ಸಮ್ಮೇಳನೋತ್ತರ


Team Udayavani, Feb 16, 2020, 6:15 AM IST

rav-12

ಮಳೆ ನಿಂತ ಮೇಲೂ ಮರದಿಂದ ತೊಟ್ಟಿಕ್ಕುವ ಹನಿಗಳ ಹಾಗೆ ಬಿಸಿಲನಾಡಿನ ಸಮ್ಮೇಳನ ಮುಗಿದ ಮೇಲೂ ಸವಿಕ್ಷಣಗಳು ಮತ್ತೆ ಮತ್ತೆ ಮನಸ್ಸಿಗೆ ಬರುತ್ತಿವೆ.

ಫೆಬ್ರವರಿ 5 ರಿಂದ 7ರವರೆಗೆ ಕಲ್ಬುರ್ಗಿಯಲ್ಲಿ ಜರಗಿದ 85ನೆಯ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮದ ಇಣುಕುನೋಟ…

ಎಲ್ಲ ಊರುಗಳು ಸೂರ್ಯ ಕಣ್‌ ಬಿಡುವುದಕ್ಕೆ ಮುಂಚೆ ತುಂಬಾ ಆತ್ಮೀಯವಾಗಿಯೂ ಆಕರ್ಷಕವಾಗಿಯೂ ಕಾಣುತ್ತವೆ. ಆದ್ದರಿಂದ, ಯಾವುದೇ ಊರಿಗೆ ಹೋದರೂ, ಬೆಳಗ್ಗೆ 5.30ಕ್ಕೆೆ ಎದ್ದು, ನಗರದ ಸರ್ಕಲ್‌ಗ‌ಳಲ್ಲಿ ಮಾರುವ ಚಹಾ ಹೀರುವುದನ್ನು ನಾನು ತಪ್ಪಿಸುವುದಿಲ್ಲ. 85ನೆಯ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲ್ಬುರ್ಗಿಗೆ ಹೋದಾಗಲೂ ನಾನದನ್ನು ತಪ್ಪಿಸಲಿಲ್ಲ. ಭರ್‌ ಎನ್ನುವ ಸ್ಟವ್‌ನ ಸದ್ದು, ಚುಮುಚುಮು ಚಳಿಗೆ ಮಫ್ಲರ್‌ ಸುತ್ತಿಕೊಂಡು ಚಹಾ ಹೀರುವ ಜನ, ಪೇಪರ್‌ ಹಾಕುವ ಹುಡುಗರ ಸೈಕಲ್ಲಿನ ಟ್ರಿಣ್‌ ಟ್ರಿಣ್‌ ಸದ್ದು… ಎಲ್ಲವೂ ಇದ್ದವು. ಆದರೆ, ಒಂದು ಮೂಲೆಯಲ್ಲಿ ಮಾತ್ರ ಸುಮಾರು ಐವತ್ತಕ್ಕೂ ಹೆಚ್ಚು ಹೆಂಗಸರು ಕೈಯಲ್ಲಿ ಪೊರಕೆ ಹಿಡಿದುಕೊಂಡು ನಿಂತಿದ್ದರು. ಸಾವಧಾನದಿಂದಲೇ ಇದ್ದ ಆ ಗುಂಪು ಇದ್ದಕ್ಕಿದ್ದಂತೆಯೇ, “ನಂಗೂ ಯೂನಿವರ್ಸಿಟಿಗೆ ಹಾಕೋ ತಮ್ಮಾ…’ ಎಂದು ಏಕಪ್ರಕಾರವಾಗಿ ಬೇಡಿಕೊಳ್ಳುವುದು ಕೇಳಿಸಿತು. ನಾನು ಕುತೂಹಲದಿಂದ ಅಲ್ಲಿಗೆ ಹೋಗಿ ವಿಚಾರಿಸಿದೆ. ಅವರೆಲ್ಲರೂ ನಗರದ ಕಸಗುಡಿಸುವ ಪೌರಕಾರ್ಮಿಕರಾಗಿದ್ದರು. ಅವರ ಹೆಸರನ್ನು ಬರೆದುಕೊಂಡು, ನಗರದ ಯಾವ ಭಾಗಕ್ಕೆ ಹೋಗಿ ಸ್ವತ್ಛ ಮಾಡಬೇಕು ಎಂದು ಅಪ್ಪಣೆ ಕೊಡುವ ಯುವ ಅಧಿಕಾರಿಯೊಬ್ಬ ಕುರ್ಚಿ-ಮೇಜು ಹಾಕಿಕೊಂಡು ಕೂತಿದ್ದ. ಈ ಹೆಂಗಸರಿಗೆ ಯೂನಿವರ್ಸಿಟಿಯಲ್ಲಿ ನಡೆಯುವ ಮೂರು ದಿನದ ಕನ್ನಡ ಸಾಹಿತ್ಯ ಸಮ್ಮೇಳನದ ವಿಷಯ ಹೇಗೋ ಗೊತ್ತಾಗಿತ್ತು. “ಪುಕ್ಕಟ್ಟೆ ನಾಷ್ಟ, ಊಟ ಕೊಡ್ತಾರಂತಲ್ರಿ ಬೇರೆ ಭಾಗಕ್ಕೆ ಕಸ ಬಳಿಯೋದಕ್ಕೆ ದಿನಾ ಹೋಗೋದು ಇದ್ದೇ ಇರ್ತದೆ ತಗಳ್ರಿ’ ಎಂದು ಅವರಲ್ಲಿ ಒಬ್ಬ ಹೆಂಗಸು ನನಗೆ ಹೇಳಿದಳು. ಆ ಕಾರಣದಿಂದಾಗಿ ಪ್ರತಿಯೊಬ್ಬರೂ ಯೂನಿವರ್ಸಿಟಿಗೆ ಸ್ವತ್ಛ ಮಾಡುವುದಕ್ಕೆ ಹೋಗಲು ಮುಗಿಬಿದ್ದಿದ್ದರು. ಈ ಸನ್ನಿವೇಶ ನನಗೆ ಮುದ ನೀಡಿ ಅಂತೂ ಮತ್ತೂಂದು ಸಮ್ಮೇಳನ ಶುರುವಾಯ್ತು ಎನ್ನುವ ಪುಳಕವನ್ನು ನೀಡಿತು.

