ಬಾಲಿವುಡ್‌ಗೆ ವೀರ್ ಸಮರ್ಥ್
Team Udayavani, Nov 30, 2018, 6:00 AM IST
“ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ…’
– ಬಹುಶಃ ಈ ಹಾಡನ್ನು ಕೇಳದವರಿಲ್ಲ. ಹಾಡು ಕೇಳಿ ಅದೆಷ್ಟೋ ಜನ ತನ್ನೂರಿಗೆ ಹೋದವರಿದ್ದಾರೆ. ತನ್ನವರನ್ನು ಸೇರಿದವರೂ ಇದ್ದಾರೆ. “ಪರಪಂಚ’ ಚಿತ್ರದ ಈ ಹಾಡಿಗೆ ರಾಗ ಸಂಯೋಜಿಸಿದ್ದು ಸಂಗೀತ ನಿರ್ದೇಶಕ ವೀರ್ ಸಮರ್ಥ್. ಎಲ್ಲಾ ಸರಿ, ಈಗ ಯಾಕೆ ಈ ಹಾಡಿನ ವಿಷಯ ಎಂಬ ಪ್ರಶ್ನೆ ಸಹಜ. ಇಂಥದ್ದೊಂದು ಹಾಡು ಕೊಟ್ಟ ಸಂಗೀತ ನಿರ್ದೇಶಕ ವೀರ್‌ಸಮರ್ಥ್, ಇದೀಗ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಇದೇ ಮೊದಲ ಸಲ ಹಿಂದಿ ಚಿತ್ರವೊಂದಕ್ಕೆ ಸಂಗೀತ ನೀಡಿದ್ದಾರೆ. ಅಂದಹಾಗೆ, ವೀರ್‌ಸಮರ್ಥ್ ಬಾಲಿವುಡ್‌ಗೆ ಹೋಗೋಕೆ ಕಾರಣ, “ಶಕೀಲಾ’. ಹೀಗೆಂದರೆ, ಇನ್ನೇನೋ ಅರ್ಥ ಕಲ್ಪಿಸಿಕೊಳ್ಳಬೇಕಿಲ್ಲ. “ಶಕೀಲಾ’ ಹಿಂದಿ ಸಿನಿಮಾದ ಹೆಸರು. ಕನ್ನಡ ನಿರ್ದೇಶಕ ಇಂದ್ರಜಿತ್ ನಿರ್ದೇಶನದ ಚಿತ್ರವಿದು. ಹಾಗಾಗಿ, ಈ ಹಿಂದಿ ಚಿತ್ರಕ್ಕೂ ಕನ್ನಡ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರ ಕೀ ಬೋರ್ಡ್‌ನ ಸ್ಪರ್ಶವಿದೆ. ಈ ಚಿತ್ರದಲ್ಲಿ ವೀರ್‌ಸಮರ್ಥ್ ಮೂರು ಹಾಡುಗಳನ್ನು ಸಂಯೋಜಿಸಿದ್ದು, ಹಿನ್ನೆಲೆ ಸಂಗೀತವನ್ನೂ ನೀಡಿದ್ದಾರೆ. ಇವರ ಜೊತೆಗೆ ಬಾಲಿವುಡ್‌ನ ಮೀಟ್ ಬ್ರದರ್ಸ್ ಕೂಡ ಚಿತ್ರದ ಪ್ರಮೋಶನಲ್ ಸಾಂಗ್‌ವೊಂದಕ್ಕೆ ರಾಗ ಸಂಯೋಜಿಸಿದ್ದಾರೆ. ಶ್ರೇಯಾಘೋಷಾಲ್, ವಿಶಾಲ್ ಮಿಶ್ರ, ಪ್ರಕೃತಿ ಕಕ್ಕಡ್ ಹಾಡಿದ್ದಾರೆ.
ಹಾಗೆ ನೋಡಿದರೆ, ವೀರ್ ಸಮರ್ಥ್ ಮೊದಲು ಬಾಲಿವುಡ್‌ನಲ್ಲೇ ಒಂದಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಹಾಗಂತ, ಯಾವುದೇ ಚಿತ್ರಗಳಿಗೆ ಸಂಗೀತ ನೀಡಿಲ್ಲ. ಹಿಂದಿಯ “ಕಬೀ ಖುಷ್ ಕಬೀ ಘಮ್’ ಚಿತ್ರದ ಹಾಡಿಗೆ ಕೋರಸ್ ಹಾಡಿದ್ದರು. ಅಷ್ಟೇ ಅಲ್ಲ, ಆ ಹಾಡಲ್ಲಿ ಕೇಳಿಬರುವ ವಿಷಲ್ ಸದ್ದಿನಲ್ಲಿ ವೀರ್‌ಸಮರ್ಥ್ ಅವರ ಧ್ವನಿಯೂ ಇದೆ. ಆ ಹಾಡಿಗೆ ದನಿಯಾದ 40 ಗಾಯಕರ ಪೈಕಿ ವೀರ್ ಕೂಡ ಒಬ್ಬರು.
