ಇದ್ದಿದ್ದು ಇದ್ದಂಗೆ ಹೇಳಿದ್ರೆ
Team Udayavani, Sep 21, 2018, 6:00 AM IST
“ಈ ಮೀಡಿಯಾದವರಿಗ್ಯಾಕೆ ನನ್ನ ಮಗಳ ಮದುವೆ ಯೋಚನೆ …’
ಹಾಗಂತ ಜನಪ್ರಿಯ ನಟಿಯೊಬ್ಬರ ತಂದೆ ಇತ್ತೀಚೆಗೆ ಕುಹಕವಾಡಿದ್ದರು. ಅವರ ಮಗಳ ಮದುವೆಯ ವಿವರಗಳ ಕುರಿತಾಗಿ ಮಾಧ್ಯಮದವರು ಅವರಿಗೆ ಫೋನ್ ಮಾಡಿದರೆ, “ಮದುವೆ ಎನ್ನುವುದು ಪರ್ಸನಲ್ ವಿಷಯ’ ಎಂದು ಹೇಳಿ ಫೋನ್ ಇಟ್ಟಿದ್ದರು. ಹಾಗಂತ ಆ ಮದುವೆಗೆ ಮಾಧ್ಯಮವರಿಗೆ ಆಹ್ವಾನ ಇರಲಿಲ್ಲ ಎಂದೇನಲ್ಲ. ಪತ್ರಿಕೆ ಮತ್ತು ಚಾನಲ್‌ಗಳಲ್ಲಿ ಪ್ರಚಾರ ಎಷ್ಟು ಸಿಗಬೇಕೋ, ಅಷ್ಟಕ್ಕೇ ಆಹ್ವಾನ ನೀಡಲಾಗಿತ್ತು.
ಇದು ಬರೀ ಅವರೊಬ್ಬರ ವಿಷಯವಲ್ಲ. ಇತ್ತೀಚೆಗೆ ಜನಪ್ರಿಯ ಜೋಡಿಯೊಂದರ ಬ್ರೇಕಪ್ ಆದಾಗ, ಅದಕ್ಕೂ ಮೊದಲು ನಟಿಯೊಬ್ಬರ ರಹಸ್ಯ ಮದುವೆ ವಿಷಯ ಹೊರಬಿದ್ದಾಗ, ಅದಕ್ಕೂ ಮುನ್ನ ಜನಪ್ರಿಯ ಹೀರೋ-ಹೀರೋಯಿನ್ ನಡುವಿನ ಪ್ರೇಮ ಪ್ರಸಂಗ ಬಯಲಾದಾಗ, ಗಂಡ-ಹೆಂಡತಿ ಕಲಹವಾಗಿ ವಿಚ್ಛೇಧನದ ಹಂತದವರೆಗೂ ಬಂದಾಗ … ಇಂಥ ಸಂದರ್ಭದಲ್ಲೆಲ್ಲಾ ಒಂದು ಮಾತು ಸಾಮಾನ್ಯವಾಗಿ ಕೇಳಿ ಬರುತ್ತದೆ. ಇದು ವೈಯಕ್ತಿಕ ವಿಷಯ ಮತ್ತು ಈ ವಿಷಯಕ್ಕೆ ಯಾಕೆ ತಲೆ ಹಾಕುತ್ತಾರೆ ಎಂಬ ಆರೋಪಗಳನ್ನು ಚಿತ್ರರಂಗದವರು, ಮಾಧ್ಯಮದವರ ಮೇಲೆ ಹಾಕುತ್ತಲೇ ಬಂದಿದ್ದಾರೆ. ಚಿತ್ರರಂಗದವರ ಪಾಲಿಗೆ ಇವೆಲ್ಲಾ ಪರ್ಸನಲ್ ವಿಷಯಗಳಾಗಿದ್ದು, ಈ ವಿಷಯಗಳಲ್ಲಿ ಮಾಧ್ಯಮದವರು ತಲೆ ಹಾಕಬಾರದು, ಅದನ್ನು ಸುದ್ದಿ ಮಾಡಬಾರದು ಎಂಬ ಪರೋಕ್ಷವಾದ ಒತ್ತಡ ಬಹಳ ಕಾಲದಿಂದ ಇದ್ದೇ ಇದೆ.