1347ರಲ್ಲಿ ಹಸನ್‌ ಗಂಗೂ ಬಹಮನಿ ಎಂಬ ಚಕ್ರವರ್ತಿ ಬಹಮನಿ ಸಾಮ್ರಾಜ್ಯವನ್ನು ಸ್ಥಾಪಿಸಿದಾಗ ಅದು ಅರಬ್ಬಿ ಸಮುದ್ರದಿಂದ ಬಂಗಾಲಕೊಲ್ಲಿಯ ತನಕ ಹಬ್ಬಿಕೊಂಡಿತ್ತು. ಇಂತಹ ವಿಶಾಲವಾದ ದಖ್ಖನ್‌ ಸಾಮ್ರಾಜ್ಯಕ್ಕೆ ರಾಜಧಾನಿಯಾಗಿ ಅವನು ಕಲುºರ್ಗಿಯನ್ನು ಆರಿಸಿಕೊಂಡಿದ್ದ. ಆಸ್ಥಾನ ಪುರೋಹಿತರಿಂದ ವೇದಘೋಷದ ಪಠಣೆ, ಮೌಲ್ವಿಗಳಿಂದ ಖುರಾನಿನ ಪಠಣೆಯ ನಡುವೆ ಅವನು ಸಿಂಹಾಸನವನ್ನೇರಿದ್ದ. ಧರ್ಮಸಹಿಷ್ಣುತೆ ಮತ್ತು ಐತಿಹಾಸಿಕ ವೈಭೋಗವನ್ನು ಮೆರೆದ ಕಲುºರ್ಗಿಯಲ್ಲಿ ಅಡ್ಡಾಡುವುದೇ ನನಗೆ ಯಾವತ್ತೂ ಸಂಭ್ರಮದ ಸಂಗತಿ. ಅದಕ್ಕೀಗ ಸಾಹಿತ್ಯ ಸಮ್ಮೇಳನದ ಸಂಭ್ರಮವೂ ಸೇರಿಕೊಂಡು ಸಂತಸ ಹೆಚ್ಚಿತ್ತು.

ಆದರೆ, ಸದ್ಯದ ಕಲ್ಬುರ್ಗಿಯ ಸ್ಥಿತಿಗತಿಯ ಬಗ್ಗೆ ಅಲ್ಲಿನವರಿಗೇ ನಂಬಿಕೆ ಇಲ್ಲದಂತಹ ವಾತಾವರಣವಿದೆ. ಕಲುºರ್ಗಿಯ ಪತ್ರಕರ್ತರೊಬ್ಬರು ಸಮ್ಮೇಳನ ಶುರುವಾಗುವುದಕ್ಕೂ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ, “ನೀವ್‌ ಬೆಂಗ್ಳೂರ್‌ ಮಂದಿ ನಮ್ಮೂರಿಗೆ ಬಂದು ಬಿಸಿಲು-ಧೂಳು ಅಂತ ಕವಕವ ಮಾಡಬ್ಯಾಡ್ರಿ… ಇಲ್ಲಿ ಜನಾ ಇರೋದೇ ಇಂಥಾ ವಾತಾವರಣದಾಗ…’ ಅನ್ನೋ ಅರ್ಥದಲ್ಲಿ ಒಂದು ಆಂಟಿಸಿಪೇಟರಿ ಬೇಲ್‌ ಹಾಕಿಕೊಂಡಿದ್ದರು. ಆದರೆ, ಅಂತಹ ಕಳವಳಕ್ಕೆ ಆಸ್ಪದವೇ ಇಲ್ಲದಂಥ ಅಚ್ಚುಕಟ್ಟಾದ ತಯಾರಿಯನ್ನು ಸಮ್ಮೇಳನದವರು ಮಾಡಿದ್ದರು. ಧೂಳು ಸೋಕದಂತೆ ನೆಲಹಾಸುಗಳನ್ನು, ಬಿಸಿಲು ಬಡಿಯದಂತೆ ಮೇಲ್ಛಾವಣಿಯನ್ನೂ, ವಿಪರೀತ ನೂಕುನುಗ್ಗಲಾಗದಂತೆ ವಿಶಾಲ ಸ್ಥಳವನ್ನು ಬಳಸಿ ಗುಡಾರಗಳನ್ನು ಎಬ್ಬಿಸಲಾಗಿತ್ತು. ರಾತ್ರಿಯ ಹೊತ್ತು ಒಂದು ಕ್ಷಣವೂ ತೊಂದರೆಯಾಗದಂತೆ ಯಥೇತ್ಛ ವಿದ್ಯುತ್‌ ಬೆಳಕನ್ನು ನೀಡುವ ವ್ಯವಸ್ಥೆ ಮಾಡಲಾಗಿತ್ತು. ಸರಿಯಾದ ವ್ಯವಸ್ಥೆ ಮಾಡಲಾಗದಿದ್ದರ ಕಾರಣ ಊರಲ್ಲ, ಅದನ್ನು ನಿರ್ಮಿಸುವ ಕಾರ್ಯಕರ್ತರ ಮನೋಭಾವ ಎಂದು ಕಲುºರ್ಗಿಯ ಕಾರ್ಯಕರ್ತರು ನಿರೂಪಿಸಿದ್ದರು. ನನ್ನ ಈ ಹದಿನೈದು ವರ್ಷದ ಸಮ್ಮೇಳನದ ಅನುಭವದಲ್ಲಿ ಅತ್ಯಂತ ಅಚ್ಚುಕಟ್ಟಾದ ಪುಸ್ತಕ ಮಳಿಗೆಗಳ ವ್ಯವಸ್ಥೆ ಈ ಸಮ್ಮೇಳನದಲ್ಲಿ ಕಂಡೆ. ಇದು ಮುಂದಿನ ಸಮ್ಮೇಳನಗಳಿಗೆ ಮಾದರಿಯಾಗಲಿದೆ. ಲೋಪದೋಷಗಳು ಇರಲಿಲ್ಲವೆಂದೇನಲ್ಲ. ಶೌಚಾಲಯದ ವ್ಯವಸ್ಥೆ, ಊಟದ ಗುಡಾರಗಳ ಕಡೆಗೆ ಹೋಗುವ ದಾರಿಯಲ್ಲಿ ನೆಲಹಾಸು ಇಲ್ಲದೆ ಉಂಟಾದ ಧೂಳು- ಇತ್ಯಾದಿಗಳು ಇದ್ದೇ ಇದ್ದವು. ಆದರೆ, ಒಟ್ಟಾರೆಯಾಗಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿಕೊಡಬೇಕೆನ್ನುವ ಮನೋಭಾವ ಅಲ್ಲಿತ್ತು. ಸಾಕಷ್ಟು ಮುಂದಾಲೋಚನೆ ಮಾಡಿ, ಮೈಮುರಿಯುವಂತೆ ದುಡಿದು ಸಮ್ಮೇಳನ ಆಯೋಜಿಸಿದ್ದರು. ಕನ್ನಡಿಗರು ನಿರೀಕ್ಷಿಸುವುದು ಅಂತಹ ಇಚ್ಛಾಶಕ್ತಿಯನ್ನೇ!

