ವಿಶ್ವ ದಾಖಲೆ ಪಡೆದ ಕನ್ನಡದ ಬಿಂಬ
ಒಂದೇ ಶಾಟ್, ಒಬ್ಬ ಕಲಾವಿದ, ಒಂದೇ ಸ್ಥಳ, ಒಂದೇ ವಾದ್ಯ...
Team Udayavani, Sep 6, 2019, 5:59 AM IST
– ಇದೆಲ್ಲಾ ‘ಬಿಂಬ… ಆ ತೊಂಬತ್ತು ನಿಮಿಷಗಳು’ ಚಿತ್ರದೊಳಗಿನ ಪ್ರಯೋಗ. ಹೌದು, ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಪ್ರಯೋಗಾತ್ಮಕ ಸಿನಿಮಾಗಳು ಬಂದಿವೆ. ಆ ಸಾಲಿಗೆ ‘ಬಿಂಬ… ಆ ತೊಂಬತ್ತು ನಿಮಿಷಗಳು’ ಹೊಸ ಸೇರ್ಪಡೆ. ಎಂ.ಎಂ.ಮೂವೀಸ್ ಬ್ಯಾನರ್‌ನಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಜಿ.ಮೂರ್ತಿ ಮತ್ತು ಕೆ.ವಿ.ಶ್ರೀನಿವಾಸ ಪ್ರಭು ನಿರ್ದೇಶಕರು. ಚಿತ್ರಕ್ಕೆ ಶ್ರೀನಿವಾಸ ಪ್ರಭು ಕೇಂದ್ರ ಬಿಂದು. ಇಲ್ಲಿ ಅವರೊಬ್ಬರೇ ಕಲಾವಿದರು ಎಂಬುದು ವಿಶೇಷ. ಇನ್ನೊಂದು ವಿಶೇಷವೆಂದರೆ, ಈ ಹೊಸ ಪ್ರಯೋಗದ ‘ಬಿಂಬ’ ಚಿತ್ರ ಈಗ ವಲ್ಡ್ರ್ ರೆಕಾರ್ಡ್‌ಗೆ ಸೇರಿದೆ. ಇತ್ತೀಚೆಗೆ ಪತ್ರಕರ್ತರ ಎದುರು ಯುಆರ್‌ಎಫ್ನ ಮುಖ್ಯಸ್ಥ ಸುನೀಲ್ ಜೋಸೆಫ್ ಅವರು ನಟ ನಿರ್ದೇಶಕ ಶ್ರೀನಿವಾಸ್‌ಪ್ರಭು ಮತ್ತು ಜಿ.ಮೂರ್ತಿ ಅವರಿಗೆ ವಲ್ಡ್ರ್ ರೆಕಾರ್ಡ್ ಪ್ರಶಸ್ತಿ ಪುರಸ್ಕಾರ ಮಾಡಿ ಗೌರವಿಸಿದರು.
ಈ ವೇಳೆ ಮಾತಿಗಿಳಿದ ನಿರ್ದೇಶಕ ಜಿ.ಮೂರ್ತಿ, ‘ಇದುವರೆಗೆ ನನ್ನ ಬೆನ್ನ ಹಿಂದೆ ನಿಂತು ಸಹಕರಿಸಿದ ಎಲ್ಲಾ ನಿರ್ಮಾಪಕರಿಗೂ, ಕಲಾವಿದರಿಗೂ, ನನ್ನ ತಂಡದ ಮಿತ್ರರಿಗೂ ಧನ್ಯವಾದ ಅರ್ಪಿಸುತ್ತೇನೆ. ಶ್ರೀನಿವಾಸ ಪ್ರಭು ಅವರ ನಾಟಕ ನೋಡಿದ ಮೇಲೆ, ಚಿತ್ರ ಮಾಡಬೇಕೆಂಬ ಆಸೆ ಹೆಚ್ಚಾಯ್ತು. ಆ ಪ್ರಯೋಗ ನಿಜಕ್ಕೂ ಚಾಲೆಂಜ್ ಆಗಿತ್ತು. ಆ ಚಾಲೆಂಜ್‌ನಲ್ಲಿ ಗೆದ್ದಿದ್ದೇವೆ. ಸುಮಾರು ಒಂದು ಮುಕ್ಕಾಲು ಗಂಟೆಗಳ ಕಾಲ 52 ಪೇಜ್ ಡೈಲಾಗ್‌ನೊಂದಿಗೆ ಒಬ್ಬರೇ ಅಭಿನಯಿಸಿದ ರೀತಿ ಎಲ್ಲರಿಗೂ ಮೆಚ್ಚುಗೆ ಗಳಿಸಿದೆ. ಈ ಚಿತ್ರಕ್ಕೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಈ ಗೌರವ ಸಲ್ಲುತ್ತದೆ’ ಎಂದರು.
ನಟ ಶ್ರೀನಿವಾಸ ಪ್ರಭು ಮಾತನಾಡಿ, ‘ನಮ್ಮ ಈ ಪ್ರಯತ್ನ ಮೆಚ್ಚಿಕೊಂಡು ಯುಆರ್‌ಎಫ್ ಸಂಸ್ಥೆ ಈ ಗೌರವ ನೀಡಿದೆ. ವಿಶ್ವ ಮಟ್ಟದಲ್ಲಿ ಒಬ್ಬ ನಟ, ಒಂದೇ ಜಾಗದಲ್ಲಿ, ಒಂದೇ ಶಾಟ್‌ನಲ್ಲಿ, ಒಂದೇ ವಾದ್ಯದೊಂದಿಗೆ ತಯಾರಾದ ಚಿತ್ರ ಎಂದು ಪರಿಗಣಿಸಿದ್ದು ಖುಷಿ ಕೊಟ್ಟಿದೆ’ ಎಂದರು.
