ವಿಯೆಟ್ನಾಮಿನ ಕತೆ: ಮೀನುಗಾರನ ಹಾಡು


Team Udayavani, Jul 28, 2019, 5:00 AM IST

q-5

ಒಂದು ನದಿಯ ದಡದಲ್ಲಿ ಒಬ್ಬ ಧನಿಕ ವಾಸವಾಗಿದ್ದ. ಅವನಿಗೆ ಮಿನುವಾಂಗ್‌ ಎಂಬ ಒಬ್ಬಳೇ ಮಗಳಿದ್ದಳು. ತುಂಬ ಸುಂದರಿಯೂ ವಿದ್ಯಾವಂತೆಯೂ ಆದ ಅವಳು ಹಲವು ಕಲೆಗಳನ್ನು ಕಲಿತಿದ್ದಳು. ಪ್ರಾಯ ಪ್ರಬುದ್ಧಳಾದ ಮಗಳಿಗೆ ಮದುವೆ ಮಾಡಲು ಧನಿಕ ಯೋಚಿಸಿದ. ಕುಲೀನ ಮನೆತನಕ್ಕೆ ಸೇರಿದ ಅನೇಕ ಯುವಕರ ಸಂಬಂಧಗಳೂ ಸಾಲುಗಟ್ಟಿ ಬಂದುವು. ಆದರೆ ಅವರಲ್ಲಿ ಒಬ್ಬನನ್ನೂ ಮಿನುವಾಂಗ್‌ ಒಪ್ಪಿಕೊಳ್ಳಲಿಲ್ಲ. “”ನನ್ನ ಕೈ ಹಿಡಿಯುವವನು ಒಳ್ಳೆಯ ನರ್ತಕನೋ ಹಾಡುಗಾರನೋ ಆಗಿರಬೇಕು. ಸಿರಿವಂತಿಕೆ ನನಗೆ ಮುಖ್ಯವಲ್ಲ, ಮನಸ್ಸಿಗೆ ಹರ್ಷ ನೀಡುವ ಕಲೆಯೇ ಮುಖ್ಯ” ಎಂದು ಸ್ಪಷ್ಟವಾಗಿ ಹೇಳಿದಳು. ಅವಳು ಒಪ್ಪುವಂತಹ ಯಾವುದೇ ಸಂಬಂಧವೂ ಕೂಡಿ ಬರಲಿಲ್ಲ.

ಒಂದು ದಿನ ಬೆಳಗಿನ ಜಾವ ನದಿಯಿಂದ ಒಂದು ಹಾಡು ತೇಲಿ ಬಂದಿತು. ಮಿನುವಾಂಗ್‌ ಅದನ್ನು ಆಲಿಸಿದಳು. “ಪ್ರೀತಿ ತಂಗಾಳಿಯಲಿ ಸಾಗಿ ಬಂದಿದೆ, ಅದನು ಕೇಳಿ ಚಂದಿರನ ಮುಖ ಅರಳಿದೆ’ ಎಂಬ ಆ ಹಾಡು ಕಿವಿಗೆ ಬಿದ್ದ ಕೂಡಲೇ ಮಿನುವಾಂಗ್‌ ಸಂತೋಷದಿಂದ ಕುಣಿದಾಡತೊಡಗಿದಳು. ಅದನ್ನು ಕಂಡು ಧನಿಕ ಆಶ್ಚರ್ಯದಿಂದ ಮಗಳ ಬಳಿಗೆ ಬಂದ, “”ಏನಾಗಿದೆ ಮಗಳೇ, ಯಾಕೆ ಇಷ್ಟೊಂದು ಸಂತೋಷಗೊಂಡಿರುವೆ?” ಎಂದು ಕೇಳಿದ. ಮಿನುವಾಂಗ್‌, “”ಸಂತೋಷವಾಗದೆ ಇರುತ್ತದೆಯೆ? ಇಷ್ಟು ದಿನಗಳಿಂದ ನನ್ನ ಮನಸ್ಸನ್ನು ಸಂತೋಷಪಡಿಸುವ ಮೋಹಕವಾದ ಸಂಗೀತದ ಧ್ವನಿಗಾಗಿ ಕಾದು ಕುಳಿತಿದ್ದೆ. ದೇವರ ದಯೆಯಿಂದ ಅದು ನನಗೀಗ ದೊರಕಿದೆ. ನನ್ನ ಕೈಹಿಡಿಯುವವನು ಇಲ್ಲಿಯೇ ಸನಿಹದಲ್ಲಿದ್ದಾನೆಂದು ತೋರುತ್ತಿದೆ” ಎಂದಳು.