ಪುಟ್ಟ ಹುಡುಗನ ಪುಸ್ತಕ ವಿಮರ್ಶೆ
ಜನವಂತೂ ದಿನನಿತ್ಯ ಬಂದೇ ಬಂದರು. ಲಕ್ಷಗಟ್ಟಲೆ ಪ್ರವಾಹೋಪಾದಿಯಲ್ಲಿ ಪುಸ್ತಕ ಮಳಿಗೆಗಳಿಗೆ ಬಂದು ಹೋದರು. ಗೋಷ್ಠಿಗಳಲ್ಲಿ ಕುಳಿತು ಬೇಸರವಿಲ್ಲದಂತೆ ಭಾಷಣಗಳನ್ನೂ ಕವಿತಾವಾಚನವನ್ನೂ ಕೇಳಿದರು. ಇಡೀ ಊರಿಗೆ ಊರೇ ಸಂಭ್ರಮದಿಂದ ಪುಳಕಗೊಂಡಂತೆ ಭಾಸವಾಗುವ ವಾತಾವರಣ ಅಲ್ಲಿತ್ತು. ನಮ್ಮ ಮಳಿಗೆಗೂ ಸಾಕಷ್ಟು ಜನರು ಬರುತ್ತಿದ್ದರು. ಅದರಲ್ಲಿ ಶಾಲಾಮಕ್ಕಳು ಬಂದಾಗ ವಿಶೇಷ ಸಂಗತಿಗಳು ನಡೆಯುತ್ತಿದ್ದವು. ಚೇಳು ಮತ್ತು ಕೋತಿಗಳು ಎನ್ನುವ ನನ್ನ ಎರಡು ಪುಸ್ತಕಗಳು ಇವೆಯಲ್ಲವೆ? ಆ ಶೀರ್ಷಿಕೆಯ ಮೇಲೆ ಸರಿಯಾಗಿ ನನ್ನ ಹೆಸರನ್ನು ವಿನ್ಯಾಸಕಾರರು ಬರೆದಿದ್ದರು. ಹಲವು ಅಭಿಮಾನಿಗಳು ನನ್ನ ಜೊತೆ ಸೆಲ್ಫಿ ತೆಗೆಸಿಕೊಳ್ಳುವುದನ್ನು ಗಮನಿಸಿದ ಪುಟ್ಟ ಹುಡುಗನೊಬ್ಬ, ನಾನೇ ಲೇಖಕನೆನ್ನುವುದನ್ನು ಕಂಡುಕೊಂಡ. ಅವನು ಅತ್ಯಂತ ಮುಗ್ಧವಾಗಿ, “ನಿಮ್ಮನ್ನು ನೀವೇ ಚೇಳು, ಕೋತಿ ಅಂತೆಲ್ಲ ಮುಖಪುಟದಾಗೆ ಕರಕೊಂಡೀರಲ್ರಿ ನೀವು ಬರೆದ ಪುಸ್ತಕ ಅಂತ ಸರಿಯಾಗಿ ಹಾಕಬೇಕಿತ್ತು’ ಎಂದು ನನಗೆ ಉಪದೇಶ ಮಾಡಿ ಹೋದ.

ಆದರೆ, ಪುಟ್ಟಹುಡುಗಿಯರ ಗುಂಪೊಂದು ಬಂದಾಗ ಬೇರೆಯದೇ ವಿಚಾರ ಬಂತು. ಅವರೊಳಗೆ ಒಬ್ಬ ಪುಟ್ಟ ದೇವತೆ ಅಯ್ಯೋ… ಇಲ್ಲಿ ನೋಡ್ರೇ… ಚೋಳು’ ಅಂತ ಬರೆಯೋ ಬದಲು ಚೇಳು’ ಅಂತ ತಪ್ಪಾಗಿ ಬರದಾರೆ… ಪುಸ್ತಕ ಬರೆಯೋರೂ ತಪ್ಪು ಮಾಡ್ತಾರಲ್ರೆ… ಎಂದು ಉದ್ಗಾರ ಮಾಡಿಬಿಟ್ಟಳು. ಇದು ನನಗೆ ಯಾವತ್ತೂ ಕಾಡುವ ಸಮಸ್ಯೆ. ಉತ್ತರ ಕರ್ನಾಟಕದಲ್ಲಿ ಜನಸಾಮಾನ್ಯರು “ಚೇಳ’ನ್ನು “ಚೋಳು’ ಎಂದೇ ಕರೆಯುತ್ತಾರೆ. ಮಕ್ಕಳು ಸಹಜವಾಗಿ ಅದನ್ನೇ ಸರಿ ಎಂದು ತಿಳಿದಿರುತ್ತಾರೆ. ಈಗ ಸಾಹಿತ್ಯ ಓದಿರುವ ನಾನು “ಚೋಳು’ ತಪ್ಪು , “ಚೇಳು’ ಸರಿ ಎಂದು ಆಕೆಗೆ ತಿಳಿ ಹೇಳುವ ಧೈರ್ಯ ಮಾಡಲಾರೆ. ಭಾಷೆಯಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸುವ ಹಕ್ಕು ಯಾರದು?

