ಗುರು ಕಾಣಿಕೆ
Team Udayavani, Sep 28, 2018, 6:00 AM IST
ಒಬ್ಬರು ಕನ್ನಡದ ಹಿರಿಯ ನಿರ್ದೇಶಕರು. ವಯಸ್ಸು 86. ಹಲವು ಯಶಸ್ವಿ ಚಿತ್ರಗಳನ್ನು ಕೊಟ್ಟು, ಇನ್ನೊಂದು ಯಶಸ್ಸನ್ನು ನೋಡಲು ಕಾತುರರಾಗಿರುವವರು. ಇನ್ನೊಬ್ಬರು ಕನ್ನಡದ ಕಿರಿಯ ನಿರ್ದೇಶಕ. ವಯಸ್ಸು 26. ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟಿರುವ ಯುವ ಪ್ರತಿಭೆ. ಮುಂದೆ ಹಲವು ಒಳ್ಳೆಯ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಬೇಕೆಂಬ ಕನಸು ಕಂಡಿರುವವರು. ಅವರೇ ಭಗವಾನ್ ಮತ್ತು ಗುರುದತ್ ಗಾಣಿಗ. ಹಿರಿಯ ನಿರ್ದೇಶಕ ಭಗವಾನ್ ನಿರ್ದೇಶನದ “ಆಡುವ ಗೊಂಬೆ’ ಬಿಡುಗಡೆಯ ಹೊಸ್ತಿಲಿನಲ್ಲಿದ್ದರೆ, ಗುರುದತ್ ನಿರ್ದೇಶನದ ಚೊಚ್ಚಲ ಚಿತ್ರ “ಅಂಬಿ ನಿಂಗ್ ವಯಸ್ಸಾತೋ’ ನಿನ್ನೆ ತೆರೆಕಂಡಿದೆ. ಈ ಹಿರಿ-ಕಿರಿ ನಿರ್ದೇಶಕರು ತಮ್ಮ ಸಿನಿಮಾ ಬಗ್ಗೆ ಮಾತನಾಡಿದ್ದಾರೆ …
ಬಹುಶಃ ಇಂಥದ್ದೊಂದು ಅಪರೂಪದ ಅವಕಾಶ ಯಾರಿಗೂ ಸಿಗಲಿಕ್ಕಿಲ್ಲ. ಇಷ್ಟಕ್ಕೂ ಇಲ್ಲೀಗ ಹೇಳಹೊರಟಿರುವ ವಿಷಯ ಯುವ ನಿರ್ದೇಶಕ ಗುರುದತ್ ಗಾಣಿಗ ಅವರ ಬಗ್ಗೆ. ಯಾರಿವರು ಎಂಬ ಪ್ರಶ್ನೆ ಸಹಜ. “ಅಂಬಿ ನಿಂಗ್ ವಯಸ್ಸಾಯೊ¤à’ ಚಿತ್ರದ ನಿರ್ದೇಶಕರಿವರು. ವಯಸ್ಸು 26. ಈ ವಯಸ್ಸಲ್ಲಿ ನಿರ್ದೇಶನ ಮಾಡಿರುವುದು ಸುದ್ದಿಯಲ್ಲ. ಆದರೆ, ಯುವ ನಿರ್ದೇಶಕರಾಗಿ ಮೊದಲ ಬಾರಿಗೆ ಇಬ್ಬರು ಸ್ಟಾರ್‌ಗಳನ್ನು ನಿರ್ದೇಶಿಸಿರುವುದು ವಿಶೇಷ. ಅಂಬರೀಶ್ ಮತ್ತು ಸುದೀಪ್ ಅವರನ್ನು ಚೊಚ್ಚಲ ಚಿತ್ರದಲ್ಲೇ ನಿರ್ದೇಶಿಸುವ ಅವಕಾಶ ಸಿಕ್ಕ ಕುರಿತು ಗುರುದತ್ ಗಾಣಿಗ ಹೇಳುವುದಿಷ್ಟು…
“ಮೊದಲ ಸಲವೇ ದೊಡ್ಡ ಸ್ಟಾರ್ ನಟರನ್ನು ನಿರ್ದೇಶಿಸಿದ್ದು ಖುಷಿ ಕೊಟ್ಟಿದೆ. ಎಲ್ಲರಿಗೂ ಈ ರೀತಿಯ ಅವಕಾಶ ಸಿಗುವುದಿಲ್ಲ. ಅಂಬರೀಶ್ ಮತ್ತು ಸುದೀಪ್‌ರಂತಹ ಕಲಾವಿದರ ಜೊತೆ ಕೆಲಸ ಮಾಡುವ ಅದೃಷ್ಟ ನನ್ನ ಪಾಲಾಗಿದ್ದೇ ದೊಡ್ಡದು. ಮೊದಲ ಸಲವೇ ಒಳ್ಳೇ ಕಥೆ ಇರುವ, ಸ್ಟಾರ್ ಇರುವ ಚಿತ್ರ ನಿರ್ದೇಶಿಸಿದ್ದು ಸುವರ್ಣಾವಕಾಶ ಎಂದೇ ಭಾವಿಸುತ್ತೇನೆ.
