Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!


Team Udayavani, Nov 10, 2024, 12:32 PM IST

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

ಕನ್ನಡಕ್ಕೆ ಎರಡನೇ ಜ್ಞಾನಪೀಠ ಪ್ರಶಸ್ತಿ ದೊರಕಿದ್ದು ವರಕವಿ ಬೇಂದ್ರೆಯವರ “ನಾಕುತಂತಿ’ ಕೃತಿಗೆ. ಆ ಸಂಭ್ರಮಕ್ಕೀಗ 50 ವರ್ಷ! 1974 ರಲ್ಲಿ ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಿದಾಗ ನಾಡಿನ ಜನ ಖುಷಿಯಿಂದ ಸಂಭ್ರಮಿಸಿದ್ದರು. ಪ್ರಶಸ್ತಿ ಪುರಸ್ಕೃತರಾದ ಬೇಂದ್ರೆಯವರ ಪ್ರತಿಕ್ರಿಯೆ, ಸಾಹಿತ್ಯಲೋಕದ ಸಡಗರವನ್ನೆಲ್ಲ ಕಣ್ತುಂಬಿಕೊಂಡಿದ್ದ ಲೇಖಕರು, ಆ ದಿನಗಳ ವೈಭವದ ಕ್ಷಣಗಳನ್ನು ಅಕ್ಷರದ ಮಾಲೆಯಾಗಿ ಪೋಣಿಸಿದ್ದಾರೆ…

ಅರವತ್ತು ವರ್ಷಗಳ (1964) ಹಿಂದೆ ಪ್ರಕಟ ಗೊಂಡ, 50 (1974) ವರ್ಷಗಳ ಹಿಂದೆ ಜ್ಞಾನಪೀಠ ಪ್ರಶಸ್ತಿ ಪಡೆದ ವರಕವಿ ದ. ರಾ. ಬೇಂದ್ರೆಯವರ ಕೃತಿ “ನಾಕು ತಂತಿ’ಗೆ ಈ ವರ್ಷ ಸುವರ್ಣ ಮಹೋತ್ಸವ ವರ್ಷ. ಬೇಂದ್ರೆಯವರು ಒರಿಯಾ ಕಾದಂಬರಿಕಾರ ಗೋಪಿನಾಥ ಮೊಹಂತಿ ಅವರೊಡನೆ ಈ ಪ್ರಶಸ್ತಿ ಹಂಚಿಕೊಂಡರು. 1973ನೇ ವರ್ಷದ ಪ್ರಶಸ್ತಿ ಇದು. 1962-1966ರ ಅವಧಿಯಲ್ಲಿ ಪ್ರಕಟವಾದ ಅತ್ಯುತ್ತಮ ಸಾಹಿತ್ಯ ಕೃತಿಗಾಗಿ ದೊರೆತ 9 ನೇ ವರ್ಷದ ಜ್ಞಾನಪೀಠ ಪ್ರಶಸ್ತಿ ಇದು. ಕನ್ನಡ ಸಾಹಿತ್ಯಕ್ಕೆ ನೀಡಿದ ಎರಡನೆಯ ಪ್ರಶಸ್ತಿಯೂ ಹೌದು. ಕುವೆಂಪು ಅವರು 1967ರಲ್ಲಿ ಗುಜರಾತಿ ಸಾಹಿತಿ ಉಮಾಶಂಕರ ಜೋಶಿ ಅವರ ಜೊತೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದರು. ಗರಿ, ಸಖಿಗೀತ, ನಾದಲೀಲೆ, ಮೇಘದೂತ, ಅರಳುಮರಳು ಮೊದಲಾದ ಕವನ ಸಂಕಲನಗಳಷ್ಟು ವ್ಯಾಪಕ ಪ್ರಮಾಣದ ವಿಮರ್ಶೆ ಅಥವಾ ಸಂವಾದಕ್ಕೆ “ನಾಕುತಂತಿ’ ಕವನ ಸಂಕಲನ ಒಳಪಟ್ಟಿರಲಿಲ್ಲವಾದರೂ, ಸಂಕಲನದ “ಮತ್ತೆ ಶ್ರಾವಣಾ-ಅ’, “ಮತ್ತೆ ಶ್ರಾವಣಾ ಬಂದಾ-ಆ’, “ನಾಕುತಂತಿ’, “ಚೈತನ್ಯದ ಪೂಜೆ’ ಮೊದಲಾದ ಕವನಗಳು ವಿಮರ್ಶಕರ ಗಮನ ಸೆಳೆದಿದ್ದವು.

