ಯಾವುದನ್ನೂ ತಿಳಿದುಕೊಳ್ಳಲು ಬಯಸದ ಮನುಷ್ಯ
Team Udayavani, Mar 25, 2018, 7:30 AM IST
ಈ ಕ್ಷಣದಿಂದ, ನಾನು ಯಾವುದನ್ನೂ ತಿಳಿದುಕೊಳ್ಳಲು ಬಯಸುವುದಿಲ್ಲ’ ಏನನ್ನೂ ತಿಳಿಯಲು ಬಯಸದ ಅವನು ನಿರ್ಧರಿಸಿದನು. ಯಾವುದನ್ನು ಅಂದರೆ ಎಂತಹ ವಿಷಯವನ್ನೂ ಸಹ ನಾನು ತಿಳಿದುಕೊಳ್ಳುವುದಿಲ್ಲ. ಹೀಗೆ ಹೇಳುವುದಕ್ಕೇನೋ ಸುಲಭ.
ಯಾಕೆಂದರೆ, ಅವನು ಈ ನಿರ್ಧಾರಮಾಡಿ ಇನ್ನೇನು ಕೆಲವೇ ಕೆಲವು ಸೆಕೆಂಡುಗಳಾಗಿಲ್ಲ ಅಷ್ಟರಲ್ಲಾಗಲೇ ಫೋನು ಬಾರಿಸಿತು. ನಿಜಹೇಳಬೇಕೆಂದರೆ, ತತ್‌ಕ್ಷಣ ಅವನು ಫೋನನ್ನು ಹಿಡಿದೆಳೆದು ರಪ್ಪನೆ ಗೋಡೆಗೆ ಅಪ್ಪಳಿಸಬೇಕಿತ್ತು. ಯಾಕೆಂದರೆ ಅವನೇ ನಿರ್ಧಾರ ಮಾಡಿದಂತೆ ಅವನಿಗೆ ಯಾವುದೇ ವಿಷಯವನ್ನು ತಿಳಿಯುವುದು ಬೇಡವಾಗಿತ್ತು. ಆದರೆ, ಅವನು ಹಾಗೆಮಾಡದೆ ರಿಸೀವರ್ ಎತ್ತಿಕೊಂಡು “ಹಲೋ’ ಅನ್ನುತ್ತಾ ತನ್ನ ಹೆಸರನ್ನು ಹೇಳಿದ.
“”ಹಲೋ” ಆ ಕಡೆಯಿಂದಲೂ ಧ್ವನಿ ಉತ್ತರಿಸಿತು.
“”ಹಲೋ”
“”ಒಳ್ಳೆ ವಾತಾವರಣ ಇವತ್ತು, ಅಲ್ಲವೇ?”
ಅವನು “”ನನಗೆ ಗೊತ್ತಿಲ್ಲ” ಅನ್ನಬೇಕಿತ್ತು. ಆದರೆ ಹೇಳಲಿಲ್ಲ. “”ಹೌದು, ಇವತ್ತು ವಾತಾವರಣ ತುಂಬಾ ಚೆನ್ನಾಗಿ ಇದೆಯಲ್ಲ” ಎಂದ.
ಆ ಕಡೆಯ ಧ್ವನಿ ಮತ್ತೇನೋ ಹೇಳಿತು, ಇವನೂ ಮತ್ತೇನೋ ಉತ್ತರಿಸಿದ. ಇಬ್ಬರೂ ಕೊಂಯ್ಯ ಕೊಂಯ್ಯ ಎಂದು ಮಾತನಾಡಿದ ನಂತರ ಅವನು ಫೋನನ್ನು ಇರಿಸಿದ.
