಟ್, ಸಿಡಿ … ಎಲ್ಲವೂ ಬಂದವು. ಕ್ಯಾಸೆಟ್ ಕಾಲದವರೆಗೂ ಎಲ್ಲವೂ ಚೆನ್ನಾಗಿತ್ತು. ಯಾವಾಗ ಸಿಡಿಗಳು ಬಂದು, ಅದರಲ್ಲೂ ಒಂದೊಂದು ಸಿಡಿಯಲ್ಲಿ 700 ಎಂಬಿಯಷ್ಟು ತುಂಬಬಹುದು ಎಂದಾಯಿತೋ, ಆಗ ಮೊದಲ ಪೆಟ್ಟು ಬಿತ್ತು. ಕಡಿಮೆ ಸೈಜ್ ಇರುವ ಎಂಪಿಥ್ರಿà ಹಾಡುಗಳು ಬಂದವು. ಒಂದು ಸಿಡಿಯಲ್ಲಿ ನೂರಾರು ಹಾಡುಗಳನ್ನು ತುಂಬುವುದು ಸುಲಭವಾಯಿತು.
ಯಾವಾಗ ಮೊಬೈಲ್ ಮತ್ತು ಪೆನ್‌ಡ್ರೈವ್‌ಗಳ ಕೆಪ್ಯಾಸಿಟಿ ಹೆಚ್ಚಾಯಿತೋ, ಯಾವಾಗ ಇಂಟರ್‌ನೆಟ್‌ನಿಂದ ಡೌನ್‌ಲೋಡ್ ಮಾಡುವ ಪದ್ಧತಿ ಶುರುವಾಯಿತೋ … ಅಲ್ಲಿಂದ ಸಂಗೀತದ ಮಾರುಕಟ್ಟೆಗೆ ದೊಡ್ಡ ಏಟು ಬಿದ್ದಿತು ಎಂದರೆ ತಪ್ಪಿಲ್ಲ. ಈಗ ಕ್ಯಾಸೆಟ್ಟುಗಳು ಬಿಡಿ, ಸಿಡಿಗಳಿಗೇ ಬೆಲೆಯಿಲ್ಲ. ಮೊದಲಿನಂತೆ ಯಾರೂ ಸಿಡಿಗಳನ್ನು ಕೊಳ್ಳುವುದೂ ಇಲ್ಲ. ಹಾಗಾಗಿ ರಾಜ್ಯಾದ್ಯಂತ ಒಂದೊಂದೇ ಕ್ಯಾಸೆಟ್ ಮತ್ತು ಸಿಡಿ ಅಂಗಡಿಗಳು ಮುಚ್ಚುತ್ತಿವೆ. ಇನ್ನು ಸಿಡಿ ಬಿಡುಗಡೆ ಸಮಾರಂಭಗಳು ದೊಡ್ಡದಾಗಿ ನಡೆಯುತ್ತವಾದರೂ, ಅವೆಲ್ಲಾ ಎಷ್ಟೋ ಅಂಗಡಿಗಳಲ್ಲಿ ಸಿಗುವುದೇ ಇಲ್ಲ. ಸಮಾರಂಭಕ್ಕೆ ಬರುವ ಜನರಿಗಾಗಿ ಮತ್ತು ನಿರ್ಮಾಪಕರ ಖುಷಿಗಾಗಿ ಒಂದೈನೂರು ಅಥವಾ ಸಾವಿರ ಸಿಡಿಗಳನ್ನು ಹಾಕಿಸಿದರೆ ಅದೇ ಹೆಚ್ಚು ಎನ್ನುವಂತಹ ಪರಿಸ್ಥಿತಿ ಇದೆ.
ಒಂದು ಕಾಲದಲ್ಲಿ ಒಂದೊಂದು ಅಂಗಡಿಯಿಂದಲೇ ಎರಡೂ, ಮೂರು ಸಾವಿರ ಆರ್ಡರ್ ಬರೋದು ಎಂದು ನೆನಪಿಸಿಕೊಳ್ಳುತ್ತಾರೆ ಲಹರಿ ವೇಲು. “ಪ್ರತಿ ಜಿಲ್ಲೆಯಲ್ಲೂ ದೊಡ್ಡ ದೊಡ್ಡ ವಿತರಕರಿದ್ದರು. ಡಾ. ರಾಜಕುಮಾರ್, ವಿಷ್ಣವರ್ಧನ್, ರವಿಚಂದ್ರನ್ ಅವರ ಸಿನಿಮಾಗಳು ಬಂದರೆ ಹಬ್ಬ. ಎರಡು ಸಾವಿರ ಕ್ಯಾಸೆಟ್ ಕಳಿಸಿ, ಮೂರು ಸಾವಿರ ಕಳಿಸಿ ಎಂದು ಆರ್ಡರ್ ಕೊಡುತ್ತಿದ್ದರು. ಡಿಜಿಟಲ್ ಮಾರ್ಕೆಟ್ ಬಂದಿದ್ದೇ ಬಂದಿದ್ದು. ಎಲ್ಲವೂ ಬದಲಾಗಿ ಹೋಯಿತು. ಏನಿಲ್ಲ ಎಂದರೂ ಮೂರೂವರೆ ಸಾವಿರ ಅಂಗಡಿಗಳು ಮುಚ್ಚಿ ಹೋಗಿವೆ. ಬರೀ ಅಂಗಡಿಗಳಷ್ಟೇ ಅಲ್ಲ, ರಸ್ತೆಯಲ್ಲೂ ಒರಿಜಿನಲ್ ಕ್ಯಾಸೆಟ್ ಮಾರೋರು.