ಉಕ್ಕಿ ಹರಿದ ಸಂಭ್ರಮ: ಯಾವಾಗ ಕವಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಯಿತೋ, ಆಗ ಕನ್ನಡಿಗರ, ಅದರಲ್ಲೂ ವಿಶೇಷವಾಗಿ ಬೇಂದ್ರೆಯವರ ಅಭಿಮಾನಿಗಳ, ಸಾಹಿತ್ಯಾಸಕ್ತರ ಸಂತೋಷ, ಸಂಭ್ರಮ ಮೇರೆ ಮೀರಿತ್ತು. ಸುದ್ದಿ ಪ್ರಕಟವಾದ ತಕ್ಷಣ ಧಾರವಾಡ, ಹುಬ್ಬಳ್ಳಿ, ಗದಗ ಮೊದಲಾದ ಶಹರಗಳಿಂದ ಮಾತ್ರವಲ್ಲ, ಸಣ್ಣ ಸಣ್ಣ ಊರಿನ, ರಾಜ್ಯದ ಅಸಂಖ್ಯಾತ ಸಂಘ ಸಂಸ್ಥೆಗಳು, ಶಾಲೆ, ಕಾಲೇಜುಗಳ ಜನರು ಮನೆಗೇ ಬಂದು ಹಾರ, ಹಣ್ಣು ಸಹಿತ ಗೌರವ ಸಲ್ಲಿಸಿ, ತಮ್ಮ ಊರುಗಳಿಗೆ ಸನ್ಮಾನ ಸಮಾರಂಭಕ್ಕಾಗಿ ಬೇಂದ್ರೆಯವರನ್ನು ಆಮಂತ್ರಿಸ ಹತ್ತಿದರು. ಬೇಂದ್ರೆಯವರು ಕಲಿತು, ಕಲಿಸಿದ ಧಾರವಾಡದ ಕೆ.ಇ. ಬೋರ್ಡ್‌ ಸಂಸ್ಥೆಯ ಎಲ್ಲಾ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ತಮ್ಮ ವಿದ್ಯಾರ್ಥಿಗಳ ಸಹಿತ ಕುಣಿದು ಕುಪ್ಪಳಿಸಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು ಎಂದು ಅಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಹರ್ಷ ಡಂಬಳ ಗುರುಗಳು ಈಗಲೂ ನೆನಪಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದ ಕುವೆಂಪು ಮತ್ತು ಎರಡನೇ ಜ್ಞಾನಪೀಠ ಪ್ರಶಸ್ತಿ ತಂದ ಬೇಂದ್ರೆಯವರ ಸಾಹಿತ್ಯ ಕುರಿತು ದೊಡ್ಡ ಮಟ್ಟದ ಕಾರ್ಯಕ್ರಮವೊಂದನ್ನು “ಗಂಡಭೇರುಂಡ’ ಹೆಸರಿನಲ್ಲಿ ಆಯೋಜಿಸಲಾಗಿತ್ತು ಎಂದು ನೆನಪಿಸಿಕೊಂಡರು.

ಅಂದಿನ ಕನ್ನಡದ ಎಲ್ಲಾ ಪತ್ರಿಕೆಗಳು, ಸಾಪ್ತಾಹಿಕ, ಮಾಸಿಕಗಳು ಕವಿಯ ಕುರಿತು ಅನೇಕ ಲೇಖನಗಳನ್ನು ಬರೆಸಿ ಪ್ರಕಟಿಸಿದವು. ಬೇಂದ್ರೆಯವರು ಸಹ ಎಲ್ಲರ ಆಮಂತ್ರಣಗಳನ್ನು ಒಪ್ಪಿಕೊಂಡರು. ಯಾರನ್ನೂ, ಯಾವ ಸಂಸ್ಥೆಗಳ ಆಮಂತ್ರಣವನ್ನೂ ನಿರಾಕರಿಸಲಿಲ್ಲ. ಸಣ್ಣ ಸಣ್ಣ ಊರುಗಳಲ್ಲಿ ಕೂಡ ಅದ್ದೂರಿಯಾಗಿ ಮೆರವಣಿಗೆ, ಸನ್ಮಾನಗಳು ನಡೆದವು.