ಫೋನು ಇರಿಸಿದ್ದೇ ಅವನಿಗೆ ಅಪರಾಧೀತನ ಕಾಡತೊಡಗಿತು. ಸ್ವಲ್ಪ ಸಮಯದ ಮೊದಲು ಅವನು ಇನ್ನು ಮುಂದೆ ಏನನ್ನೂ ತಿಳಿದುಕೊಳ್ಳುವದಿಲ್ಲ ಎಂದು ನಿರ್ಧಾರ ಮಾಡಿದ್ದ ಮತ್ತು ಈಗ ಅವನಿಗೆ ವಾತಾವರಣ ಚೆನ್ನಾಗಿ ಇದೆ ಎನ್ನುವದು ತಿಳಿದುಹೋಗಿತ್ತು. ಈ ವಿಷಯ ಅವನಿಗೆ ಎಷ್ಟು ಸಿಟ್ಟು ತಂದಿತೆಂದರೆ ಇನ್ನು ಮುಂದೆ ಯಾರೊಬ್ಬರೂ ತನಗೆ ಯಾವುದೇ ವಿಷಯವನ್ನು ತಿಳಿಸದೇ ಇರಲಿ ಎಂದು ಅವನು ಫೋನಿನ ವೈರನ್ನು ಕಿತ್ತುಹಾಕಿದ. “”ನಾನು ಯಾವುದನ್ನೂ ತಿಳಿದುಕೊಳ್ಳಲು ಬಯಸುವುದಿಲ್ಲ” ದೃಢನಿರ್ಧಾರದ ಧ್ವನಿಯಲ್ಲಿ ತನಗೆತಾನೇ ಮತ್ತೂಮ್ಮೆ ಹೇಳಿಕೊಂಡ.
ಹೀಗೆಲ್ಲ ಹೇಳುವದು ಸುಲಭ. ಯಾಕೆಂದರೆ, ಆ ಕ್ಷಣದಲ್ಲಿ ಕಿಟಕಿಯ ಮೂಲಕ ಅವನು ಕುಳಿತಿರುವಲ್ಲೂ ತಲುಪಿದ ಸೂರ್ಯನ ಕಿರಣಗಳು ಹಿತಕರವಾದ ಅನುಭೂತಿಯನ್ನು ಸೃಷ್ಟಿಸುತ್ತಿದ್ದವು. ಸೂರ್ಯನ ಕಿರಣಗಳು ಹೀಗಿದೆ ಎಂದ ಮೇಲೆ ವಾತಾವರಣ ಚೆನ್ನಾಗಿದೆ ಎಂದೇ ಅರ್ಥ. ಆದರೆ, ಅವನಿಗೆ ಈ ವಿಷಯವನ್ನಾಗಲಿ ಅಥವಾ ಇನ್ಯಾವುದೇ ವಿಷಯವನ್ನಾಗಲಿ ತಿಳಿಯಲು ಇಷ್ಟವಿರಲಿಲ್ಲ. ಹೀಗಾಗಿ, ಅವನು ಎದ್ದು ಕಿಟಕಿಯನ್ನು ಮುಚ್ಚಿದ. ಆದರೆ, ಬೆಳಕಿಗೇನು? ಕಿಟಕಿಯ ಬಾಗಿಲಿನ ಬಿರುಕುಗಳ ಮೂಲಕ ಬರತೊಡಗಿದವು. “ತತೆ§àರಿ!’ ಎನ್ನುತ್ತ ಅವನು ಒಂದಷ್ಟು ರದ್ದಿ ಪೇಪರುಗಳನ್ನು ತಂದು ಕಿಟಕಿಯ ಬಾಗಿಲಿಗೆ ಅಂಟಿಸಿದ. ಇಷ್ಟಾದ ಮೇಲೆ ಮಬ್ಬು ಬೆಳಕಿನ ಆ ರೂಮಿನಲ್ಲಿ ಸುಮ್ಮನೆ ಕುಳಿತುಕೊಂಡ. ಎಷ್ಟೋ ಹೊತ್ತಿನ ಮೇಲೆ ಅವನ ಹೆಂಡತಿ ಮನೆಗೆ ಬಂದಾಗ ಅವಳಿಗೆ ಕಿಟಕಿಯ ಬಾಗಿಲಿಗೆ ಮೆತ್ತಿದ ಪೇಪರನ್ನು ಕಂಡು ಆಶ್ಚರ್ಯವಾಯಿತು.
“”ಇದೇನಿದು ಹೀಗೆ?” ಅವಳು ಪ್ರಶ್ನಿಸಿದಳು.
“”ಹೊರಗಡೆಯಿಂದ ಸೂರ್ಯನ ಬೆಳಕು ಬರಬಾರದು” ಅವನು ಉತ್ತರಿಸಿದ.
“”ಆದರೆ ಇಲ್ಲಿಸ್ವಲ್ಪವೂ ಬೆಳಕೇ ಇಲ್ಲವಲ್ಲ” ಅವಳು.
