ವಿನೋದನ ವಿನ್ನಿಂಗ್ ಪ್ಲಾನ್: ಅಪ್ಪನ ಅಭಿಮಾನಿಗಳೇ ನನ್ನ ಅಭಿಮಾನಿಗಳು
Team Udayavani, Sep 15, 2017, 11:27 AM IST
“ನಾನೇನೇ ಮಾಡಿದ್ರೂ ಅಪ್ಪನನ್ನು ಬ್ರೇಕ್ ಮಾಡೋಕ್ಕಾಗಲ್ಲ. ಅವರು ಎಲ್ಲರ ಮನಸ್ಸಲ್ಲೂ ತಳ ಊರಿದ್ದಾರೆ. ಯಾರೇ ನನ್ನ ಸಿನಿಮಾ ನೋಡಿದ್ರೂ, ಎಲ್ಲೋ ಒಂದು ಕಡೆ ನಿನ್ನ ತಂದೆ ನೋಡಿದಂಗಾಗುತ್ತೆ ಅಂತಾರೆ…’
– ಹೀಗೆ ಹೇಳುತ್ತಲೇ, ಆ ಕ್ಷಣ ಕಣ್ತುಂಬಿಕೊಂಡರು ವಿನೋದ್ ಪ್ರಭಾಕರ್. ಅವರ ಅಭಿನಯದ “ಕ್ರ್ಯಾಕ್’ ಇಂದು ತೆರೆಗೆ ಬಂದಿದೆ. ಈ ಕುರಿತು ಮಾತಿಗೆ ಸಿಕ್ಕ ವಿನೋದ್ ಪ್ರಭಾಕರ್, ತಂದೆ ಟೈಗರ್ ಪ್ರಭಾಕರ್ ಮೇಲಿನ ಪ್ರೀತಿ ಅವರ ಅಭಿಮಾನಿಗಳು ತೋರುವ ಅಭಿಮಾನ ಕುರಿತು ಹೇಳುತ್ತಾ ಹೋದರು.
“ಅಪ್ಪ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಾನು ಎಷ್ಟೇ ಪ್ರಯತ್ನ ಪಟ್ಟರೂ ಶೇ.80 ರಷ್ಟು ಅವರ ಹಾಗೆಯೇ ಕಾಣಿಸ್ತೀನಿ. ಏನ್ಮಾಡೋದು, ಎಲ್ಲಾದ್ರೂ ಹೋಗಿ ಮೌಲ್ಡ್ ಮಾಡಿಸಿಕೊಂಡ್ ಬರಬೇಕಷ್ಟೇ. ಜನರಷ್ಟೇ ಅಲ್ಲ, ನಮ್ ಬಾಸ್ ದರ್ಶನ್ “ಕ್ರ್ಯಾಕ್’ ಟ್ರೇಲರ್ ನೋಡಿ, “ಏನ್ ಟೈಗರ್, ಚಿತ್ರದಲ್ಲಿ ನಿನ್ ಹೇರ್‌ಸ್ಟೈಲ್ ಚೆನ್ನಾಗಿದೆ. ಡೈಲಾಗ್ ಡಿಲವರಿಯಲ್ಲಿ ರಾಗ ಎಳಕ್ಕೊಂಡು ಮಾತಾಡುವ ಶೈಲಿಯಲ್ಲಿ ಎಲ್ಲೋ ಒಂದು ಕಡೆ ನಿಮ್ಮ ತಂದೆಯನ್ನೇ ನೋಡಿದಂತಾಗುತ್ತೆ’ ಅಂದ್ರು. ನಾನು ಅವರಂತೆ ಕಾಣಿಸಬಾರದು ಅಂತ ಎಷ್ಟೇ ಪ್ರಯತ್ನ ಮಾಡಿದ್ರೂ ಆಗ್ತಾ
ಇಲ್ಲ. ತೆರೆಯ ಮೇಲೆ ನನ್ನ ನೋಡಿದವರು ಅಪ್ಪನಿಗೆ ಹೋಲಿಕೆ ಮಾಡ್ತಾರೆ. ಆದರೆ, ನಾನು ಅವರನ್ನ ಬ್ರೇಕ್ ಡೋಕ್ಕಾಗಲ್ಲ. ಅವರ ರೀತಿ ಡೈಲಾಗ್ ಹೇಳಬಾರದು ಅಂತ ಎಷ್ಟೋ ಸಲ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. “ಕ್ರ್ಯಾಕ್’ ಮಾಸ್ ಪ್ರೇಕ್ಷಕರಿಗಷ್ಟೇ ಅಲ್ಲ, ಎಲ್ಲಾ ವರ್ಗದವರಿಗೂ
ಇಷ್ಟವಾಗುವಂತಹ ಒಂದೊಳ್ಳೆಯ ಸಂದೇಶವೂ ಇದೆ’ ಎನ್ನುತ್ತಾರೆ ವಿನೋದ್.
