ಟಿವಿ ರೈಟ್ಸ್ ಬಿಧ್ದೋಯ್ತು
Team Udayavani, Jul 13, 2018, 6:00 AM IST
ಆರು ವರ್ಷ. 500ಕ್ಕೂ ಅಧಿಕ ಸಿನಿಮಾ. ಸುಮಾರು 700 ಕೋಟಿಗೂ ಹೆಚ್ಚು ದುಡ್ಡು…!
ಒಂದು ಕಾಲವಿತ್ತು. ಯಾವುದೇ ಸಿನಿಮಾ ಮಾಡಿದರೂ, ಆ ಚಿತ್ರ ಟಿವಿಗೆ ಮಾರಾಟವಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸೂಕ್ಷ್ಮವಾಗಿ ಗಮನಿಸುತ್ತ ಬಂದರೆ, ಬಹುತೇಕ ತೆರೆಕಂಡ ಚಿತ್ರಗಳಿಗೆ ಟಿವಿ ರೈಟ್ಸ್ ಸಿಕ್ಕೇ ಇಲ್ಲ. ಈ ಆರು ವರ್ಷದಲ್ಲಿ ಸ್ಯಾಟಲೆಟ್ ಇರದಿದ್ದರೂ, ಸಿನಿಮಾಗಳ ಸಂಖ್ಯೆ ಮಾತ್ರ ನಿಂತಿಲ್ಲ. ಇಲ್ಲಿ ಟಿವಿ ರೈಟ್ಸ್ ಇಲ್ಲ ಅಂತ ಹೇಳುತ್ತಿಲ್ಲ. ಇದ್ದರೂ ಅದು ಬೆರಳೆಣಿಕೆ ನಟರಿಗೆ ಮಾತ್ರ ಎಂಬಂತಾಗಿದೆ. ಟಿವಿ ರೈಟ್ಸ್ ಖರೀದಿಸುವ ಮಂದಿ, ಎರಡು ಕೆಟಗರಿಯಲ್ಲಿ ಮಾತ್ರ ಸಿನಿಮಾ ಹಕ್ಕು ಖರೀದಿಸುತ್ತಿದ್ದಾರೆ. ಒಂದು ಸ್ಟಾರ್, ಇನ್ನೊಂದು ಸ್ಟಾರ್ ವ್ಯಾಲ್ಯು ಇರುವ ತಂತ್ರಜ್ಞರು ಮತ್ತು ಕಥೆ. ಮುಂಚೂಣಿ ಸ್ಟಾರ್ ನಟರ ಚಿತ್ರಗಳು ಟಿವಿ ರೈಟ್ಸ್ ಹೋಗುತ್ತವೆ. ಆದರೆ, ಬಿ ಮತ್ತು ಸಿ ಕೆಟಗರಿಯ ಕೆಲ ಹೀರೋಗಳ ಚಿತ್ರಗಳಲ್ಲಿ ಕಥೆ, ತಂತ್ರಜ್ಞರು ಮತ್ತು ಸಿನಿಮಾ ಮೇಕಿಂಗ್ ಗಮನಿಸಿ ಇಂತಿಷ್ಟು ಹಣ ಕೊಡ್ತೀವಿ ಅಂತ ಹಕ್ಕು ಖರೀದಿಸಲಾಗುತ್ತಿದೆ. ಉಳಿದಂತೆ ಬರುವ ಕೆಲ ಹಳೆಯ ಮತ್ತು ಹೊಸ ನಟರ ಚಿತ್ರಗಳಿಗೆ ಟಿವಿ ರೈಟ್ಸ್ ಇಲ್ಲ.
