ಗೆದ್ದಾಯ್ತು… ಮತ್ಯಾಕೆ ತಡ?
Team Udayavani, Mar 16, 2018, 8:15 AM IST
ಕಮರ್ಷಿಯಲ್ ಹಿಟ್ ಕೊಟ್ಟ ನಿರ್ದೇಶಕನಿಗೆ ಚಿತ್ರರಂಗದಲ್ಲಿ ಬೇಡಿಕೆ ಯಾವತ್ತೂ ಜಾಸ್ತಿ. ಜೊತೆಗೆ ಚಿತ್ರರಂಗದಲ್ಲಿ ಗೆದ್ದರೆ ದಾರಿ
ಸುಗಮ ಎಂಬ ಮಾತೂ ಇದೆ. ಆದರೆ, ಇತ್ತೀಚೆಗೆ ಒಂದಷ್ಟು ನಿರ್ದೇಶಕರು ಯಶಸ್ವಿ ಚಿತ್ರ ಕೊಟ್ಟರೂ ಅವರಿಂದ ಮತ್ತೂಂದು
ಸಿನಿಮಾ ಇಲ್ಲಿಯವರೆಗೂ ಅನೌನ್ಸ್ ಆಗಿಲ್ಲ. ನೀವೇ ಸೂಕ್ಷ್ಮವಾಗಿ ಗಮನಿಸಿ “ಭರ್ಜರಿ’ ನಿರ್ದೇಶಕ ಚೇತನ್ ಕುಮಾರ್, “ಬಂಗಾರ
ಸನ್ ಆಫ್ ಬಂಗಾರದ ಮನುಷ್ಯ’ ನಿರ್ದೇಶಕ ಯೋಗಿ ಜಿ ರಾಜ್, “ಯು ಟರ್ನ್’ನ ಪವನ್ ಕುಮಾರ್, “ಚೌಕ’ದ ತರುಣ್ ಸುಧೀರ್,
“ಒಂದು ಮೊಟ್ಟೆಯ ಕಥೆ’ಯ ರಾಜ್ ಬಿ ಶೆಟ್ಟಿ, “ಮಾಸ್ಟರ್ ಪೀಸ್’ನ ಮಂಜು ಮಾಂಡವ್ಯ, …. ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ
ಬೆಳೆಯುತ್ತಾ ಹೋಗುತ್ತದೆ. ಇವರೆಲ್ಲರ ಸಿನಿಮಾಗಳು ಗೆದ್ದಿವೆ ಎಂದು ಗಾಂಧಿನಗರ ಒಪ್ಪಿಕೊಂಡಿದೆ. ಅದರಲ್ಲೂ ಕೆಲವು ಸಿನಿಮಾಗಳು
ಬಾಕ್ಸ್‌ಆμàಸಿನಲ್ಲಿ ದೊಡ್ಡ ಸದ್ದು ಮಾಡಿವೆ. ನಿರ್ಮಾಪಕರು ಕೂಡಾ “ಸಕ್ಸಸ್ ಮೀಟ್’ ಮಾಡಿ ಖುಷಿ ಹಂಚಿಕೊಂಡಿದ್ದೂ ಆಗಿದೆ.
ಇವೆಲ್ಲವೂ ಈಗ ಹಳೆಯದಾಗಿ ಕಾಣುತ್ತಿದೆ. ಪ್ರೇಕ್ಷಕ ಕೂಡಾ ಆ ನಿರ್ದೇಶಕನಿಂದ ಹೊಸ ಸಿನಿಮಾವನ್ನು ನಿರೀಕ್ಷಿಸುತ್ತಿದ್ದಾನೆ. “ಮುಂದೆ
ಯಾವ ಸಿನಿಮಾ ಗುರು, ಯಾರ್ ಗುರು ಹೀರೋ’ ಎಂದು ಕೇಳುತ್ತಿದ್ದಾನೆ. ಉತ್ತರ ಹೇಳಬೇಕಾದ ನಿರ್ದೇಶಕರು ಸುಮ್ಮನಿದ್ದಾರೆ.