“”Ö¾… ! ಅದೊಂದು ಸ್ವಲ್ಪ ತೊಂದರೆಯಾಗಬಹುದು, ಆದರೆ ಕಿಟಕಿಯ ಬಾಗಿಲಿಗೆ ಪೇಪರನ್ನು ಮೆತ್ತಿ ಮುಚ್ಚಿರುವದರಿಂದ ಒಳ್ಳೆಯದೇ ಆಯಿತು. ಯಾಕೆಂದರೆ, ಹೊರಗಡೆಯಿಂದ ಬೆಳಕು ಬರ್ತಿಲ್ಲ ಅಂದರೆ ಸೂರ್ಯ ಇಲ್ಲ , ಸೂರ್ಯ ಇಲ್ಲ ಅಂದರೆ ನನಗೆ ವಾತಾವರಣ ಚೆನ್ನಾಗಿದೆ ಎನ್ನುವದೇ ಗೊತ್ತಾಗುವದಿಲ್ಲ ”
“”ಅದ್ಯಾಕೆ ಹಾಗೆ? ವಾತಾವರಣ ಚೆನ್ನಾಗಿದ್ರೆ ನಿನಗ್ಯಾಕೆ ಬೇಸರ? ವಾತಾವರಣ ಚೆನ್ನಾಗಿದ್ರೆ ಒಳ್ಳೆಯದೇ ಅಲ್ಲವೇ? ಒಳ್ಳೆ ಹವಾಮಾನ ಇದ್ರೆ ಖುಷಿಯಾಗಿರಬಹುದು”
“”ನೋಡು ನನಗೆ ಒಳ್ಳೆ ವಾತಾವರಣದ ವಿರುದ್ಧ ಯಾವುದೇ ಅಭಿಪ್ರಾಯ ಇಲ್ಲ. ನಿಜಹೇಳಬೇಕೆಂದರೆ, ವಾತಾವರಣ ಹೇಗಿದ್ದರೂ ನನಗೆ ಸಮಸ್ಯೆ ಇಲ್ಲ. ಆದರೆ, ವಾತಾವರಣ ಹೇಗಿದೆ ಅನ್ನುವದನ್ನು ತಿಳಿಯುವದು ನನಗೆ ಬೇಕಿಲ್ಲ”.
“”ಆಯ್ತಪ್ಪ, ನೀನು ಹೇಳಿದ ಹಾಗೆಯೇ ಆಗಲಿ. ಆದರೆ ಕನಿಷ್ಠ ಪಕ್ಷ ರೂಮಿನ ಲೈಟನ್ನಾದರೂ ಹಾಕೋದಲ್ಲವೆ?”.
ಅವಳು ಇನ್ನೇನು ಲೈಟಿನ ಸ್ವಿಚ್ ಒತ್ತಬೇಕು ಎನ್ನುವಷ್ಟರಲ್ಲಿ ಅವನು ಚಂಗನೆ ಜಿಗಿದು ರೂಮಿನ ದೀಪವನ್ನು ಒಡೆದುಹಾಕಿದ. “”ನೋಡು, ನಂಗೆ ನೀನು ಲೈಟುಹಾಕೋದು ಸಹ ಬೇಕಿಲ್ಲ. ಯಾಕೆಂದರೆ ನೀನು ಲೈಟನ್ನು ಹಾಕಿದರೆ ನಿನಗೆ ಲೈಟನ್ನು ಹಾಕೋಕೆ ಬರುತ್ತದೆ ಎನ್ನುವದು ನನಗೆ ತಿಳಿಯುತ್ತದೆ ಮತ್ತು ನನಗೆ ಅದನ್ನು ತಿಳಿಯುವದಕ್ಕೆ ಒಂಚೂರೂ ಇಷ್ಟವಿಲ್ಲ”.
ಅವನ ಈ ವರ್ತನೆ ಅವಳನ್ನು ಅದೆಷ್ಟು ಕಂಗೆಡಿಸಿತು ಎಂದರೆ, ಅವಳು ಭೋರನೆ ಅಳಲು ಶುರುಮಾಡಿದಳು.