ಇದರಿಂದ ಚಿತ್ರರಂಗದಲ್ಲಿ ಏನೋ ಸಾಧನೆ ಮಾಡಬೇಕು ಅಂತ ಬಂದು, ಹೆಸರಿಗೊಂದು ಸಿನಿಮಾ ಮಾಡಿದವರ ಪಾಡಂತೂ ಹೇಳುವಂತಿಲ್ಲ. ಆರಂಭದಲ್ಲಿ ಇಷ್ಟು ಲಕ್ಷಕ್ಕೆ ಸಿನಿಮಾ ಮಾಡಬಹುದು ಅಂತ ಅಂದಾಜಿಸಿ ಬಂದವರಿಗೆ, ಮುಗಿಯುವ ಹೊತ್ತಿಗೆ ಅದು ಕೋಟಿ ತಲುಪಿರುತ್ತೆ. ಅಂತಹವರಿಗೆ ಚಿತ್ರಮಂದಿರದಲ್ಲಿ ಪ್ರೇಕ್ಷಕನ ಮೆಚ್ಚುಗೆ ಇರಲ್ಲ. ಟಿವಿ ರೈಟ್ಸ್ ಹೋಗುತ್ತೆ ಅಂದರೆ, ಹೊಸಬರೆಂಬ ಕಾರಣಕ್ಕೆ ಅದೂ ಸಿಗಲ್ಲ. ಅಂತಹವರಿಗೆ ಒಂದು ವರ್ಗ ಇಲ್ಲಿ ಮಧ್ಯ ವರ್ತಿ ಯಂತೆ ಕೆಲಸ ಮಾಡುತ್ತಿದೆ. ಪರವಾಗಿಲ್ಲ ಅನ್ನುವ ಒಂದಷ್ಟು ಚಿತ್ರಗಳನ್ನು ಗುಡ್ಡೆ ಹಾಕಿ, ತಲಾ ಮೂರು, ಐದು ಲಕ್ಷ ಕೊಡುವುದಾಗಿ ಹೇಳಿ, ಒಂದು ರೇಂಜ್‌ಗೆ ಸ್ಯಾಟಲೆಟ್ ಫಿಕ್ಸ್ ಮಾಡಿಕೊಳ್ಳುವ ವರ್ಗವೂ ಇದೆ. ಕೆಲ ನಿರ್ಮಾಪಕ ಹೋದಷ್ಟಕ್ಕೆ ಹೋಗಲಿ ಅನ್ನುವ ಕಾರಣಕ್ಕೆ ಬಂದಷ್ಟು ಕಿಸೆಗೆ ಹಾಕಿಕೊಂಡು ತಾನು ಕಷ್ಟಪಟ್ಟು ಮಾಡಿದ ಸಿನಿಮಾವನ್ನು ಮಾರಿಬಿಡುತ್ತಾನೆ. ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿದವನಿಗೆ ಇದು ಯಾವ ಲೆಕ್ಕವೂ ಅಲ್ಲ. ಆದರೂ, ಕೊನೇ ಘಳಿಗೆಯಲ್ಲಿ ಎಲ್ಲವನ್ನೂ ಕಳೆದುಕೊಂಡ ನಿರ್ಮಾಪಕನಿಗೆ ಸಿಕ್ಕಷ್ಟೇ ಸೀರುಂಡೆ. ಇಲ್ಲಿ
ಫಸ್ಟ್‌ಲೈನ್‌ನಲ್ಲಿರೋರಿಗೊಂದು ಬೆಲೆ, ಸೆಕೆಂಡ್‌ಲೈನ್‌ನಲ್ಲಿರೋರಿಗೆ ಇನ್ನೊಂದು ಬೆಲೆ, ಮೂರನೆ ಗೆರೆಯಲ್ಲಿ ನಿಂತವರಿಗೆ ಮಗದೊಂದು ಬೆಲೆ. ಆದರೆ, ಸಂಪೂರ್ಣ ಹೊಸಬರಿಗಂತೂ ಟಿವಿ ರೈಟ್ಸ್ ಅನ್ನೋದು ಗಗನ ಕುಸುಮ.
