ಉತ್ಸವ ನಿತ್ಯೋತ್ಸವ ಪುಟ್ಟ ಪುಟ್ಟ ಸಂಭ್ರಮ ಒಟ್ಟಾರೆ ಉಲ್ಲಾಸ
Team Udayavani, Feb 3, 2017, 3:45 AM IST
ಇಂದು ಸಾಮಾಜಿಕ ಮತ್ತು ಸೈದ್ಧಾಂತಿಕ ನೆಲೆಯಲ್ಲಿ ಗಂಭೀರವಾದ ಹೇಳಿಕೆಗಳನ್ನು ನೀಡುವ ಕೆಲಸವನ್ನು ಸಿನಿಮಾಗಳೇ ಮಾಡಬೇಕು. ಟೀವಿ ವಾಹಿನಿಗಳು ಕೇವಲ ಮನರಂಜನೆ ಮತ್ತು ಸುದ್ದಿಗಷ್ಟೇ ಸೀಮಿತವಾಗಿದೆ.
ಬೆಂಗಳೂರಲ್ಲಿ, ಮೈಸೂರಲ್ಲಿ ಚಿತ್ರೋತ್ಸವ ಆರಂಭವಾಗಿದೆ. ಚಿತ್ರರಸಿಕರ ಪಾಲಿಗೆ ಅಂತಾರಾಷ್ಟ್ರೀಯ ಚಿತ್ರೋತ್ಸವಗಳೆಂದರೆ ಸಂಭ್ರಮ. ಚಿತ್ರೋತ್ಸವ ನಡೆಯುತ್ತಿರುವಷ್ಟೂ ದಿನ ಅವರ ದಿನಚರಿ, ಬೆಳಗ್ಗೆ ಎದ್ದು, ಆವತ್ತಿನ ಸಿನಿಮಾಗಳಲ್ಲಿ ಯಾವುದು ಚೆನ್ನಾಗಿದೆ ಅಂತ ನೋಡಿಕೊಂಡು, ಉದ್ದದ ಸಾಲಲ್ಲಿ ಕ್ಯೂ ನಿಂತು, ಮಧ್ಯಾಹ್ನದ ಊಟವನ್ನೂ ಲೆಕ್ಕಿಸದೇ ಸಿನಿಮಾ ನೋಡುವುದಷ್ಟೇ ಆಗಿರುತ್ತದೆ. ಮತ್ತೂಂದು ತಿಂಗಳು ಚಿತ್ರಾಸಕ್ತರ ಜಗತ್ತಿನಲ್ಲಿ ಆ ಸಿನಿಮಾಗಳದ್ದೇ ಮಾತು. ಚಿತ್ರೋತ್ಸವ ಹೀಗೆ ವಸಂತ ಕಾಲ ಕಾಲಿಡುವುದಕ್ಕೆ ಮೊದಲೇ ಮನಸ್ಸನ್ನು ಚಿಗುರಿಸುತ್ತದೆ.
ಕನ್ನಡ ಚಿತ್ರರಂಗ ಕಳೆಗಟ್ಟುತ್ತಿರುವ ಹೊತ್ತು ಇದು. ನಿಧಾನವಾಗಿ ಹೊಸ ತಲೆಮಾರು ತನ್ನ ನೆಲೆಯನ್ನು ಕಂಡುಕೊಳ್ಳುತ್ತಿದೆ. ಹೊಸ ರೀತಿಯಲ್ಲಿ ಯೋಚಿಸುವಂಥ ನಿರ್ದೇಶಕರು ಒಳಗೆ ಅಡಿಯಿಡುತ್ತಿದ್ದಾರೆ. ಸಂಭ್ರಮದ ವಾತಾವರಣ ಎಲ್ಲೆಲ್ಲೂ ಕಾಣಿಸುತ್ತಿದೆ. ಪಟ್ಟಾಗಿ ಕುಳಿತು ಚಿತ್ರಕತೆ ಮಾಡುತ್ತಾರೆ. ಕತೆಯ ಆಯ್ಕೆಯಲ್ಲೂ ವೈವಿಧ್ಯ ತೋರುತ್ತಿದ್ದಾರೆ. ಸಿನಿಮಾ ಅನ್ನುವುದು ಊರು ಬಿಟ್ಟು ಓಡಿ ಬಂದ ಹುಡುಗರ, ಅನಿವಾರ್ಯ ನೆಲೆಯಾಗದೇ, ತಾವಾಗಿಯೇ ಆಯ್ಕೆ ಮಾಡಿಕೊಳ್ಳುವ ಗಂಭೀರವಾದ ವೃತ್ತಿಯಾಗುತ್ತಿರುವುದನ್ನು ನಾವು ಇತ್ತೀಚಿನ ವರ್ಷಗಳಲ್ಲಿ ಕಾಣಬಹುದು.