ಅವನಿಗೆ ಕಸಿವಿಸಿಯಾಯಿತು. “”ಇಲ್ನೋಡು, ನಂಗೇನು ನಿನ್ನ ನೋಯಿಸಬೇಕು ಅಂತಿಲ್ಲ” ಅವನು ಸಂತೈಸುವ ದನಿಯಲ್ಲಿ ಹೇಳಿದ. ನಿಜಹೇಳಬೇಕೆಂದರೆ ನಾನು ಇನ್ನು ಮೇಲೆ ಯಾವುದೇ ವಿಷಯವನ್ನು ತಿಳಿದುಕೊಳ್ಳಬಾರದು ಅಂತ ನಿರ್ಧಾರ ಮಾಡಿದ್ದೇನೆ. ಅದರ ಹೊರತಾಗಿ ಬೇರೇನೂ ಇಲ್ಲ ” ಇಷ್ಟನ್ನು ಹೇಳಿ ಅವನು ಸುಮ್ಮನಾದ.
ಅವಳಿಗೆ ಏನೂ ಅರ್ಥವಾಗದಿದ್ದರೂ ಅಳುವದನ್ನು ನಿಲ್ಲಿಸಿ ಮೂಗು ಒರೆಸಿಕೊಳ್ಳುತ್ತ ಅವನನ್ನು ರೂಮಿನ ಕತ್ತಲೆಯಲ್ಲಿಯೇ ಬಿಟ್ಟು ಅಲ್ಲಿಂದ ಹೊರನಡೆದಳು. ನಂತರ ಅವನು ಕತ್ತಲೆಯಲ್ಲಿಯೇ ತುಂಬಾ ಹೊತ್ತು ಒಬ್ಬನೇ ಕುಳಿತಿದ್ದ.
ಮುಂದೆ, ಮನೆಗೆ ಬಂದವರು ಯಾರಾದರೂ ಅವನ ಬಗ್ಗೆ ಕೇಳಿದರೆ ಅವಳು, “”ಅವನು ಇತ್ತೀಚಿಗೆ ಒಂಟಿಯಾಗಿ ರೂಮಿನ ಕತ್ತಲೆಯಲ್ಲಿ ಕುಳಿತಿರುತ್ತಾನೆ ಎಂದೂ, ಅವನಿಗೆ ಯಾವ ವಿಷಯವನ್ನೂ ತಿಳಿಯುವದಕ್ಕೂ ಇಷ್ಟವಿಲ್ಲ” ಎಂದು ಹೇಳುತ್ತಿದ್ದಳು.
ಆದರೆ, ಇದು ಬಂದವರನ್ನು ಅದೆಷ್ಟು ಗೊಂದಲಕ್ಕೆ ನೂಕಿತೆಂದರೆ ಪ್ರತಿಬಾರಿ ಅವರು ಕೇಳುತ್ತಿದ್ದರು, “”ಅವನಿಗೆ ಯಾವ ವಿಷಯ ತಿಳಿದುಕೊಳ್ಳಲು ಇಷ್ಟವಿಲ್ಲ?” ಹಾಗೆ ಕೇಳಿದಾಗಲೆಲ್ಲ ಅವಳು “”ಇಂಥಾದ್ದೇ ಅಂತ ಇಲ್ಲ. ಅವನಿಗೆ ಮೂಲತಃ ಯಾವ ವಿಷಯವನ್ನೂ ತಿಳಿದುಕೊಳ್ಳಲು ಇಷ್ಟವಿಲ್ಲ” ಎನ್ನುತ್ತಿದ್ದಳು. ಆದರೆ, ಎಲ್ಲರಿಗೂ ಇದು ಒಂದೇ ಸಲಕ್ಕೆ ಅರ್ಥವಾಗುವ ಸಂಗತಿ ಅಲ್ಲ . ಹಾಗಾಗಿ, ಕೆಲವೊಮ್ಮೆ ಅವಳು ಬಂದವರಿಗೆ ಉದಾಹರಣೆ ಸಮೇತ ವಿವರಿಸಬೇಕಾಗಿತ್ತು. “”ನೋಡಿ, ಅವನಿಗೆ ಇವತ್ತಿನ ಅಥವಾ ಯಾವತ್ತಿನ ಹವಾಮಾನ ಹೇಗಿದೆ ಅನ್ನುವದನ್ನು ತಿಳಿಯುವದು ಇಷ್ಟವಿಲ್ಲ ಅಥವಾ ಜನ ಹವಾಮಾನದ ಬಗ್ಗೆ ಏನು ಮಾತನಾಡುತ್ತಿರಬಹುದು ಎನ್ನುವದನ್ನು ತಿಳಿಯಲು ಕೂಡ ಇಷ್ಟವಿಲ್ಲ ಅಥವಾ ಅವನಿಗೆ ಇಲ್ಲಿಯವರಿಗೆ ಗೊತ್ತಿದ್ದ ಸಂಗತಿಯನ್ನು ತಿಳಿದುಕೊಳ್ಳುವದಕ್ಕೂ ಇಷ್ಟವಿಲ್ಲ. ಉದಾಹರಣೆಗೆ ನಿಮಗೆ ಲೈಟಿನ ಸ್ವಿಚ್ ಹಾಕಲು ಬರುತ್ತದೆ ಎನ್ನುವದು” “”ಓ!” ಹಾಗೆ ಜನ ಕ್ರಮೇಣ ಅವರ ಮನೆಗೆ ಬರುವದನ್ನೇ ನಿಲ್ಲಿಸಿದರು. ಇಷ್ಟಾದರೂ ಸಹ ಅವನು ಕತ್ತಲಲ್ಲಿ ಕುಳಿತೇ ಇದ್ದ . ಅವನ ಹೆಂಡತಿ ಅವನಿದ್ದ ಕತ್ತಲರೂಮಿಗೆ ಊಟವನ್ನು ತರುತ್ತಿದ್ದಳು.