ಪುಟ್ಟ ಮಗುವಾಗಿದ್ದರು ಬೇಂದ್ರೆ: ಗದಗಿನಲ್ಲಿ ನಡೆದ ವರಕವಿ ಸನ್ಮಾನ ಸಮಾರಂಭದ ವರ್ಣನೆಯನ್ನು ಈಗಲೂ ಶ್ಯಾಮಸುಂದರ ಬಿದರಕುಂದಿಯವರು ವರ್ಣಿಸುವುದನ್ನು ಕೇಳಬೇಕು. ತಾರೀಖು, ವೇಳೆ, ಸ್ಥಳ ಸಹಿತ ಹೇಳುವುದನ್ನು ಕೇಳಿದರೆ, ಎಂಥವರಿಗೂ ಖುಷಿ ಕೊಡುತ್ತದೆ. 14 ಜೂನ್‌ 1974ರಂದು ಗದಗದ ಪುಷ್ಪಾ ಥಿಯೇಟರ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತಂತೆ. ಥಿಯೇಟರ್‌ ತುಂಬಿ ತುಳುಕುತ್ತಿತ್ತಂತೆ. ಸನ್ಮಾನ ಸಮಾರಂಭ ಪ್ರಾರಂಭವಾಯಿತು. ನೂರಾರು ಹಾರಗಳ, ಶಾಲುಗಳ ಮೂಲಕ ಕವಿಗೆ, ಸೇರಿದ ಅಭಿಮಾನಿಗಳು ಗೌರವ ಸಲ್ಲಿಸಿದರು. ಆಗ ನಡೆದ ಒಂದು ಹಾಸ್ಯ ಪ್ರಸಂಗವನ್ನು ಸಹ ಬಿದರಕುಂದಿಯವರು ಹೇಳಿದರು.

ಎಲ್ಲರೂ ಹಾಕಿದ ಹಾರಗಳನ್ನು ತೆಗೆದು ಒಂದು ಕಡೆಗೆ ಇಡಲಾಗಿತ್ತು. ಕೆಲವರು ಹಾರ ಹಾಕಲು ಬಯಸಿದ್ದರಾದರೂ ಗಡಿಬಿಡಿಯಲ್ಲಿ ತರಲು ಆಗಿರಲಿಲ್ಲ ಅಥವಾ ಪೇಟೆಯಲ್ಲಿ ಸಿಕ್ಕಿರಲಿಕ್ಕಿಲ್ಲ. ಅವರು ತಮ್ಮ ಗೌರವ ತೋರಿಸುವುದಕ್ಕೋಸ್ಕರ ಅಲ್ಲಿ ರಾಶಿಯಾಗಿ ಒಂದುಗೂಡಿಸಿ ಇಟ್ಟಿದ್ದ ಹಾರದೊಳಗಿಂದ ಒಬ್ಬರು ಒಂದು ಹಾರವನ್ನು ಎತ್ತಿಕೊಂಡು ಕವಿಗಳಿಗೆ ಹಾಕಿ ಸಂಭ್ರಮಿಸಿದರು. ಇದನ್ನು ಕಂಡು ಮತ್ತೆ ಕೆಲವು ಜನರು ಹಾಗೆಯೇ ಅಲ್ಲಿದ್ದ ಹಾರ ತೆಗೆದುಕೊಂಡು ಹಾಕುತ್ತಿದ್ದರು. ಇದನ್ನು ಬೇಂದ್ರೆಯವರು ಸಹ ಗಮನಿಸಿದ್ದರು. ಹೊರಗಡೆ ಜೋರು ಮಳೆ. ಬೇಂದ್ರೆಯವರು ಅಭಿಮಾನಿಗಳ ಈ ವರ್ತನೆಗೆ ಬೇಜಾರು ಸಹ ಮಾಡಿಕೊಳ್ಳಲಿಲ್ಲವಂತೆ. ಮಕರ ಸಂಕ್ರಾಂತಿ ಮರುದಿನ ಕರಿದಿನ. ಅಂದು ಚಿಕ್ಕ ಚಿಕ್ಕ ಮಕ್ಕಳಿಗೆ ಕುಸುರೆಳ್ಳಿನ ಹಾರ, ಅಲಂಕಾರ ಮಾಡಿ, ಚುರುಮುರಿ, ಬೆಂಡು, ಬತ್ತಾಸುಗಳ ಜತೆ ಎರೆಯುತ್ತಾರೆ ಮತ್ತು ಆರತಿ ಮಾಡುತ್ತಾರೆ. ಮುಗ್ಧ ಮಗು ಬೆರಗು, ಸಂತಸದಿಂದ ಈ ಎಲ್ಲಾ ಕ್ರಿಯೆಗಳನ್ನು ನೋಡುತ್ತಿರುತ್ತದೆ. ಅಂದು ಬೇಂದ್ರೆಯವರು ಕೂಡ ಮಕರ ಸಂಕ್ರಾಂತಿಯೆಂದು ಕರಿ ಎರೆಸಿಕೊಳ್ಳುತ್ತಿದ್ದ ಮಗು, ಮುಗ್ಧ ಕೂಸಿನ ಹಾಗೆ ಕಂಡರು ಎಂದು ಬಿದರಕುಂದಿಯವರು ಭಾವುಕರಾಗಿ ಹೇಳಿದರು.