ಚಿತ್ರೋತ್ಸವದ ಸಂಭ್ರಮಕ್ಕೂ ಇದೇ ಕಾರಣ. ಕಳೆದ ವರ್ಷ ಸಿನಿಮಾ ಮಾಡಲು ತುಡಿಯುತ್ತಿದ್ದವರೆಲ್ಲ ಗುಂಪುಗುಂಪಾಗಿ ಬಂದು ಸಿನಿಮಾ ನೋಡಿದರು. ಹಿರಿಯ ನಿರ್ದೇಶಕರಿಂದ ಕಿರಿಯರ ತನಕ ಎಲ್ಲರನ್ನೂ ಚಿತ್ರೋತ್ಸವ ತನ್ನೆಡೆಗೆ ಸೆಳೆದಿತ್ತು. ಹಾಗೆ ಚಿತ್ರೋತ್ಸವಕ್ಕೆ ಬಂದವರ ಪೈಕಿ ಹಲವರು ಹೊಸ ಕತೆಗಳೊಂದಿಗೆ ಹಾಜರಾದರು. ಒಂದು ಕಾಲದಲ್ಲಿ ದೆಹಲಿಯಲ್ಲಿ ನಡೆಯತ್ತಿದ್ದ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಬರುತ್ತಿದ್ದವರು ಬೆರಳೆಣಿಕೆಯ ಮಂದಿ ಮಾತ್ರ. ಮೊನ್ನೆ ಮೊನ್ನೆ ನಿರ್ದೇಶಕರು ನಮ್ಮನ್ನೂ ಚಿತ್ರೋತ್ಸವದ ಒಳಗೆ ಬಿಟ್ಟುಕೊಳ್ಳಿ, ನಮಗೂ ಜವಾಬ್ದಾರಿ ವಹಿಸಿ, ನಮ್ಮನ್ನೂ ಎಲ್ಲರಿಗೂ ಪರಿಚಯಿಸಿ ಎಂದಿದ್ದಾರೆ. ಇದನ್ನು ಹಟಮಾರಿತನ ಎಂದು ಭಾವಿಸದೇ, ತಮ್ಮ ಮನೆಯಲ್ಲಿ ನಡೆಯುತ್ತಿರುವ ಸಂಭ್ರಮದಲ್ಲಿ ಭಾಗವಹಿಸುವ ಹುಮ್ಮಸ್ಸೆಂದು ಭಾವಿಸಬೇಕು.
ಚಿತ್ರೋತ್ಸವವನ್ನು ರಾಜಕೀಯ ಕಾರ್ಯಕ್ರಮ ಆಗದಂತೆ ನೋಡಿಕೊಳ್ಳಬಹುದಿತ್ತು ಅನ್ನುವ ಮಾತಿಗೆ ಎಲ್ಲರ ಸಮರ್ಥನೆಯೂ ಇದೆ. ಸರ್ಕಾರವನ್ನು ಮೆಚ್ಚಿಸುವುದಕ್ಕೆಂದೇ ಅರ್ಧಕೋಟಿ ರುಪಾಯಿ ಖರ್ಚಿನಲ್ಲಿ ವಿಧಾನಸೌಧದ ಮುಂದೆ ಉದ್ಘಾಟನಾ ಸಮಾರಂಭ ಮಾಡುವುದು, ಮೈಸೂರು ಅರಮನೆಯ ಮುಂದೆ ಸಮಾರೋಪ ಸಮಾರಂಭ ಮಾಡುವುದು ವಿವೇಕದ ನಡೆ ಅಲ್ಲವೇ ಅಲ್ಲ. ರಾಜಕಾರಣಿಗಳೂ ಸ್ಟಾರುಗಳೂ ಎಲ್ಲರ ಜೊತೆ ಚಿತ್ರೋತ್ಸವ ನಡೆಯುತ್ತಿರುವ ಚಿತ್ರಮಂದಿರಕ್ಕೇ ಬಂದು ಸಿನಿಮಾ ನೋಡುವುದರಿಂದ ಚಿತ್ರೋತ್ಸವದ ಘನತೆ ಹೆಚ್ಚುತ್ತದೆ.