ಸೋತವನಿಗೆ ಅವಕಾಶದ ಕೊರತೆ ಕಾಡೋದು ಸಹಜ. ಆದರೆ, ಗೆಲುವು ಕೊಟ್ಟ ನಿರ್ದೇಶಕನಿಗೂ ಅವಕಾಶದ ಕೊರತೆ ಕಾಡುತ್ತದಾ
ಅಥವಾ ಕಾರಣಾಂತರಗಳಿಂದ ಅವರ ಮುಂದಿನ ಚಿತ್ರಗಳು ವಿಳಂಬವಾಗುತ್ತಿದೆಯಾ ಎಂಬ ಪ್ರಶ್ನೆ ಬರೋದು ಸಹಜ. ಹಾಗೆ ಹಿಟ್
ಕೊಟ್ಟೂ ಮುಂದೇನು ಎಂದು ಕಾಯುತ್ತಿರುವ ಒಂದಿಷ್ಟು ಯಶಸ್ವಿ ನಿರ್ದೇಶಕರು ಇಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ …
ಕಥೆಯಲ್ಲಿ ಬಿಝಿ : ಚೇತನ್ ಕುಮಾರ್
ಈಗ ಕಥೆಗೆ ಸಮಯ ಹಿಡಿಯುತ್ತದೆ. ಕಥೆ ಅಂತಿಮವಾಗದೇ ಯಾವುದೇ ನಟರ ಬಳಿ ಹೋಗುವಂತಿಲ್ಲ. ಯಾವುದೇ ಒಬ್ಬ ಹೀರೋ ನನ್ನ ಮೇಲೆ ನಂಬಿಕೆ ಇಟ್ಟು ಡೇಟ್ಸ್ ಕೊಡುತ್ತಾರೆ ಎಂದರೆ ಅವರು ನನ್ನಿಂದ ಹಿಟ್ ಸಿನಿಮಾ ಬಯಸುತ್ತಾರೆ. ಅದಕ್ಕೆ ಕಥೆ ಮೇಲೆ ಹೆಚ್ಚು ಗಮನಹರಿಸುತ್ತಿದ್ದೇನೆ. ಈಗ ಸಿನಿಮಾ ಮಾಡುವ ಶೈಲಿ ಕೂಡಾ ಬದಲಾಗಿದೆ. ಬಹುತೇಕ ನಿರ್ದೇಶಕರೇ
ಬರಹಗಾರರಾಗಿರುವುದರಿಂದ ಸ್ಕ್ರಿಪ್ಟ್ನಲ್ಲಿ ಹೆಚ್ಚು ತೊಡಬೇಕಾಗುತ್ತದೆ. ಇರೋ ಕೆಲವೇ ಕೆಲವು ಹೀರೋಗಳು ಬೇರೆ ಬೇರೆ ಸಿನಿಮಾಗಳಲ್ಲಿ ಬಿಝಿ ಇದ್ದಾರೆ.
ಶೀಘ್ರ ಹೊಸ ಸಿನಿಮಾ: ಯೋಗಿ ಜಿ ರಾಜ್
“ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ನಂತರ ನನಗೂ ಸಾಕಷ್ಟು ಅವಕಾಶಗಳು ಬಂದುವು. ಆದರೆ, ನನಗೆ “ಬಂಗಾರ’ದಂತಹ
ಸಿನಿಮಾ ಕೊಟ್ಟು ಮತ್ತೇ ಏನೋ ಒಂದು ಸಿನಿಮಾ ಮಾಡಲು ಮನಸ್ಸು ಬರಲಿಲ್ಲ. ಆ ಕಾರಣದಿಂದ ನಾನು ಕಥೆಯ ಬಗ್ಗೆ ಹೆಚ್ಚು ಗಮನಹರಿ ಸುತ್ತಿದ್ದೇನೆ. ಹಾಗಾಗಿ ನಾನು ಸ್ಕ್ರಿಪ್ಟ್ನಲ್ಲಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದೇನೆ. ಈಗ ಪ್ರೇಕ್ಷಕರು ಬುದಿಟಛಿವಂತರಾಗಿದ್ದಾರೆ. ನಾವು ಏನೋ ಒಂದು ಮಾಡಿಕೊಟ್ಟರೆ ಒಪ್ಪಿಕೊಳ್ಳುತ್ತಾರೆ ಎಂಬ ಕಾಲ ಹೋಗಿದೆ. ಅವರಿಗೆ ಮೋಸ ಮಾಡೋಕ್ಕಾಗಲ್ಲ.
ನೂರೆಂಟು ಲೆಕ್ಕಾಚಾರ : ಮಂಜು ಮಾಂಡವ್ಯ
ನಾನು ಉಪೇಂದ್ರ ಅವರ ಸಿನಿಮಾ ಅನೌನ್ಸ್ ಮಾಡಿದ್ದೆ. ಆದರೆ, ಅವರು ರಾಜಕೀಯಕ್ಕೆ ಹೋದ ಕಾರಣ ಅದು ಮುಂದೆ ಹೋಗಿದೆ.
