ಸ್ಟಾರ್‌ವಾರ”: ಹರಸಿದರು, ಹಾರೈಸಿದರು, ಮೆಚ್ಚುಗೆಗೆ ಪಾತ್ರವಾದರು
Team Udayavani, Mar 3, 2017, 3:50 AM IST
ಕಳೆದ ವಾರ ಕನ್ನಡ ಚಿತ್ರರಂಗದಲ್ಲಿ ಒಂದು ಅಪರೂಪದ ವಿಷಯ ನಡೆಯಿತು. ಕನ್ನಡದ ಜನಪ್ರಿಯ ಸ್ಟಾರ್‌ಗಳೆಲ್ಲಾ ಒಂದೇ ವಾರದಲ್ಲಿ ಹಲವು ಸಮಾರಂಭಗಳಲ್ಲಿ ಕಾಣಿಸಿಕೊಂಡರು. ವಿಶೇಷವೆಂದರೆ, ಅವರ್ಯಾರೂ ತಮ್ಮದೇ ಚಿತ್ರದ ಸಮಾರಂಭಕ್ಕೆ ಬಂದಿದ್ದಲ್ಲ. ಬೇರೆಯವರ ಚಿತ್ರಗಳ ಸಮಾರಂಭಗಳಿಗೆ ಅವರುಗಳೆಲ್ಲಾ ಹೋದರು, ಹರಿಸಿದರು, ಹಾರೈಸಿದರು, ನಾಲ್ಕು ಮಾತಾಡಿ ವಾಪಸ್ಸು ಬಂದರು. ಈ ಪಟ್ಟಿಯಲ್ಲಿ ಅಂಬರೀಶ್, ಪುನೀತ್ ರಾಜಕುಮಾರ್, ದರ್ಶನ್, ಸುದೀಪ್ ಎಲ್ಲರೂ ಇದ್ದಾರೆ. ಹೀಗೆ ಯಾರ್ಯಾರು, ಎಲ್ಲೆಲ್ಲಿ ಹೋಗಿ, ಏನೆಲ್ಲಾ ಮಾತಾಡಿ ಬಂದರು ಎನ್ನುವುದು ಈ ವಾರದ ಸ್ಪೆಷಾಲಿಟಿ.
ಬಹುಶಃ ಇದೊಂದೇ ಚಿತ್ರದ ಸಮಾರಂಭದಲ್ಲಿ ಯಾವೊಬ್ಬ ಸ್ಟಾರ್ ಕಾಣಿಸಲಿಲ್ಲ. ರವಿಚಂದ್ರನ್ ಅವರಂತಹ ಸ್ಪೆಷಲ್ ಸ್ಟಾರ್ ಇರುವಾಗ, ಇನ್ನಾರು ಬೇಕು ಹೇಳಿ. ಅಲ್ಲಿ ರವಿಚಂದ್ರನ್ ಇದ್ದರು, ಮೂರು ಚಿತ್ರಗಳಿದ್ದವು, ಮಾತಾಡುವುದಕ್ಕೆ ಸಾಕಷ್ಟು ವಿಷಯಗಳು ಇದ್ದವು … ಇದೆಲ್ಲಾ ಈ ಬಾರಿಯ ಶಿವರಾತ್ರಿಯ ಸ್ಪೆಷಾಲಿಟಿ. ಅಂದು ರವಿಚಂದ್ರನ್ ಅವರ “ದಶರಥ’, “ರಾಜೇಂದ್ರ ಪೊನ್ನಪ್ಪ’ ಮತ್ತು “ಬಕಾಸುರ’ ಚಿತ್ರಗಳು ಶುರುವಾಗಿವೆ. ಈ ಪೈಕಿ ಎರಡು ಚಿತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದರೆ, “ರಾಜೇಂದ್ರ ಪೊನ್ನಪ್ಪ’ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಮಾಡಿ, ತಮ್ಮ ಸಂಸ್ಥೆಯಡಿ ಆ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇಷ್ಟಕ್ಕೂ “ದಶರಥ’, “ರಾಜೇಂದ್ರ ಪೊನ್ನಪ್ಪ’ ಮತ್ತು “ಬಕಾಸುರ’ ಚಿತ್ರಗಳು ಒಂದೇ ದಿನ ಶುರುವಾಗಿದ್ದು ಮತ್ತು ಅದರಲ್ಲೂ ಶಿವರಾತ್ರಿಯ ಹಬ್ಬದಂದೇ ಶುರುವಾಗುವುದಕ್ಕೂ ಒಂದು ಕಾರಣವಿದೆ.