ಬುದ್ಧಿವಂತಿಕೆಯ ಆಯ್ಕೆ: 2012ರಿಂದ ಗಮನಿಸುತ್ತ ಬಂದರೆ, ಚಿತ್ರಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 120 ರಿಂದ ಶುರುವಾಗಿ ಈಗ ವರ್ಷಕ್ಕೆ 175 ರವರೆಗೂ ಬಿಡುಗಡೆ ಸಂಖ್ಯೆ ಹೆಚ್ಚಿದೆ. ಈ ಪೈಕಿ ವರ್ಷಕ್ಕೆ ಏನಿಲ್ಲವೆಂದರೂ 50 ಪ್ಲಸ್ ಚಿತ್ರಗಳಿಗಷ್ಟೇ ಟಿವಿ ರೈಟ್ಸ್ ಸಿಗುತ್ತಿದೆ. ಅದರಲ್ಲೂ ಸ್ಟಾರ್ ನಟರ ಚಿತ್ರಗಳಿಗೆ ಮಾತ್ರ. ಉಳಿದಂತೆ ಯಾರೊಬ್ಬರ ಚಿತ್ರಕ್ಕೂ ಸಿಕ್ಕಿಲ್ಲ. ಹಿಂದೆಲ್ಲಾ, ಟಿವಿಗಳ ಸಂಖ್ಯೆ ಕಡಿಮೆ ಇತ್ತು. ಜನರು ಟಿವಿಗೆ ಅಂಟಿಕೊಂಡಿದ್ದರು. ಯಾವ ಸಿನಿಮಾ ಬಂದರೂ ನೋಡುತ್ತಿದ್ದರು. ಅದು ಅನಿವಾರ್ಯವಾಗಿತ್ತು. ಆದರೆ, ಈಗ ನೋಡುಗನಿಗೆ ಸಾಕಷ್ಟು ಆಯ್ಕೆಗಳಿವೆ. ಕೈಯಲ್ಲಿ ಮೊಬೈಲ್, ಇಂಟರ್‌ನೆಟ್ ಇದೆ. ಎಲ್ಲವೂ ಕುಳಿತಲ್ಲಿಯೇ ಸಿಗುತ್ತಿದೆ. ಕೆಲ ವರ್ಗ ಹೊರತುಪಡಿಸಿದರೆ, ಟಿವಿಯಲ್ಲಿ ಸಿನಿಮಾ ನೋಡುಗರ ಸಂಖ್ಯೆ ಈಗ ಕುಸಿದಿದೆ. ಕಳೆದ 4 ವರ್ಷಗಳ ಹಿಂದೆ ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಸಿನಿಮಾವೊಂದಕ್ಕೆ ಟಿಆರ್‌ಪಿಯೇ ಬರಲಿಲ್ಲ. ಕೋಟಿ ಕೊಟ್ಟು ಖರೀದಿಸಿದರೂ ಟಿಆರ್‌ಪಿ ಇಲ್ಲವೆಂದರೆ ಟಿವಿರೈಟ್ಸ್ ಯಾಕೆ ಪಡೆಯಬೇಕು ಎಂಬ ಪ್ರಶ್ನೆ ಎದುರಾಗುತ್ತೆ. ಸ್ಟಾರ್ ಸಿನಿಮಾಗೆ ಕೋಟಿ ಕೊಟ್ಟು ಖರೀದಿಸಿ, ಆ ಹಣ ವಾಪಸ್ ಪಡೆಯಬೇಕಾದರೆ, ಟಿವಿಯಲ್ಲಿ ಎಷ್ಟು ಬಾರಿ ಪ್ರದರ್ಶನ ಮಾಡಬೇಕೆಂಬ ಲೆಕ್ಕಾಚಾರವೂ ಬಂದು ಹೋಗುತ್ತೆ. ಬೇರೆ ವಾಹಿನಿಯು ಒಬ್ಬ ಸ್ಟಾರ್ ಚಿತ್ರದ ಹಕ್ಕು ಪಡೆದರೆ, ಇನ್ನೊಂದು ವಾಹಿನಿ ತಮ್ಮ ವರ್ಚಸ್‌ಗಾಗಿ ಇನ್ನೊಬ್ಬ ಸ್ಟಾರ್ ಚಿತ್ರ ಖರೀದಿಸುತ್ತದೆ. ಇಲ್ಲಿ ಸ್ಪರ್ಧೆ ಜೊತೆ ತಮ್ಮ ನೆಟ್‌ವರ್ಕ್ ಉಳಿಸಿಕೊಳ್ಳುವ ಐಡಿಯಾ ಅದು. ಸಿನಿಮಾಗಳಿಂದ ಟಿವಿಗಳಿಗೆ ಯಾವುದೇ ವಕೌìಟ್ ಆಗಲ್ಲ ಅನ್ನೋ ಸತ್ಯ ಅವರಿಗೂ ಗೊತ್ತು. ಹಾಗಾಗಿ, ಟಿವಿಯವರು ಬುದ್ಧಿವಂತಿಕೆಯಿಂದಲೇ ಸಿನಿಮಾ ಆಯ್ಕೆ ಮಾಡುತ್ತಿದ್ದಾರೆ.