ಇಲ್ಲಿ ನಾನು ಒಂದು ವಿಷಯವನ್ನು ಹೇಳಲೇಬೇಕು. ಒಂದು ಸಿನಿಮಾ ಹಿಟ್ ಕೊಟ್ಟ ತಕ್ಷಣ ಆ ನಿರ್ದೇಶಕರಿಗೆ ಸಿಕ್ಕಾಪಟ್ಟೆ ಆಫರ್ ಬರುತ್ತದೆ ಅನ್ನೋದೆಲ್ಲವೂ ಸುಳ್ಳು. “ಮಾಸ್ಟರ್ ಪೀಸ್’ ಚಿತ್ರ ಕಮರ್ಷಿಯಲ್ ಆಗಿ ದೊಡ್ಡ ಹಿಟ್. ಆದರೆ, ಆ ಸಿನಿಮಾ ಬಿಡುಗಡೆಯಾಗಿ ಆರು ತಿಂಗಳು ನನಗೆ ಯಾವ ಆಫರ್ ಬರಲೇ ಇಲ್ಲ. ಹಿಟ್ ಕೊಟ್ಟವನ ಬಳಿ ನೂರೆಂಟು ಲೆಕ್ಕಾಚಾರದೊಂದಿಗೆ ಬರುತ್ತಾರೆ.
ದರ್ಶನ್‌ಗೆ ಸಿನಿಮಾ: ತರುಣ್ ಸುಧೀರ್
“ಚೌಕ’ ನಂತರ ನನಗೂ ಕೆಲವು ಸಿನಿಮಾಗಳ ಆಫರ್ ಬಂತು. ಆದರೆ ನಾನು ದರ್ಶನ್ ಅವರ ಸಿನಿಮಾ ಮಾಡಲು ಮುಂದಾಗಿದ್ದೆ. “ಚೌಕ’ ಶೂಟಿಂಗ್ ಸಮಯದಲ್ಲೇ ದರ್ಶನ್ ಅವರು, “ನನ್ನ ಸಿನಿಮಾ ಮಾಡು, ರೆಡಿಯಾಗಿರು’ ಎಂದರು. ಇನ್ನೂ “ಚೌಕ’ ರಿಲೀಸ್ ಆಗಿರಲಿಲ್ಲ. ಆಗಲೇ ಅಷ್ಟೊಂದು ವಿಶ್ವಾಸದಿಂದ ಅವರು ಸಿನಿಮಾ ಮಾಡಲು ಹೇಳಿದ್ದರು. ಆ ವಿಶ್ವಾಸವನ್ನು ನಾನು ಉಳಿಸಿಕೊಳ್ಳಬೇಕು. ಈಗಾಗಲೇ ಬಹುತೇಕ ಸ್ಕ್ರಿಪ್ಟ್ ಫೈನಲ್ ಆಗಿದೆ. ಕಮರ್ಷಿಯಲ್ ಜೊತೆಗೆ ಅಭಿನಯಕ್ಕೆ ಹೆಚ್ಚು ಅವಕಾಶವಿರುವ ಕಥೆ.
ಸ್ಕ್ರಿಪ್ಟ್ ಸಿದ್ದವಾಗುತ್ತಿದೆ : ನರ್ತನ್
ತುಂಬಾ ಜನ ಕನಸು ಕಟ್ಟಿಕೊಂಡು ಬರುತ್ತಾರೆ. ಆದರೆ, ನನಸಾಗೋದು ಕಡಿಮೆ. ಆ ವಿಷಯದಲ್ಲಿ ನಾನು ಅದೃಷ್ಟವಂತ. ಶಿವಣ್ಣ-ಮುರಳಿ ಅವರಿಗೆ “ಮಫ್ತಿ’ ಮಾಡುವ ಅವಕಾಶ ಸಿಕ್ಕಿತು. ಆ ಚಿತ್ರದ ನಂತರ ಏಳೆಂಟು ಆಫರ್‌ಗಳು ಬಂದುವು. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳಿಂದಲೂ ಸಿನಿಮಾ ಮಾಡಲು ಅವಕಾಶ ಬಂದಿತ್ತು. ಆದರೆ, ನಾನು ಸ್ಕ್ರಿಪ್ಟ್ನಲ್ಲಿ ತೊಡಗಿದ್ದೆ. ಮುಂದಿನ ಸಿನಿಮಾ ಯಶ್ ಅವರಿಗೆ ಮಾಡುತ್ತಿದ್ದೇನೆ. ಆ ನಂತರ ಶಿವಣ್ಣ ಹಾಗೂ ಮುರಳಿಯವರಿಗೊಂದೊಂದು ಸಿನಿಮಾ ಮಾಡುವ ಆಲೋಚನೆ ಇದೆ.