ಹೀಗೊಮ್ಮೆ ಅವಳು ಅವನನ್ನು ಕೇಳಿದಳು, “”ನಿನಗೆ ಇನ್ನೂ ಗೊತ್ತಿಲ್ಲದ ವಿಷಯಗಳು ಏನಾದರೂ ಇವೆಯಾ?” “”ನನಗೆ ಇನ್ನೂ ಸಹ ಎಲ್ಲ ತಿಳಿದಿದೆ” ಅವನು. ಇನ್ನೂ ತನಗೆ ಎಲ್ಲವು ತಿಳಿದಿದೆ ಎನ್ನುವ ವಿಚಾರವೇ ಅವನಿಗೆ ಅತ್ಯಂತ ಖೇದವನ್ನುಂಟುಮಾಡಿತ್ತು.
“”ಹೇಳಬೇಕೆಂದರೆ ನೀನು ಖುಷಿಯಾಗಿರಬೇಕು. ಯಾಕೆಂದರೆ, ನಿನಗೆ ಇತ್ತೀಚಿಗೆ ವಾತಾವರಣ ಹೇಗಿರುತ್ತೆ ಅನ್ನುವದೇ ಗೊತ್ತಿಲ್ಲ” ಹೆಂಡತಿ ಅವನನ್ನು ಸಂತೈಸಿದಳು. “”ನೋಡು, ನನಗೆ ವಾತಾವರಣ ಹೇಗಿದೆ ಅಂತ ಗೊತ್ತಿಲ್ಲದೆ ಇರಬಹುದು” ಅವನು ಅತ್ಯಂತ ಗಂಭೀರನಾಗಿ ಹೇಳಿದ. ಆದ್ರೆ ಅದು ಹೇಗಿರಬಹುದು ಅನ್ನುವದು ನನಗೆ ತಿಳಿದಿದೆ. ಯಾಕೆಂದರೆ, ನನಗೆ ಅತ್ಯಂತ ಶೀತದ ಹವೆಯ ಮಳೆಗಾಲ ಮತ್ತು ಒಣಗಿದ ಹವೆಯ ಬೇಸಿಗೆಕಾಲ ಹೇಗಿರುತ್ತವೆ ಎನ್ನುವದು ಇನ್ನೂ ನೆನಪಿದೆ” “”ಇನ್ನೊಂದು ಸ್ವಲ್ಪದಿನ, ನೀನು ಅದನ್ನೂ ಮರೆಯಬಹುದು”
“”ಹೂ ! ಬರಿದೆ ಮಾತಿನಲ್ಲಿ ಹೇಳ್ಳೋಕೆ ಅದು ಸುಲಭ” ಅಷ್ಟು ಹೇಳಿ ಅವನು ಮತ್ತೆ ಕೋಣೆಯ ಒಳಹೊಕ್ಕು ಕತ್ತಲಲ್ಲಿ ಕುಳಿತುಕೊಂಡ. ಯಥಾಪ್ರಕಾರ ನಿತ್ಯ ಅವನ ಹೆಂಡತಿ ಅವನಿಗೆ ಊಟತಿಂಡಿ ತರುತ್ತಿದ್ದಳು. ಪ್ರತಿದಿನ ಊಟಮಾಡುವದು ಅವನಿಗೆ ಅತ್ಯಂತ ದುಃಖದ ಕೆಲಸವಾಗಿತ್ತು. ಯಾಕೆಂದರೆ, ಊಟದ ತಟ್ಟೆಯಲ್ಲಿದ್ದ ಹೂಕೋಸು, ಆಲೂಗಡ್ಡೆ , ಮಾಂಸದ ತುಂಡು, ಉಳ್ಳಾಗಡ್ಡೆ ಇವು ಎಲ್ಲವನ್ನೂ ಅವನು ಮೊದಲೂ ತಿಳಿದಿದ್ದ, ಈಗಲೂ ತಿಳಿದೇ ಇದ್ದ.