“ಮೂರು ಚಿತ್ರಗಳ ಮುಹೂರ್ತವನ್ನು ಒಟ್ಟಿಗೆ ನೆರವೇರಿಸಲು ಕಾರಣವಿದೆ. ಇದಕ್ಕೂ ಮುನ್ನ, ಒಂದೊಂದು ಸಿನಿಮಾವನ್ನು ಒಂದೊಂದು ಡೇಟ್‌ನಲ್ಲಿ ಮುಹೂರ್ತ ಮಾಡಬೇಕಿತ್ತು. ಆದರೆ, ಒಟ್ಟಿಗೆ ಮಾಡಬೇಕು ಎಂಬ ಆಸೆ ನನ್ನದಾಗಿತ್ತು. ಅದಕ್ಕೆ ಮುಖ್ಯವಾದ ಕಾರಣ. ಕೆಲವು ವರ್ಷಗಳ ಹಿಂದೆ ಶಿವನ ಆರಾಧನೆ ಮಾಡುತ್ತಿದ್ದೆ. ಆಗಿನಿಂದ ಶಿವನ ಮೇಲೆ ಇನ್ನಷ್ಟು ಭಕ್ತಿ ಜಾಸ್ತಿಯಾಯ್ತು. ಹಾಗಾಗಿ ಮೂರು ಚಿತ್ರಗಳ ಪೋಸ್ಟರ್ ಮೇಲೂ “ವಿತ್ ದ ಬ್ಲೆಸಿಂಗ್ಸ್ ಆಫ್ ಲಾರ್ಡ್ ಶಿವ’ ಎಂದು ಹೆಸರು ಹಾಕಿಸಿಯೇ, ಸಿನಿಮಾ ಮುಹೂರ್ತವನ್ನು ಶಿವರಾತ್ರಿ ಹಬ್ಬದ ದಿನದಂದೇ ಮಾಡಬೇಕು ಎಂದು ತೀರ್ಮಾನಿಸಿದೆ. ಶಿವರಾತ್ರಿಯಂದೇ ನೆರವೇರಿದೆ. ಪಾಸಿಟಿವ್ ಎನರ್ಜಿ ಸಿಕ್ಕಿದೆ. ಶಿವನ ಸನ್ನಿಧಿಯಲ್ಲಿ ಶುರು ಮಾಡಬೇಕೆಂಬ ಆಸೆ ಈಡೇರಿದೆ. ಮೊದಲಿನಿಂದಲೂ ಜನರು ನನ್ನೊಂದಿಗಿದ್ದಾರೆ. ಈಗಲೂ ಇದ್ದಾರೆ. ಮುಂದೆಯೂ ಇರ್ತಾರೆ.’ ಎನ್ನುತ್ತಾರೆ ರವಿಚಂದ್ರನ್.