“”ಅಂತಹ ಅದೃಷ್ಟಶಾಲಿ ಯುವಕ ಸನಿಹದಲ್ಲಿ ಇದ್ದಾನೆಯೆ? ಯಾರು ಅವನು?” ಎಂದು ಧನಿಕ ವಿಚಾರಿಸಿದ. ಮಿನುವಾಂಗ್‌ ನದಿಯ ಕಡೆಗೆ ಕೈ ತೋರಿಸಿದಳು. “”ಧ್ವನಿಯೇ ಇಷ್ಟೊಂದು ಮೋಹಕವಾಗಿರುವಾಗ ಅವನು ರೂಪದಲ್ಲಿಯೂ ಚೆಲುವನೇ ಆಗಿರಬೇಕು. ನನ್ನ ಕೈಹಿಡಿಯಬೇಕಾದ ಆ ಮಹಾವ್ಯಕ್ತಿಯು ನದಿಯ ದಡದಲ್ಲಿ ವಿಹಾರಕ್ಕಾಗಿ ಬಂದಿರಬೇಕು. ಕೂಡಲೇ ಅವನನ್ನು ಕರೆಸಿ ನನ್ನೊಂದಿಗೆ ಮದುವೆಗೆ ವ್ಯವಸ್ಥೆ ಮಾಡಿ” ಎಂದಳು.

ಧನಿಕ ಸೇವಕರನ್ನು ಕರೆದ. “”ಕೂಡಲೇ ನದಿ ತೀರಕ್ಕೆ ಹೋಗಿ. ಅಲ್ಲಿ ಸುಶ್ರಾವ್ಯ ಕಂಠದಿಂದ ಯಾರೋ ಒಬ್ಬ ಯುವಕ ಹಾಡುತ್ತ ಕುಳಿತಿದ್ದಾನೆ. ಅವನನ್ನು ಗೌರವದಿಂದ ಕರೆದುಕೊಂಡು ಬನ್ನಿ” ಎಂದು ಕಳುಹಿಸಿದ. ಸೇವಕರು ನದಿ ತೀರಕ್ಕೆ ಬಂದು ಹಾಡುತ್ತಿರುವ ಯುವಕನನ್ನು ಪತ್ತೆ ಮಾಡಿದರು. ಒಂದು ಒಡಕು ದೋಣಿಯಲ್ಲಿ ಕುಳಿತುಕೊಂಡು ನದಿಗೆ ಬಲೆ ಬೀಸಿ ಅವನು ಮೀನು ಹಿಡಿಯುತ್ತ ಹಾಡಿಕೊಂಡಿದ್ದ. ಅವನ ಹಾಡೇನೋ ಸುಂದರವಾಗಿತ್ತು. ಆದರೆ ಮುಖ ನೋಡಿದರೆ ಸ್ವಲ್ಪವೂ ಸುಂದರನಾಗಿರಲಿಲ್ಲ. ಮೆಳ್ಳಗಣ್ಣು, ಸೊಟ್ಟ ಮೂಗು, ಹರಕು ಕಿವಿ, ಕುರುಚಲು ಗಡ್ಡ ಇದ್ದ ಅವನನ್ನು ಕಂಡರೆ ಅಸಹ್ಯ ಹುಟ್ಟುವ ಹಾಗಿದ್ದ. ಅವನಿಗೆ ಧರಿಸಲು ಒಳ್ಳೆಯ ಬಟ್ಟೆಗಳಿರಲಿಲ್ಲ. ಹತ್ತಿರ ಹೋದರೆ ಕೊಳೆತ ಮೀನಿನ ವಾಸನೆಯಿಂದ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿಯಿತ್ತು.