“ನಾನು ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಲೇಬೇಕು. ನನಗೇ ಅಂತ ಇರುವ ಎಲ್ಲಾ ಅಭಿಮಾನಿಗಳು ಅಪ್ಪನ ಅಭಿಮಾನಿಗಳೇ. ನಾನು “ಟೈಸನ್’ ಸಿನಿಮಾಗೂ ಮುನ್ನ ಜೀರೋ ಆಗಿದ್ದೆ. ವಿನೋದ್ ಪ್ರಭಾಕರ್ ಏನೂ ಇರಲಿಲ್ಲ ಆದರೆ, “ಟೈಸನ್’ ಚಿತ್ರ ನೋಡಿ, ಗೆಲ್ಲಿಸಿದ್ದು ಕನ್ನಡಿಗರು. ಒಳ್ಳೇ ಸಿನಿಮಾ ಮಾಡಿದರೆ, ನೋಡುಗರಿಗೆ ಹೀರೋ, ಹೀರೋಯಿನ್, ನಿರ್ದೇಶಕರು ಯಾರೆಂಬುದು ಮುಖ್ಯ ಆಗಲ್ಲ. “ಟೈಸನ್’ ಆ ಸಾಲಿಗೆ ಸೇರಿದ ಚಿತ್ರ. ಅದನ್ನು ನೋಡಿ ಗೆಲ್ಲಿಸಿದ್ದು, ಇದೇ ಕನ್ನಡಿಗರು. ಆ ನಂಬಿಕೆ ಮೇಲೆ ಸಕ್ಸಸ್ ಕಾಂಬಿನೇಷನ್‌ನಲ್ಲೇ “ಕ್ರ್ಯಾಕ್’ ಮಾಡಿದ್ದೇವೆ. ನಿರ್ದೇಶಕ ರಾಮ್‌ನಾರಾಯಣ್ ಅವರ ಮೇಲೆ ನಂಬಿಕೆ ಇತ್ತು. ಅದನ್ನು ಉಳಿಸಿಕೊಂಡಿದ್ದಾರೆ. ಪ್ರತಿ ಫ್ರೆಮ್‌ನಲ್ಲೂ ಮನರಂಜನೆಯ ಹೂರಣವಿದೆ. ಇಲ್ಲೀಗ ನಾನು ಜಾಸ್ತಿ ಮಾತಾಡಿದರೆ, ಓವರ್ ಕಾನ್ಫಿಡೆನ್ಸ್ ಎನಿಸುತ್ತೆ. ಜನರೇ “ಕ್ರ್ಯಾಕ್’ ಬಗ್ಗೆ ಮಾತಾಡ್ತಾರೆ, ರಿಲೀಸ್ ಬಳಿಕ ನಾನು ಮಾತಾಡ್ತೀನಿ ಎಂದು ಹೇಳುತ್ತಾರೆ ವಿನೋದ್ ಪ್ರಭಾಕರ್.