ಅದೆಲ್ಲದರಿಂದ ನಮ್ಮಂಥೋರ ಕಂಪೆನಿ ನಡೆಯೋದು. ಬೆಂಗಳೂರಿನ ಎಸ್.ಪಿ ರಸ್ತೆಯೊಂದರಲ್ಲೇ ನೂರಾರು ಅಂಗಡಿಗಳಿದ್ದವು. ಇನ್ನು ಬೆಂಗಳೂರಿನ ಎಲ್ಲಾ ಪ್ರದೇಶಗಳಲ್ಲೂ ದೊಡ್ಡ ದೊಡ್ಡ ಅಂಗಡಿಗಳಿದ್ದವು. ಅದನ್ನು ನಂಬಿ ಸಾವಿರಾರು ಜನ ಇದ್ದರು. ಈಗ ಅದೆಲ್ಲಾ ನೆನಪು ಅಷ್ಟೇ’ ಎನ್ನುತ್ತಾರೆ ವೇಲು.
ಬರೀ ಚಿತ್ರಗೀತೆಗಳಷ್ಟೇ ಅಲ್ಲ, ಭಾವಗೀತೆಗಳು, ಭಕ್ತಿಗೀತೆಗಳ ಕ್ಯಾಸೆಟ್‌ಗಳಿಗೆ ದೊಡ್ಡ ಮಟ್ಟದಲ್ಲಿ ಡಿಮ್ಯಾಂಡ್ ಇತ್ತು. ಅಶ್ವತ್ಥ್, ಡಾ. ವಿದ್ಯಾಭೂಷಣ, ಪುತ್ತೂರು ನರಸಿಂಹ ನಾಯಕ್ ಸೇರಿದಂತೆ ಹಲವು ಗಾಯಕರ ಕ್ಯಾಸೆಟ್‌ಗಳಿಗೆ ಬಹಳ ಬೇಡಿಕೆ ಇತ್ತು. ಮಾಸ್ಟರ್ ಹಿರಣ್ಣಯ್ಯ, ಧೀರೇಂದ್ರ ಗೋಪಾಲ್ ಅವರ ನಾಟಕಗಳಿಗೆ ದೊಡ್ಡ ಮಾರುಕಟ್ಟೆ ಇತ್ತು. ಇನ್ನು ಜಾನಪದ ಹಾಡುಗಳು, ಧಾರ್ಮಿಕ ಕ್ಷೇತ್ರದ ಹಾಡುಗಳ ಕ್ಯಾಸೆಟ್‌ಗಳಿಗೆ ದೊಡ್ಡ ಕೇಳುಗರ ವರ್ಗ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಒಂದು ಭಕ್ತಿಗೀತೆಯ ಸಿಡಿ ನೆನಪಿಗೆ ಬರುವುದಿಲ್ಲ. ಇನ್ನು ಭಾವಗೀತೆ ಸಿಡಿ ಬಿಡುಗಡೆಯ ಫೋಟೋ ನೋಡಿದ ಉದಾಹರಣೆ ಸಿಗುವುದಿಲ್ಲ. “ಒಂದು ತಿಂಗಳಿಗೆ ಐದಾರು ಭಕ್ತಿಗೀತೆಗಳು, ಜಾನಪದ ಗೀತೆಗಳು ಮತ್ತು ಭಾವಗೀತೆಗಳ ಕ್ಯಾಸೆಟ್‌ಗಳು ಬಿಡುಗಡೆ ಮಾಡಿದ ಉದಾಹರಣೆಯೂ ಇದೆ. ಈಗ ಐದು ತಿಂಗಳಿಗೆ ಒಂದೇ ಒಂದು ಬಿಡುಗಡೆ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಒಂದು ಕಾಲಕ್ಕೆ ಸಾವಿರಾರು ಬೇಸಿಕ್ ಹಾಡುಗಳನ್ನು ಹೊರತಂದ ಉದಾಹರಣೆ ಇದೆ. ಈಗ ಅದು ಸಾಧ್ಯವೇ ಇಲ್ಲ’ ಎನ್ನುತ್ತಾರೆ ವೇಲು.