ಮಾಸ್ತಿಗುಡಿಗೆ ಅಂಬರೀಶ್: “ಮಾಸ್ತಿಗುಡಿ’ ಚಿತ್ರತಂಡದಲ್ಲಾದ ದುರಂತದ ಬಗ್ಗೆ ನಿಮಗೆ ಗೊತ್ತೇ ಇದೆ. ಚಿತ್ರದ ಖಳನಟರಾದ ಅನಿಲ್ ಹಾಗೂ ಉದಯ್ ಚಿತ್ರದ ಸಾಹಸ ದೃಶ್ಯದ ವೇಳೆ ಸಾವಿಗೀಡಾದ ನಂತರ ಚಿತ್ರತಂಡ ಮಂಕಾಗಿತ್ತು. ಈಗ ಚಿತ್ರತಂಡ ಸಾವರಿಸಿಕೊಂಡು ಮತ್ತೆ ಚಿತ್ರದ ಕೆಲಸದಲ್ಲಿ ತೊಡಗಿಕೊಂಡಿದೆ. ಅದರ ಮೊದಲ ಹಂತವಾಗಿ ಚಿತ್ರತಂಡ ಹಾಡುಗಳನ್ನು ಬಿಡುಗಡೆ ಮಾಡಿದೆ. ಆಡಿಯೋ ಬಿಡುಗಡೆಗೆ ಚಿತ್ರತಂಡ ನಟ ಅಂಬರೀಶ್ ಅವರನ್ನು ಆಹ್ವಾನಿಸಿತ್ತು. ಆಡಿಯೋ ರಿಲೀಸ್ ಮಾಡಿದ ಅಂಬರೀಶ್, “ಈ ತಂಡದಲ್ಲಾದ ದುರಂತವೊಂದು ಕೇವಲ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗವನ್ನು ತಲ್ಲಣಗೊಳಿಸಿದೆ. ವೈಯಕ್ತಿಕವಾಗಿ ನಾನು ಕೂಡಾ ಆ ಸಾವಿನಿಂದ ಬೇಸರಗೊಂಡಿದ್ದೇನೆ. ಆ ಬಗ್ಗೆ ನೋವಿದೆ. ಈಗ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರ ಗೆದ್ದರೆ ಆ ಎರಡು ಕುಟುಂಬಗಳಿಗೂ ಸಹಾಯವಾಗುತ್ತದೆ. ಎಲ್ಲಾ ನಿರ್ಮಾಪಕರು, ನಿರ್ದೇಶಕರು, ವಿತರಕರಲ್ಲಿ ನನ್ನ ಒಂದು ವಿನಂತಿ, ಯಾರೂ ಕೂಡಾ ಈ ಸಿನಿಮಾದ ಬಿಡುಗಡೆ ಸಮಯದಲ್ಲಿ ಅಡ್ಡಬರಬೇಡಿ. ಈ ಸಿನಿಮಾದ ಯಶಸ್ಸಿಗೆ ಸಹಕರಿಸಿ’ ಎಂದು ಮನವಿ ಮಾಡಿದರು.
ಈ ಚಿತ್ರವನ್ನು ನಾಗಶೇಖರ್ ನಿರ್ದೇಶನ ಮಾಡಿದ್ದು, ಅವರ ಪ್ರಕಾರ ಪ್ರಕೃತಿಯ ಕಾಳಜಿ ಇರುವ ಸಿನಿಮಾವಂತೆ. ಚಿತ್ರಕ್ಕೆ ಸಾಧುಕೋಕಿಲ ಸಂಗೀತ ನೀಡಿದ್ದು, ಈ ಸಿನಿಮಾ ಹಿಟ್ ಆಗಲೇಬೇಕು ಎಂದು ಹೇಳಿದರು. ನಾಗಶೇಖರ್ ಸಿನಿಮಾಗಳಲ್ಲಿ ಹಾಡುಗಳಿಗೆ ಪ್ರಾಮುಖ್ಯತೆ ಇದ್ದು, ಹಾಡುಗಳ ಮೇಲೆ ಕಥೆ ನಿಂತಿರುತ್ತದೆ. ಹಾಗಾಗಿ, ಇಲ್ಲೂ ಹೊಸ ಬಗೆಯ ಹಾಡುಗಳನ್ನು ನೀಡಲು ಪ್ರಯತ್ನಿಸಿದ್ದಾಗಿ ಹೇಳಿಕೊಂಡರು. ನಾಯಕ ದುನಿಯಾ ವಿಜಯ್ ಹೆಚ್ಚು ಮಾತನಾಡಲಿಲ್ಲ. ಚಿತ್ರವನ್ನು ಸುಂದರ್ ಗೌಡ ನಿರ್ಮಿಸಿದ್ದಾರೆ.