“ಟೈಸನ್’ಗೂ, ಈ ಚಿತ್ರಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ ಎನ್ನುತ್ತಾರೆ ವಿನೋದ್. “ಆ ಚಿತ್ರದಲ್ಲಿ ನೋಡಿದ ವಿನೋದ್ ಪ್ರಭಾಕರ್ ಇಲ್ಲಿ ಕಾಣಸಿಗಲ್ಲ. ಇಲ್ಲಿರುವ ಪಾತ್ರ ಇನ್ನೊಂದು ರೂಪ ಪಡೆದುಕೊಂಡಿದೆ. ಆರಂಭದಲ್ಲಿ ರಾಮ್ ನಾರಾಯಣ್ ಕಥೆ ಹೇಳಿದಾಗ, ಹೇಗೆ ಮಾಡೋದು, ಪುಟಗಟ್ಟಲೆ ಡೈಲಾಗ್ ಇದೆ. ಬೇರೆ ರೀತಿಯ ಶೇಡ್ ಕೊಡಬೇಕು ಸಾಧ್ಯವಾ ಎಂಬ ಪ್ರಶ್ನೆ ಇಟ್ಟೆ. ನಿರ್ದೇಶಕರು, ಧೈರ್ಯ ಕೊಟ್ಟರು. ಇಬ್ಬರ ಕೆಮಿಸ್ಟ್ರಿ ವಕೌìಟ್ ಆಯ್ತು. ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಬಂದಿದೆ. ಮೊದಲ ಶೋ ನೋಡಿ ಹೊರ ಬರುವ ಜನ, “ಏನಯ್ನಾ, ವಿನೋದ್ ಪ್ರಭಾಕರ್ ಹಂಗೆ ಮಾಡಿದ್ದಾನೆ’ ಅಂತ ಹೇಳುವಷ್ಟರಮಟ್ಟಿಗೆ ನಿರ್ದೇಶಕರು ಕೆಲಸ ತೆಗೆಸಿದ್ದಾರೆ. ಹಾಗಾಗಿ, ನನಗೆ ಕಾನ್ಫಿಡೆನ್ಸ್ ಇದೆ, ಓವರ್ ಕಾನ್ಫಿಡೆನ್ಸ್ ಇಲ್ಲ. ಇನ್ನೂ ಒಂದು ಗ್ಯಾರಂಟಿ ಕೊಡ್ತೀನಿ. ಒಳಗೆ ಬರುವ ಜನ ವಿನೋದ್ ಪ್ರಭಾಕರ್‌ನ ನೆನಪಿಸಿಕೊಂಡು ಬರ್ತಾರೆ, ಸಿನಿಮಾ ನೋಡಿ ಹೊರಹೋಗುವಾಗ ಒಳ್ಳೇ ನಟ ಅಂತಂದುಕೊಂಡು ಹೋಗ್ತಾರೆ. ಒಂದು ಚಾಲೆಂಜಿಂಗ್ ಪಾತ್ರ ಸೃಷ್ಟಿ ಮಾಡಿ, ನನ್ನಿಂದ ಸಾಧ್ಯವಾಗಿಸಿದ ನನ್ನೆಲ್ಲಾ ತಂಡಕ್ಕೆ ಥ್ಯಾಂಕ್ಸ್ ಹೇಳುತ್ತೇನೆ. ನಾನು ಮನಸ್ಸು ಮಾಡಿದ್ದರೆ, “ಟೈಸನ್’ ಬಳಿಕ ಸುಮಾರು ಹತ್ತು ಸಿನಿಮಾ ಒಪ್ಪಬಹುದಿತ್ತು. ಆದರೆ, ಒಂದು ವರ್ಷ ಕಾದಿದ್ದಕ್ಕೂ ಈಗ ಸಾರ್ಥಕ ಎನಿಸಿದೆ. ನನ್ನ ಸಿನಿಜರ್ನಿಯಲ್ಲಿ ಇದೇ ಮೊದಲ ಸಲ ನಿರ್ಮಾಪಕರು ಎದೆ ಎತ್ತಿಕೊಂಡು ಓಡಾಡುತ್ತಿದ್ದಾರೆ. “ಟೈಸನ್’ ಮಾಡಿದಾಗ,
