ಸ್ಯಾಂಡಲ್‌ವುಡ್ ದ್ವಿಶತಕ ದಾಖಲೆ
Team Udayavani, Nov 23, 2018, 6:00 AM IST
ಕನ್ನಡ ಚಿತ್ರರಂಗಕ್ಕೀಗ ದ್ವಿಶತಕ ಸಂಭ್ರಮ!
– ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ಇದು ಸತ್ಯ. ಕನ್ನಡ ಚಿತ್ರರಂಗದಲ್ಲಿ ಇಂದು ಬಿಡುಗಡೆಯಾಗುತ್ತಿರುವ ಚಿತ್ರಗಳನ್ನು ಸೇರಿಸಿದರೆ ಇಲ್ಲಿವರೆಗೆ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 200ರ ಗಡಿ ದಾಟಿದೆ. ಕಳೆದ ವಾರಕ್ಕೆ 195 ಪ್ಲಸ್ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಬಿಡುಗಡೆ ಕಂಡಿದ್ದವು. ಈ ವಾರ ಬರೋಬ್ಬರಿ ಒಂಭತ್ತು ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಇದರೊಂದಿಗೆ ಈ ವಾರ ಕನ್ನಡ ಚಿತ್ರರಂಗ ದ್ವಿಶತಕ ಬಾರಿಸುತ್ತಿದೆ. ಕಳೆದ ವರ್ಷ 180ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಬಿಡುಗಡೆಯಾಗಿ, ಅನೇಕರು ಹುಬ್ಬೆರುವಂತೆ ಮಾಡಿತ್ತು. ಆದರೆ, ಈ ವರ್ಷ ನವೆಂಬರ್ ಮೂರನೇ ವಾರಕ್ಕೆ ಕನ್ನಡ ಚಿತ್ರರಂಗ 200ರ ಗಡಿ ದಾಟಿದೆ. ನೀವು ಇದನ್ನು ಸಂಭ್ರಮವೆಂದಾದರೂ ಭಾವಿಸಬಹುದು ಅಥವಾ ಕನ್ನಡ ಚಿತ್ರರಂಗಕ್ಕೆ ಮಾರಕ ಎಂದಾದರೂ ಪರಿಗಣಿಸಬಹುದು. ಆದರೆ, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಚಿತ್ರಗಳು ಬಿಡುಗಡೆಯಾದ ವರ್ಷವಿದು ಎನ್ನಲಡ್ಡಿಯಿಲ್ಲ. ವರ್ಷ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿ ಇದೆ. “ಕೆಜಿಎಫ್’ ಚಿತ್ರಕ್ಕಾಗಿ ಹೊಸಬರ ಸಿನಿಮಾಗಳು ಹಿಂದೆ ಸರಿದರೂ ಡಿಸೆಂಬರ್‌ನಲ್ಲಿ ಏನಿಲ್ಲವೆಂದರೂ 20 ಸಿನಿಮಾಗಳು ಬಿಡುಗಡೆಯಾಗಲಿವೆ. ಅಲ್ಲಿಗೆ 2018ರಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 220ರ ಗಡಿದಾಟುವ ನಿರೀಕ್ಷೆ ಇದೆ.
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ವರ್ಷಕ್ಕೆ ಅತಿ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿರುವ ಚಿತ್ರರಂಗಗಳ ಸಾಲಿನಲ್ಲಿ ತಮಿಳು ಬಿಟ್ಟರೆ ಕನ್ನಡ ಚಿತ್ರರಂಗ ಮುಂಚೂಣಿಯಲ್ಲಿದೆ. ತಮಿಳು ಚಿತ್ರರಂಗ ಕಳೆದ ವರ್ಷವೇ 200ರ ಗಡಿ ದಾಟಿತ್ತು. ಈ ವರ್ಷ ಕನ್ನಡ ಚಿತ್ರರಂಗ ದ್ವಿಶತಕಕ್ಕೆ ಸಾಕ್ಷಿಯಾಗುತ್ತಿದೆ. ಕನ್ನಡ ಚಿತ್ರರಂಗ ಶತಕ ಬಾರಿಸಿ ಐದಾರು ವರ್ಷಗಳೇ ಕಳೆದಿತ್ತು. ಅಲ್ಲಿಂದ ಇಲ್ಲಿವರೆಗೆ 120, 150, 180 … ಹೀಗೆ ದೊಡ್ಡ ಮಟ್ಟದಲ್ಲೇ ಬಿಡುಗಡೆಯನ್ನು ಕಾಣುತ್ತಾ ಬಂದಿತ್ತು. ಆದರೆ ಈ ವರ್ಷ ಕಂಡಷ್ಟು ದೊಡ್ಡ ಮಟ್ಟದ ಸಂಖ್ಯೆಯನ್ನು ಹಿಂದೆಂದೂ ಕನ್ನಡ ಚಿತ್ರರಂಗ ಕಂಡಿರಲಿಲ್ಲ. ವ್ಯಾಪಾರ ವಹಿವಾಟಿನ ದೃಷ್ಟಿಯಿಂದಲೂ ಕೋಟಿಗಟ್ಟಲೇ ಹಣ ಚಿತ್ರರಂಗದಲ್ಲಿ ಹರಿದಾಡಿದೆ. ಇಲ್ಲಿವರೆಗೆ ಬಿಡುಗಡೆಯಾದ ಹಾಗೂ ಆಗುತ್ತಿರುವ ಸಿನಿಮಾಗಳನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ, ಅಂದಾಜು 450 ರಿಂದ 500 ಕೋಟಿಗೂ ಅಧಿಕ ಮೊತ್ತದ ಬಂಡವಾಳವನ್ನು ಈ ವರ್ಷವೂ ಕನ್ನಡ ಚಿತ್ರಗಳ ಮೇಲೆ ಹೂಡಲಾಗಿದೆ.