ದರ್ಶನ್ ರಾಗ: ಚಿತ್ರರಂಗಕ್ಕೆ ಹಾಸ್ಯ ನಟರಾಗಿ ಬಂದ ಮಿತ್ರ ಈಗ ನಿರ್ಮಾಪಕರಾಗಿದ್ದಾರೆ. ಅದು “ರಾಗ’ ಚಿತ್ರದ ಮೂಲಕ. ಪಿ.ಸಿ.ಶೇಖರ್ ನಿರ್ದೇಶನದ “ರಾಗ’ ಚಿತ್ರವನ್ನು ಮಿತ್ರ ನಿರ್ಮಿಸುವ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಅಂಧರಿಬ್ಬರ ಕಥೆಯನ್ನೊಂದಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟ ದರ್ಶನ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. “ನಾನು ಮಿತ್ರ ಅವರನ್ನು ಅನೇಕ ವರ್ಷಗಳಿಂದ ನೋಡುತ್ತಿದ್ದೇನೆ. ಅವರೊಬ್ಬ ಒಳ್ಳೆಯ ನಟ. ಈಗ “ರಾಗ’ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. “ರಾಗ’ ಒಂದು ವಿಭಿನ್ನ ಕಥೆಯುಳ್ಳ ಸಿನಿಮಾವಾಗಿದ್ದು, ಈ ತರಹದ ಸಿನಿಮಾಗಳನ್ನು ಎಲ್ಲರ ಪ್ರೋತ್ಸಾಹಿಸಬೇಕಾಗಿದೆ’ ಎಂದರು. ಇಲ್ಲಿವರೆಗೆ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಮಿತ್ರ “ರಾಗ’ ಸಿನಿಮಾವನ್ನು ನಿರ್ಮಿಸಿ, ನಟಿಸಲು ಕಾರಣ ಚಿತ್ರದ ಕಥೆಯಂತೆ. “ತುಂಬಾ ವಿಭಿನ್ನವಾದ ಕಥೆಯುಳ್ಳ ಸಿನಿಮಾ. ಎಲ್ಲರ ಮನಮುಟ್ಟುವ ಕಥೆ ಇದರಲ್ಲಿದೆ’ ಎಂದ ಮಿತ್ರ “ಚಿತ್ರದ ಪೋಸ್ಟರ್ ಅನ್ನು ಶಿವರಾಜಕುಮಾರ್ ಬಿಡುಗಡೆ ಮಾಡಿದರೆ, ಸುದೀಪ್ ಚಿತ್ರಕ್ಕೆ ಧ್ವನಿ ಕೊಟ್ಟಿದ್ದಾರೆ. ಈಗ ದರ್ಶನ್ ಟ್ರೇಲರ್ ಲಾಂಚ್ ಮಾಡಿದ್ದಾರೆ ಎಂದು ಖುಷಿಯಿಂದ ಹೇಳಿಕೊಂಡರು. “ರಾಗ ಎಂಬ ಟೈಟಲ್ ಕೇಳುವಾಗ ಇದು ಆರ್ಟ್ ಮೂವೀ ಎಂಬ ಭಾವನೆ ಬರಬಹುದು. ಆದರೆ ಚಿತ್ರದ ಟ್ರೇಲರ್ ಅನ್ನು ದರ್ಶನ್ ಬಿಡುಗಡೆ ಮಾಡಿ ಇದು ಕಮರ್ಷಿಯಲ್ ಅಂಶಗಳೂ ಇರುವ ಸಿನಿಮಾ ಎಂಬುದು ಸಾಬೀತಾಗಿದೆ’ ಎಂದರು ಪಿ.ಸಿ.ಶೇಖರ್. ಕಾರ್ಯಕ್ರಮದಲ್ಲಿ ದಿನಕರ್ ತೂಗುದೀಪ್, ತರುಣ್ ಸುಧೀರ್, ರವಿಶಂಕರ್, ಅವಿನಾಶ್, ರಮೇಶ್ ಭಟ್ ಸೇರಿದಂತೆ ಅನೇಕರು ಸಿನಿಮಾ ಬಗೆಗಿನ ತಮ್ಮ ಅನಿಸಿಕೆ ಹಂಚಿಕೊಂಡರು. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ.
