ಕಾಪಿಕಟ್ಟೆಯಲ್ಲಿ ಹಿರಿಯರ ಮಾತು-ಕತೆ
ಹಾಸ್ಯನಟರ ಸಮಾಗಮ
Team Udayavani, Aug 2, 2019, 5:19 AM IST
ಯಾವುದೇ ಊರಿರಲಿ, ಸಾಮಾನ್ಯವಾಗಿ ಅಲ್ಲಿನ ಹಿರಿಯ ನಾಗರೀಕರು ಪ್ರತಿದಿನ ನಿಗದಿತ ಸಮಯಕ್ಕೆ ಏರಿಯಾದ ಯಾವುದಾದರೂ ಒಂದು ಸ್ಥಳದಲ್ಲಿ ಖಾಯಂ ಆಗಿ ಸೇರಿ, ಹರಟೆ, ಮಾತು-ಕತೆ ನಡೆಸುವುದನ್ನು ನೀವು ಆಗಾಗ್ಗೆ ನೋಡಿರುತ್ತೀರಿ. ಅದರಲ್ಲೂ ಸಣ್ಣ ಹೋಟೆಲ್‌ಗಳು, ಕಾಫಿ ಶಾಪ್‌ಗ್ಳಲ್ಲಿ ಇಂತಹ ದೃಶ್ಯಗಳು ಹೆಚ್ಚಾಗಿ ಕಾಣಸಿಗುತ್ತವೆ. ಈಗ ಇದೇ ಸನ್ನಿವೇಶವನ್ನು ಇಟ್ಟುಕೊಂಡು ಕನ್ನಡದಲ್ಲಿ ಚಿತ್ರವೊಂದು ತಯಾರಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ಕಾಪಿಕಟ್ಟೆ’. ಆಡು ಭಾಷೆಯಲ್ಲಿ “ಕಾಫಿ’ ಎನ್ನುವ ಬದಲು “ಕಾಪಿ’ ಎಂದೇ ಬಳಸುವುದರಿಂದ ಚಿತ್ರಕ್ಕೆ “ಕಾಪಿಕಟ್ಟೆ’ ಎಂದು ಹೆಸರಿಡಲಾಗಿದೆ.
ಹೆಸರೇ ಹೇಳುವಂತೆ ಇದೊಂದು “ಕಾಪಿಕಟ್ಟೆ’ ಎನ್ನುವ ಕಾಫಿ ಶಾಪ್‌ನ ಸುತ್ತಮುತ್ತ ನಡೆಯುವ ಘಟನೆಗಳ ಸುತ್ತ ನಡೆಯುವ ಚಿತ್ರ. ನಿವೃತ್ತಿ ಜೀವನ ನಡೆಸುತ್ತಿರುವ ಹಿರಿಯರ ನೋವು-ನಲಿವು, ಕಷ್ಟ-ಸುಖ, ಮಾತುಕತೆ ಎಲ್ಲವೂ ಈ ಚಿತ್ರದಲ್ಲಿ ಇರಲಿದೆಯಂತೆ. ಇನ್ನೊಂದು ವಿಶೇಷವೆಂದರೆ, “ಕಾಪಿಕಟ್ಟೆ’ ಚಿತ್ರದ ಬಹುತೇಕ ಮುಖ್ಯ ತಾರಾಗಣದಲ್ಲಿ ಸುಮಾರು 35ಕ್ಕೂ ಹೆಚ್ಚು ಕನ್ನಡದ ಹಿರಿಯ ಹಾಸ್ಯನಟರು ಅಭಿನಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನೃತ್ಯ ಸಂಯೋಜಕರಾಗಿ, ಚಿತ್ರ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಎಂ.ಆರ್ ಕಪಿಲ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರ ಸೆಟ್ಟೇರಿದೆ.