ಆದರೆ ಸೇವಕರಿಗೆ ಯುವಕನನ್ನು ಕರೆದೊಯ್ಯದೆ ವಿಧಿಯಿರಲಿಲ್ಲ. “”ಯುವಕನೇ, ನಮ್ಮೊಂದಿಗೆ ಧನಿಕನ ಭವ್ಯವಾಗಿರುವ ಮನೆಗೆ ಬಾ. ನಿನ್ನ ಅದೃಷ್ಟ ಖುಲಾಯಿಸಿತೆಂದು ತಿಳಿದುಕೋ. ನಾಳೆಯಿಂದ ಈ ಕೊಳಕು ಬಟ್ಟೆಗಳನ್ನು ಧರಿಸಿ, ಚಳಿ, ಮಳೆಯೆಂದಿಲ್ಲದೆ ಮೀನು ಹಿಡಿಯಲು ಶ್ರಮಪಡುವ ಅಗತ್ಯವಿಲ್ಲ. ದಿನವಿಡೀ ಸೊಗಸಾಗಿ ಹಾಡುತ್ತ ಸುಖದಿಂದ ಕಾಲ ಕಳೆಯುವ ಕ್ಷಣಗಳು ಹುಡುಕಿಕೊಂಡು ಬಂದಿವೆ” ಎಂದರು.

ಯುವಕನಿಗೆ ಆಶ್ಚರ್ಯವಾಯಿತು. “”ನನ್ನನ್ನೇಕೆ ಸುಮ್ಮನೆ ತಮಾಷೆ ಮಾಡುತ್ತೀರಾ? ದುಡಿಯದೆ ನನ್ನನ್ನು ಸಾಕಲು ಧನಿಕರಿಗೇನು ಮಕ್ಕಳಿಲ್ಲವೆ? ಸುಮ್ಮನೆ ಹೋಗಿ ಇಲ್ಲಿಂದ” ಎಂದ. ಆದರೆ ಸೇವಕರು ಬಿಡಲಿಲ್ಲ. “”ನಮ್ಮ ಜೊತೆಗೆ ನೀನು ಧನಿಕರ ಮನೆಗೆ ಬರಲೇಬೇಕು. ನಾವು ಹೇಳುವುದು ಸುಳ್ಳಲ್ಲ. ಅವರ ಮಗಳು ನಿನ್ನ ಹಾಡು ಕೇಳಿದ ಮೇಲೆ ನಿನ್ನನ್ನೇ ಮದುವೆಯಾಗಬೇಕು ಎಂದು ಹಟ ಹಿಡಿದು ಕುಳಿತಿದ್ದಾಳೆ. ಗೌರವದಿಂದ ಆ ಹಾಡುಗಾರನನ್ನು ಕರೆದುಕೊಂಡು ಬನ್ನಿ ಎಂದು ಒಡೆಯರು ನಮ್ಮನ್ನಿಲ್ಲಿಗೆ ಕಳುಹಿಸಿದ್ದಾರೆ. ನೀನೀಗ ಬರದಿದ್ದರೆ ಬಲವಂತವಾಗಿ ಹೊತ್ತುಕೊಂಡು ಹೋಗುತ್ತೇವೆ” ಎಂದರು.