“ಉಸಿರೇ ಉಸಿರೇ’ ಸುದೀಪ್ ಕ್ಲಾಪ್: ಸಿಸಿಎಲ್ ಮ್ಯಾಚ್ ಹಾಗೂ ಸುದೀಪ್ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ರಾಜೀವ್ ಈಗ ಹೀರೋ ಆಗಿದ್ದಾರೆ. ಈ ಹಿಂದೆ ಅನೇಕ ಸಿನಿಮಾಗಳಲ್ಲಿ ರಾಜೀವ್ ನಟಿಸಿದ್ದರೂ, ಸೋಲೋ ಹೀರೋ ಆಗಿ ನಟಿಸಿರಲಿಲ್ಲ. ಈಗ “ಉಸಿರೇ ಉಸಿರೇ’ ಚಿತ್ರದ ಮೂಲಕ ರಾಜೀವ್ ಸೋಲೋ ಹೀರೋ ಆಗಿದ್ದಾರೆ. ಇತ್ತೀಚೆಗೆ ಈ ಚಿತ್ರಕ್ಕೆ ಮುಹೂರ್ತ ನಡೆಯಿತು. ತನ್ನ ಸ್ನೇಹಿತನ ಸಿನಿಮಾಕ್ಕೆ ಕ್ಲಾಪ್ ಮಾಡಲು ಸುದೀಪ್ ಬಂದಿದ್ದರು. ಕ್ಲಾಪ್ ಮಾಡಿ ಚಿತ್ರಕ್ಕೆ ಶುಭಕೋರಿದರು ಸುದೀಪ್.
ವಿಜಯ್ ಸಿ.ಎಂ ಕಥೆ ಚಿತ್ರಕಥೆ ಮತ್ತು ಸಂಭಾಷಣೆಯೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೆಚ್.ಆರ್ ರಾಜೇಶ್ ಕೆ.ಆರ್. ಪೇಟೆ ಈ ಸಿನಿಮಾದ ನಿರ್ಮಾಪಕರು. ಈ ಚಿತ್ರಕ್ಕೆ ಮಾರವರ್ಮನ್ ಛಾಯಾಗ್ರಹಣ, ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ, ಕೆ.ಎಂ ಪ್ರಕಾಶ್ ಸಂಕಲನ, ಕಲೈ ನ್ರತ್ಯ, ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿದೆ. ಈ ಚಿತ್ರದಲ್ಲಿ ರಾಜೀವ್‌ಗೆ ಅಮೃತಾ ರಾವ್ ನಾಯಕಿಯಾಗಿದ್ಧಾರೆ. ಸುಧಾ ಬೆಳವಾಡಿ, ದೀಪಕ್ ನಂದನ್, ಸಂಗೀತ, ಕೆ.ಎಸ್ ಶ್ರೀಧರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್ ಪೇಟೆ ಮುಂತಾದವರ ತಾರಾಗಣವಿದೆ.
