ಮತ್ತೆ ಬಂದ ಕಿರಣ: ಗೋವಿಯ ನೀತಿಪಾಠ
Team Udayavani, Nov 2, 2018, 6:00 AM IST
“ಪಾರು ವೈಫ್ ಆಫ್ ದೇವದಾಸ್’ ಎಂಬ ಸಿನಿಮಾ ಬಗ್ಗೆ ಕೇಳಿರಬಹುದು. ಕಿರಣ್ ಗೋವಿ ನಿರ್ದೇಶನದ ಚಿತ್ರವದು. ಆ ಚಿತ್ರ ಬಿಡುಗಡೆಯಾಗಿ ಸುಮಾರು ಮೂರೂವರೆ ವರ್ಷ ಕಳೆದಿದೆ. ಈಗ ಕಿರಣ್ ಗೋವಿ ಮತ್ತೆ ಬಂದಿದ್ದಾರೆ. ಅದು “ಯಾರಿಗೆ ಯಾರುಂಟು’ ಚಿತ್ರದ ಮೂಲಕ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮುಂದಿನ ತಿಂಗಳು ಬಿಡುಗಡೆಯಾಗಲಿದೆ.
ತಮ್ಮ ಹಿಂದಿನ ಸಿನಿಮಾಗಳಂತೆ ಕಿರಣ್ ಗೋವಿ, ಈ ಬಾರಿಯೂ ಒಂದು ಫ್ಯಾಮಿಲಿ ಸ್ಟೋರಿಯನ್ನು ಹೇಳಿದ್ದಾರಂತೆ. ಎಲ್ಲಾ ಓಕೆ, “ಯಾರಿಗೆ ಯಾರುಂಟು’ ಎಂಬ ಟೈಟಲ್ ಯಾಕೆ ಎಂದು ನೀವು ಕೇಳಬಹುದು. ಅದಕ್ಕೂ ಕಿರಣ್ ಉತ್ತರಿಸುತ್ತಾರೆ. “ನನಗೆ ಈ ಟೈಟಲ್ ಹೊಳೆದಿದ್ದು ನನ್ನ ತಂದೆ ಆಸ್ಪತ್ರೆಯಲ್ಲಿದ್ದಾಗ. ಒಂದಷ್ಟು ಜನ ನಮಗೆ ಆಗಿಲ್ಲಾಂದ್ರೂ, ಇನ್ನೊಂದಷ್ಟು ಜನ ಆಗ್ತಾರೆ … ಹೀಗೆ ಯೋಚನೆ ಮಾಡುತ್ತಿರುವಾಗ ನನಗೆ ಈ ಶೀರ್ಷಿಕೆ ಹೊಳೆಯಿತು’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು ಕಿರಣ್ ಗೋವಿ. ಚಿತ್ರದ ಕಥೆಯಲ್ಲಿ ಸಾಕಷ್ಟು ಸೂಕ್ಷ್ಮ ಅಂಶಗಳನ್ನು ಹೇಳುತ್ತಾ ಹೋಗಿದ್ದಾರಂತೆ. ಮುಖ್ಯವಾಗಿ ಚಿತ್ರಕಥೆ ತುಂಬಾ ತುಂಬಾ ತಿರುವುಗಳಿಂದ ಕೂಡಿದ್ದು, ಸರಿಯಾಗಿ ಸಿನಿಮಾ ನೋಡಿದರೆ ಅರ್ಥವಾಗುತ್ತದೆ ಎಂಬುದು ಕಿರಣ್ ಮಾತು. ಇಡೀ ಸಿನಿಮಾ ಆರೋಗ್ಯ ಧಾಮ ಎಂಬ ಜಾಗದಲ್ಲಿ ನಡೆಯುತ್ತದೆಯಂತೆ. ಚಿತ್ರದಲ್ಲಿ ಒಂದು ಕಾರ್ಟೂನ್ ಪಾತ್ರವನ್ನು