ಶಶಿಕಲಾ ಜೊತೆ ಬಂದ ಪುಟ್ಟರಾಜು!
Team Udayavani, Aug 10, 2018, 6:00 AM IST
ದೇಸಿ ಕ್ರೀಡೆ ಕುರಿತ ಅನೇಕ ಚಿತ್ರಗಳು ಬಂದಿವೆ. ಆ ಸಾಲಿಗೆ ಈಗ “ಪುಟ್ಟರಾಜು ಲವ್ವರ್ ಆಫ್ ಶಶಿಕಲಾ’ ಚಿತ್ರವೂ ಸೇರಿದೆ. ಇಲ್ಲಿ ಕೋಕೋ ಆಟ ಹೈಲೆಟ್. ನೈಜ ಘಟನೆಯನ್ನಾಧರಿಸಿದ ಈ ಚಿತ್ರವು, ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದೇ ಸಂತೋಷದಲ್ಲಿ ಚಿತ್ರತಂಡದವರು ತಮ್ಮ ಚಿತ್ರದ ಬಗ್ಗೆ ಮಾತನಾಡುವುದಕ್ಕೆ ಬಂದಿದ್ದರು.
ನಿರ್ದೇಶಕ ಸಹದೇವ ಅವರಿಗೆ ಒಳ್ಳೆಯ ಕಥೆ ಇರುವ ಚಿತ್ರವನ್ನು ಕನ್ನಡಿಗರು ಎಂದೂ ಬಿಡುವುದಿಲ್ಲ ಎಂಬ ನಂಬಿಕೆ. “ಇದು ನೈಜ ಘಟನೆಯೊಂದರ ಸುತ್ತ ಹೆಣೆದ ಕಥೆ. ಕಳೆದ 2001ರಲ್ಲಿ ತುಮಕೂರು ಸಮೀಪ ನಡೆದ ಒಂದು ಘಟನೆ ಚಿತ್ರಕ್ಕೆ ಸ್ಫೂರ್ತಿ’ ಎನ್ನುವ ನಿರ್ದೇಶಕ ಸಹದೇವ, ಪ್ರೌಢಶಾಲೆ ವಿದ್ಯಾರ್ಥಿ-ವಿದ್ಯಾರ್ಥಿನಿ ನಡುವೆ ನಡೆಯೋ ಕಥೆಯಲ್ಲಿ ಕೋಕೋ ಆಟ ಪ್ರಧಾನವಾಗಿದೆ. ಚಿತ್ರದ ನಾಯಕಿ ರಾಜ್ಯ ಕೋಕೋ ಆಟಗಾರ್ತಿ. ಅವಳ ಮೇಲೆ ಆ ಹುಡುಗನಿಗೆ ಮನಸ್ಸಾಗುತ್ತೆ. ಅವಳನ್ನು ಹೇಗಾದರೂ ಮಾಡಿ ಪಟಾಯಿಸಬೇಕು ಅಂತ ಅವನೂ ಕೋಕೋ ಆಟಕ್ಕೆ ಸೇರಿಕೊಳ್ಳುತ್ತಾನೆ. ಆದರೆ, ಅವನ ಕಳಪೆ ಆಟ ಪ್ರದರ್ಶನದಿಂದ ಆ ಕೋಕೋ ಆಟದಿಂದ ಹೊರಬರುತ್ತಾನೆ. ಆಮೇಲೆ ಏನಾಗುತ್ತೆ ಎಂಬುದು ಕಥೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕರು.