ಇದೇ ವೇಳೆ ಚಿತ್ರದ ಬಗ್ಗೆ ಮೊದಲು ಮಾತಿಗಿಳಿದ ನಿರ್ದೇಶಕ ಎಂ.ಆರ್ ಕಪಿಲ್, “ನಿವೃತ್ತಿ ಜೀವನವನ್ನು ಸಾಗಿಸುತ್ತಿರುವ, ಇಂದಿನ ಹಿರಿಯರ ಜೀವನ ಶೈಲಿ, ಅವರ ಮನಸ್ಥಿತಿ ಎಲ್ಲವೂ ಚಿತ್ರದಲ್ಲಿ ಅನಾವರಣಗೊಳ್ಳಲಿದೆ. 60ರ ನಂತರ ಎಲ್ಲರೂ ಏಕಾಂಗಿಯಾಗುತ್ತಾರೆ. ತಮ್ಮ ಏಕಾಂತವನ್ನು ಕಳೆಯಲು ಸಾಮಾನ್ಯವಾಗಿ ಎಲ್ಲಾ ಹಿರಿಯರು ದಿನಕ್ಕೊಂದು ಬಾರಿ ಕಾಫಿ ಕುಡಿಯಲು ತಮ್ಮದೇ ವಯಸ್ಸಿನವರ ಜೊತೆ ಒಂದೆಡೆ ಸೇರುತ್ತಾರೆ. ಅಲ್ಲಿ ಅವರದ್ದೇ ಆದ ಅನೇಕ ಚರ್ಚೆಗಳು ನಡೆಯುತ್ತಿರುತ್ತವೆ. ಅವರ ಮಾತು-ಕತೆಯಲ್ಲಿ ಹಾಸ್ಯ, ವಿನೋದ, ವಿಷಾದ ಎಲ್ಲವೂ ತುಂಬಿರುತ್ತದೆ. ಇದೇ ಸಂಗತಿಗಳನ್ನು ಇಟ್ಟುಕೊಂಡೆ “ಕಾಪಿಕಟ್ಟೆ’ ಚಿತ್ರ ಮಾಡುತ್ತಿದ್ದೇನೆ. “ಕಾಪಿಕಟ್ಟೆ’ ಅನ್ನೋದು ಎಲ್ಲರಿಗೂ ಅರ್ಥವಾಗುವ ಮತ್ತು ಎಲ್ಲರಿಗೂ ಅನ್ವಯಿಸುವ ಪದವಾಗಿದ್ದರಿಂದ ಅದನ್ನೇ ಟೈಟಲ್ ಆದ ಕಾರಣ ಇಟ್ಟಿದ್ದೇವೆ’ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದರು.
ಇನ್ನು “ಕಾಪಿಕಟ್ಟೆ’ ಚಿತ್ರದ ಟೈಟಲ್‌ಗೆ “ಫಿಲ್ಟರ್ ಕಾಫಿ ವಿತ್ ಸೀನಿಯರ್ ಸಿಟಿಜನ್ಸ್’ ಎನ್ನುವ ಟ್ಯಾಗ್ ಲೈನ್ ಇದ್ದು, “ಆರ್.ವಿ ಸಿನಿಮಾ ವರ್ಲ್ಡ್’ ಬ್ಯಾನರ್ ಮೂಲಕ ಜಿ. ರಾಘವೇಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. “ಕಾಪಿಕಟ್ಟೆ’ ಚಿತ್ರದ ಹಾಡುಗಳಿಗೆ ಗೋಪಿ ಕಲಾಕಾರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಬಿ.ಆರ್ ನರಸಿಂಹಮೂರ್ತಿ ಚಿತ್ರಕತೆ-ಸಂಭಾಷಣೆ ಇದೆ. ಚಿತ್ರಕ್ಕೆ ಸಿ. ನಾರಾಯಣ್ ಛಾಯಾಗ್ರಹಣ, ಆರ್.ಡಿ ರವಿ ಸಂಕಲನ ಕಾರ್ಯವಿದೆ. “ಕಾಪಿಕಟ್ಟೆ’ ಚಿತ್ರದ ಪ್ರತಿ ಸನ್ನಿವೇಶದಲ್ಲೂ 11 ಜನ ಕಲಾವಿದರು ಕಾಣಿಸಿಕೊಳ್ಳಲಿದ್ದು, ಚಿತ್ರದಲ್ಲಿ ಮನರಂಜನೆ ಜೊತೆಗೆ ಒಂದು ಒಳ್ಳೆಯ ಸಂದೇಶ ಕೂಡ ಇದೆ ಎನ್ನುತ್ತದೆ ಚಿತ್ರತಂಡ.
ಉಳಿದಂತೆ ಹಿರಿಯ ನಟರಾದ ಉಮೇಶ್, ಹೊನ್ನವಳ್ಳಿ ಕೃಷ್ಣ, ಬ್ಯಾಂಕ್ ಜನಾರ್ದನ್, ಮೈಸೂರು ರಮಾನಂದ್, ಬಿರಾದಾರ್, ಮನದೀಪ್ ರಾಯ…, ಶಂಕರ್ ಭಟ್, ಮಿಮಿಕ್ರಿ ದಯಾನಂದ್, ಶಂಖನಾದ ಅರವಿಂದ್, ಡಿಂಗ್ರಿ ನಾಗರಾಜ್, ರೇಖಾದಾಸ್ ಮೊದಲಾದವರು “ಕಾಪಿಕಟ್ಟೆ’ಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.