ಅಂದು ಕೊಲ್ಕತ್ತಾದ ಯುಆರ್‌ಎಫ್ನ ಮುಖ್ಯಸ್ಥ ಸುನೀಲ್ ಜೋಸೆಫ್, ‘ಇದೊಂದು ಉತ್ತಮ ಚಿತ್ರ. ಅದರಲ್ಲೂ ದಾಖಲೆಗೆ ಅರ್ಹವಾದ ಸಿನಿಮಾ. ಈ ರೀತಿಯ ಪ್ರಯತ್ನ ನಾನು ನೋಡಿಲ್ಲ. ಹಾಗಾಗಿ, ಇದಕ್ಕೆ ಗೌರವ ಸಂದಿದೆ’ ಎಂದರು.
ಲಹರಿ ವೇಲು ಮಾತನಾಡಿ, ‘ನಾನು ಈ ಹಿಂದೆ ಚಿತ್ರದ ತುಣುಕು ನೋಡಿ, ನಿಮ್ಮ ಈ ‘ಬಿಂಬ’ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತೆ ಅಂತ ಹೇಳಿದ್ದೆ. ಅದು ಈಗ ನಿಜವಾಗಿದೆ. ಪ್ರತಿಭೆಗೆ ಪ್ರತಿಫಲ ಸಿಕ್ಕಿದೆ. ಕನ್ನಡ ಸಿನಿಮಾ ಈ ಮಟ್ಟಕ್ಕೆ ಗುರುತಿಸಿಕೊಂಡಿದ್ದು ಹೆಮ್ಮೆ’ ಎಂದರು ಅವರು.
ಅಂದಹಾಗೆ, ಇದು ಸುಮಾರು ನೂರು ವರ್ಷಗಳ ಹಿಂದೆ ಅಂದರೆ ಸ್ವಾತಂತ್ರ್ಯ ಪೂರ್ವದಲ್ಲಿದ್ದಂತಹ ಕನ್ನಡದ ಶ್ರೇಷ್ಠ ನಾಟಕಕಾರ, ಸಾಹಿತಿ ಸಂಸರು ಅವರ ಬದುಕಿನ ಚಿತ್ರಣ. ಅವರ ಪೂರ್ಣ ಹೆಸರು ಸಾಮಿ ವೆಂಕಟಾದ್ರಿ ಐಯ್ಯರ್. ಇಲ್ಲಿ ಸಂಸರದ್ದೇ ಕೇಂದ್ರ ಪಾತ್ರ. ವಿಕ್ಷಿಪ್ತತೆ ಮೈಗೂಡಿಸಿಕೊಂಡಿದ್ದ ವ್ಯಕ್ತಿತ್ವದ, ಪ್ರಕ್ಷುಬ್ಧ ಮನಸ್ಥಿತಿಯ ವ್ಯಕ್ತಿಯಾಗಿದ್ದ ಸಂಸರು, ಸದಾ ತನ್ನನ್ನು ಯಾರೋ ಹಿಂಬಾಲಸುತ್ತಿದ್ದಾರೆ, ಪೊಲೀಸರು ನನ್ನ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಭಯ. ಆ ಭಯ ಆತಂಕಗಳೇ ಅವರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಗೆ ಕರೆದೊಯ್ಯುತ್ತದೆ. ಅದೇ ಚಿತ್ರದ ಕಥಾಹಂದರ. ಈ ಹಿಂದೆ ಸಂಸರ ಕುರಿತು ರಂಗಮೇಲೆ ಸುಮಾರು ಕಡೆ ನಾಟಕ ಪ್ರದರ್ಶನ ಕೂಡ ನಡೆದಿದೆ. ಶ್ರೀನಿವಾಸ್‌ಪ್ರಭು ಆ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಆ ನಾಟಕವೇ ಈಗ ‘ಬಿಂಬ… ಆ ತೊಂಬತ್ತು ನಿಮಿಷಗಳು’ ಚಿತ್ರವಾಗಿದೆ. ಇಲ್ಲಿ ಶ್ರೀನಿವಾಸ್ ಪ್ರಭು ಅವರೊಬ್ಬರೇ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ನಾಲ್ಕು ವಿಶೇಷ ಧ್ವನಿಗಳು ಮಾತ್ರ ಕೇಳಿಸುತ್ತವೆ. ಅದು ಬಿಟ್ಟರೆ, ಬೇರ್ಯಾವ ಪಾತ್ರವೂ ಇಲ್ಲಿಲ್ಲ. ಈ ಚಿತ್ರದ ಉದ್ದೇಶ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರನ್ನು ದ್ವೇಷಿಸುತ್ತಿದ್ದ ಸಂಸರ ಬದುಕಿನ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ಗೋಡ್ಕಿಂಡಿ ಅವರ ಕೊಳಲು ವಾದನವಿದೆ. ವಿಶೇಷವೆಂದರೆ, ಇದೊಂದೇ ವಾದ್ಯ ಚಿತ್ರದಲ್ಲಿದೆ. ಪಿಕೆಎಚ್ ದಾಸ್ ಚಿತ್ರದ ಇನ್ನೊಂದು ಹೈಲೆಟ್. ಅವರಿಲ್ಲಿ ಎರಡು ತಾಸು ಹ್ಯಾಂಡಲ್ಶಾಟ್ ತೆಗೆದಿರುವುದು ವಿಶೇಷ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.