ಇಲ್ಲಿ ಚರ್ಚೆಯಾಗಬೇಕಾದ ವಿಷಯವೇನೆಂದರೆ, ಇಲ್ಲಿ ಯಾವುದು ವೈಯಕ್ತಿಕ ಮತ್ತು ಯಾವುದು ಸಾರ್ವಜನಿಕ ಎಂಬುದು. ಬೇರೆ ಯಾವುದೇ ವಿಷಯದಲ್ಲಿ ಇರದ ಈ ವೈಯಕ್ತಿಕ ಮತ್ತು ಸಾರ್ವಜನಿಕ ಎಂಬ ಚರ್ಚೆ, ಪ್ರೀತಿಯಲ್ಲಿ, ಮದುವೆಯಲ್ಲಿ, ಬ್ರೇಕಪ್‌ನಲ್ಲಿ, ಡೈವೋರ್ಸ್‌ನಲ್ಲಿ, ಕಲಹದಲ್ಲಿ ಮಾತ್ರ ವಿಪರೀತವಾಗಿ ಕೇಳಿಬರುತ್ತದೆ. ಈ ತರಹದ ವಿಷಯಗಳೆಲ್ಲಾ ವೈಯಕ್ತಿಕವಾದದ್ದು ಮತ್ತು ಈ ವಿಚಾರದಲ್ಲಿ ಮಾಧ್ಯಮದವರು ತಲೆ ಹಾಕಬಾರದು ಎಂಬ ನಿಲುವು ಸೆಲೆಬ್ರಿಟಿಗಳದ್ದಾಗಿರುತ್ತದೆ. ಇದಕ್ಕೆ ಉದಾಹರಣೆಯಾಗಿ, ಕನ್ನಡ ಚಿತ್ರರಂಗ ದಿಗಂತದಲ್ಲಿ ಜನಪ್ರಿಯವಾಗಿರುವ ಒಂದು ಜೋಡಿಯನ್ನು ಉದಾಹರಿಸಬಹುದು. ಎಷ್ಟೋ ವರ್ಷಗಳಿಂದ ಗೆಳೆಯರಾಗಿರುವ ಆ ನಾಯಕ ಮತ್ತು ನಾಯಕಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಕಳೆದ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.
ಇದು ನಿಜವಾ ಎಂದರೆ ಅವರಿಬ್ಬರೂ ಹೂಂ ಎನ್ನುವುದಿಲ್ಲ. ಸುಳ್ಳಾ ಎಂದರೆ ಉಹೂಂ ಎನ್ನುವುದಿಲ್ಲ. ಈ ಕುರಿತು ಅವರನ್ನು ಕೇಳಿದರೆ, ಇಬ್ಬರಿಗೂ ಸಿಟ್ಟು ಬರುತ್ತದೆ. ಅದು ತಮ್ಮ ವೈಯಕ್ತಿಕ ವಿಷಯ ಎಂಬ ಸಮಜಾಯಿಷಿ ಕೇಳಿಬರುತ್ತದೆ.
ಹಾಗೆ ನೋಡಿದರೆ, ಇಲ್ಲಿ ಎಲ್ಲವೂ ವೈಯಕ್ತಿಕವೇ. ಒಬ್ಬ ನಟ ಅಥವಾ ನಟಿ ಒಂದು ಚಿತ್ರ ಒಪ್ಪಿಕೊಂಡರೆ, ಅದು ಅವರ ವೈಯಕ್ತಿಕ ವಿಷಯವೇ ಹೊರತು, ಅದರಿಂದ ಸಮಾಜಕ್ಕಾಗಲೀ, ಸಾರ್ವಜನಿಕರಿಗಾಗಲೀ ಯಾವುದೇ ಲಾಭವಿಲ್ಲ. ಆದರೆ, ಅದು ವೈಯಕ್ತಿಕ ವಿಷಯ ಎಂದು ಅವರು ಭಾವಿಸುವುದಿಲ್ಲ. ಅದು ದೊಡ್ಡ ಸುದ್ದಿಯಾಗಬೇಕು, ತಮ್ಮ ಹೊಸ ಚಿತ್ರದ ಕುರಿತು ಎಲ್ಲರೂ ಮಾತಾಡಬೇಕು ಎಂದು ಸೆಲೆಬ್ರಿಟಿಗಳು ಬಯಸುತ್ತಾರೆ. ಬರೀ ಚಿತ್ರವಷ್ಟೇ ಅಲ್ಲ, ತಮ್ಮ ಹುಟ್ಟುಹಬ್ಬವೋ ಅಥವಾ ಆ್ಯನಿವರ್ಸರಿಯೋ ವೈಯಕ್ತಿಕ ವಿಚಾರ ಅಂತನಿಸುವುದಿಲ್ಲ. ತಾವು ಕಾರು ಕೊಂಡಿದ್ದು, ಮನೆ ಖರೀದಿಸಿದ್ದು, ಉಡುಗೊರೆ ಪಡೆದಿದ್ದು, ಪ್ರಶಸ್ತಿ ಸ್ವೀಕರಿಸಿದ್ದು, ಕ್ರಿಕೆಟ್ ಆಡಿದ್ದು, ದಾನ ಮಾಡಿದ್ದು, ಹಾಡು ಹೇಳಿದ್ದು, ಯಾವುದೋ ಪಾರ್ಟಿಗೆ ಹೋಗಿದ್ದು, ಕಾಫಿ ಕುಡಿದಿದ್ದು, ತಿಂಡಿ ತಿಂದಿದ್ದು … ಎಲ್ಲವೂ ಸುದ್ದಿಯಾಗಬೇಕು, ಎಲ್ಲಾ ರೀತಿಯಿಂದ ತಮಗೆ ಪ್ರಚಾರ ಸಿಗಬೇಕು ಎಂದು ಅವರು ಬಯಸುತ್ತಾರೆ. ಇದೆಲ್ಲಾ ವೈಯಕ್ತಿಕ ವಿಷಯ, ಇದರಿಂದ ಯಾರಿಗೆ ಪ್ರಯೋಜನ, ಇದನ್ನೇ ಯಾಕೆ ಸುದ್ದಿ ಮಾಡಬೇಕು ಎಂದು ಅವರು ಯೋಚಿಸುವುದಿಲ್ಲ. ಇವೆಲ್ಲವೂ ಎಲ್ಲರಿಗೂ ತಿಳಿಯಬೇಕು, ಸಾಕಷ್ಟು ಪ್ರಚಾರ ಮತ್ತು ಖ್ಯಾತಿ ಸಿಗಬೇಕು ಎಂಬುದು ಪ್ರತಿಯೊಬ್ಬ ಸೆಲೆಬ್ರಿಟಿಯ ಆಸೆಯಾಗಿರುತ್ತದೆ. ಕೆಲವೊಮ್ಮೆ ತಮ್ಮ ಸುದ್ದಿಗೆ ಸೂಕ್ತ ಪ್ರಚಾರ ಸಿಗದಿದ್ದಾಗ, ಸೂಕ್ತ ಪ್ರಚಾರ ಪಡೆಯುವುದಕ್ಕೆ ಕೆಲವರು ಪರೋಕ್ಷವಾಗಿ ಪ್ರಯತ್ನಿಸುವುದೂ ಉಂಟು.
ಆ ಸಂದರ್ಭದಲ್ಲಿ ಈ ವಿಷಯ ಮಾಧ್ಯಮದವರಿಗೆ ಯಾಕೆ, ಸಾರ್ವಜನಿಕರಿಗೆ ಯಾಕೆ ಎಂದು ಯಾವ ಸೆಲೆಬ್ರಿಟಿಯೂ ಯೋಚಿಸುವುದಿಲ್ಲ. ಆದರೆ, ಮದುವೆ, ಪ್ರೀತಿ, ಡೈವೋರ್ಸುಗಳ ವಿಷಯ ಬಂದಾಗ ಅಲ್ಲಿ ಪರ್ಸನಲ್ ಎಂಬ ಗೋಡೆ ಎದ್ದುಬಿಡುತ್ತದೆ. ತಮ್ಮ ಪ್ರತಿ ವಿಷಯ ಪ್ರಚಾರವಾಗಲಿ, ಜಗಜ್ಜಾಹೀರಾಗಲಿ, ತಮ್ಮ ಲೆವೆಲ್ ಗೊತ್ತಾಗಲಿ ಎಂದು ಬಯಸುವವರು, ಆ ಸಂದರ್ಭದಲ್ಲಿ ಒಂದೇ ಒಂದು ವಿಷಯ ಸುದ್ದಿಯಾಗಬಾರದು, ಪ್ರಚಾರವಾಗಬಾರದು ಎಂದು ಯೋಚಿಸತೊಡಗುತ್ತಾರೆ. ಬರೀ ಈ ವಿಷಯಗಳಷ್ಟೇ ಅಲ್ಲ, ಸಿನಿಮಾ ಗೆದ್ದಾಗ ದೊಡ್ಡ ಸುದ್ದಿಯಾಗಬೇಕೆಂದು ಬಯಸುವವರು ಚಿತ್ರ ಸೋತಾಗ ಅಥವಾ ಒಂದು ಚಿತ್ರದಿಂದ ನಷ್ಟವಾದಾಗ ಅದು ದೊಡ್ಡ ಸುದ್ದಿಯಾಗಬಾರದು ಎಂದು