ಸ್ಟಾರ್ ಇಲ್ಲ, ಕಥೆಯೇ ಎಲ್ಲಾ
Team Udayavani, Jun 29, 2018, 6:00 AM IST
ಪ್ರಯೋಗ, ಪ್ರಯತ್ನ ಮತ್ತು ಪ್ರತಿಫಲ…
-ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಕೇಳಿಬರುತ್ತಿರುವ ಮಾತಿದು. ಗಾಂಧಿನಗರ ಈಗ ಗರಿಗೆದರಿದೆ. ಇಲ್ಲಿ ಸೋಲು-ಗೆಲುವಿನ
ಲೆಕ್ಕಾಚಾರವನ್ನು ಬದಿಗಿಟ್ಟು ನೋಡಿದರೆ, ಕ್ರಿಯಾಶೀಲವುಳ್ಳ ಉತ್ಸಾಹಿ ಯುವಕರೇ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ಹೊಸತನದ ಕಥೆಗಳ ಮೂಲಕ ಗುರುತಿಸಿಕೊಳ್ಳುತ್ತಿರುವುದು ವಿಶೇಷ. ಕಳೆದ ಎರಡು ವರ್ಷಗಳಿಂದೀಚೆಗೆ ಕನ್ನಡ ಚಿತ್ರರಂಗವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲಿ ಕಮರ್ಷಿಯಲ್ ಚಿತ್ರಗಳಿಗಿಂತ ಪ್ರಯೋಗಾತ್ಮಕ ಚಿತ್ರಗಳು ಸುದ್ದಿಯಾಗಿದ್ದು ಹೆಚ್ಚು. ಕಮರ್ಷಿಯಲ್ ಮತ್ತು ಕಲಾತ್ಮಕ ನಡುವಿನ ಚಿತ್ರಗಳ ಸಂಖ್ಯೆ ಹೆಚ್ಚುವ ಮೂಲಕ ತಕ್ಕಮಟ್ಟಿಗೆ ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತಾರವಾಗಿರುವುದು ಸುಳ್ಳಲ್ಲ. ಅದೆಷ್ಟೋ ಪ್ರಯೋಗಾತ್ಮಕ ಚಿತ್ರಗಳು ಭರವಸೆ ಮೂಡಿಸಿರುವುದಂತೂ ಹೌದು. ಆ ಭರವಸೆ ಹೊತ್ತು ಬಂದ ಅನೇಕ ಹೊಸಬರು ಅದೇ ಹಾದಿಯಲ್ಲಿ ಸಾಗಿದ್ದಾರೆ. ಈಗಂತೂ ನೋಡುಗನ ನೋಟ ಬದಲಾಗಿದೆ. ಆ ಬದಲಾವಣೆಗೆ ಸಾಕ್ಷಿ ಹೊಸಬಗೆಯ ಕಥೆಗಳು ಮತ್ತು ಹೊಸಬರ ಆಲೋಚನೆಗಳು. ಪ್ರೇಕ್ಷಕನ ನಾಡಿಮಿಡಿತ ಅರಿಯೋದು ಕಷ್ಟ. ಆದರೆ, ಪ್ರೇಕ್ಷಕನಿಗೆ ಬೇಕಿರೋದು ಹೊಸತು. ಅದನ್ನು ಕೊಟ್ಟರೆ ಖಂಡಿತ ಸ್ವೀಕರಿಸುತ್ತಾನೆಂಬ ಅದಮ್ಯ ವಿಶ್ವಾಸ ಯುವ ನಿರ್ದೇಶಕರದ್ದು. ಆ ನಿಟ್ಟಿನಲ್ಲೇ ಈಗ ಕನ್ನಡದಲ್ಲಿ ಅಂತಹ ಪ್ರಯೋಗ ಹೆಚ್ಚಾಗುತ್ತಿದೆ. ಕನ್ನಡ ಚಿತ್ರರಂಗದ ಮೈದಾನದಲ್ಲೀಗ ಹೊಸಬರ ಕಲರವ ಕೇಳಿಬರುತ್ತಿದೆ. ನೋಡುಗನ ಮನಸ್ಥಿತಿಗೆ ತಕ್ಕ ಪ್ರಯೋಗ ಆಗುತ್ತಿರುವುದರಿಂದಲೇ, ಎಲ್ಲರೂ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಅಷ್ಟಕ್ಕೂ ಇಂಥದ್ದೊಂದು
ಬೆಳವಣಿಗೆಗೆ ಕಾರಣ ಹಲವಾರಿದ್ದರೂ, ಹೆಚ್ಚು ಪ್ರಭಾವ ಬೀರಿದ್ದು ಮಾತ್ರ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’.