ಶ್ರೀವಲ್ಲಿ ಹೊಗಳಿದ ಪುನೀತ್: “ಬಾಹುಬಲಿ’, “ಭಜರಂಗಿ ಭಾಯಿಜಾನ್’ನಂತಹ ಯಶಸ್ವಿ ಚಿತ್ರಗಳಿಗೆ ಕಥೆ ಬರೆದಿರವ ವಿಜಯೇಂದ್ರ ಪ್ರಸಾದ್, ಇದೇ ಮೊದಲ ಸಲ ಚಿತ್ರ ನಿರ್ದೇಶನ ಮಾಡಿದ್ದಾರೆ. ಅದೂ ಕನ್ನಡ ಮತ್ತು ತೆಲುಗಿನಲ್ಲಿ ಎಂಬುದು ವಿಶೇಷ. ಅದು “ಶ್ರೀವಲ್ಲಿ’. ಇತ್ತೀಚೆಗೆ ಚಿತ್ರದ ಆಡಿಯೋ ಸಿಡಿಯನ್ನು ಪುನೀತ್‌ರಾಜ್‌ಕುಮಾರ್ ಬಿಡುಗಡೆ ಮಾಡಿ ಶುಭಹಾರೈಸಿದರು. “ನಾನು ರಾಜಮೌಳಿ ಮತ್ತು ವಿಜಯೇಂದ್ರ ಪ್ರಸಾದ್ ಅವರ ಅಭಿಮಾನಿ. ಆ ಪ್ರೀತಿಗೆ ಬಂದು ಆಡಿಯೋ ಸಿಡಿ ರಿಲೀಸ್ ಮಾಡಿದ್ದೇನೆ. ಇದೊಂದು ಸೈನ್ಸ್‌ಫಿಂಕ್ಷನ್ ಸಿನಿಮಾ. ಇಂತಹ ಸಿನಿಮಾಗಳು ತುಂಬಾ ವಿರಳ. ಟ್ರೇಲರ್ ನೋಡಿದರೆ ಚಿತ್ರದಲ್ಲಿ ವಿಶೇಷತೆ ಕಾಣುತ್ತೆ. ಪ್ರೊಫೆಷನಲ್ ಆಗಿ ಇಲ್ಲಿ ಎಲ್ಲರೂ ಕೆಲಸ ಮಾಡಿದ್ದಾರೆ. ಎರಡು ಭಾಷೆಯಲ್ಲೂ ಚಿತ್ರ ಯಶಸ್ಸು ಕಾಣಲಿ’ ಎಂದು ಶುಭಕೋರಿದರು ಪುನೀತ್.
“ಇದು ಸ್ವಮೇಕ್ ಸಿನಿಮಾ. ಯಾವುದೇ ಡಬ್ಬಿಂಗ್ ಸಿನಿಮಾ ಅಲ್ಲ. ಕರ್ನಾಟಕ ನಮಗೆ ಒಳ್ಳೆಯ ಹೆಸರು ಕೊಟ್ಟಿದೆ. ಇಲ್ಲಿ ಯಾವ ಸಿನಿಮಾ ಹಿಟ್ ಆದರೂ, ನನಗೆ ಡಾ.ರಾಜ್‌ಕುಮಾರ್ ನೆನಪಾಗುತ್ತಾರೆ. ಇದೊಂದು ಹೊಸಬಗೆಯ ಸಿನಿಮಾ. ಈ ಜನ್ಮದ ಜತೆ ಮುಂದಿನ ಜನ್ಮ ಕುರಿತಾದ ಸೂಕ್ಷ್ಮ ಅಂಶಗಳಿವೆ. ಅದು ಏನೆಂಬುದಕ್ಕೆ ಸಿನಿಮಾ ನೋಡಿ’ ಅಂದರು ವಿಜಯೇಂದ್ರ ಪ್ರಸಾದ್. ಚಿತ್ರಕ್ಕೆ ರಾಜ್‌ಕುಮಾರ್ ಬೃಂದಾವನ್ ಹಾಗೂ ಸುನಿತಾ ನಿರ್ಮಾಪಕರು. ಶ್ರೀಲೇಖ ಸಂಗೀತ ನೀಡಿದ್ದಾರೆ. ರಜತ್ ನಾಯಕರಾಗಿ, ನೇಹಾ ನಾಯಕಿಯಾಗಿ ನಟಿಸಿದ್ದಾರೆ.