ಬಯಸುತ್ತಾರೆ. ಹೇಗೆ ತಾವು ಚಿತ್ರ ಒಪ್ಪಿಕೊಳ್ಳುವುದು, ಹುಟ್ಟುಹಬ್ಬ ಆಚರಿಸಿಕೊಳ್ಳುವುದು, ಕಾರು ಖರೀದಿಸಿದ್ದು, ಪ್ರಶಸ್ತಿ ಸ್ವೀಕರಿಸಿದ್ದು ಒಂದು ಸುದ್ದಿಯಾಗಬೇಕು ಎಂದು ಪರಿಗಣಿಸುತ್ತಾರೋ, ಅದೇ ರೀತಿ ಇವೆಲ್ಲಾ ವಿಷಯಗಳೂ ಸಹ ಒಂದು ಸುದ್ದಿ ಎಂದು ಯಾರೂ ಯೋಚಿಸುವುದಕ್ಕೆ ಇಷ್ಟಪಡುವುದಿಲ್ಲ. ಮಾಧ್ಯಮದವರು ನೆಗೆಟಿವ್ ಆಗಿ ಬಿಂಬಿಸುತ್ತಾರೆ ಎಂದು ದೂರಲಾಗುತ್ತದೆ. ಹಾಗೆ ನೋಡಿದರೆ, ಯಾರೋ ದಂಪತಿ ದೂರವಾಗಲಿ, ಪ್ರೇಮಿಗಳ ಲವ್ ಬ್ರೇಕಪ್ ಆಗಲಿ, ಇನ್ನಾéರಿಗೋ ನಷ್ಟವಾಗಲಿ ಅಂತ ಮಾಧ್ಯಮದವರಾಗಲಿ ಅಥವಾ ಅಭಿಮಾನಿಗಳಾಗಲಿ ಬಯಸುವುದಿಲ್ಲ. ಒಳ್ಳೆಯದೋ, ಕೆಟ್ಟಧ್ದೋ ಒಂದು ಸುದ್ದಿ ಇದೆ ಮತ್ತು ಅದೊಂದು ಮಾಧ್ಯಮದ ಮೂಲಕ ಎಲ್ಲರಿಗೂ ಸಿಗುತ್ತಿದೆ ಎನ್ನುವುದಷ್ಟೇ ಸತ್ಯ.
ನಿಜ ಹೇಳಬೇಕೆಂದರೆ, ಬ್ರೇಕಪ್ ಆದಾಗ, ಮದುವೆಯೊಂದು ವಿಚ್ಛೇದನದ ಹಂತಕ್ಕೆ ಬಂದಾಗ, ಜಗಳಗಳಾದಾಗ ತಪ್ಪು ಆ ಸೆಲೆಬ್ರಿಟಿಗಳದ್ದಿರುತ್ತದೇ ಹೊರತು, ಮಾಧ್ಯಮದವರದ್ದಲ್ಲ. ಕೆಲವೊಮ್ಮೆ ಮಾಧ್ಯಮದವರು ಅತಿಯಾಗಿ ವೈಭವೀಕರಿಸುತ್ತಾರೆ ಎನ್ನುವುದು ಹೌದಾದರೂ, ಆ ಪ್ರಕರಣ ನಡೆದಿರುತ್ತದೆ ಎಂಬುದೂ ಅಷ್ಟೇ ಸತ್ಯ. ಹಾಗಾಗಿ ಅಂತಹ ಸಂದರ್ಭಗಳಲ್ಲಿ ಮಾಧ್ಯಮದವರ ಮೇಲೆ ಕೆಸರೆರಚಾಟ ಮಾಡುವುದಕ್ಕಿಂತ, ತಮ್ಮ ತಪ್ಪನ್ನು ತಿದ್ದಿಕೊಂಡು ಹೋದರೆ, ಯಾವ ಸೆಲೆಬ್ರಿಟಿಗಳಿಗೂ ಸಮಸ್ಯೆ ಇರುವುದಿಲ್ಲ. ಅಷ್ಟೇ ಏಕೆ, ಈ ವೈಯಕ್ತಿಕ ಮತ್ತು ಸಾರ್ವಜನಿಕ ಎಂಬ ಲೆಕ್ಕಾಚಾರಗಳೂ ಇರುವುದಿಲ್ಲ. ಆದರೆ, ಇದ್ದಿದ್ದನ್ನು ಇದ್ದ ಹಾಗೆ ಮಾತ್ರ ಹೇಳಬಾರದು. ಹೇಳಿದರೆ ಅಥವಾ ಕೇಳಿದರೆ ಬರುವುದು, “ಅದು ಪರ್ಸನಲ್’ ಎಂಬ ಒಂದೇ ಉತ್ತರ.
ಚೇತನ್ ನಾಡಿಗೇರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.