ಸಿನಿಮಾಕ್ಕಿಂತ ಯಾರೂ ದೊಡ್ಡವರಲ್ಲ, ಯಾರ ಕಾಲ ಬುಡಕ್ಕೂ ಚಿತ್ರೋತ್ಸವವನ್ನು ಕೊಂಡೊಯ್ಯುವ ಅಗತ್ಯವೂ ಇಲ್ಲ.
ಮೈಸೂರಿಗೆ ಚಿತ್ರೋತ್ಸವವನ್ನು ವಿಸ್ತರಿಸಿದ್ದು ಕೂಡ ಒಳ್ಳೆಯ ನಿರ್ಧಾರವೇ. ಸಿನಿಮಾ ಅನ್ನುವುದು ಕೇವಲ ಮನರಂಜನೆ ಅಲ್ಲ. ಅದು ಒಂದು ನಾಡಿನ ಹೆಮ್ಮೆಯ ಸಂಕೇತವೂ ಹೌದು ಅನ್ನುವುದು ಕ್ರಮೇಣ ಎಲ್ಲರಿಗೂ ಅರ್ಥವಾಗುತ್ತಿದೆ. ಪ್ರಮುಖ ರಾಜಕೀಯ ನಿಲುವುಗಳನ್ನೂ ಈ ಮಣ್ಣಿನ ಗುಣವನ್ನೂ ಪ್ರದರ್ಶಿಸುವಂಥ ಸಿನಿಮಾಗಳು ತಯಾರಾಗುತ್ತಿವೆ. “ದಂಗಲ್’ ಸಿನಿಮಾ ಹೆಣ್ಮಕ್ಕಳಲ್ಲಿ ಮೂಡಿಸಿದ ಪುಲಕ, “ಪದ್ಮಾವತಿ’ ಚಿತ್ರ ಎಬ್ಬಿಸಿದ ವಿವಾದ- ಎರಡನ್ನೂ ಕೂಡ ನಾವು ಕುತೂಹಲ ಮತ್ತು ಎಚ್ಚರದಿಂದ ನೋಡಬೇಕು ಅನ್ನುವುದನ್ನು ಚಿತ್ರೋತ್ಸವಗಳು ನೆನಪಿಸುತ್ತವೆ.
ಸಾಹಿತ್ಯ, ಸಂಗೀತ ಮತ್ತು ಚಿತ್ರಕತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಸಿದ ಪರಿಣಾಮವನ್ನು ಸಿನಿಮಾಗಳೂ ಮೂಡಿಸುವ ಮೂಲಕ ಒಂದು ಪ್ರದೇಶದ ಅಸ್ಮಿತೆಯ ಭಾಗವಾಗುವ ಕೆಲಸವನ್ನು ಚಿತ್ರಗಳು ಮಾಡಿಕೊಂಡು ಬಂದಿವೆ. ಅದನ್ನು ಮುಂದುವರಿಸುವ ಕೆಲಸವನ್ನು ಈ ಕಾಲದ ನಿರ್ದೇಶಕರು ಮಾಡುತ್ತಿರುವುದು ಚಿತ್ರರಂಗಕ್ಕೂ ಹೆಮ್ಮೆಯ ಸಂಗತಿಯಾಗಬೇಕು. ಅದಕ್ಕೆ ಪೂರಕವಾಗಿ ಚಿತ್ರೋತ್ಸವಗಳೂ ಕೆಲಸ ಮಾಡಬೇಕಾಗಿದೆ.