ಹೌದು, ಈ ಒಂದೇ ಸಿನಿಮಾ ನೋಡುಗನ ದಿಕ್ಕು ಬದಲಿಸಿತು ಅಂದರೆ ತಪ್ಪಲ್ಲ. ಸ್ಟಾರ್ ನಟರ ಪಂಚಿಂಗ್ ಡೈಲಾಗು, ರಿಸ್ಕೀ ಸ್ಟಂಟು, ನಾಯಕಿಯರ ಕಣ್‌ಕುಕ್ಕುವ ಗ್ಲಾಮರು ನೋಡಿದ್ದ ಪ್ರೇಕ್ಷಕನಿಗೆ ಹೊಸ ಬಗೆಯ ಚಿತ್ರಣ ಕಟ್ಟಿಕೊಡುವ ಮೂಲಕ ಭಾವನೆಗಳಿಗೆ, ಭಾವುಕ ಮನಸ್ಸುಗಳಿಗೆ ಸಾಕ್ಷಿ ಎಂಬಂತಾಯಿತು. ಹಾಗೆ ಆಗಿದ್ದೇ ತಡ, ಕನ್ನಡದಲ್ಲಿ ಅಂಥದ್ದೊಂದು ಹೊಸ ಪ್ರಯೋಗದ ಬಾಗಿಲೇ ತೆರೆದುಕೊಳ್ಳುತ್ತಾ ಹೋಯ್ತು. ಕಳೆದ ಎರಡು ವರ್ಷಗಳಲ್ಲಿ ಬರೋಬ್ಬರಿ 25 ಕ್ಕೂ ಹೆಚ್ಚು ವಿಭಿನ್ನ ಪ್ರಯತ್ನ ಮತ್ತು ಪ್ರಯೋಗದ ಚಿತ್ರಗಳೇ ಪ್ರೇಕ್ಷಕನ ಎದುರಾಗಿವೆ. ಯಾವುದೇ ಕಮರ್ಷಿಯಲ್ ಅಂಶಗಳಿರದ, ಸ್ಟಾರ್ ನಟರ ಹಂಗಿಲ್ಲದ ಕೇವಲ ಕಥೆಯೇ ಜೀವಾಳ ಅಂದುಕೊಂಡು ಬಂದವರೇ ಹೆಚ್ಚು. ಹಾಗೆ ಬಂದವರ ಚಿತ್ರಗಳ ಶೀರ್ಷಿಕೆಗಳು ಕೂಡ ಗಮನಸೆಳೆಯುವುದರ ಜೊತೆಗೆ ನೋಡುಗನ ಮನವೊಲಿಸುವಲ್ಲೂ ಯಶಸ್ವಿಯಾಗಿವೆ ಅಂದರೆ ನಂಬಲೇಬೇಕು.
