ನುಗ್ಗೇಕಾಯಿ ಮಹಿಮೆ!
Team Udayavani, Mar 24, 2017, 3:45 AM IST
“ನುಗ್ಗೇಕಾಯಿ’ ಎಂಬ ಸಿನಿಮಾವೊಂದು ತಯಾರಾಗುತ್ತಿರೋದು ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಚಿತ್ರತಂಡ ಸೇರಿಕೊಂಡು ಆಡಿಯೋ ಬಿಡುಗಡೆ ಮಾಡಿ ಖುಷಿಪಟ್ಟಿತು. ಈ ಹಿಂದೆ “ಸೈಲೆನ್ಸ್’, “ತಲೆಬಾಚೊಳ್ಳಿ ಪೌಡರ್ ಹಾಕ್ಕೊಳ್ಳಿ’ ಚಿತ್ರಗಳನ್ನು ನಿರ್ದೇಶಿಸಿರುವ ಎ. ವೇಣುಗೋಪಾಲ್ ಈ ಚಿತ್ರದ ನಿರ್ದೇಶಕರು. ಪ್ರೀತಂ ಎಸ್.ಹೆಗ್ಡೆ ನಿರ್ಮಾಣದ ಈ ಸಿನಿಮಾದಲ್ಲಿ ಮಧುಸೂದನ್ ನಾಯಕರಾಗಿ ನಟಿಸಿದ್ದಾರೆ. ಎಸ್ತಾರ್ ನರೋನ್ಹಾ ಹಾಗೂ ಕ್ರಿಸ್ಟಿನಾ ಜಾಯ್ ಈ ಚಿತ್ರದ ನಾಯಕಿಯರು.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ವೇಣುಗೋಪಾಲ್, ಇಂದಿನ ಯುವಕರು ಸೋಷಿಯಲ್ ಮೀಡಿಯಾಗಳಿಂದ ಹೇಗೆ ಹಾಳಾಗುತ್ತಾರೆ ಎಂಬುದನ್ನು ಚಿತ್ರದಲ್ಲಿ ವಿವರಿಸಲಾಗಿದೆ. ಈ ಮೂಲಕ ಚಿತ್ರದಲ್ಲೊಂದು ಸಂದೇಶ ಕೂಡಾ ಕೊಟ್ಟಿದ್ದೇವೆ ಎಂದರು. ಇನ್ನು ನಿರ್ಮಾಪಕರ ಸಿನಿಮಾ ಪ್ರೀತಿಯನ್ನು ಹೊಗಳಲು ವೇಣುಗೋಪಾಲ್ ಮರೆಯಲಿಲ್ಲ. “ನಿರ್ಮಾಪಕರಿಗೆ ಸಿನಿಮಾ ಮೇಲೆ ತಂಬಾ ಪ್ರೀತಿಯಿದೆ. ಅವರು ಎಷ್ಟು ಶ್ರಮಪಟ್ಟಿ¨ªಾರೆಂಬುದು ಒಂದೇ ಹಂತದಲ್ಲಿ ಇಡೀ ಚಿತ್ರವನ್ನು ಮುಗಿಸಿರುವುದರಲ್ಲೇ ಗೊತ್ತಾಗುತ್ತದೆ. ನಿರ್ಮಾಪಕರು ಸಿನಿಮಾ ನೋಡಿ ಖುಷಿಪಟ್ಟರು. ಅವರಿಗೆ ಸಿನಿಮಾ ಇಷ್ಟವಾದ ತೃಪ್ತಿ ನನಗಿದೆ’ ಎಂದರು.
ನಿರ್ಮಾಪಕ ಪ್ರೀತ್ ಹೆಗ್ಡೆ ಕೂಡಾ ಖುಷಿಯಾಗಿದ್ದರು. “ನುಗ್ಗೆಕಾಯಿ ಎನ್ನವುದು ಬರೀ ತರಕಾರಿಯಾಗಿ ಉಳಿಯಬಾರದು. ಅದು ಸಿನಿಮಾದ ಶೀರ್ಷಿಕೆಯಾಗಬೇಕೆಂಬ ಕಾರಣಕ್ಕೆ ಚಿತ್ರಕ್ಕೆ ಆ ಟೈಟಲ್ ಇಟ್ಟಿದ್ದು, ಈಗ ಅದೇ ಚಿತ್ರಕ್ಕೀಗ ಪ್ಲಸ್ ಆಗಿದೆ. ಉತ್ತಮ ಪ್ರಚಾರ ಪಡೆದುಕೊಂಡಿದೆ’ ಎಂದು ಖುಷಿಯಿಂದ ಹೇಳಿಕೊಂಡರು. ನಾಯಕ ಮಧುಸೂದನ್ ಇಲ್ಲಿ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರಂತೆ. 20 ರಿಂದ 35 ವರ್ಷಗಳ ಆತನ ಜೀವನದ ಪಯಣ ಏನೆಲ್ಲ ತಿರುವು ಪಡೆಯುತ್ತದೆ ಎನ್ನುವುದೇ ಈ ಚಿತ್ರದ ಕಥೆ ಎಂದರು.
ನಾಯಕಿ ಎಸ್ತಾರ್ ನರೋನ್ಹಾ ಇಲ್ಲಿವರೆಗೆ ಅನೇಕ ಸಿನಿಮಾಗಳಲ್ಲಿ ನಟಿಸಿದರೂ “ನುಗ್ಗೇಕಾಯಿ’ಯಲ್ಲಿ ಸಿಕ್ಕಂತಹ ಪಾತ್ರ ಸಿಕ್ಕಿರಲಿಲ್ಲವಂತೆ. ಇಲ್ಲಿ ಅವರು ಹಳ್ಳಿಯ ಒಬ್ಬ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಚಿತ್ರದಲ್ಲಿ ಸುಚೇಂದ್ರ ಪ್ರಸಾದ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಸುರೇಶ್ ಅವರ ಸಂಗೀತ, ಸೂರ್ಯಕಾಂತ ಹೊನ್ನಳ್ಳಿ ಛಾಯಾಗ್ರಹಣವಿದೆ. ಮಂಗಳೂರು, ಗೋವಾ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.