ಬಹುಶಃ ಅಂಗಡಿಗಳಲ್ಲಿ ಕೊನೆಯದಾಗಿ ದೊಡ್ಡ ಮಟ್ಟದಲ್ಲಿ ಮಾರಾಟವಾಗಿದ್ದು ಎಂದರೆ ಅದು “ಮುಂಗಾರು ಮಳೆ’ ಚಿತ್ರದ ಹಾಡುಗಳ ಸಿಡಿಗಳೇ ಇರಬೇಕು. ಆ ನಂತರ ಸಿಡಿಗಳ ಮಾರಾಟ ಕಡಿಮೆಯಾಯಿತು. ಕ್ರಮೇಣ ಐದಾರು ಚಿತ್ರಗಳ ಹಾಡುಗಳ ಸಿಡಿಗಳು ಬಂದವು. ಎಂಪಿಥ್ರಿ ಬಂದ ಮೇಲಂತೂ ಒಂದು ಸಿಡಿಯಲ್ಲಿ ನೂರಕ್ಕಿಂತ ಹೆಚ್ಚು ಹಾಡುಗಳು ಸಿಕ್ಕವು. ಅಷ್ಟರಲ್ಲಾಗಲೇ ಕ್ಯಾಸೆಟ್‌ಗಳ ಯುಗ ಮುಗಿದು, ಅಂಗಡಿಗಳಲ್ಲಿ ಸಿಡಿಗಳು ಕಾಣಿಸಿಕೊಂಡವು. ಒಂದಷ್ಟು ವರ್ಷಗಳ ಕಾಲ ಸಿಡಿಗಳ ಬಜಾರು ನಡೆಯಬಹುದು ಎಂತಂದುಕೊಂಡರೆ ಪೈರಸಿ, ಇಂಟರ್‌ನೆಟ್, ಯೂಟ್ಯೂಬು, ಡೌನ್‌ಲೋಡು, ಟ್ರಾನ್ಸ್‌ಫರುÅ ಅಂತೆಲ್ಲಾ ಸೇರಿ ಡಿಜಿಟಲ್ ಮಾರ್ಕೆಟ್ ಹೆಮ್ಮರವಾಗಿ ಬೆಳೆದಿದ್ದರಿಂದ ಸಿಡಿಗಳ ಮಾರಾಟ ಕಡಿಮೆಯಾಯಿತು. ಯಾವಾಗ ಸಿಡಿಗಳೇ ಮಾರಾಟವೇ ಕಡಿಮೆಯಾಯಿತೋ, ಅಂಗಡಿ ಇಟ್ಟವರು ಏನು ಮಾಡಬೇಕು? ಅವರು ಗ್ರಾಹಕರಿಲ್ಲದೆ, ಮಾರಾಟವಿಲ್ಲದೆ, ಬೇರೆ ದಾರಿ ಇಲ್ಲದೆ ಅಂಗಡಿಗಳನ್ನು ಮುಚ್ಚಿದರು. ಹಾಗಾಗಿ ಕ್ಯಾಸೆಟ್ ಮತ್ತು ಸಿಡಿಗಳ ಅಂಗಡಿಗಳು ಒಂದೊಂದೇ ಬಾಗಿಲು ಮುಚ್ಚತೊಡಗಿವೆ. ಸದ್ಯಕ್ಕೆ ಒಂದಿಷ್ಟು ಪುಸ್ತಕದಂಗಡಿಗಳಲ್ಲಿ ಸಿಡಿ ಮತ್ತು ಡಿವಿಡಿಗಳು ಸಿಗುವುದು ಬಿಟ್ಟರೆ, ಮಿಕ್ಕಂತೆ ಅದನ್ನೇ ಮಾರುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ಮತ್ತೆ ಮುಂದೊಂದು ದಿನ ಕ್ಯಾಸೆಟ್ ಮತ್ತು ಸಿಡಿಗಳ ಕಾಲ ವಾಪಸ್ಸು ಬರಬಹುದು ಎಂದು ಆಶಾವಾದ ವ್ಯಕ್ತಪಡಿಸುತ್ತಾರೆ ವೇಲು. “ರೇಡಿಯೋ ಕಥೆ ಮುಗಿದೇ ಹೋಯಿತು ಎನ್ನುವ ಕಾಲವಿತ್ತು. ರೇಡಿಯೋಗೆ ಏನೂ ಆಗಲಿಲ್ಲ. ಅದೇ ತರಹ ಕ್ಯಾಸೆಟ್ ಮತ್ತು ಸಿಡಿಗಳ ಕಾಲ ವಾಪಸ್ಸು ಬರಬಹುದು ಎಂಬ ಆಶಾವಾದ ನನಗಂತೂ ಇದೆ. ಅಮೇರಿಕಾದಲ್ಲಿ ಮತ್ತೆ ಕ್ಯಾಸೆಟ್ ಕಾಲ ಶುರುವಾಗಲಿದೆ ಎಂಬ ಮಾತಿದೆ. ಮುಂದೊಂದು ದಿನ ಇಲ್ಲೂ ಗತಕಾಲ ಮರುಕಳಿಸಬಹುದು’ ಎನ್ನುತ್ತಾರೆ ಲಹರಿ ವೇಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.