ರಾಂಧವ ವಿಥ್ ಭುವನ್
Team Udayavani, Sep 8, 2017, 11:41 AM IST
ಬಂದೋರೆಲ್ಲಾ ಲವ್‌ಸ್ಟೋರಿಗಳನ್ನು ಹಿಡಿದುಕೊಂಡು ಬರುತ್ತಿದ್ದರಂತೆ. ಎಲ್ಲಾ ಕಥೆ ಕೇಳಿ, ಒಂದೇ ತರಹ ಇದೆ ಅಂತನಿಸಿ, ಎಲ್ಲವನ್ನು ಬಿಟ್ಟು ಕೂತಾಗ ಬಂದಿದ್ದೇ “ರಾಂಧವ’ ಎಂಬ ಚಿತ್ರ. ಈ ಕಥೆ ಕೇಳಿ ಭುವನ್‌ಗೆ ಥ್ರಿಲ್ ಆಗಿ ಹೋಯಿತಂತೆ. ಈ ಚಿತ್ರ ಮಿಸ್ ಮಾಡಬಾರದು ಎಂಬ ಕಾರಣಕ್ಕೆ ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತ ಸಹ ಸದ್ದಿಲ್ಲದೆ ಮುಗಿದಿದೆ.
ಮುಹೂರ್ತವನ್ನು ಸೈಲೆಂಟ್ ಆಗಿ ಮುಗಿಸಿದ ಚಿತ್ರತಂಡವು, ಅದೇ ರಾತ್ರಿ ಚಿತ್ರದ ಟೀಸರ್‌ನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಯಿತು. ರಾಜಕೀಯ ಕ್ಷೇತ್ರದಿಂದ ಆರ್. ಅಶೋಕ್, ಸಿನಿಮಾದಿಂದ ಗಣೇಶ್ ಮತ್ತು ಶಿಲ್ಪ ಗಣೇಶ್ ಬಂದು ಟೀಸರ್ ಬಿಡುಗಡೆ ಮಾಡಿ ಹೋದರು. ಅವರನ್ನೆಲ್ಲಾ ಕಳಿಸಿಬಂದ ಚಿತ್ರತಂಡವು ಮಾತಿಗೆ ಕುಳಿತಿತು. ಈ ಚಿತ್ರವನ್ನು ಸುಕೃತಿ ಚಿತ್ರಾಲಯದಡಿ ಸನತ್ ಕುಮಾರ್ ನಿರ್ಮಿಸಿದರೆ, ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವುದು ಸುನೀಲ್ ಎಸ್. ಆಚಾರ್ಯ. ಇದವರ ಮೊದಲ ಚಿತ್ರ. ಕಳೆದ ಎರಡು ವರ್ಷಗಳಿಂದ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸಾಕಷ್ಟು ಸೈಕಲ್ ಹೊಡೆದು ಈಗ ಚಿತ್ರ ಪ್ರಾರಂಭಿಸಿದ್ದಾರೆ. “ಇದು ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. 1887ರಲ್ಲಿ ಮತ್ತು 2017ರಲ್ಲಿ ಈ ಕಥೆ ನಡೆಯುತ್ತದೆ. ನಾಯಕ ಇಲ್ಲಿ ಪಕ್ಷಿಗಳನ್ನು ಸ್ಟಡಿ ಮಾಡುತ್ತಿರುತ್ತಾನೆ. ಅವನ ಜೀವನದಲ್ಲಿ ಒಂದು ಘಟನೆ ನಡೆಯುತ್ತದೆ. ಈ ಚಿತ್ರದಲ್ಲಿ ಒಂದು ಗೂಬೆ ಪ್ರಮುಖ ಪಾತ್ರ ವಹಿಸುತ್ತಿದೆ. ಗೂಬೆಯನ್ನು ಗ್ರಾಫಿಕ್ಸ್ ಮೂಲಕ ಸೃಷ್ಟಿಸುವ ಪ್ಲಾನ್ ಇದೆ. 35 ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ’ ಎಂದರು.
ಎಲ್ಲಾ ಸರಿ, “ರಾಂಧವ’ ಎಂದರೇನು ಎಂದರೆ, “ಜಾಟ್ ಸಮುದಾಯದವರಿಗೆ ಹಾಗೆನ್ನುತ್ತಾರೆ. ಯುದ್ಧ ಶುರುವಾದರೆ, ಮೊದಲು ನುಗ್ಗುವವರು ಅವರೇ. ಇಲ್ಲಿ ಯಾರ ಹೆಸರೂ ರಾಂಧವ ಅಲ್ಲ. ರಾಂಧವ ವಿಥ್ ಭುವನ್ ಹಾಗೆಂದರೇನು ಎಂದು ಚಿತ್ರದಲ್ಲೇ ನೋಡಿ. ಅಂದಹಾಗೆ, ಈ ಹೆಸರನ್ನು ಕೊಟ್ಟಿದ್ದು ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ’ ಎಂದು ಶಶಾಂಕ್‌ಗೆ ಖೋ ಕೊಟ್ಟರು ಅವರು. ಶಶಾಂಕ್ ಇಲ್ಲಿ ಐದು ಹಾಡುಗಳನ್ನು ಮಾಡಿದ್ದಾರೆ. ಐದಕ್ಕೆ ಐದೂ ವಿಭಿನ್ನವಾಗಿರುತ್ತವೆ ಮತ್ತು ಎಲ್ಲಾ ಹಾಡುಗಳನ್ನು ಕನ್ನಡದ ಗಾಯಕರಿಂದಲೇ ಹಾಡಿಸುವ ಯೋಚನೆ ಇದೆ ಎಂದು ಶಶಾಂಕ್ ಹೇಳಿಕೊಂಡರು.
ಭುವನ್ ಫುಲ್ ಥ್ರಿಲ್ಲಾಗಿ ಹೋಗಿದ್ದರು. ನಿರ್ದೇಶಕರನ್ನು ಅನುರಾಗ್ ಕಶ್ಯಪ್‌ಗೆ ಹೋಲಿಸಿದರು. “ಬಹಳ ಚೆನ್ನಾದ ಕಥೆ ಮಾಡಿದ್ದಾರೆ ನಿರ್ದೇಶಕರು. ಅನುರಾಗ್ ಕಶ್ಯಪ್ ಲೆವೆಲ್‌ಗೆ ರಾ ಮತ್ತು ನೈಜವಾಗಿ ಕಥೆ ಮಾಡಿದ್ದಾರೆ. ಇನ್ನು ಅವರ ತಂಡ ಸಹ ಬಹಳ ಚೆನ್ನಾಗಿದೆ. ಆದಷ್ಟು ಬೇಗ ಚಿತ್ರೀಕರಣ ಮುಗಿಸಿ, ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದರು. ಭುವನ್‌ಗೆ ನಾಯಕಿಯಾಗಿ ಶ್ರೇಯಾ ಆಂಚನ್ ಇದ್ದಾರೆ. ತಮ್ಮದು ಸಾಫ್ಟ್ ಪಾತ್ರ ಎಂದು ಅವರು ಹೇಳಿಕೊಂಡರು. “ರಾಂಧವ’ದಲ್ಲಿ ಯಮುನಾ ಶ್ರೀನಿಧಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ರಾಜ ಶಿವಶಂಕರ್ ಎನ್ನುವವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.