ಹಬ್ಬದಂತೆ ನಡೆದ ಸನ್ಮಾನ ಕಾರ್ಯಕ್ರಮಗಳು: ಆಗ ಗದಗದಿಂದ “ಪಂಚಾಮೃತ’ ಎನ್ನುವ ಮಾಸಿಕ ಪ್ರಕಟವಾಗುತ್ತಿತ್ತು. “ಗಂಗಾ ಲಹರಿ’ ಅನುವಾದಕರಾದ ವಿದ್ವಾಂಸ ಪಂಢರಿನಾಥಾಚಾರ್ಯ ಗಲಗಲಿಯವರು ಸಂಪಾದಕರಾಗಿದ್ದರು. ಅನಿವಾರ್ಯ ಕಾರಣಗಳಿಗಾಗಿ ಅವರು “ಪಂಚಾಮೃತ’ ಡೈಜೆಸ್ಟ್ ನಿಲ್ಲಿಸಬೇಕಾಯಿತು. ಕೊನೆಯ ಸಂಚಿಕೆಯನ್ನು ಆಗಷ್ಟೇ ಜ್ಞಾನಪೀಠ ಪ್ರಶಸ್ತಿ ಪಡೆದ ಬೇಂದ್ರೆಯವರಿಗಾಗಿಯೇ ಮೀಸಲಿಟ್ಟರು. ಅನೇಕ ಲೇಖಕರಿಂದ ಬೇಂದ್ರೆಯವರ ಕುರಿತು, ಅವರ ಕೃತಿಗಳ ಕುರಿತು ಲೇಖನಗಳನ್ನು ಬರೆಸಿ ಪ್ರಕಟಿಸಿದರು. ಸ್ವತಃ ತಾವೂ ಕೂಡ ಬೇಂದ್ರೆಯವರ ಮೇಲೆ 20 ನುಡಿಗಳಲ್ಲಿ, ಅದೂ ಸಂಸ್ಕೃತದಲ್ಲಿ, ಕಾವ್ಯವೊಂದನ್ನು ರಚಿಸಿದರು. ಬೇಂದ್ರೆಯವರ ಸನ್ಮಾನ ಸಮಾರಂಭದಲ್ಲಿ ಆ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಬೆಂಗಳೂರು, ಮೈಸೂರು, ಉಡುಪಿ ಹೀಗೆ ಅನೇಕ ಊರುಗಳಲ್ಲಿ ಕೆಲವು ಕಡೆ ವಿಚಾರ ಗೋಷ್ಠಿಗಳು, ನಾಕುತಂತಿ ಕುರಿತು ಸಂವಾದಗಳು ನಡೆದು, ನಂತರದಲ್ಲಿ ಸನ್ಮಾನಗಳ ಮೂಲಕ ಅವರನ್ನು ಗೌರವಿಸಲಾಯಿತು. ಬೆಂಗಳೂರು ಮಹಾನಗರ ಪಾಲಿಕೆ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೂಡ ಅದ್ದೂರಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿ.ಕೃ. ಗೋಕಾಕ, ಕೀರ್ತಿನಾಥ ಕುರ್ತಕೋಟಿ, ಬನ್ನಂಜೆ ಗೋವಿಂದಾಚಾರ್ಯ, ಆರ್‌.ಜಿ. ಕುಲಕರ್ಣಿ, ಕೆ.ಎಸ್‌. ಶರ್ಮಾ, ಜಿ.ವಿ. ಕುಲಕರ್ಣಿ ಮೊದಲಾದ ಪ್ರಮುಖ ಲೇಖಕರು “ನಾಕುತಂತಿ’ ಕುರಿತು ವಿಶೇಷ ಲೇಖನಗಳನ್ನು ಬರೆದರು.