ಅಂಥದ್ದೊಂದು ಹೊಸ ಟ್ರೆಂಡ್‌ಗೆ ಕಾರಣವಾಗಿದ್ದು “ಗೋಧಿ ಬಣ್ಣ ಸಾಧಾರಣ ಮೈಕಟ್ಟು’. ಇಲ್ಲಿ ಮರಸುತ್ತುವ ಹಾಡಾಗಲಿ, ಸಾಹಸಮಯ ದೃಶ್ಯಗಳಾಗಲಿ ಇರಲಿಲ್ಲ. ಭಾವನಾತ್ಮಕ ಅಂಶಗಳು, ಭಾವುಕತೆಯನ್ನು ಹೆಚ್ಚಿಸುವ ತಾಕತ್ತಿನಿಂದಲೇ ಅದೊಂದು ಹೊಸತನದ ಚಿತ್ರವಾಗಿ ಕಾಣಿಸಿತು. ಇಲ್ಲಿ ಕಥೆ ಇತ್ತು. ಹೇಳುವ ವಿಧಾನ ಸರಿಯಾಗಿತ್ತು. ತೋರಿಸುವ ರೀತಿಯೂ ಚೆನ್ನಾಗಿತ್ತು. ನೋಡುಗನ ಎದೆಯೂ ಭಾರವಾಗಿತ್ತು. ಹೀಗೂ ನೋಡುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ ಆ ಪ್ರಯತ್ನ ಸಾರ್ಥಕ ಅನಿಸಿತು.
ಅಲ್ಲಿಂದ ಕ್ರಮೇಣ ಈ ತರಹದ ಚಿತ್ರಗಳು ಶರುವಾದವು. “ರಾಮಾ ರಾಮಾ ರೇ’, “ಒಂದು ಮೊಟ್ಟೆಯ ಕಥೆ’, “ದಯವಿಟ್ಟು ಗಮನಿಸಿ’, “ಕೆಂಪಿರ್ವೆ’, “ಇದೀಗ ಬಂದ ಸುದ್ದಿ’, “ಹೀಗೊಂದು ದಿನ’, “ಅಮರಾವತಿ’, “ಕಾನೂರಾಯಣ’, “ಉರ್ವಿ’, “ಹೆಬ್ಬೆಟ್ ರಾಮಕ್ಕ’, “ಶುದ್ಧಿ’, “ಹೊಂಬಣ್ಣ’, “ಹಂಬಲ್ ಪೊಲಿಟಿಶಿಯನ್ ನೋಗ್‌ರಾಜ್’, “ಗುಳುr’ ಸೇರಿದಂತೆ ಇನ್ನೂ ಕೆಲವು ಆಕರ್ಷಕ ಶೀರ್ಷಿಕೆ ಹೊತ್ತು ಬಂದರೂ, ಕಮರ್ಷಿಯಲ್ ಆಗಿ ಗೆಲ್ಲದೇ ಹೋದರೂ, ನೋಡುಗರ ಮನಸ್ಸನ್ನು ಗೆದ್ದಿದ್ದು ನಿಜ. ಹೊಸಬರ ಆಲೋಚನೆಗೆ ಜಯ ಸಿಕ್ಕರೂ ಚಿತ್ರರಂಗಕ್ಕೆ ಲಾಭವೇನು? ಈ ಪ್ರಶ್ನೆ ಸಹಜ. ಆದರೆ, ಈ ರೀತಿಯ ಹೊಸ ಆಲೋಚನೆಗಳಿಂದ ಚಿತ್ರರಂಗದ ವೇಗ ಇನ್ನಷ್ಟು ಹೆಚ್ಚಾಗುತ್ತೆ ಎಂಬುದು ಸಿನಿಪಂಡಿತರ ಅಭಿಪ್ರಾಯ. ಅದರಲ್ಲೂ, ಕಮರ್ಷಿಯಲ್ ಚಿತ್ರಗಳೇ ಚಿತ್ರರಂಗದ ಮಾರುಕಟ್ಟೆಯನ್ನು ವಿಸ್ತರಿಸುತ್ತವೆ ಅನ್ನವುದು ಮೂರ್ಖತನ. ಅದೆಷ್ಟೋ ಕಮರ್ಷಿಯಲ್ ಚಿತ್ರಗಳಿಗೆ ಬಂಡವಾಳವೇ ಹಿಂದಿರುಗಿಲ್ಲ. ಆದರೆ, ಇಂತಹ ಹೊಸಬರ ಹೊಸ ಕಲ್ಪನೆಗಳ ಚಿತ್ರಗಳು ಹಣ ಗಳಿಸದಿದ್ದರೂ, ಹೆಸರಾಗಿವೆ. ಈ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗದಿದ್ದರೂ, ಡಿಜಿಟಲ್ ತಂತ್ರಜ್ಞಾನದ ಬೇರೆ ಬೇರೆ ವೇದಿಕೆಗಳ ಮೂಲಕ ಒಂದಿಷ್ಟು ದುಡ್ಡು ಮಾಡುವುದರ ಜೊತೆಗೆ, ಒಂದಿಷ್ಟು ಜನರನ್ನೂ ತಲುಪಿವೆ. ಅದೇ ಕಾರಣಕ್ಕೆ ಬಹುತೇಕರು ಈಗ ಹೊಸ ಕಥೆಗಳ, ಹೊಸಬರ ಕಲ್ಪನೆಗಳ ಹಿಂದೆ ನಿಂತಿದ್ದಾರೆ.