ಅಂಬರೀಶ್, ಸುದೀಪ್ ಅವರಷ್ಟೇ ಅಲ್ಲ, ಚಿತ್ರದಲ್ಲಿ ಸುಹಾಸಿನಿ, ಶ್ರುತಿಹರಿಹರನ್ ಹೀಗೆ ದೊಡ್ಡ ಕಲಾವಿದರನ್ನೂ ನಿರ್ದೇಶಿಸಿದ್ದು, ಮೊದಲ ಸಲವೇ ದೊಡ್ಡ ಕ್ಯಾನ್ವಾಸ್, ಒಳ್ಳೇ ಬ್ಯಾನರ್ ಸಿಕ್ಕಿದ್ದು ವಿಶೇಷತೆಗಳಲ್ಲೊಂದು. ಸುಮಾರು ನಾಲ್ಕೈದು ಹಿಟ್ ಚಿತ್ರ ಕೊಟ್ಟ ನಂತರ ಕೆಲ ನಿರ್ದೇಶಕರಿಗೆ ಈ ರೀತಿಯ ಸ್ಟಾರ್ಗಳ ಚಿತ್ರ ನಿರ್ದೇಶಿಸುವ ಅವಕಾಶ ಸಿಗುತ್ತೆ. ನನಗೆ ಮೊದಲ ಬಾರಿಗೇ ಸಿಕ್ಕಿದ್ದನ್ನು ಪರಿಪೂರ್ಣವಾಗಿ ಬಳಸಿಕೊಂಡಿದ್ದೇನೆ’ ಎಂಬುದು ಗುರುದತ್ ಗಾಣಿಗ ಅವರ ಮಾತು.
ಯಾರಿಗೇ ಇರಲಿ, ಒಂದು ಚಿತ್ರದಲ್ಲಿ ಸಾಕಷ್ಟು ಅನುಭವ ಆಗದೇ ಇರದು. ಅಂತಹ ಮರೆಯದ ಅನುಭವ ಗುರುದತ್ ಗಾಣಿಗ ಅವರಿಗೂ ಆಗಿದೆ. ಅವರೇ ಹೇಳುವಂತೆ, “ಈ ಚಿತ್ರದ ಅನುಭವ ಅನನ್ಯ. ಚಿತ್ರದ ಪ್ರತಿ ಕ್ಷಣವೂ ಹೊಸ ಅನುಭವ ಕಟ್ಟಿಕೊಟ್ಟಿತು. ನನ್ನ ಬದುಕಿನುದ್ದಕ್ಕೂ ಅದನ್ನು ಮರೆಯಲು ಸಾಧ್ಯವಿಲ್ಲ. ನಾನು ತುಂಬ ಕಷ್ಟಪಟ್ಟು, ಎಲ್ಲಾ ಕೆಳಹಂತದಿಂದಲೂ ಕೆಲಸ ಮಾಡಿಕೊಂಡು ಬಂದವನು. ಅಸಿಸ್ಟೆಂಟ್ ಡೈರೆಕ್ಟರ್ ಅನ್ನೋದು ಜಾಬ್ ಅಲ್ಲ. ನಿರ್ದೇಶಕರ ಕನಸಿಗೆ ತಕ್ಕಂತೆ ಕೆಲಸ ಮಾಡೋದು. ನಾನು ಆ ಕೆಲಸ ಮಾಡಿಕೊಂಡು ಬಂದವನು. ಈಗ ನಿರ್ದೇಶಕ ಆಗಿದ್ದೇನೆ. ನನ್ನ ಕಲ್ಪನೆಗೆ ಬೇರೆಯವರು ಸಾಥ್ ಕೊಟ್ಟಿದ್ದರಿಂದ ಇಂಥದ್ದೊಂದು ಒಳ್ಳೆಯ ಸಿನಿಮಾ ಮಾಡಲು ಸಾಧ್ಯವಾಗಿದೆ. ಮೊದಲ ಸಲ, ಅಂಬರೀಶ್ ಅವರಿಗೆ ಆ್ಯಕ್ಷನ್ ಹೇಳಿದ ಕ್ಷಣವಂತೂ ನನ್ನ ಜೀವಮಾನ ಸಾಧನೆ ಎಂದೇ ಬಣ್ಣಿಸುತ್ತೇನೆ. ಮೊದಲ ನೋಟ, ಮೊದಲ ಲವ್ವು, ಮೊದಲ ಕೆಲಸ, ಮೊದಲ ಸಂಬಳ ಹೀಗೆ ಎಲ್ಲಾ ಮೊದಲುಗಳು ನೆನಪಲ್ಲಿರುತ್ತವೆಯೋ ಹಾಗೆಯೇ, ನಾನು ಮೊದಲ ಸಲ ನಿರ್ದೇಶನ ಮಾಡಿದ ಈ ಚಿತ್ರ, ಸ್ಟಾರ್ ಗಳಿಗೆ ಮೊದಲ ಸಲ ಆ್ಯಕ್ಷನ್ ಹೇಳಿದ ಕ್ಷಣ ಸದಾ ನೆನಪಲ್ಲಿರುತ್ತೆ. ಬಹುಶಃ, ನಾನು ಇಷ್ಟು ವರ್ಷ ಇಂಡಸ್ಟ್ರಿಯಲ್ಲಿದ್ದು, ಮುಂದೆ ಎಷ್ಟೇ ವರ್ಷ ಈ ಚಿತ್ರರಂಗದಲ್ಲಿ ಕೆಲಸ ಮಾಡಿದರೂ, ನಾನು ಮಾಡಿದ ಸಾಧನೆ ಮತ್ತು ಗಳಿಸಿದ್ದು ಏನೆಂದು ಪ್ರಶ್ನಿಸಿಕೊಂಡರೆ, ಅಂಬರೀಶ್ ಮತ್ತು ಸುದೀಪ್ ಅವರನ್ನು ಮೊದಲ ಸಲ ನಿರ್ದೇಶಿಸಿದ್ದೇ ಹೆಗ್ಗಳಿಕೆ ಅಂದುಕೊಳ್ಳುತ್ತೇನೆ’ ಎನ್ನುತ್ತಾರೆ ಗುರುದತ್.
ಬಹುತೇಕ ಮನೆಗಳಲ್ಲಿ ಇದ್ದಂತೆ, ಗುರುದತ್‌ಗಾಣಿಗ ಅವರ ಮನೆಯಲ್ಲೂ ಸಿನಿಮಾ ರಂಗ ಅಂದರೆ ಅಷ್ಟಕ್ಕಷ್ಟೇ. ಮಗ ಸಿನಿಮಾ ಕಡೆ ವಾಲುತ್ತಾನೆ ಅಂತ ಗೊತ್ತಾದಾಗ ಮನೆಯವರು ಗಾಬರಿಯಾಗಿದ್ದಷ್ಟೇ ಅಲ್ಲ, ಅಡ್ಡಗಾಲು ಹಾಕಿದ್ದು ನಿಜ. ಆದರೆ, ಗುರುದತ್ ಗಾಣಿಗ ಮಾತ್ರ ಕುಂದಾಪುರ ಬಿಟ್ಟು, ಬೆಂಗಳೂರಿಗೆ ಬಂದು ಬಿದ್ದರು. “ಸಿನಿಮಾ ಅಂದರೆ ಮಗ ಕೆಟ್ಟು ಹೋಗ್ತಾನೆ ಎಂಬ ಭಾವನೆ ಪೋಷಕರಲ್ಲಿ ಸಹಜ. ನನ್ನ ಮನೆಯಲ್ಲೂ ಹಾಗೆಯೇ ಇತ್ತು. ಆದರೆ, ಸಿನಿಮಾ ಸೆಳೆತ ಬಿಡಲಿಲ್ಲ. ಯಾವುದೇ ಗಾಡ್‌ಫಾದರ್ ಇಲ್ಲದೆ ಇಲ್ಲಿಗೆ ಬಂದೆ. ಆ ನಂತರ ಸಿಕ್ಕಿದ್ದು ಸುದೀಪ್ ಸರ್. ಅವರ ಗರಡಿಯಲ್ಲಿ ಕೆಲಸ ಕಲಿತೆ. ಪೆನ್ನು ಹಿಡಿದು ಬರೆಯೋಕೆ ಕುಳಿತೆ. ನಂಬಿಕೆಯಲ್ಲಿ ಕೆಲಸ ಮಾಡಿ¨,ೆ ಅದರ ಫಲ ಕಂಡಿದ್ದೇನೆ’ ಎಂದು ಖುಷಿಯಾಗುತ್ತಾರೆ ಗುರುದತ್.