ಆರು-ಏಳನೆಯ ತರಗತಿ ಓದುವ ಚಡ್ಡಿ ಹಾಕುವ ವಿದ್ಯಾರ್ಥಿಗಳ ಗುಂಪೊಂದು ಬಂದು ನನ್ನೆಲ್ಲ ಪುಸ್ತಕಗಳನ್ನು ಜಾಲಾಡತೊಡಗಿತು. ಅದರಲ್ಲೊಬ್ಬನಿಗೆ ಮೋಹನಸ್ವಾಮಿ ಸಿಕ್ಕಿತು. ಈ ಪುಸ್ತಕದ ಆರಂಭದಲ್ಲಿ ಗಂಡು-ಗಂಡು ಆತ್ಮೀಯವಾಗಿ ಅಪ್ಪಿಕೊಂಡು ಕೂತ, ತಬ್ಬಿಕೊಂಡು ಮಲಗಿದ, ಬೆತ್ತಲೆಯಾಗಿ ಸೊಂಟ ಹಿಡಿದುಕೊಂಡು ನಡೆಯುವ ಹಲವಾರು ರೇಖಾಚಿತ್ರಗಳಿವೆ. ಅವುಗಳನ್ನು ನೋಡಿದ್ದೇ ಅವನಿಗೆ ಫ‌ಕ್ಕನೆ ನಗು ಬಂದುಬಿಟ್ಟಿತು. ಅದನ್ನು ತನ್ನ ಗೆಳೆಯರಿಗೆ ತೋರಿಸಿದ. ಅವರೂ ಅವನ ನಗೆಯಲ್ಲಿ ಶಾಮೀಲಾದರು. ಆ ರೇಖಾಚಿತ್ರಗಳನ್ನೇ ಸವರುತ್ತ, ಒಬ್ಬರಿಗೊಬ್ಬರು ಅದನ್ನು ತೋರಿಸುತ್ತ¤ ಸುಮಾರು ಹದಿನೈದು ನಿಮಿಷಗಳ ಕಾಲ ಅವರು ನಗುತ್ತಲೇ ಇದ್ದರು. ಅವರೆಲ್ಲರ ಖುಷಿ-ಪುಳಕ- ಸಂಭ್ರಮ- ಎಲ್ಲವೂ ಯಾವುದೇ ಕೃತಕತೆ ಇಲ್ಲದೆ ಪ್ರಾಂಜಲವಾಗಿದ್ದವು. ಒಂದೆರಡು ರೇಖಾಚಿತ್ರಗಳನ್ನು ನೋಡಿ ಹೀಗೆ ಸ್ನೇಹಿತರ ಗುಂಪಿನೊಡನೆ ಹದಿನೈದು ನಿಮಿಷ ಖುಷಿಯಿಂದ ನಗುವ ಮುಗ್ಧತೆ ನನ್ನಲ್ಲಿ ಎಂದೋ ಕಾಣೆಯಾಗಿದೆ. ಅಂಥ ಪ್ರಾಂಜಲ ಗೆಳೆಯರ ಗುಂಪೂ ಈಗ ನನಗಿಲ್ಲ. ನಾನು ಕಳೆದುಕೊಂಡ ಆ ಸುಂದರ ಬಾಲ್ಯ ನನ್ನ ಕಣ್ಣ ಮುಂದೆಯೇ ನನಗೆ ಆ ಮಕ್ಕಳ ರೂಪದಲ್ಲಿ ಕಾಣುತ್ತಿತ್ತು. ಕಾಲವೆಂಬುದು ಮನುಷ್ಯನಿಂದ ಏನೆಲ್ಲಾ ಸೌಭಾಗ್ಯಗಳನ್ನು ಕಸಿದುಕೊಂಡು ಬಿಡುತ್ತೆ ಎನ್ನುವ ವಿಷಾದ ಇಡೀ ದಿನ ನನ್ನನ್ನು ಕಾಡಿತು.