ಅಂಡರ್‌ವರ್ಲ್ಡ್ನಲ್ಲಿ ದರ್ಶನ್!: ಆದಿತ್ಯ ಅಭಿನಯದ “ಬೆಂಗಳೂರು ಅಂಡರ್‌ವರ್ಲ್ಡ್’ ಚಿತ್ರದ ಟ್ರೇಲರ್ ಮತ್ತು ಧ್ವನಿಸುರುಳಿ ಬಿಡುಗಡೆಗೆ ದರ್ಶನ್ ಸಾಕ್ಷಿಯಾದರು. ಗೆಳೆಯ ಹಾಗೂ ಗುರುವಿನ ಸಿನಿಮಾ ಟ್ರೇಲರ್ ರಿಲೀಸ್ ಮಾಡಿದ ದರ್ಶನ್, ಚಿತ್ರ ಗೆಲುವು ಕೊಡುವುದರಲ್ಲಿ ಅನುಮಾನವಿಲ್ಲ. ಯಾಕೆಂದರೆ, ನಾನು ಚಿತ್ರ ನೋಡಿದ್ದೇನೆ. ಅಂಡರ್‌ವರ್ಲ್ಡ್ ಸಿನಿಮಾ ಇದ್ದಾಗಿದ್ದರೂ ಇಲ್ಲಿ ಹೊಸ ನಿರೂಪಣೆ ಇದೆ. ಸಿನಿಮಾ ನೋಡುತ್ತಿದ್ದರೆ, ಹಾಲಿವುಡ್ ಸಿನಿಮಾ ನೋಡಿದ ಫೀಲ್ ಆಗುತ್ತೆ. ಅಂಡರ್‌ವರ್ಲ್ಡ್ನಲ್ಲಿ ನಿಯತ್ತಾಗಿರೋರೂ ಇರ್ತಾರೆ ಅನ್ನೋದಿಲ್ಲಿ ಹೇಳಲಾಗಿದೆ. ಗುರುಗಳಾದ ಸತ್ಯ ಗ್ಯಾಪ್ ಬಳಿಕ ಚಿತ್ರ ಮಾಡಿದ್ದಾರೆ. ಎಲ್ಲರಿಗೂ ಇದು ಯಶಸ್ಸು ತರಲಿ ಅಂದರು.
ಅಂದು ವೇದಿಕೆ ಮೇಲೆ ಬಂದ ರಾಜೇಂದ್ರಸಿಂಗ್‌ಬಾಬು, ಮಹಾನಗರ ಪಾಲಿಕೆ ಸದ್ಯಸ ಹರೀಶ್, ದರ್ಶನ್ ಎಲ್ಲರ ಕೈಗೂ ಗನ್ ಕೊಡಲಾಗಿತ್ತು. ಮೇಲೆ ಡಮ್ಮಿ ಬುಲೆಟ್ ಹಾರಿಸುವ ಮೂಲಕ ಹಾಡು ಹಾಗೂ ಟ್ರೇಲರ್‌ಗೆ ಚಾಲನೆ ಕೊಡಲಾಯಿತು. ಆದಿತ್ಯ, ನಿರ್ದೇಶಕ ಸತ್ಯ, ನಿರ್ಮಾಪಕ ಆನಂದ್, ಶಶಾಂಕ್, ರಿಷಿಕಾ ಸಿಂಗ್ ನಾಯಕಿ ಪಾಯಲ್ ರಾಧಾಕೃಷ, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಇತರರು ಸಿನಿಮಾ ಬಗ್ಗೆ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.