ಹಳೇ ನಟರ ಸಿನ್ಮಾಗೂ ಬೆಲೆ ಇಲ್ಲ!: ನೋಡುಗನಿಗೆ ಈಗ ಸಾಕಷ್ಟು ಆಯ್ಕೆಗಳಿವೆ. ಕೈಯಲ್ಲೇ ಬೇಕಾದ ಜಗತ್ತಿನ ಚಿತ್ರಗಳನ್ನು ನೋಡುವ ಅವಕಾಶವಿದೆ. ಹೀಗಿರುವಾಗ, ಟಿವಿಗಳಲ್ಲಿ ಹಾಕುವ ಚಿತ್ರಗಳಿಗೆ ಕಾದು ಸಮಯ ವ್ಯರ್ಥ ಮಾಡಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ. ಅಷ್ಟೇ ಯಾಕೆ, ಚಿತ್ರಮಂದಿರದಲ್ಲಿ ನೋಡಿದ ಸ್ಟಾರ್ ಸಿನಿಮಾವನ್ನು ಪುನಃ, ಸಣ್ಣ ಪರದೆಯಲ್ಲಿ ನೋಡುವುದು ಕಷ್ಟ. ಅದರಲ್ಲೂ ಗೊತ್ತು ಗುರಿ ಇಲ್ಲದ ಹೀರೋಗಳ ಚಿತ್ರಗಳನ್ನು ಹೇಗೆ ತಾನೆ ನೋಡುವುದು ಎಂಬ ಪ್ರಶ್ನೆಯೂ ಬರುತ್ತೆ. ನಿರ್ದೇಶಕ ತನ್ನ ಕಲ್ಪನೆಯಲ್ಲಿ ಚಿತ್ರ ಕಟ್ಟಿಕೊಟ್ಟಿರುತ್ತಾನೆ. ಹಾಗಂತ, ಟಿವಿನವರು ಖರೀದಿಸಬೇಕೆಂದಲ್ಲ, ಪ್ರೇಕ್ಷಕ ನೋಡಬೇಕೂ ಅಂತಾನೂ ಇಲ್ಲ. ಹೀಗಾಗಿ ಹೊಸಬರು ಮಾಡುವ ಚಿತ್ರಗಳಿಗೆ ಟಿವಿ ರೈಟ್ಸ್ ಕಷ್ಟ ಎಂಬ ಮಾತು ಜನ ಜನಿತ. ಹಿಂದೆಲ್ಲಾ ಡಿವಿಡಿ ರೈಟ್ಸ್ ಕೂಡ ಇತ್ತು. ಈಗ ಟಿವಿ ರೈಟ್ಸ್ ಇರಲಿ, ಆಡಿಯೋ ರೈಟ್ಸ್ ಕೂಡ ಇಲ್ಲ. ಇದು ಹೊಸಬರಿಗೆ ಬೀಳುತ್ತಿರುವ ದೊಡ್ಡ ಪೆಟ್ಟು. ಇಲ್ಲಿ ಹೊಸಬರು ಹೊಸತನದ ಚಿತ್ರ ಮಾಡುತ್ತಲೇ ಇದ್ದಾರೆ. ಅಂತಹ ಬೆರಳೆಣಿಕೆ ಚಿತ್ರಗಳು ಸದ್ದು ಮಾಡುತ್ತಿವೆ. ಪ್ರೇಕ್ಷಕ ಜೈ ಅಂದರೂ, ವಿಮರ್ಶೆ ಚೆನ್ನಾಗಿ ಬಂದರೂ, ಗಳಿಕೆಯಲ್ಲಿ ತಕ್ಕಮಟ್ಟಿಗೆ ಪಾಸಾದರೂ, ಅಂತಹ ಚಿತ್ರಗಳಿಗೆ ಟಿವಿ ರೈಟ್ಸ್ ಇಲ್ಲ ಅನ್ನೋದೇ ವಿಪರ್ಯಾಸ. ಈಗಲೂ ಕೆಲ ನಟರ ಚಿತ್ರಗಳು ಟಿವಿ ರೈಟ್ಸ್ ಹೋಗದೆ ಹಾಗೆಯೇ ಉಳಿದಿವೆ ಅನ್ನೋದು ಮುಚ್ಚಿಟ್ಟ ವಿಷಯವೇನಲ್ಲ. ಇತ್ತೀಚೆಗಷ್ಟೇ ಕೆಲ ಸೆಕೆಂಡ್ ಕೆಟಗರಿ ನಟರ ಚಿತ್ರಗಳನ್ನು ಸಿಕ್ಕಷ್ಟು ಹಣಕ್ಕೆ ಟಿವಿ ರೈಟ್ಸ್ ಕೊಟ್ಟ ಉದಾಹರಣೆಗಳು ಸಾಕಷ್ಟಿವೆ.
ಟಿವಿ ರೈಟ್ಸ್ ಎಂಬ ಬೋನಸ್: ಹಿಂದೆಲ್ಲಾ ಕೆಲ ಚಿತ್ರಗಳ ಮುಹೂರ್ತ ಆಗುತ್ತಿದ್ದಂತೆಯೇ, ಕೆಲ ವಾಹಿನಿಗಳು ಮುಂಗಡ ಹಣ ಕೊಟ್ಟು, ಆ ಚಿತ್ರದ ಹಕ್ಕು ಫಿಕ್ಸ್ ಮಾಡುತ್ತಿದ್ದವು. ಅದು ಯಾವಾಗ ಹೆಚ್ಚಾಗುತ್ತಾ ಬಂತೋ, ಕೆಲವರಂತೂ, ಟಿವಿ ರೈಟ್ಸ್‌ಗಾಗಿಯೇ ಚಿತ್ರ ಮಾಡಲು ಸಾಲುಗಟ್ಟಿದರು. ಒಂದು ವಾಹಿನಿಯಿಂದ ಟಿವಿ ರೈಟ್ಸ್ ಸುಮಾರು 80 ಲಕ್ಷ ಸಿಗುತ್ತೆ ಅಂದರೆ, 50, 60 ಲಕ್ಷಕ್ಕೇ ಚಿತ್ರೀಕರಣ ಮಾಡುತ್ತಿದ್ದ ಕಾಲವೂ ಇತ್ತು. ಅಂತಹ ಚಿತ್ರಗಳೂ ಬಂದವು. ಆದರೆ, ಅದು ಹೆಚ್ಚಾಗುತ್ತಿದ್ದಂತೆಯೇ ಕೆಲವರು ವಾಹಿನಿಗಳನ್ನು ದುರುಪಯೋಗಪಡಿಸಿಕೊಂಡಿದ್ದೂ ಉಂಟು. ವಾಹಿನಿಗಳಿಂದ ಮುಂಗಡ ಹಣ ಪಡೆದ ಎಷ್ಟೋ ಚಿತ್ರಗಳು ಮುಹೂರ್ತ ಹೊರತುಪಡಿಸಿದರೆ, ಚಿತ್ರೀಕರಣವಾಗದೆ ಉಳಿದ ಉದಾಹರಣೆಗಳಿವೆ. ಟಿವಿ ರೈಟ್ಸ್ ನಂಬಿ ಸಿನಿಮಾ ಮಾಡುವ ಕಾಲ ಯಾವತ್ತೋ ಮುಗಿದು ಹೋಗಿದೆ. ಅದೇನಿದ್ದರೂ, ಒಂದು ರೀತಿಯ “ಬೋನಸ್’ ಇದ್ದಂತೆ. ಪ್ಯಾಷನ್ ಇದ್ದವರು ಟಿವಿ ರೈಟ್ಸ್ ಬಗ್ಗೆ ತಲೆಕೆಡಿಸಿಕೊಳ್ಳದೆ ಚಿತ್ರ ಮಾಡುತ್ತಿದ್ದಾರೆ. ಒಂದಂತೂ ನಿಜ, ಇಲ್ಲಿ ಗುಣಮಟ್ಟಕ್ಕೆ ಮತ್ತು ಸ್ಟಾರ್‌ಗಷ್ಟೇ ವ್ಯಾಲ್ಯು. ಎಷ್ಟೇ ಒಳ್ಳೇ ಚಿತ್ರ ಎನಿಸಿಕೊಂಡರೂ, ಹೊಸಬರೆಷ್ಟೇ ಸುದ್ದಿ ಮಾಡಿದರೂ ಪ್ರಯೋಜನ ಇಲ್ಲ. ಇದಷ್ಟೇ ಅಲ್ಲ, ರಾಜ್ಯ, ರಾಷ್ಟ್ರಪ್ರಶಸ್ತಿ ಪಡೆದ ಅದೆಷ್ಟೋ ಚಿತ್ರಗಳು ಕೂಡ ಟಿವಿ ರೈಟ್ಸ್ ಹೋಗಿಲ್ಲ ಎಂಬುದೂ ನೆನಪಿರಲಿ. ಹೊಸಬರ ಚಿತ್ರಗಳ ಟಿವಿ ರೈಟ್ಸ್‌ಗೆ ಮಾನದಂಡವೆಂದರೆ, ಅದು ಭರ್ಜರಿ ಸುದ್ದಿಯಾಗಬೇಕು, ಚಿತ್ರಮಂದಿರದಲ್ಲೂ ಪ್ರೇಕ್ಷಕರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆಯಬೇಕು, ತಾಂತ್ರಿಕತೆ, ಗುಣಮಟ್ಟದಲ್ಲೂ ಸೈ ಎನಿಸಿಕೊಂಡಿದ್ದರೆ ಮಾತ್ರ ಅದಕ್ಕೊಂದಷ್ಟು ಬೆಲೆ ಮತ್ತು ನೆಲೆ.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.