ಪುಸ್ತಕ ಸಂತೆಯ ನಡುವೆ
ದಿವ್ಯಾಂಗ ವ್ಯಕ್ತಿಯೊಬ್ಬ ಸಮ್ಮೇಳನದಲ್ಲಿ ಕಾಣಿಸುತ್ತಲೇ ಇದ್ದ. ನನ್ನ ಮಳಿಗೆಗೂ ಬಂದಿದ್ದ. ಆತನಿಗೆ ಕೈಗಳೂ ಸರಿ ಇರಲಿಲ್ಲ, ಕಾಲೂ ಇರಲಿಲ್ಲ. ಹೊಸ ಬಟ್ಟೆಗಳನ್ನು ಹಾಕಿಕೊಂಡಿದ್ದ. ತೆವಳುತ್ತಲೇ ಎಲ್ಲಾ ಪುಸ್ತಕ ಮಳಿಗೆಗಳನ್ನು ಸುತ್ತುತ್ತಿದ್ದ. ಆ ಗದ್ದಲದಲ್ಲಿ, ಜನರ ಕಾಲಿನ ಧೂಳಿನಿಂದ ತುಂಬಿಹೋದ ಆ ನೆಲಹಾಸುಗಳ ಮೇಲೆ ತೆವಳುವ ಅವನ ಉತ್ಸಾಹ ಬಹಳ ದೊಡ್ಡದಾಗಿತ್ತು. ನನ್ನ ಮಳಿಗೆಯಲ್ಲಿ ಹಲವು ಪುಸ್ತಕಗಳನ್ನು ಕೊಂಡ. ಅನಂತರ, “ನಾನೂ ಪದ್ಯ ಬರೀತೀನ್ರಿ… ಕವಿಗೋಷ್ಠಿಯಲ್ಲಿ ಓದಬೇಕು ಅಂದ್ರೆ ಯಾರನ್ನ ಕೇಳಬೇಕ್ರಿ?’ ಎಂದು ನನ್ನಲ್ಲಿ ವಿಚಾರಿಸಿದ. ನಾನು ಆಗಾಗ ಗೊಣಗುವ ನನ್ನ ಚಿಕ್ಕಪುಟ್ಟ ಸಮಸ್ಯೆಗಳೆಲ್ಲ ಭಾರ ಕಳೆದುಕೊಂಡು ಆ ಕ್ಷಣದಲ್ಲಿ ಗಾಳಿಯಲ್ಲಿ ತೇಲಿ ಹೋಗಿಬಿಟ್ಟವು.

ಕಾವಿ ಧರಿಸಿದ ಸನ್ಯಾಸಿಯೊಬ್ಬರು ನನ್ನ ಮಳಿಗೆಗೆ ಬಂದಿದ್ದರು. ಅವರ ಮುಖದಲ್ಲಿ ಒಂದಿಷ್ಟೂ ನಗೆಯಿರಲಿಲ್ಲ. ಅವರ ಹಿಂದೆ ಶಿಷ್ಯನೊಬ್ಬ ಪುಸ್ತಕಗಳ ರಾಶಿಯನ್ನು ಹಿಡಿದುಕೊಂಡು ಹಿಂಬಾಲಿಸುತ್ತಿದ್ದ. ಅವರು ನಮ್ಮ ಮಳಿಗೆಯಲ್ಲೂ ಸಾಕಷ್ಟು ಪುಸ್ತಕ ಕೊಳ್ಳಬಹುದು ಎನ್ನುವ ನಿರೀಕ್ಷೆಯಲ್ಲಿ ನಾನು ಅವರ ಹಿಂದೆ ಸುತ್ತುತ್ತ ಪುಸ್ತಕಗಳನ್ನು ವಿವರಿಸತೊಡಗಿದೆ. ಒಂದು ಹೊತ್ತಿನಲ್ಲಿ ತುಸು ಜಾಸ್ತಿಯೇ ಉಸಾಬರಿ ಮಾಡಿ, “ಈ ಪುಸ್ತಕ ಕೊಂಡುಕೊಳ್ರಿ ಅಯ್ಯನೋರೇ… ನಿಮಗೆ ಭಾಳ ಇಷ್ಟ ಆಗ್ತದೆ’ ಎಂದು ಹೇಳಿದೆ. ಅವರು ನನ್ನ ಕಡೆ ನೋಡಿ, “ಪುಸ್ತಕ ಓದುತ್ತೆನೆ . ಇಷ್ಟ ಆಗಲಿಲ್ಲ ಅಂದ್ರೆ ಶಾಪ ಕೊಡ್ತೀನಿ. ಆಗಬಹುದಾ?’ ಎಂದು ಗಂಭೀರವಾಗಿ ಹೇಳಿದರು. ಇದೆಲ್ಲಿಯ ಸಹವಾಸ ಎಂದು ನನಗೆ ಹೆದರಿಕೆಯಾಯ್ತು. ಆದರೂ ಧೈರ್ಯ ಕಳೆದುಕೊಳ್ಳದೆ, “ಒಂದು ವೇಳೆ ಪುಸ್ತಕ ಇಷ್ಟ ಆದರೆ ವರ ಕೊಡ್ತೀರಾ?’ ಎಂದು ಕೇಳಿದೆ. ಅವರ ಮುಖದಲ್ಲಿ ಸಣ್ಣನೆಯ ನಗೆ ಅರಳಿತು. ಅಂತೂ ನಾಲ್ಕಾರು ಪುಸ್ತಕ ಕೊಂಡುಕೊಂಡರು.