ಕನ್ನಡದ ಕೆಲ ಸಂಗೀತ ನಿರ್ದೇಶಕರಿಗೂ ಇದ್ದಂತೆ, ವೀರ್‌ಸಮರ್ಥ್ ಅವರಿಗೂ ಬಾಲಿವುಡ್‌ನಲ್ಲಿ ಕೆಲಸ ಮಾಡುವ ಆಸೆ ಇತ್ತು. ಆದರೆ, ಇಷ್ಟು ಬೇಗ ಈಡೇರುತ್ತೆ, ಅದರಲ್ಲೂ “ಶಕೀಲಾ’ ಚಿತ್ರಕ್ಕೆ ಕೆಲಸ ಮಾಡುವ ಅವಕಾಶ ಸಿಗುತ್ತೆ ಅಂದುಕೊಂಡಿರಲಿಲ್ಲ. ಅಷ್ಟಕ್ಕೂ ವೀರ್‌ಸಮರ್ಥ್ ಅವರಿಗೆ ಅಂಥದ್ದೊಂದು ಅವಕಾಶ ಸಿಗಲು ಕಾರಣ, “ಮಾಸ್ ಲೀಡರ್’ ಚಿತ್ರದ “ಆಭಿದಾ ಆಭಿದಾ ಏ ಮೇರಾ ನಾಮ್ ಹೇ…’ ಎಂಬ ಹಾಡು. ಆ ಹಾಡು ಕೇಳಿದ ಇಂದ್ರಜಿತ್, ವೀರ್‌ಸಮರ್ಥ್ ಅವರಿಗೆ ಫೋನಾಯಿಸಿ, “ಶಕೀಲಾ’ ಚಿತ್ರಕ್ಕೆ ಸಂಗೀತ ನೀಡುವ ಅವಕಾಶ ಕೊಟ್ಟಿದ್ದಾರೆ. ನಂಬಿಕೆ ಇಟ್ಟು ಕೆಲಸ ಕೊಟ್ಟ ಇಂದ್ರಜಿತ್ ಅವರ ನಂಬಿಕೆ ಉಳಿಸಿಕೊಂಡಿರುವ ಖುಷಿ ವೀರ್ ಅವರಿಗಿದೆ.
“ಶಕೀಲಾ’ ಚಿತ್ರ ಮಲಯಾಳಂ ನಟಿ ಶಕೀಲಾ ಅವರ ಬಯೋಪಿಕ್. ಈ ಚಿತ್ರದಲ್ಲಿ “ಮಸಾನ್’,”ಫುಕ್‌ರೇ’, “ಲವ್‌ಸೋನಿಯಾ’ ಖ್ಯಾತಿಯ ರಿಚಾ ಚೆಡ್ಡಾ ನಾಯಕಿಯಾಗಿದ್ದಾರೆ. ಉಳಿದಂತೆ ಪಂಕಜ್ ತ್ರಿಪಾಠಿ ಇತರರು ನಟಿಸಿದ್ದಾರೆ. ಈಗಾಗಲೇ “ಶಕೀಲಾ’ ಪೂರ್ಣಗೊಂಡಿದ್ದು, ಬಿಡುಗಡೆ ತಯಾರಿಯಲ್ಲಿದೆ.
ಈ ಒಂದು ದಶಕದ ಸಿನಿಮಾ ಪಯಣದಲ್ಲಿ ಇದೇ ಮೊದಲ ಸಲ ಹಿಂದಿ ಚಿತ್ರಕ್ಕೆ ಸಂಗೀತ ಕೊಟ್ಟಿರುವ ಖುಷಿ ವೀರ್ ಅವರದು. ಅವರ ಹಾರ್ಮೋನಿಯಂನಿಂದ ಹೊರಬಂದ ಅದೆಷ್ಟೋ ಗೀತೆಗಳು ಗುನುಗುವಂತಿದ್ದರೂ, ಅವರಿಗೊಂದು ದೊಡ್ಡ ಬ್ರೇಕ್ ಬೇಕಿದೆ. “ಶಿವಮಣಿ’ ಚಿತ್ರದ “ಮೊದ ಮೊದಲ ಮಾತು ಚೆಂದ’ ಎಂಬ ಹಿಟ್ ಹಾಡು ಕೊಟ್ಟ ಅವರು, “ಒಲವೇ ವಿಸ್ಮಯ’ದ “ಕೊಂಚ ರೇಷಿಮೆ, ಕೊಂಚ ಹುಣ್ಣಿಮೆ’, “ಕಾರಂಜಿ’ಯ “ಈ ದಿನ ಹೊಸದಾಗಿದೆ’, “ದ್ಯಾವ್ರೇ’ ಚಿತ್ರದ “ಪಾಪ ಪುಣ್ಯ’, “ದ್ಯಾವ್ರೇ’, “ಪರಪಂಚ’ದ “ಹುಟ್ಟಿದ ಊರನು ಬಿಟ್ಟು ಬಂದ ಮೇಲೆ..’ “ಮಾಸ್ ಲೀಡರ್’ ಚಿತ್ರದ “ಇನಿಯಾ ಎನಲೇ’ ಸೇರಿದಂತೆ ಹಲವು ಹಾಡುಗಳು ಹಿಟ್ ಆಗಿವೆಯಾದರೂ, ವೀರ್‌ಸಮರ್ಥ್ ಅವುಗಳ ಜನಕ ಅನ್ನೋದು ಸಿನಿಮಾ ಮಂದಿ ಹೊರತಾಗಿ ಬಹಳಷ್ಟು ಮಂದಿಗೆ ಗೊತ್ತಿಲ್ಲ. “ಶಕೀಲಾ’ ಹೊಸ ಇಮೇಜ್ ಕಟ್ಟಿಕೊಡುವ ನಿರೀಕ್ಷೆಯಲ್ಲಿದ್ದಾರೆ ವೀರ್ ಸಮರ್ಥ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.