ಒಬ್ಬ ಅಜ್ಜ ಮತ್ತವನ ಮೊಮ್ಮಗ
Team Udayavani, Aug 19, 2018, 6:00 AM IST
ಸಂಜೆಯ ತಂಪಾದ ಗಾಳಿಯಲ್ಲಿ ವಾಯುವಿಹಾರಕ್ಕಾಗಿ ತೆರಳುವವರು ಬಹುಮಂದಿ. ಅವರಲ್ಲಿ ನಾನೂ ಒಬ್ಬ. ಸಾಯಂಕಾಲದ ಸಮಯದಲ್ಲಿ ತಂಪಾದ ವಾತಾವರಣದಲ್ಲಿ ಹಸಿರು ಗಿಡಗಳ ನಡುವೆ ಸ್ವತ್ಛಂದ ಗಾಳಿಯಲ್ಲಿ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತ ಸಾಗುತ್ತಿದ್ದರೆ ಆ ದಿನದ ದಣಿಸು ನೀಗಿ ತನುಮನಕ್ಕೆ ಏನೋ ಒಂದು ರೀತಿಯ ನಿರಾಳ ಭಾವ. ಈ ಒಂದು ಅಥವಾ ಎರಡು ಗಂಟೆಗಳ ಅವಧಿಯಲ್ಲಿ ದೊರೆಯುವ ವಿಶ್ರಾಂತಿ ಮನಸ್ಸಿಗೆ ಆಹ್ಲಾದಕರ.
ಪ್ರತಿದಿನದಂತೆ ಆ ದಿನವೂ ವಾಯುವಿಹಾರಕ್ಕೆ ತೆರಳಿದೆ. ಹಬ್ಬದ ಹಿಂದಿನ ದಿನವಾದ್ದರಿಂದ ಹಲವು ಸ್ನೇಹಿತರು ವಾಯುವಿಹಾರಕ್ಕೆ ಚಕ್ಕರ್ ಹಾಕಿದ್ದರು. ಆ ದಿನ ಒಬ್ಬನೇ ಸಾಗಿದೆ. ಏಕಾಂಗಿಯಾದರೂ ಅರೆಬರೆ ಹಾಡುಗಳನ್ನು ಹಾಡುತ್ತ ಮುಂದೆ ಸಾಗಿದೆ. ಸ್ನೇಹಿತರಿಲ್ಲ ಎನ್ನುವ ಪುಟ್ಟ ಕೊರಗಿದ್ದರೂ ಅದು ಅಂತಹ ಕೊರತೆ ಎನ್ನಿಸಲಿಲ್ಲ.
ದಾರಿಯಲ್ಲಿ ನಡೆಯುವಾಗ ನನ್ನ ಗಮನ ಸೆಳೆದಿದ್ದು ಒಂದು ಸುಂದರವಾದ ಜೋಡಿ. ಅದು ಅಂತಿಂಥ ಜೋಡಿಯಲ್ಲ . ಆ ವಾಯುವಿಹಾರಕ್ಕೆ ಬಂದವರಲ್ಲಿಯೇ ಅಪರೂಪದ ಜೋಡಿ. ಎಪ್ಪತ್ತು ಸಂವಸ್ಸರಗಳನ್ನು ಕಂಡ ಅಜ್ಜನೊಂದಿಗೆ ಆರು ವರ್ಷದ ಪುಟ್ಟ ಬಾಲಕ ತನ್ನ ತಲೆಯಲ್ಲಿ ಬರುವ ಎಲ್ಲಾ ತರಲೆ ಪ್ರಶ್ನೆಗಳನ್ನು ಕೇಳುತ್ತಾ ಅಜ್ಜನೊಂದಿಗೆ ನಡೆದುಕೊಂಡು ಹೋಗುತ್ತಿದ್ದ. ಆ ಪುಟ್ಟ ಬಾಲಕನ ಪ್ರಶ್ನೆಗಳು ಅಜ್ಜನಿಗೆ ಉತ್ತರಿಸಲು ಸಾಧ್ಯವಾಗದಷ್ಟು ಸೂಕ್ಷ್ಮ ವಾಗಿರುತ್ತಿದ್ದವು. ಆದರೆ, ಅಜ್ಜನ ತಾಳ್ಮೆ ಯುತವಾದ ಉತ್ತರ ಪುಟ್ಟ ಬಾಲಕನನ್ನು ತೃಪ್ತಿಗೊಳಿಸುತ್ತಿತ್ತು.
ಆಕಾಶ ಮೇಲೆ ಯಾಕಿದೆ? ಗಿಡಮರಗಳು ಹೇಗೆ ಊಟಮಾಡುತ್ತವೆ? ಆಕಾಶದಿಂದ ನೀರನ್ನು ಯಾರು ಸುರೀತಾರೆ? ದೇವರು ಎಲ್ಲಿ¨ªಾನೆ? ಹಕ್ಕಿಗಳು ಹಾರುವಾಗ ಯಾಕೆ ಕೆಳಗೆ ಬೀಳುವುದಿಲ್ಲ? ನಮಗೆ ಹಕ್ಕಿಯಂತೆ ಯಾಕೆ ಹಾರಲು ಸಾಧ್ಯವಾಗುವುದಿಲ್ಲ… ಹೀಗೆ ಹಲವಾರು ಪ್ರಶ್ನೆಗಳು ಪುಟ್ಟ ಬಾಲಕನಿಂದ ಬಿರುಸು ಬಾಣಗಳಂತೆ ಬರುತ್ತಿದ್ದರೆ ಅಜ್ಜನ ಉತ್ತರಗಳು ಅಷ್ಟೇ ತಾಳ್ಮೆಯಿಂದ ಕೂಡಿರುತ್ತಿದ್ದವು. ಕಳ್ಳಕಿವಿಯಿಂದ ಕೇಳುತ್ತಿದ್ದ ನನಗೆ ಅಜ್ಜ ಮತ್ತು ಮೊಮ್ಮಗನ ನಡುವಿನ ಸಂಭಾಷಣೆ ಕೆಲವೊಮ್ಮೆ ನಗು ತರಿಸುತ್ತಿತ್ತು. ಮಗುವಿನ ಕೆಲವೊಂದು ಪ್ರಶ್ನೆಗಳು ಅಸಮಂಜಸವೆನಿಸುತ್ತಿದ್ದವು. ಅದು ದೊಡ್ಡವರಾದ ನಮಗೆ ಮಾತ್ರ. ಅವರ ಸ್ಥಾನದಲ್ಲಿ ನಿಂತು ನೋಡಿದರೆ ಅವರ ಜಿಜ್ಞಾಸೆಗೆ ಅರ್ಥವಿದ್ದೇ ಇದೆ. ಅದು ಆ ಅಜ್ಜನಿಗೂ ತಿಳಿದಿತ್ತು. ಹಾಗಾಗಿಯೇ ಆತ ತಾಳ್ಮೆಯಿಂದ ಉತ್ತರ ಕೊಡುತ್ತಿದ್ದರು.
ವಾಯುವಿಹಾರ ಮುಗಿಸಿ ಮನೆಗೆ ಮರಳಿದ ಮೇಲೂ ನನಗೆ ಆ ಅಜ್ಜ ಮತ್ತು ಮೊಮ್ಮಗನ ಆ ಸಂಭಾಷಣೆ ತುಂಬಾನೇ ಕಾಡತೊಡಗಿತು. ಹೌದು, ಮಗು ತಾನು ಬೆಳೆಯುತ್ತಲೇ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ಆದರೆ, ಹಿರಿಯರಾದ ನಾವು ಮಕ್ಕಳ ಈ ಗುಣವನ್ನು ಹಲವಾರು ಬಾರಿ ಹತ್ತಿಕ್ಕಲು ಪ್ರಯತ್ನಿಸುತ್ತೇವೆ. ಪ್ರಶ್ನೆ ಕೇಳಿದರೆ ಬೈದು ಸುಮ್ಮನಾಗಿಸುತ್ತೇವೆ ಅಥವಾ ಹೀಯಾಳಿಸುವಂಥಹ ಮಾತುಗಳನ್ನಾಡಿ ಅವರ ಕುತೂಹಲಕ್ಕೆ ತಣ್ಣೀರೆರಚಿಬಿಡುತ್ತೇವೆ.
ಹಾಗೆ ನೋಡಿದರೆ ತಾರ್ಕಿಕವಾಗಿ ಮಕ್ಕಳ ಪ್ರಶ್ನೆ ಅಸಂಗತವೇನೂ ಅಲ್ಲ. ಬುದ್ಧಿವಂತರೆನಿಸಿಕೊಂಡ ನಾವು ಮಾತ್ರ ಕೇಳಿಕೊಳ್ಳುವುದಿಲ್ಲ. ಉದಾಹರಣೆಗೆ ಹಕ್ಕಿ ಯಾಕೆ ಆಕಾಶದಲ್ಲಿ ಹಾರುತ್ತದೆ ಎಂಬ ಬಗ್ಗೆ ನಮಗೂ ಪ್ರಶ್ನೆಯಿಲ್ಲವೆ? ಎಷ್ಟು ಮಂದಿಗೆ ಅದರ ಉತ್ತರ ತಿಳಿದಿದೆ ! ವಿಜ್ಞಾನದ ಪಾಠವನ್ನು ನೆನಪಿಟ್ಟುಕೊಂಡ ಕೆಲವೇ ಮಂದಿಗೆ ತಿಳಿದಿರಬಹುದು. ತಿಳಿಯದವರೇ ಅಧಿಕ. ಆದರೂ ಪ್ರಶ್ನೆ ಕೇಳುವುದಿಲ್ಲ. ಪ್ರಶ್ನೆ ಕೇಳುವುದು ನಮ್ಮ ಘನತೆಗೆ ಕುಂದು ಎಂದು ಭಾವಿಸುತ್ತೇವೆ.
ನಾವು ಮಕ್ಕಳಾಗದ ಹೊರತು ದೊಡ್ಡವರೆನಿಸುವುದಿಲ್ಲ !
ವೆಂಕಟೇಶ ಚಾಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.