ಸಾಮಾನ್ಯವಾಗಿ ಸ್ಟಾರ್ ಸಿನಿಮಾ ಅಂದಾಗ, ಏರುಪೇರಾಗುವುದು ಸಹಜ, ಕಷ್ಟ ಎದುರಾಗುವುದೂ ನಿಜ. ಆದರೆ, ಗುರುದತ್‌ಗೆ ಅದ್ಯಾವುದೂ ಇಲ್ಲಿ ಎದುರಾಗಲೇ ಇಲ್ಲವಂತೆ. “ಸುದೀಪ್ ಅವರು ನನ್ನ ಬ್ಯಾಕ್‌ಬೋನ್. ಏನೇ ಕಷ್ಟ ಇದ್ದರೂ ಅವರ ಬಳಿ ಹೋಗುತ್ತಿದ್ದೆ. ಎಲ್ಲವನ್ನೂ ಅವರೇ ನಿಭಾಯಿಸುತ್ತಿದ್ದರು. ನನಗೆ ನಿರ್ದೇಶನ ಹೊಸದು. ಹಾಗಾಗಿ ಬೇರೆ ಯಾವುದರಲ್ಲೂ ಗೊಂದಲ ಇರಬಾರದು ಎಂಬ ಕಾರಣಕ್ಕೆ ಅಂಬರೀಶ್, ಸುದೀಪ್ ಮತ್ತು ಮಂಜಣ್ಣ ನನ್ನ ಬಳಿ ಯಾವ ಕಷ್ಟ ಸುಳಿಯದಂತೆ ನೋಡಿಕೊಂಡರು. ನನಗೆ ಒಳ್ಳೆಯ ಪ್ರಾಡಕ್ಟ್ ಹೇಗೆ ತೆಗೆಯಬೇಕೆಂಬುದರ ಮೇಲಷ್ಟೇ ಗಮನವಿತ್ತು. ಮಿಕ್ಕಿದ್ದೆಲ್ಲವನ್ನೂ ಅವರೇ ನೋಡಿಕೊಂಡರು. ಹಾಗಾಗಿ ಇದೊಂದು ಮ್ಯಾಜಿಕ್ ಸಿನಿಮಾ ಅಂತಾನೇ ಹೇಳಬಹುದು ಎಂದು ಹೇಳುವ ಗುರುದತ್, ಸುದೀಪ್ ಅವರಿಂದ ಸಾಕಷ್ಟು ಕಲಿತಿದ್ದೇನೆ. ಪ್ರತಿ ದಿನವೂ ಕಲಿಕೆ ಇರುತ್ತಿತ್ತು. ಮೊದಲು ಹೋಮ್‌ವರ್ಕ್ ಮಾಡಬೇಕು, ಏನು ಮಾಡ್ತೀವಿ ಎಂಬ ಕ್ಲಾರಿಟಿ ಇರಬೇಕು. ಶಿಸ್ತು, ಶ್ರದ್ಧೆ ಇಟ್ಟುಕೊಳ್ಳಬೇಕೆಂಬುದನ್ನು ಅವರಿಂದ ಕಲಿತೆ. ಅಂತೆಯೇ ಅಂಬರೀಶ್ ಅವರು ಕೊಟ್ಟ ಸಲಹೆಗಳು ಅನೇಕ. ಚಿತ್ರೀಕರಣ ವೇಳೆ ಅವರು ಹೇಳುವ ಚಿಕ್ಕ ಚಿಕ್ಕ ಕಥೆಗಳು ಗುರಿ ಮುಟ್ಟಬೇಕೆನಿಸುತ್ತಿದ್ದವು. ಅವರ 50 ವರ್ಷದ ಅನುಭವವೇ ಒಂದು ಪುಸ್ತಕವಿದ್ದಂತೆ. ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗ್ರಹಿಸುವ ಅವರು, ಈ ಡೈಲಾಗ್ ಓಕೆನಾ ಅನ್ನುತ್ತಲೇ ಹುರಿದುಂಬಿಸುತ್ತಿದ್ದರು. ಶಾಟ್ ಆದಾಗ, ಅವರ ಕಣ್ ನೋಡಿದಾಗ, ಏನೋ ಬೇಕೆನ್ನುತ್ತಿದ್ದಾರೆ ಎನಿಸುತ್ತಿತ್ತು. ಕೊನೆಗೆ ಅವರೇ, ಒನ್‌ಮೋರ್ ಮಾಡೋಣ ಅನ್ನುತ್ತಿದ್ದರು. ಅವರೊಂದಿಗಿನ ಕೆಲಸ ಅದ್ಭುತ ಎನ್ನುವುದು ಗುರುದತ್ ಮಾತು.
ಎಲ್ಲಾ ಸರಿ, ಸುದೀಪ್ ಅವರು ಗುರುದತ್ ಮೇಲೆ ನಂಬಿಕೆ ಇಟ್ಟು, ಈ ಪ್ರಾಜೆಕ್ಟ್ ಕೊಟ್ಟಿದ್ದು ನಿಜ. ಅವರ ನಂಬಿಕೆ ಉಳಿಸಿಕೊಂಡ ತೃಪ್ತಿ ಇದೆಯಾ? ಈ ಪ್ರಶ್ನೆಗೆ, “ಖಂಡಿತ ತೃಪ್ತಿ ಭಾವ ಇದೆ. ಅವರು ಕೊಟ್ಟ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದೇನೆ. ನಾನಷ್ಟೇ ಅಲ್ಲ, ಇಡೀ ಚಿತ್ರತಂಡ ಬಳಸಿಕೊಂಡಿದೆ. ನನ್ನೆಲ್ಲಾ ಸಮಯ ಸಿನಿಮಾಗಾಗಿಯೇ ಮೀಸಲಿಟ್ಟಿದ್ದೆ. ಅಂತಹ ದೊಡ್ಡ ನಟರೇ 20 ತಾಸು ದುಡಿಯುವಾಗ, ನಾನು ಮಾಡದಿದ್ದರೆ ಹೇಗೆ? ಅವರ ಸ್ಫೂರ್ತಿ, ಎನರ್ಜಿ ನಮ್ಮ ತಂಡ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಅವರ ಬ್ಯಾನರ್ ಮೂಲಕ ಪರಿಚಯವಾದ ನಿರ್ದೇಶಕ ಎಂಬ ಜವಾಬ್ದಾರಿ ಇದೆ. ಹಾಗಾಗಿ ಮುಂದೆಯೂ ಅವರ ಹೆಸರು ಉಳಿಸುವ ಪ್ರಯತ್ನ ಮಾಡುತ್ತೇನೆ ಎನ್ನುವ ಗುರುದತ್, ಸದ್ಯಕ್ಕೆ ಮುಂದಾ? ಏನೆಂಬುದು ಗೊತ್ತಿಲ್ಲ. ಕನಸು ದೊಡ್ಡದಾಗಿದೆ. ಬೇರೆ ಭಾಷೆ ತಿರುಗಿ ನೋಡುವಂತಹ ಚಿತ್ರ ಕೊಡುವ ಆಸೆ ಇದೆ. ಆ ಕುರಿತು ಮಾತುಕತೆಯೂ ನಡೆಯುತ್ತಿದೆ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಗುರುದತ್.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.