ಗಣ್ಯರಿಗೆ ಊಟದ ವ್ಯವಸ್ಥೆ ಮಾಡಿದ ಕಡೆ ಸೂಟು-ಬೂಟು ಧರಿಸಿದ ಯುವಕರು ಎಲ್ಲರಿಗೂ ಮೌನವಾಗಿ ಬಡಿಸುತ್ತಿದ್ದರು. ಏನು ಪ್ರಶ್ನೆ ಕೇಳಿದರೂ ಉತ್ತರಿಸಲಾಗದೆ ಮುಖಮುಖ ನೋಡುತ್ತಿದ್ದರು. ಅದಕ್ಕೆ ಕಾರಣವೇನೆಂದರೆ ಅವರ್ಯಾರಿಗೂ ಕನ್ನಡ ಮಾತಾಡಲು ಬರುತ್ತಿರಲಿಲ್ಲ. ಹಾಗಂತ ಸತ್ಯ ಹೇಳಿದರೆ ಎಲ್ಲಿ ಕನ್ನಡಾಭಿಮಾನಿಗಳು ಕೋಪಗೊಳ್ಳುತ್ತಾರೋ ಎಂಬ ಆತಂಕದಲ್ಲಿ ಅವರಿದ್ದರು. ನಾನು ಅತ್ಯಂತ ಸಾವಧಾನದಲ್ಲಿ ಅವರನ್ನು ಹಿಂದಿಯಲ್ಲಿ ವಿಚಾರಿಸಿದಾಗ ತಾವೆಲ್ಲ ಕೊಲ್ಹಾಪುರದ ಯುವಕರೆಂದೂ, ದಿನಗೂಲಿಗೆ ಇಲ್ಲಿಗೆ ಅನ್ನ ಬಡಿಸಲು ಬಂದಿರುವುದಾಗಿಯೂ ತಿಳಿಸಿದರು. ನನ್ನ ಜೊತೆಯಲ್ಲಿ ಕನ್ನಡದ ಧ್ವಜದ ಬಟ್ಟೆಯನ್ನು ಕೊರಳಿಗೆ ಹಾಕಿಕೊಂಡು ನಿಂತಿದ್ದ ವ್ಯಕ್ತಿಗೆ ಸಿಟ್ಟು ಬಂತು. “ಕನ್ನಡ ಬರಲ್ಲ ಅಂದ್ರೆ ಈ ಸಮ್ಮೇಳನದಾಗೆ ಕಾಲು ಇಡಬಾರದು’ ಎಂದು ಆ ಯುವಕರಿಗೆ ಉಗಿದು, ಸಿಡಿಸಿಡಿಯುತ್ತ ಹೊರಟು ಹೋದ. ತುಸು ಸಪ್ಪಗಾದ ಆ ಹುಡುಗರು ಅನಂತರ ನನ್ನ ಹತ್ತಿರ, “ಕನ್ನಡೇತರರು ಬಡಿಸಿದ ಊಟ ಕನ್ನಡದವರ ಹೊಟ್ಟೆಯಲ್ಲಿ ಜೀರ್ಣ ಆಗಲ್ವಾ ಭಯ್ನಾ?’ ಎಂದು ತುಸು ಸಿಟ್ಟಿನಿಂದ ಕೇಳಿದರು.