ಸೇವಕರ ಜೊತೆಯಲ್ಲಿ ಯುವಕ ಧನಿಕನ ಮನೆಗೆ ಹೊರಟ. ಅವರು ಅವನ ದೇಹಕ್ಕೆ ಇಡೀ ಬಟ್ಟೆಯೊಂದನ್ನು ಮುಸುಕು ಹಾಕಿ ಕರೆದುಕೊಂಡು ಹೋಗಿ ಮಿನುವಾಂಗ್‌ ಮುಂದೆ ನಿಲ್ಲಿಸಿದರು. “”ಒಡತಿ, ನೀವು ಮೆಚ್ಚಿಕೊಂಡು ಮದುವೆಯಾಗಲು ಬಯಸಿದ ಯುವಕನನ್ನು ಕರೆದುಕೊಂಡು ಬಂದಿದ್ದೇವೆ” ಎಂದರು. ಮಿನುವಾಂಗ್‌ ಯುವಕನೊಂದಿಗೆ ತಾನು ಇಷ್ಟಪಟ್ಟ ಹಾಡನ್ನು ಹಾಡುವಂತೆ ಹೇಳಿದಳು. ಯುವಕ ಹಾಡಿದ. “”ನಿಜವಾಗಿಯೂ ಇವನು ನನ್ನ ಗಂಡನಾಗಬೇಕು. ಮನ ಸೆಳೆಯುವ ಕಂಠದಿಂದ ನನ್ನನ್ನು ಒಲಿಸಿಕೊಂಡ ಆ ಸುಂದರಾಂಗನ ದೇಹವನ್ನು ಯಾಕೆ ಬಟ್ಟೆಯಿಂದ ಮುಚ್ಚಿದ್ದೀರಿ? ಅದನ್ನು ತೆಗೆದು ಅವನ ಮುಖವನ್ನು ನನಗೆ ತೋರಿಸಿ” ಎಂದು ಕೂಗಿದಳು.

ಸೇವಕರು ಮೀನುಗಾರ ಯುವಕನನ್ನು ಮುಚ್ಚಿದ್ದ ಬಟ್ಟೆಯನ್ನು ಸರಿಸಿದರು. ಆದರೆ ಯುವಕನ ಮುಖ ನೋಡಿದ ಕೂಡಲೇ ಮಿನುವಾಂಗ್‌ ಕಿಟಾರನೆ ಕಿರುಚಿ ಕೆಳಗೆ ಬಿದ್ದು ಎಚ್ಚರ ತಪ್ಪಿದಳು. ಶೈತ್ಯೋಪಚಾರಗಳನ್ನು ಮಾಡಿದ ಬಳಿಕ ಕಣ್ತೆರೆದು, “”ದೇವರೇ, ನಾನು ಕಂಠ ಎಷ್ಟು ಚೆನ್ನಾಗಿದೆ ಎಂದುಕೊಂಡು ಇವನ ಮುಖ ನೋಡದೆ ಮದುವೆಯಾಗಲು ನಿರ್ಧರಿಸಿಬಿಟ್ಟೆ. ಕುರೂಪಿಯಾದ ಈ ಅಸಹ್ಯ ವ್ಯಕ್ತಿಯನ್ನು ಕೈಹಿಡಿದರೆ ಸುಖವಾಗಿರಲು ಸಾಧ್ಯವೇ ಇಲ್ಲ. ದುರ್ಗಂಧದಿಂದ ಮೂಗು ಮುಚ್ಚಿಕೊಳ್ಳಬೇಕಾಗಿದೆ. ನನಗೆ ಇಂತಹ ನಿರಾಸೆಯುಂಟು ಮಾಡಿದ ಅವನನ್ನು ಅರೆಕ್ಷಣ ಕೂಡ ನನ್ನ ಕಣ್ಮುಂದೆ ಇರಲು ಬಿಡಬೇಡಿ. ಕೂಡಲೇ ಇಲ್ಲಿಂದ ಕರೆದುಕೊಂಡು ಹೋಗಿ ನದಿ ತೀರದಲ್ಲಿ ಬಿಟ್ಟುಬನ್ನಿ” ಎಂದು ಸೇವಕರಿಗೆ ಹೇಳಿದಳು. ಸೇವಕರು ಅವನನ್ನು ಮರಳಿ ಕರೆತರುವಾಗ, “”ಇಂತಹ ಮುಖ ಹೊತ್ತಿರುವ ನಿನಗೆ ಈ ಜನ್ಮದಲ್ಲಿ ಯಾವ ಯುವತಿಯೊಂದಿಗೆ ಕೂಡ ಮದುವೆಯಾಗಲು ಸಾಧ್ಯವಿಲ್ಲ. ಇನ್ನೊಂದು ಜನ್ಮವೆಂಬುದು ಬಂದರೆ ಸಾಧ್ಯವಾಗಬಹುದು ಅಷ್ಟೇ” ಎಂದು ಹೇಳಿ ನದಿತೀರಕ್ಕೆ ತಲುಪಿಸಿದರು.