ಇಲ್ಲಿ ಹೆಸರಿಸಿರುವ ಚಿತ್ರಗಳಲ್ಲಿ ಯಾವುದೇ ಸ್ಟಾರ್‌ಗಳಿಲ್ಲ. ಆದರೆ, ಸ್ಟಾರ್ ರೇಂಜ್‌ಗಿನ ಕಥೆಗಳಿವೆ. ಹೊಸ ಪ್ರಯತ್ನ ಮೈತುಂಬಿದೆ. ಹಣ ಬಂತೋ ಇಲ್ಲವೋ ಎರಡನೇ ಮಾತು. ಅವುಗಳು ಪರಿಣಾಮಕಾರಿ ಎನಿಸಿಕೊಂಡವೋ ಇಲ್ಲವೋ ಅದು ಬೇಡ. ಆದರೆ, ಕನ್ನಡದ ಮಟ್ಟಿಗೆ ಹೆಸರುಳಿಸಿಕೊಂಡ ಚಿತ್ರಗಳ ಸಾಲಿಗೆ ಸೇರಿದಂತೂ ಹೌದು. ಆ ಪ್ರಯತ್ನದ ಹಾದಿಯಲ್ಲೇ ಈಗ ಒಂದಷ್ಟು ಚಿತ್ರಗಳು ಹುಟ್ಟಿಕೊಳ್ಳುತ್ತಿವೆ. ಕೆಲವು ಬಿಡುಗಡೆಯ ಸಾಲಲ್ಲೂ ನಿಂತಿವೆ.
ಮುಂದಿನ ದಿನಗಳಲ್ಲಿ ಒಂದಷ್ಟು ನಿರೀಕ್ಷೆ ಮತ್ತು ಕುತೂಹಲ ಹುಟ್ಟಿಸಿರುವ “ಕವಲುದಾರಿ’, “ತುರ್ತು ನಿರ್ಗಮನ’, “ಕಳ್‌ಬೆಟ್ಟದ ದರೋಡೆಕೋರರು’, “ನಿಧಾನವಾಗಿ ಚಲಿಸಿ’, “ಕನ್ನಡಕ್ಕಾಗಿ ಒಂದನ್ನು ಒತ್ತಿ’, “ಒಂದು ದಿನ ಒಂದು ಕ್ಷಣ’ ಸೇರಿದಂತೆ ಅನೇಕ ಹೊಸಬಗೆಯ ಚಿತ್ರಗಳು ಪ್ರೇಕ್ಷಕನ ಮುಂದೆ ಬರಲು ಸಜ್ಜಾಗುತ್ತಿವೆ. ಸ್ಟಾರ್‌ಗಳ ನಡುವೆ, ಕಮರ್ಷಿಯಲ್ ಚಿತ್ರಗಳ ಮಧ್ಯೆ ನಮಗೊಂದು ಚಾನ್ಸ್ ಕೊಡಿ ಎಂಬಂತೆ ದಾರಿ ಮಾಡಿಕೊಂಡು ಬರುವ ಹೊಸಬರು, ಸದ್ದಿಲ್ಲದೆಯೇ ಸುದ್ದಿಯಾಗುತ್ತಿದ್ದಾರೆ. ವಿಪರ್ಯಾಸವೆಂದರೆ, ಚಿತ್ರಮಂದಿರದಲ್ಲಿ ಬಹುಕಾಲ ಉಳಿಯೋಲ್ಲ ಎಂಬ ಸತ್ಯವನ್ನು ಎಲ್ಲರೂ ನಂಬಲೇಬೇಕು.