ಇವತ್ತು ಸಾಮಾಜಿಕ ಮತ್ತು ಸೈದ್ಧಾಂತಿಕ ನೆಲೆಯಲ್ಲಿ ಗಂಭೀರವಾದ ಹೇಳಿಕೆಗಳನ್ನು ನೀಡುವ ಕೆಲಸವನ್ನು ಸಿನಿಮಾಗಳೇ ಮಾಡಬೇಕು. ಟೀವಿ ವಾಹಿನಿಗಳು ಕೇವಲ ಮನರಂಜನೆ ಮತ್ತು ಸುದ್ದಿಗಷ್ಟೇ ಸೀಮಿತವಾಗಿದೆ. ಅರ್ಥಪೂರ್ಣ ಸಿನಿಮಾಗಳನ್ನು ತೋರಿಸುತ್ತಿದ್ದ ದೂರದರ್ಶನ ಹಿನ್ನೆಲೆಗೆ ಸರಿದಿದೆ. ಒಂದು ನೆಲದ ಅತ್ಯುತ್ತಮ ಕತೆಗಳು ಇವತ್ತು ಪ್ರಸಾರ ಆಗುತ್ತಿಲ್ಲ. ಒಂದು ಸಮುದಾಯದ ನೋವು ನಲಿವುಗಳನ್ನು ದಾಖಲಿಸುವಲ್ಲಿ ಕಿರುತೆರೆ ಸಕ್ರಿಯವಾಗಿಲ್ಲ. ಅದನ್ನು ಕೂಡ ಸಿನಿಮಾಗಳೇ ಮಾಡಬೇಕಿದ್ದರೆ, ಆ ನಿಟ್ಟಿನಲ್ಲಿ ಯೋಚಿಸುವಂಥ ನಿರ್ದೇಶಕರಿಗೆ ಅವಕಾಶಗಳು ಸಿಗಬೇಕು. ಅಂಥ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗಬೇಕು. ಇದು ಸಾಮಾಜಿಕ ಜಾಲತಾಣಗಳು ಸಕ್ರಿಯವಾಗಿರುವ ಸಂದರ್ಭವಾದ್ದರಿಂದ, ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳ ನೋಡಿದವರು ಬರೆಯುತ್ತಾರೆ. ಆ ಚಿತ್ರಗಳ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗುತ್ತದೆ.
ಹೀಗಾಗಿ ಚಿತ್ರೋತ್ಸವಗಳು ಒಂದು ಚಿತ್ರರಂಗದ ಮಾಪಕಗಳಾಗಿಯೂ ಕೆಲಸ ಮಾಡುತ್ತವೆ. ಇಂಥ ಚಿತ್ರೋತ್ಸವಗಳಲ್ಲಿ ಸೂಪರ್‌ಸ್ಟಾರುಗಳು ಮಾತ್ರ ನಾಪತ್ತೆಯಾಗಿರುತ್ತಾರೆ. ಅವರನ್ನು ಯಾಕೆ ಚಿತ್ರೋತ್ಸವ ಸೆಳೆಯುವುದಿಲ್ಲವೋ ಗೊತ್ತಿಲ್ಲ. ಅವರು ತಾವು ಚಿತ್ರೋತ್ಸವಗಳನ್ನು ಮೀರಿದವರು ಎಂದು ಭಾವಿಸುತ್ತಾರೋ ಏನೋ? ಆದರೆ, ಸ್ಟಾರು ಕೇವಲ ಲೋಕಲ್, ಕನ್ನಡ ಚಿತ್ರರಂಗ ಗ್ಲೋಬಲ್ ಅನ್ನುವುದನ್ನು ಅರ್ಥಮಾಡಿಕೊಂಡರೆ, ಚಿತ್ರೋತ್ಸವ ಸಿನಿಮಾಗಳನ್ನು ನೋಡುವ ವಿನಯ ಮತ್ತು ಸದ್ಭಾವನೆ ಅವರಲ್ಲಿ ಮೂಡಬಹುದೋ ಏನೋ?
ಈ ಚಿತ್ರೋತ್ಸವದ ಸಂಭ್ರಮ ನಿಮ್ಮನ್ನು ಮುದಗೊಳಿಸಲಿ ಎಂಬುದು ನಮ್ಮ ಆಶಯ.
– ಜೋಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.