ಮೊದಲೇ ಹೇಳಿದಂತೆ ಅನೇಕರಿಗೆ ಇದು ಸಂಭ್ರಮವಾದರೆ, ಇನ್ನು ಕೆಲವರ ದೃಷ್ಟಿಯಲ್ಲಿ ಇದು ಚಿತ್ರರಂಗಕ್ಕೆ ಮಾರಕ. ಇಷ್ಟೊಂದು ಸಂಖ್ಯೆಯಲ್ಲಿ ಸಿನಿಮಾಗಳು ಬಿಡುಗಡೆಯಾದರೆ ಪ್ರೇಕ್ಷಕ ಯಾವ ಸಿನಿಮಾವನ್ನು ನೋಡುತ್ತಾನೆ ಎಂಬ ಪ್ರಶ್ನೆ ಅನೇಕರದು. ಆ ಪ್ರಶ್ನೆಯಲ್ಲಿ ಅರ್ಥವಿದೆ ಕೂಡಾ. ಈ ವಾರವವನ್ನೇ ತೆಗೆದುಕೊಳ್ಳಿ, ಬರೋಬ್ಬರಿ ಒಂಭತ್ತು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ಒಂಭತ್ತು ಸಿನಿಮಾಗಳಲ್ಲಿ ಪ್ರೇಕ್ಷಕ ಯಾವುದನ್ನು ನೋಡಬೇಕು, ಬಿಡಬೇಕು ಹೇಳಿ. ಯಾವುದೋ ಒಂದು ಸಿನಿಮಾ ಚೆನ್ನಾಗಿದೆ ಎಂಬ ಮಾತು ಕೇಳಿದ ಪ್ರೇಕ್ಷಕ ಒಂದು ವಾರ ಬಿಟ್ಟು ಆ ಸಿನಿಮಾ ನೋಡಿದರಾಯಿತು ಎಂದುಕೊಂಡು, ಚಿತ್ರಮಂದಿರಕ್ಕೆ ಹೋಗುವಷ್ಟರಲ್ಲಿ ಆ ಜಾಗಕ್ಕೆ ಇನ್ನೊಂದು ಚಿತ್ರ ಬಂದಿರುತ್ತದೆ ಎಂಬುದು ಹಲವರ ವಾದ. ಇನ್ನು, ಸಿನಿಮಾಗಳು ಹೆಚ್ಚು ಬಿಡುಗಡೆಯಾದಷ್ಟು ಕನ್ನಡ ಚಿತ್ರರಂಗ ಸದಾ ಗರಿಗೆದರಿರುತ್ತದೆ ಎನ್ನುವವರೂ ಇದ್ದಾರೆ. ಇಲ್ಲಿವರೆಗೆ ಬಿಡುಗಡೆಯಾದ 200 ಪ್ಲಸ್ ಸಿನಿಮಾಗಳ ಪಟ್ಟಿಯನ್ನು ನೋಡಿದರೆ ಅಲ್ಲಿ ನಿಮಗೆ ಸ್ಟಾರ್‌ಗಳ ನಾಲ್ಕರಿಂದ ಐದು ಸಿನಿಮಾಗಳು ಸಿಗುತ್ತವೆ. ಹಾಗೆ ನೋಡಿದರೆ ಈ ವರ್ಷ ಇಲ್ಲಿವರೆಗೆ ದರ್ಶನ್, ಯಶ್, ಪುನೀತ್, ಉಪೇಂದ್ರ, ಗಣೇಶ್ ನಾಯಕರಾಗಿ ನಟಿಸಿದ ಯಾವುದೇ ಚಿತ್ರಗಳು ಬಿಡುಗಡೆಯಾಗಿಲ್ಲ. ಯಶ್ ಹಾಗೂ ಗಣೇಶ್ ಈಗ ವರ್ಷದ ಕೊನೆಯಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಉಳಿದಂತೆ ಅಷ್ಟೂ ಸಿನಿಮಾಗಳನ್ನು ಮಾಡಿದವರು ಹೊಸಬರು ಹಾಗೂ ಚಿತ್ರರಂಗದಲ್ಲಿ ಈಗಷ್ಟೆ ಬೆಳೆಯುತ್ತಿರುವ ನಟರು. ಕೇವಲ ಸ್ಟಾರ್‌ಗಳ ಸಿನಿಮಾಗಳನ್ನೇ ನಂಬಿಕೊಂಡಿದ್ದರೆ ಚಿತ್ರರಂಗ ಅಷ್ಟೊಂದು ಚಲನಾಶೀಲವಾಗಿರಲು ಸಾಧ್ಯವಿತ್ತೇ ಎನ್ನುವುದು ಅನೇಕರ ಪ್ರಶ್ನೆ ಕೂಡಾ. ಅದೇನೇ ಆದರೂ ಪೂರಕ-ಮಾರಕ ಎರಡೂ ಜೊತೆಯಾಗಿಯೇ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇನ್ನು ಈ ವರ್ಷದ ಸಕ್ಸಸ್-ಫೆಲ್ಯೂರ್ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವಲ್ಲ. ಏಕೆಂದರೆ ಇನ್ನೂ ಒಂದು ತಿಂಗಳಲ್ಲಿ ಪ್ರೇಕ್ಷಕ ಯಾವ ಸಿನಿಮಾವನ್ನು ಕೈ ಹಿಡಿಯುತ್ತಾನೆಂದು ಗೊತ್ತಿಲ್ಲ. ಆದರೆ, ಬಿಡುಗಡೆಯಲ್ಲಿ ಕನ್ನಡ ಚಿತ್ರರಂಗ ದಾಖಲೆ ಬರೆದಿರೋದಂತೂ ಸತ್ಯ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.