ಪ್ರತಿ ಥಿಯೇಟರ್, ಡಿಸ್ಟಿಬ್ಯೂಟರ್ ಬಳಿ ಹೋಗಿ ಸಿನಿಮಾ ರಿಲೀಸ್ ಮಾಡಿ ಅಂತ ಕೇಳಿದ ದಿನಗಳು ಇನ್ನೂ ಮರೆತಿಲ್ಲ. ನಾನಿಲ್ಲಿ ಯಾರನ್ನೂ ದೂರುತ್ತಿಲ್ಲ. ಒಂದು ಮೊಬೈಲ್ ಖರೀದಿಸಬೇಕಾದರೆ, ಏನಿದೆ, ಏನಿಲ್ಲ ಅಂತ ಹತ್ತಾರು ಸಲ ಚೆಕ್ ಮಾಡ್ತೀವಿ. ಒಂದು ಸಿನಿಮಾ ವಿತರಣೆ ಮಾಡೋರು,
ರಿಟರ್ನ್ಸ್ ಬಗ್ಗೆ ಯೋಚಿಸುವುದು ತಪ್ಪಲ್ಲ. ಅಂದು “ಟೈಸನ್’ ಸಾಬೀತುಪಡಿಸಿತು. ನನಗೆ ಒನ್, ಟು, ಥ್ರಿà ಅಂತ ಹೋಗೋದು ದೊಡ್ಡ ವಿಷಯವಲ್ಲ. ಆದರೆ, ಅಂದು “ಜೀರೋ’ದಲ್ಲಿದ್ದವನು ಕೌಂಟ್‌ಗೆ ಸಿಕ್ಕೆ ಅನ್ನೋದೇ ನನ್ನ ದೊಡ್ಡ ಯಶಸ್ಸು’ ಎನ್ನುತ್ತಾರೆ ವಿನೋದ್.
“ಇನ್ನು, “ಟೈಸನ್’ ನನಗೆ ಸಿಕ್ಕ ಮೊದಲ ಸಕ್ಸಸ್. ಆ ನಿರ್ಮಾಪಕರಿಗೆ ಒಂದು ರೂಪಾಯಿ ಸಂಭಾವನೆ ಪಡೆದು ಚಿತ್ರ ಮಾಡಿಕೊಡ್ತೀನಿ ಅಂತ ಹೇಳಿದ್ದೇನೆ. ಖಂಡಿತ ಮಾಡ್ತೀನಿ. ನಮ್ಮ ಮೇಲೆ ನಂಬಿಕೆ ಇಟ್ಟು, ಕೋಟಿ ಹಾಕಿದ್ದರು. ಹಾಗಾಗಿ, ಇಂದು “ಕ್ರ್ಯಾಕ್’ ರಿಲೀಸ್‌ಗೆ ಮುನ್ನವೇ ಈ ಲೆವೆಲ್ ಬಿಜಿನೆಸ್ ಆಗಿದೆ. ಇದೇ ಮೊದಲ ಸಲ ಬಿಡುಗಡೆ ಮುನ್ನವೇ ನಿರ್ಮಾಪಕರು ಲಾಭದಲ್ಲಿದ್ದಾರೆ ಅನ್ನೋದೇ ಖುಷಿಯ ವಿಷಯ. ಅಂತಹ
ಅನ್ನದಾತರಿಗೆ ನಾನು ಚಿರಋಣಿ. ಮುಂದೆ ನನ್ನ ಸಿನಿಮಾ ವಿತರಣೆ ಮಾಡುವವರಿಗೆ ಲಾಸ್ ಆಗಲ್ಲ ಎಂಬ ನಂಬಿಕೆಯ ಚಿತ್ರ ಕೊಡೋದೇ ನನ್ನ ಟಾರ್ಗೆಟ್. ಆ್ಯಕ್ಷನ್ ಜಾನರ್‌ನಲ್ಲಿ ಮನರಂಜನೆ ಬಿಟ್ಟು ಹೋಗಲ್ಲ. “ಕ್ರ್ಯಾಕ್’ ನನಗೆ ದೊಡ್ಡ ನಂಬಿಕೆ ಮತ್ತು ಧೈರ್ಯ ಕೊಟ್ಟಿದೆ’ ಎನ್ನುತ್ತಲೇ ಮಾತು
ಮುಗಿಸುತ್ತಾರೆ ವಿನೋದ್.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.