ಹಳದಿ ಮತ್ತು ಕೆಂಪು ಬಣ್ಣದ ಪಟ್ಟೆಯನ್ನು ಎರಡೂ ಗಲ್ಲದ ಮೇಲೆ ಹಚ್ಚಿಕೊಳ್ಳುವ ಉಮೇದು ಎಲ್ಲಾ ವಯೋಮಾನದವರಲ್ಲೂ ಕಂಡು ಬಂತು. ಪ್ರತಿಯೊಬ್ಬರ ಗಲ್ಲದ ಮೇಲೂ ಕನ್ನಡದ ಬಾವುಟ ಕಾಣಿಸಿ ಇಡೀ ಜನಜಂಗುಳಿಯ ನೋಟವನ್ನು ವರ್ಣಮಯಗೊಳಿಸಿತ್ತು. ಹೀಗೆ ಬಾವುಟ ಬರೆಯುವುದಕ್ಕೆ ಕೆಲವು ಕಲಾವಿದರು ಹತ್ತು ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಬಹುತೇಕ ಪುಸ್ತಕದಂಗಡಿಯವರಿಗಿಂತಲೂ ಇವರು ಹೆಚ್ಚಿನ ಲಾಭ ಮಾಡಿರಬಹುದು ಎನ್ನುವುದು ನನ್ನ ಅಂದಾಜು. ಆದರೆ, ಈ ಕನ್ನಡ ಬಾವುಟವನ್ನು ಗಲ್ಲಕ್ಕೆ ಬಳಿಯುವುದು ಪ್ರೀತಿಯನ್ನು ವ್ಯಕ್ತ ಪಡಿಸುವ ಸಂಗತಿಯೂ ಆಗಿತ್ತು ಎನ್ನುವುದು ತಿಳಿದು ಮಜಾ ಬಂತು. ಕಾಲೇಜು ಓದುವ ಹುಡುಗ-ಹುಡುಗಿಯರಿಬ್ಬರೂ ಜೋಡಿಯಾಗಿ ಸಮ್ಮೇಳನಕ್ಕೆ ಬಂದಿದ್ದರು. ನಾನು ಶೌಚಾಲಯದ‌ ಕಡೆಗೆ ಹೊರಟಾಗ ಇವರು ಕಣ್ಣಿಗೆ ಬಿದ್ದರು. “ಪ್ಲೀಜ್‌ ಹಚ್ಚಿಸ್ಕೊರೋ… ಚಂದ ಕಾಣಿಸ್ತೀಯೋ…’ ಎಂದು ಆಕೆ. “ಯಾಯ…… ಬ್ಯಾಡ ತೆಗಿಯೇ… ಅಂಟಂಟು’ ಅಂತ ಆ ಹುಡುಗ ನಿರಾಕರಿಸಿದ. ಆದರೆ, ಹುಡುಗಿ ಬಿಡಲಿಲ್ಲ. “ಹಂಗನ್ನಬೇಡೋ… ನನ್ನ ನೀನು ಪ್ರೀತಿ ಮಾಡೋದು ಖರೆ ಅಂದ್ರೆ ಹಚ್ಚಿಸ್ಕೊಬೇಕು ನೋಡು’ ಎಂದು ಬ್ಲ್ಯಾಕ್‌ವೆುಲ್‌ ಮಾಡಿದಳು. ಪಾಪ! ಆ ಹುಡುಗ ಇನ್ನೇನು ಮಾಡಿಯಾನು? ಎರಡೂ ಗಲ್ಲವನ್ನು ಕಲಾವಿದನ ಮುಂದೆ ಒಡ್ಡಿದ. ಹುಡುಗಿ ಖುಷಿಯಿಂದ ಅವನ ಎರಡೂ ಗಲ್ಲವನ್ನು ಹಿಂಡಿದಳು.

ಹಲವಾರು ವಿಶೇಷ ಅನುಭವಗಳನ್ನು ಹೊತ್ತು ಕಲಬುರಗಿಯ ಸಮ್ಮೇಳನದಿಂದ ಮರಳಿದ್ದೇನೆ. ಇದೊಂದು ಅವಿಸ್ಮರಣೀಯ ಸಮ್ಮೇಳನ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಎಲ್ಲಕ್ಕಿಂತಲೂ ಹೆಚ್ಚು ಕಾಲ ನನ್ನ ಮನದಾಳದಲ್ಲಿ ಉಳಿಯುವ ಸಂಗತಿ ಮಾತ್ರ ಒಂದೇ ಒಂದು- “ಪುಕ್ಕಟ್ಟೆ ನಾಷ್ಟ, ಊಟ ಕೊಡ್ತಾರಂತಲ್ರಿ’
ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ?

ವಸುಧೇಂದ್ರ

ಟಾಪ್ ನ್ಯೂಸ್

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.