ಅಲ್ಲಿನ ಸ್ಟಾರ್‌ಗಳಂತೆ ಇಲ್ಲೂ ಮನಸ್ಸು ಮಾಡ್ಬೇಕು…: ಇತ್ತೀಚೆಗೆ ಸೈಲೆಂಟ್ ಆಗಿ ಬಂದು ಜೋರು ಸೌಂಡು ಮಾಡಿದ “ಗುಳುr’ ಚಿತ್ರದ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಹೇಳುವಂತೆ, “ಹೊಸಬರು ಸಿನಿಮಾ ಮಾಡಿದಾಗ ನಿರೀಕ್ಷೆ ಇರಲ್ಲ. ಸ್ಟಾರ್ ಸಿನಿಮಾ ಮಾಡೋಕೆ ಹೊಸಬರಿಗೆ ಕಷ್ಟ. ಅದೇ ಹೊಸತಂಡ ಕಟ್ಟಿಕೊಂಡರೆ ತನ್ನ ಕಲ್ಪನೆಯ ಪಾತ್ರಕ್ಕೊಂದು ಹೊಸ ರೂಪ ಕೊಡಬಹುದು. ತುಂಬ ಫ್ರೀಡಂನಿಂದಲೇ ಕೆಲಸ ಮಾಡಬಹುದು. ಆರಂಭದಲ್ಲಿ ಹೊಸತಂಡ ಕಟ್ಟಿ ಸಿನಿಮಾ ಮಾಡೋದು ಕಷ್ಟವೇ. ಅದರಲ್ಲೂ ಚಿತ್ರಮಂದಿರ ತಲುಪಿಸುವುದು ಇನ್ನೂ ಕಷ್ಟ. ಆದರೆ, ಪ್ರೇಕ್ಷಕನಿಗೆ ಹೊಸಬರ ಕಂಟೆಂಟ್ ಇಷ್ಟವಾದರೆ ಮಾತ್ರ ಆ ಚಿತ್ರಕ್ಕೆ ಹಾಗೂ ಹೊಸಬರ ಪ್ರಯತ್ನಕ್ಕೆ ಪ್ರತಿಫಲ. ಇಲ್ಲವಾದರೆ ಇಲ್ಲ. ಹೊಸಬರ ಹೊಸ ಆಲೋಚನೆವುಳ್ಳ ಚಿತ್ರಕ್ಕೆ ಎಷ್ಟೇ ಒಳ್ಳೆಯ ವಿಮರ್ಶೆ ಬಂದರೂ, ಜನ ಬರಬೇಕು. ಬರುವ ಹೊತ್ತಿಗೆ ಆ ಚಿತ್ರವೇ ಇರಲ್ಲ. ಇನ್ನು ವ್ಯಾಪಾರ ವಹಿವಾಟು ಕಥೆ ಅಷ್ಟೇ. ಎಲ್ಲೋ ಒಂದೊಂದು ಹೊಸತನದ ಚಿತ್ರಗಳು ಗಟ್ಟಿಯಾಗುತ್ತವೆ. ನಮ್ಮಂತಹ ಹೊಸಬರು, ಸ್ಟಾರ್ ಇಲ್ಲದೆ, ಕಥೆಯನ್ನೇ ನಂಬಿಕೊಂಡು ಹೊಸಬರ ಜೊತೆ ಕೆಲಸ ಮಾಡೋದು ದೊಡ್ಡ ಟಾಸ್ಕ್. ನಮ್ಮ ಕಲ್ಪನೆಗೆ ಸಾಥ್ ಕೊಡುವ, ನಮ್ಮನ್ನು ಅರ್ಥ ಮಾಡಿಕೊಳ್ಳುವ ನಿರ್ಮಾಪಕರೂ ಸಿಗೋದು ಕಷ್ಟ. ಹೊಸಬರಿಗೆ ಮೊದಲು ಏನು, ಹೇಳಬೇಕು, ಹೇಗೆ ಹೇಳಬೇಕು, ಹೇಗೆ ತೋರಿಸಬೇಕು ಎಂಬ ಕ್ಲಾರಿಟಿ ಇರಬೇಕು. ನಿರ್ಮಾಪಕರನ್ನು ನಂಬಿಸುವುದು ಅಷ್ಟೇ ಸವಾಲಿನ ಕೆಲಸವೂ ಹೌದು. ಕಥೆ ಚೆನ್ನಾಗಿ ಹೇಳಬಹುದು. ಆದರೆ, ಹೇಳಿದ್ದನ್ನು ಅಷ್ಟೇ ಚೆನ್ನಾಗಿ ಸ್ಕ್ರೀನ್‌ಮೇಲೆ ತರುತ್ತಾನಾ ಎಂಬ ಅನುಮಾನ ಕೂಡ ನಿರ್ಮಾಪಕರಿಗಿರುತ್ತೆ. ಅದನ್ನೂ ದಾಟಿ, ಒಂದೊಳ್ಳೆಯ ಚಿತ್ರ ಕಟ್ಟಿಕೊಡುವ ಗೆಲುವಿನ ಸವಾಲೇ ಹೊಸ ನಿರ್ದೇಶಕನ ಭವ್ಯ ಭವಿಷ್ಯ ಬರೆಯುತ್ತೆ. ಹೊಸಬರ ಕಥೆ ಒಪ್ಪಿ, ಚಿತ್ರ ಮಾಡೋಕೆ ಸ್ಟಾರ್‌ಗಳು ಮುಂದಾಗಲ್ಲ. ಕಾರಣ, ಅವರ ಫ್ಯಾನ್ಸ್‌ಗೆ ಇಷ್ಟ ಆಗುತ್ತೋ ಇಲ್ಲವೋ ಎಂಬ ಭಯ, ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಆತಂಕ. ಆದರೆ, ಬೇರೆ ಭಾಷೆಯಲ್ಲಿ ಸ್ಟಾರ್‌ಗಳು ಪ್ರಯೋಗಕ್ಕಿಳಿಯುತ್ತಿದ್ದಾರೆ. ಗೆಲುವನ್ನೂ ಕಾಣುತ್ತಿದ್ದಾರೆ. ಆದರೆ, ಕನ್ನಡದಲ್ಲೇಕೆ ಅಂತಹ ಪ್ರಯೋಗಕ್ಕಿಳಿಯುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಇಲ್ಲಿ ಸ್ಟಾರ್ ಇದ್ದರೆ ಚಿತ್ರ ಓಡುತ್ತೆ ಎಂಬುದು ಎಷ್ಟು ನಿಜವೋ ಗೊತ್ತಿಲ್ಲ. ಆದರೆ, ಒಳ್ಳೆಯ ಕಂಟೆಂಟ್ ಇರುವ ಚಿತ್ರ ಮಾಡಿದರೆ, ಖಂಡಿತ ಒಪ್ಪುತ್ತಾರೆ. ಇಲ್ಲಿ ಕಮರ್ಷಿಯಲ್ ಚಿತ್ರಗಳ ಜೊತೆ ಈ ರೀತಿಯ ಹೊಸಬರ ಬ್ರಿಡ್ಜ್ ಚಿತ್ರಗಳೂ ಜೊತೆ ಜೊತೆಗೆ ಬಂದರೆ ಇಂಡಸ್ಟ್ರಿಯ ಬೆಳವಣಿಗೆಗೂ ಪೂರಕ’ ಎನ್ನುತ್ತಾರೆ ಜನಾರ್ದನ್ ಚಿಕ್ಕಣ್ಣ.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.