ಸಂಭ್ರಮ ಎಲ್ಲರದು…

8-11-1974ರಂದು ದಿಲ್ಲಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ ಬೇಂದ್ರೆಯವರು ಹೇಳಿದರು: “ಒಂದಾನೊಂದು ಸತ್‌-ಕೃತಿಗೋ ಸದ್ಗುಣಕ್ಕೋ ಗೌರವದ ಮನ್ನಣೆ ದೊರೆತಾಗೆಲ್ಲಾ ಕೆಲವೊಂದು ಜನರು ಎದುರೆದ್ದು ಪ್ರತಿಭಟಿಸುತ್ತ ಆಪಾದಿಸುವುದುಂಟು; ಆಗ ಸಂಬಂಧಿಸಿದ ವ್ಯಕ್ತಿ ಆರೋಪಿಯೆನಿಸಿಕೊಂಡವನು, ಆತ್ಮವು ಅಮರವಿದೆಯೆಂದು ಉಲ್ಲೇಖೀಸುತ್ತಾ ಎದ್ದ ವಿವಾದವನ್ನು ಬಗೆಹರಿಸಬೇಕಾಗುತ್ತದೆ. ಅಂತಹದನ್ನೇನೂ ನಾನಿಂದು ಹೇಳಬಯಸುವುದಿಲ್ಲ. ಆದರೆ, ಒಳ್ಳೇ ಕಾವ್ಯವನ್ನು ಮೆಚ್ಚಿ ಸ್ವಾಗತಿಸುವ ಹೃದಯವೂ ಆತ್ಮವೂ ಇನ್ನೂ ಜೀವಂತವಿದೆ ಎಂಬ ಒಂದು ಮಾತನ್ನು ಮಾತ್ರ ಉಸುರದೆ ಇರಲಾರೆ.’ ಪಂಪ, ಕುಮಾರವ್ಯಾಸ ಕವಿಗಳ ತವರು ಎನಿಸಿಕೊಂಡಿರುವ “ಧಾರವಾಡ ಸೀಮೆಯವ ನಾನು’ ಎಂದು ತಮ್ಮ ಭಾಷಣದಲ್ಲಿ ಅವರು ತುಂಬಾ ಅಭಿಮಾನದಿಂದ ಹೇಳಿಕೊಂಡರು. ತಮಗಿಂತ 5 ವರ್ಷ ಮೊದಲು ಪ್ರಶಸ್ತಿ ಪಡೆದ ಕುವೆಂಪು ಅವರನ್ನು ಆತ್ಮೀಯವಾಗಿ ನೆನಪಿಸಿಕೊಂಡರು. ಈ ಪ್ರಶಸ್ತಿ ಪಡೆದ ಭಾರತೀಯ ಮೊದಲ ಹತ್ತು ಮಕ್ಕಳಲ್ಲಿ ತಾವೂ ಒಬ್ಬರಾಗಿದ್ದಕ್ಕೆ ಅತೀವ ಸಂತಸಪಟ್ಟರು. ಮನೆ ಮಾತು ಅಲ್ಲದ ಒಂದು ಭಾಷೆಯಲ್ಲಿ ಬರೆದು ಈ ಗೌರವ ಪಡೆದವರಲ್ಲಿ ನಾನೇ ಮೊದಲ ಕನ್ನಡಿಗ ಎಂಬ ಹೆಮ್ಮೆಯೂ ನನಗಿದೆ ಎಂದು ಸಂಭ್ರಮಿಸಿದರು. ತಮಗಿಂತಲೂ ಹೆಚ್ಚು ಸಂತಸಪಟ್ಟ ಕನ್ನಡ ಜನತೆಗೆ ಕೃತಜ್ಞತೆ ಸಲ್ಲಿಸಿದರು.