ಈ ಘಟನೆಯಿಂದ ಮೀನುಗಾರ ಯುವಕನಿಗೆ ತುಂಬ ದುಃಖವಾಯಿತು. ತನ್ನ ಪಾಡಿಗೆ ಖುಷಿಯಾಗಿ ಹಾಡುತ್ತ ಮೀನು ಹಿಡಿದುಕೊಂಡು ಸುಖವಾಗಿ ಜೀವನ ನಡೆಸುತ್ತಿದ್ದ ಅವನು ತನಗೆ ಉಂಟಾದ ಅವಮಾನದಿಂದ ನೊಂದುಕೊಂಡ. ಆ ಕ್ಷಣದಿಂದಲೇ ಅವನಿಗೆ ಬದುಕುವುದು ಬೇಡ ಅನಿಸಿತು. ದುಡಿಯುವುದನ್ನು ನಿಲ್ಲಿಸಿದ. ಅನ್ನಾಹಾರಗಳನ್ನು ತ್ಯಜಿಸಿದ. ಕೃಶನಾಗಿ ಹಾಸಿಗೆ ಹಿಡಿದು ಒಂದು ದಿನ ಸತ್ತುಹೋದ. ಸಂಬಂಧಿಕರು ಅವನ ಎದೆಯ ಮೇಲೆ ಒಂದು ಗುಲಾಬಿಯನ್ನು ತಂದಿಟ್ಟರು. ಶವವನ್ನು ಹೂಳಲು ತೆಗೆದುಕೊಂಡು ಹೋಗುವಾಗ ಒಂದು ವಿಚಿತ್ರವು ಕಾಣಿಸಿತು. ಎದೆಯ ಮೇಲಿದ್ದ ಗುಲಾಬಿಯು ಒಂದು ಸ್ಫಟಿಕದ ಪದಕವಾಗಿ ಬದಲಾವಣೆ ಹೊಂದಿತ್ತು. ಅವರು ಪದಕವನ್ನು ಹಾಗೆಯೇ ತೆಗೆದಿಟ್ಟು ನದಿಯ ತೀರಕ್ಕೆ ತೆಗೆದುಕೊಂಡು ಹೋದರು. ದಿನವೂ ಅವನು ಮೀನು ಹಿಡಿಯುತ್ತಿದ್ದ ಸ್ಥಳದಲ್ಲಿ ಪದಕವನ್ನು ನೀರಿನೊಳಗೆ ಸೇರಿಸಿ ಮನೆಗೆ ಮರಳಿದರು.

ತನ್ನ ಮನಸ್ಸನ್ನು ಹಾಡಿನಿಂದ ಗೆದ್ದ ಯುವಕ ಸುಂದರನಾಗಿರಲಿಲ್ಲ ಎಂಬ ಹತಾಶೆಯಿಂದ ವ್ಯಥೆಗೊಂಡ ಮಿನುವಾಂಗ್‌ ತುಂಬ ದುಃಖಪಟ್ಟಳು. ಅವಳಿಗೆ ಊಟ ಸೇರಲಿಲ್ಲ, ನಿದ್ರೆ ಬರಲಿಲ್ಲ. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಧನಿಕನು ಹಲವಾರು ವೈದ್ಯೋಪಚಾರಗಳನ್ನು ಮಾಡಿಸಿದರೂ ಮೊದಲಿನಂತಾಗಲಿಲ್ಲ. ಆಗ ಒಬ್ಬ ಫ‌ಕೀರ ಅವನ ಮನೆಗೆ ಬಂದ. ಮಿನುವಾಂಗ್‌ ಅನುಭವಿಸುತ್ತಿರುವ ದುಃಖವನ್ನು ಕಂಡು ಧನಿಕನೊಂದಿಗೆ, “”ನಿನ್ನ ಮಗಳಿಗೆ ನೆಮ್ಮದಿ ಸಿಗಲು ಒಂದೇ ಒಂದು ಉಪಾಯವಿದೆ. ಇಲ್ಲಿರುವ ನದಿಯಲ್ಲಿ ಒಂದು ಸ್ಫಟಿಕದ ಪದಕವಿದೆ. ಅದನ್ನು ಹುಡುಕಿಸಿ ತಂದು ಅವಳ ಕೈಗೆ ಕೊಡು” ಎಂದು ಹೇಳಿದ. ಆ ಮಾತನ್ನು ಅಲ್ಲಗಳೆಯದೆ ಧನಿಕ ಮುಳುಗುಗಾರರನ್ನು ಕರೆಸಿದ. ನದಿಯಿಂದ ಪದಕವನ್ನು ಹುಡುಕಿ ತರುವಂತೆ ತಿಳಿಸಿದ.