ತೆಲುಗಿನಲ್ಲಿ ಬಿಝಿ : ಪವನ್ ಕುಮಾರ್
“ಯು ಟರ್ನ್’ ನಂತರ ಕೆಲವರು ಸಿನಿಮಾ ಮಾಡಿಕೊಡಿ ಎಂದು ಬಂದರು. ಆದರೆ, ಅವರಿಗೆ ಹೊಂದಿಕೆಯಾಗುವಂತಹ ಕಥೆ ನನ್ನಲ್ಲಿ ಇರಲಿಲ್ಲ. ನನ್ನಲ್ಲಿ ಕಥೆ ಇದ್ದಾಗ ಹೀರೋ, ಸರಿಯಾದ ತಂಡ ಹೊಂದಿಕೆಯಾಗಲಿಲ್ಲ. ಸದ್ಯ “ಯು ಟರ್ನ್’ ಅನ್ನು ತಮಿಳು-ತೆಲುಗಿನಲ್ಲಿ ಮಾಡುತ್ತಿದ್ದೇನೆ. ಅದು ಮುಗಿಸಿಕೊಂಡು ಕನ್ನಡದಲ್ಲಿ ಹೊಸ ಸಿನಿಮಾ ಅನೌನ್ಸ್ ಮಾಡುತ್ತೇನೆ.
ರಾಜ್ ಬಿ ಶೆಟ್ಟಿ : ಬರವಣಿಗೆ ನಡೀತಿದೆ
“ಒಂದು ಮೊಟ್ಟೆಯ ಕಥೆ’ ಗೆದ್ದ ನಂತರ ಬೇರೆ ಬೇರೆ ಆಫರ್‌ಗಳು ಬಂದವು. ಬೇರೆಯವರ ಕಾನ್ಸೆಪ್ಟ್ ಅನ್ನು ಸಿನಿಮಾ ಮಾಡುವಂತೆಯೂ ಆಫರ್ ಬಂತು. ಆದರೆ, ನಾನು ಬರಹಗಾರ-ನಿರ್ದೇಶಕ. ನಾನು ಏನನ್ನು ಕಲ್ಪಿಸಿಕೊಳ್ಳ ಬಲ್ಲೆ, ನೋಡಬಲ್ಲೆ ಅದನ್ನು ಕಟ್ಟಿಕೊಡಬಲ್ಲೆ. ನನಗೆ ನನ್ನದೇ ಕಾನ್ಸೆಪ್ಟ್ಗೆ ಸಿನಿಮಾ ಮಾಡಲು ಇಷ್ಟ. ಮತ್ತೂಂದು ವಿಚಾರವೆಂದರೆ ನಾವೇನು ಯಶಸ್ವಿ ಸಿನಿಮಾ ಎನ್ನುತ್ತೇವೋ ಆ ಕಥೆಗೂ ನಿರ್ದೇಶಕ ವರ್ಷಗಟ್ಟಲೇ ಶ್ರಮ ಹಾಕಿರುತ್ತಾನೆ. ಆದರೆ, ಆಗ ಆತ ಯಾರೆಂದು ಗೊತ್ತಿರದೇ ಇರುವುದರಿಂದ ಸಿನಿಮಾ ತಡವಾಗುತ್ತಿದೆ, ಅನೌನ್ಸ್ ಆಗಿಲ್ಲ ಎಂಬ ಪ್ರಶ್ನೆ ಬರೋದಿಲ್ಲ.
ಹೀರೋ ಬಿಝಿ : ಮಹೇಶ್ ರಾವ್
“ಸಂತು ಸ್ಟ್ರೇಟ್ ಫಾರ್ವಡ್’ ನಂತರ ಒಂದೆರಡು ರೀಮೇಕ್ ಸಿನಿಮಾಗಳ ಆಫರ್ ಬಂತು. ಆದರೆ, ನಾನು ಬೇಡವೆಂದು ಬಿಟ್ಟೆ.
ಏಕೆಂದರೆ, ನನ್ನಲ್ಲಿರುವ ಕಥೆ ಮೇಲೆ ನನಗೆ ನಂಬಿಕೆ ಇತ್ತು. ಸದ್ಯ ನಿಖೀಲ್ ಅವರ ಜೊತೆ ಒಂದು ಸಿನಿಮಾ ಫೈನಲ್ ಆಗಿದೆ. ಅದು ಬಿಟ್ಟರೆ ಇನ್ನೊಂದಿಷ್ಟು ಹೀರೋಗಳ ಜೊತೆ ಮಾತುಕತೆ ನಡೆಯುತ್ತಿದೆ. ನನ್ನಲ್ಲಿರುವ ಸ್ಕ್ರಿಪ್ಟ್ಗೆ ಹೊಂದಿಕೆಯಾಗುವ ಹೀರೋನೇ ಬೇಕೆಂದಾದರೆ ನಾನು ಕಾಯಲೇಬೇಕು. ನನಗೆ ಸಿನಿಮಾ ಮೇಲೆ ಸಿನಿಮಾ ಮಾಡಬೇಕೆಂಬ ಆಸೆ ಇಲ್ಲ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.