ಸೃಷ್ಟಿಸಿದ್ದು, ಇಡೀ ಸಿನಿಮಾವನ್ನು ಮುಂದುವರೆಸುವಲ್ಲಿ ಅದರ ಪಾತ್ರ ಕೂಡಾ ಮಹತ್ವದ್ದು ಎನ್ನುತ್ತಾರೆ ಕಿರಣ್. “ಯಾರಿಗೆ ಯಾರುಂಟು’ ಚಿತ್ರದಲ್ಲಿ ಪ್ರಶಾಂತ್ ಹೀರೋ. “ಪ್ರಶಾಂತ್ ಅವರು ಈ ಹಿಂದೆ ಆ್ಯಕ್ಷನ್ ಸಿನಿಮಾಗಳನ್ನು ಮಾಡಿಕೊಂಡು ಬಂದವರು. ಈ ಕಥೆ ಕೇಳಿದಾಗ ಅವರಿಗೆ ಮೊದಲು ಈ ಪಾತ್ರ ಮಾಡಬಹುದಾ ಎಂಬ ಸಂದೇಹ ಬಂತು. ಆದರೆ, ಅಚ್ಚುಕಟ್ಟಾಗಿ ಮಾಡಿದ್ದಾರೆ’ ಎಂದು ನಾಯಕನ ಬಗ್ಗೆ ಹೇಳಿದರು ಕಿರಣ್.
ಈ ಚಿತ್ರವನ್ನು ಹೆಚ್.ಸಿ.ರಘುನಾಥ್ ನಿರ್ಮಿಸಿದ್ದಾರೆ. ಇವರು ಕಿರಣ್ ಗೋವಿಯವರ ಚಿಕ್ಕಪ್ಪ. “ಕಿರಣ್ ನಮ್ಮ ಅಣ್ಣನ ಮಗ. ಆತ ಹೇಳಿದ ಕಥೆ ಇಷ್ಟಪಟ್ಟು ಸಿನಿಮಾ ಮಾಡಿದ್ದೇನೆ. ಇಲ್ಲಿವರೆಗೆ ನಾನು ಕೈ ಹಾಕಿದ ಯಾವುದೇ ಕೆಲಸಗಳು ಸೋತಿಲ್ಲ. ಅದರಂತೆ ಈ ಸಿನಿಮಾ ಕೂಡಾ ಹಿಟ್ ಆಗುತ್ತದೆ ಎಂಬ ವಿಶ್ವಾಸವಿದೆ’ ಎನ್ನುವುದು ರಘುನಾಥ್ ಅವರ ಮಾತು. ಈ ಚಿತ್ರಕ್ಕಾಗಿ ನಾಲ್ಕು ಕೋಟಿ ರೂಪಾಯಿ ಬಂಡವಾಳ ಹಾಕಿದ್ದಾರಂತೆ. ನಾಯಕ ಪ್ರಶಾಂತ್ ಕೂಡಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಈ ಹಿಂದೆ ಮಾಡದಂತಹ ಹೊಸ ಬಗೆಯ ಪಾತ್ರವಾಗಿದ್ದು, ಹಲವು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಚಿತ್ರದಲ್ಲಿ ಲೇಖಾ ಚಂದ್ರ, ಕೃತಿಕಾ ಹಾಗೂ ಅದಿತಿ ನಾಯಕಿಯರಾಗಿ ನಟಿಸಿದ್ದಾರೆ. ಅವರು ಕೂಡಾ ತಮ್ಮ ಅನಿಸಿಕೆ ಹಂಚಿ ಕೊಂಡರು. ಚಿತ್ರಕ್ಕೆ ಬಿ.ಜೆ.ಭರತ್ ಸಂಗೀತ, ರಾಕೇಶ್ ಛಾಯಾಗ್ರಹಣ, ವಿಶ್ವ ಅವರ ಸಂಕಲನವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.