ಮುಳುಗುಗಾರರು ತಂದುಕೊಟ್ಟ ಪದಕ ಮಿನುವಾಂಗ್‌ ಕೈ ಸೇರಿತು. ಅವಳು ಮುಟ್ಟಿದ ಕೂಡಲೇ ಪದಕವು, “”ಪ್ರೀತಿ ತಂಗಾಳಿಯಲಿ ತೇಲಿ ಬಂದಿದೆ. ಅದನು ಕೇಳಿ ಚಂದಿರನ ಮುಖ ಅರಳಿದೆ” ಎಂದು ಹಾಡತೊಡಗಿತು. ಮಿನುವಾಂಗ್‌ ಅಚ್ಚರಿಯಿಂದ, “”ಇದೇ ಹಾಡು ಕೇಳಿ ನಾನು ಜೀವನವನ್ನು ಹಾಳು ಮಾಡಿಕೊಂಡೆ. ನೀನು ಯಾರು ಮತ್ತೆ ನನಗೆ ತೊಂದರೆ ಕೊಡಲು ಬಂದಿರುವೆ?” ಎಂದು ಕೇಳಿದಳು.

ಆಗ ಪದಕವು ಕರಗಿ ಒಬ್ಬ ಸುಂದರನಾದ ರಾಜಕುಮಾರ ಪ್ರತ್ಯಕ್ಷನಾದ. “”ನಾನು ಒಬ್ಬ ಫ‌ಕೀರನಿಗೆ ತೊಂದರೆ ಕೊಟ್ಟೆ. ಅವನಿಂದ ಶಾಪಗ್ರಸ್ಥನಾಗಿ ಕುರೂಪಿಯಾದ ಮೀನುಗಾರನ ಜನ್ಮ ಪಡೆದೆ. ನನ್ನನ್ನು ಪ್ರೀತಿಸಿದವಳಿಂದ ತಿರಸ್ಕೃತನಾಗಿ ಜೀವವಿಲ್ಲದ ವಸ್ತುವಿನ ಜನ್ಮ ಪಡೆಯಬೇಕು, ಮರಳಿ ಅವಳ ಬಳಿಗೆ ಹೋದಾಗ ಮೊದಲಿನ ಜನ್ಮ ಬರುವುದೆಂಬ ಪರಿಹಾರವನ್ನೂ ಫ‌ಕೀರನಿಂದ ತಿಳಿದುಕೊಂಡಿದ್ದೆ. ಈಗ ನಾನು ಹಿಂದಿನ ಜನ್ಮ ಹೊಂದಿ ನಿನ್ನ ಮುಂದಿದ್ದೇನೆ. ನನ್ನ ಕೈಹಿಡಿದು ನನ್ನೊಂದಿಗೆ ನಮ್ಮ ರಾಜ್ಯಕ್ಕೆ ಬಾ” ಎಂದು ಅವನು ಹೇಳಿದ. ಮಿನುವಾಂಗ್‌ ಸಂತೋಷದಿಂದ ರಾಜಕುಮಾರನನ್ನು ಮದುವೆಯಾಗಿ, ಅವನ ರಾಜ್ಯಕ್ಕೆ ತೆರಳಿದಳು.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

13-ghati-1

Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

12-hunsur

Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.