ಟೀಕಿಸುವವರೂ ಇದ್ದರು!:

ಬೇಂದ್ರೆಯವರಿಗೆ ದೊರಕಿದ ಪ್ರಶಸ್ತಿ ಕೆಲವರಿಗೆ ಸಮಾಧಾನ ಕೊಡಲಿಲ್ಲ ಎನ್ನುವುದು! ಟೀಕೆ, ಟಿಪ್ಪಣಿಗಳು ಆ ವೇಳೆಯಲ್ಲಿ ಸಾಕಷ್ಟು ಹರಿದಾಡಿದವು. ಕೆಲವರಂತೂ ಲೇಖನಗಳ ಮೂಲಕ ತಮ್ಮ ಅಸಮಾಧಾನ ತೋಡಿಕೊಂಡರು. “ನಾಕುತಂತಿ’ ಪ್ರಶಸ್ತಿಗೆ ಸಿಕ್ಕ ಮೊತ್ತ 50 ಸಾವಿರವಾಗಿತ್ತು. ಪ್ರಶಸ್ತಿಯ ಮೊತ್ತಕ್ಕೂ ಕೃತಿಯ ಹೆಸರಿನ ಅರ್ಥಕ್ಕೂ ಸಮೀಕರಣ ಮಾಡಿ “ಒಂದು ತಂತಿಗೆ ಹನ್ನೆರಡುವರೆ ಸಾವಿರ’ ಎಂದು ಬೆಲೆ ಕಟ್ಟಿದರು! ಬನ್ನಂಜೆ ಗೋವಿಂದಾಚಾರ್ಯರು ಬರೆಯುತ್ತಾರೆ : “ಪ್ರಶಸ್ತಿ ಬಂದಿದೆ ಎನ್ನುವುದಕ್ಕಾಗಿ ಬಹಳ ಜನ ಅದನ್ನು ಓದಿದರು. ಮರಳಿ ಮರಳಿ ಓದಿದರು. ಕೆಲವರು ಇದು ತಮಗೆ ಅರ್ಥವಾಗುವ ಮಾತಲ್ಲ ಎಂದು ತೆಪ್ಪಗೆ ಕುಳಿತರೆ, ಕೆಲವರು ಇದು ಕವಿತೆಯೇ ಅಲ್ಲ, ಬೇಂದ್ರೆಯವರ ವಯೋದೊಷದ ಪರಿಣಾಮ ಎಂದು ಕಟಕಿಯಾಡಿದರು.

-ಡಾ.ಹ.ವೆಂ. ಕಾಖಂಡಿಕಿ ಹಿರಿಯ ಸಾಹಿತಿ, ಧಾರವಾಡ

ಟಾಪ್ ನ್ಯೂಸ್

Loka-raid

Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

1-aaa

US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್

BJP-JDS-congress-Party

Vote: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ

Chalavadi-Ashok

Controversy: ಅಂಬೇಡ್ಕರ್‌ ಇಸ್ಲಾಂ ಸ್ವೀಕಾರ ವಿಚಾರ: ಖಾದ್ರಿ ಹೇಳಿಕೆಗೆ ಬಿಜೆಪಿ ಆಕ್ರೋಶ

By-election: ರಾಹುಲ್‌ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?

By-election: ರಾಹುಲ್‌ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?

Jamaica: 29 couples married naked

Jamaica: ನಗ್ನವಾಗಿ ಲಗ್ನವಾದ 29 ಜೋಡಿ

Ekanath-Shinde

Maharashtra: ಕಾಂಗ್ರೆಸ್‌ ಅಭ್ಯರ್ಥಿ ಕಚೇರಿಗೆ ಹೋಗಿ ಮುಖಂಡರಿಗೆ ಸಿಎಂ ಏಕನಾಥ ಶಿಂಧೆ ತರಾಟೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Loka-raid

Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

1-aaa

US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್

BJP-JDS-congress-Party

Vote: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ

Chalavadi-Ashok

Controversy: ಅಂಬೇಡ್ಕರ್‌ ಇಸ್ಲಾಂ ಸ್ವೀಕಾರ ವಿಚಾರ: ಖಾದ್ರಿ ಹೇಳಿಕೆಗೆ ಬಿಜೆಪಿ ಆಕ್ರೋಶ

By-election: ರಾಹುಲ್‌ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?

By-election: ರಾಹುಲ್‌ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.