ನಿರ್ದೇಶಕರ ಸಂಬಂಧಿಗಳಾದ ನಾಗರಾಜು, ರಾಜು ಬಾಲಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಅವರಿಗೆ ಚಿತ್ರ ಗೆಲ್ಲುತ್ತೆ ಎಂಬ ವಿಶ್ವಾಸ. ಅದಕ್ಕೆ ಕಾರಣ, ಕಥೆ ಮತ್ತು ಈಗಾಗಲೇ ಗೆದ್ದಿರುವ ಹಾಡುಗಳು. ಇಲ್ಲಿ ಪ್ರೀತಿ ಮಾಡೋಕೆ ವಯಸ್ಸು ಮುಖ್ಯವಲ್ಲ, ಮನಸ್ಸು ಮುಖ್ಯ ಎಂಬ ಸಂದೇಶದ ಜೊತೆಗೆ ಒಂದಷ್ಟು ಅರಿವು ಮೂಡಿಸುವ ವಿಷಯಗಳಿವೆ ಎಂಬುದು ನಿರ್ಮಾಪಕರ ಮಾತು.
ನಾಯಕ ಅಮಿತ್‌ಗೆ ಹೀರೋ ಆಗ್ತಿನಿ ಎಂಬ ಯಾವ ನಂಬಿಕೆಯೂ ಇರಲಿಲ್ಲವಂತೆ. ಆಕಸ್ಮಿಕವಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟ ಬಗ್ಗೆ ಹೇಳಿಕೊಂಡ ಅಮಿತ್, “ನನಗೆ ನಿರ್ದೇಶಕರೇ ಎಲ್ಲವನ್ನೂ ಕಲಿಸಿಕೊಟ್ಟು, ಹೀರೋ ಮಾಡಿದ್ದಾರೆ. ಚಿತ್ರದಲ್ಲಿ ನಟಿಸುವಾಗ ನನ್ನ ಶಾಲೆ ದಿನಗಳು ನೆನಪಾದವು’ ಎಂದು ತಮ್ಮ ಹಳೆಯ ನೆನಪು ಮೆಲುಕು ಹಾಕಿದರು ಅಮಿತ್.
ಇನ್ನು, ಚಿತ್ರದಲ್ಲಿ “ಮಾರಿ ಮುತ್ತು’ ಖ್ಯಾತಿಯ ಸರೋಜಮ್ಮನ ಮೊಮ್ಮಗಳು ಜಯಶ್ರೀ ಆರಾಧ್ಯ ನಾಯಕಿ. ಹೈಸ್ಕೂಲ್ ಓದುವ ಹುಡುಗರ ಕ್ರಷ್ ಇತ್ಯಾದಿ ಕುರಿತ ಕಥೆಯಲ್ಲಿ ಮಜ ಅಂಶಗಳಿವೆ. ನಾನಿಲ್ಲಿ ತುಂಬ ಮುಗ್ಧ ಹುಡುಗಿಯಾಗಿ ನಟಿಸಿದ್ದೇನೆ’ ಎಂಬುದು ಜಯಶ್ರೀ ಆರಾಧ್ಯ ಮಾತು.
ಇನ್ನು, ಸುಶ್ಮಿತಾ ಅವರಿಗೂ ಇಲ್ಲಿ ನಾಯಕಿ ಪಾತ್ರ ಸಿಕ್ಕಿದೆ. ಇಲ್ಲಿ ಇಬ್ಬರು ಹುಡುಗಿಯರ ಹೆಸರು ಶಶಿಕಲಾ ಎಂಬುದಾಗಿದೆ. ಆ ಪೈಕಿ ಹೀರೋ ಯಾರನ್ನು ಇಷ್ಟಪಡ್ತಾನೆ ಎಂಬುದೇ ಕಥೆ’ ಎಂದರು ಸುಶ್ಮಿತಾ. ಡಿಂಗ್ರಿ ನರೇಶ್ ಅವರಿಗಿಲ್ಲಿ ಹಾಸ್ಯ ಪಾತ್ರ ಸಿಕ್ಕಿದೆಯಂತೆ. ಉಳಿದಂತೆ ಚಿತ್ರದಲ್ಲಿ ವಿಕ್ರಾಂತ್, ಕಾವ್ಯಾ ಡಾ. ರಮಾಮಣಿ ನಟಿಸಿದ್ದಾರೆ. ಶ್ರೀಮಾನ್ ಗಂಧರ್ವ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.