ಹಲವಾರು ಬಾರಿ ಅವನು ಊಟದ ತಟ್ಟೆಯ ಮುಂದೆ ಕುಳಿತು ಹತಾಶೆಯಿಂದ “”ನಂಗೆ ಯಾವತ್ತಿಗೂ ಎಲ್ಲವೂ ತಿಳಿದೇ ಇರುತ್ತೆ. ನಾನು ಮಾತನಾಡುವ ಪ್ರತಿ ಶಬ್ದ ಸಹ ನನಗೆ ತಿಳಿದಿದೆ” ಎಂದು ಸಂಕಟಪಡುತ್ತಿದ್ದ. ಹೀಗೊಂದು ದಿನ ಊಟ ತಂದಾಗ ಹೆಂಡತಿ ಕೇಳಿದಳು, “”ನಿನಗೆ ಇನ್ನೂ ತಿಳಿದೇ ಇರುವ ಯಾವುದಾದರೊಂದು ವಿಷಯ ಹೇಳು” “”ನಿಜಹೇಳಬೇಕೆಂದರೆ ನನಗೆ ಈಗ ಮೊದಲಿಗಿಂತ ಸ್ವಲ್ಪ$ಜಾಸ್ತಿಯೇ ತಿಳಿದಿದೆ. ಈಗ ನನಗೆ ಕೆಟ್ಟ ಮತ್ತು ಒಳ್ಳೆಯ ವಾತಾವರಣವೊಂದೇ ಅಲ್ಲ, ವಾತಾವರಣವೇ ಇಲ್ಲದಿದ್ದರೆ ಹೇಗಿರುತ್ತದೆ ಎನ್ನುವದು ತಿಳಿದಿದೆ. ಅಲ್ಲದೆ ನಂಗೆ ಇನ್ನೂ ಒಂದು ವಿಷಯ ತಿಳಿದಿದೆ. ಗಾಢಕತ್ತಲೆಯೊಳಗೂ ಸಾಕಷ್ಟು ಕತ್ತಲೆಯಲ್ಲದ್ದು ಇದೆ” ಅವನು ವಿಷಾದದಿಂದ ಉತ್ತರಿಸಿದ.
“”ಆದರೆ, ನಿನಗೆ ತಿಳಿಯದ ಸಂಗತಿಗಳು ಸಾಕಷ್ಟಿವೆ” ಅವಳು ಊಟದ ತಟ್ಟೆಯನ್ನು ತೆಗೆಯುತ್ತ ಹೇಳಿದಳು. “”ನಿನಗೆ ವಾತಾವರಣ ಹೇಗಿದೆ ಎಂದು ತಿಳಿದಿದ್ದರೂ ಚೈನೀಸ್ ಭಾಷೆಯಲ್ಲಿ “ಆಹಾ ! ಒಳ್ಳೆ ವಾತಾವರಣ ಎಂದು ಹೇಗೆ ಹೇಳುತ್ತಾರೆ” ಎನ್ನುವದು ತಿಳಿದಿಲ್ಲ. ಇಷ್ಟು ಹೇಳಿ ಅವಳು ಊಟದ ತಟ್ಟೆಯನ್ನು ತೊಳೆಯಲು ತೆಗೆದುಕೊಂಡು ಹೋದಳು. ಅವಳು ಹೋದ ಮೇಲೆ ಅವನು ಅವಳಾಡಿದ ಮಾತುಗಳ ಬಗ್ಗೆಯೇ ಯೋಚಿಸತೊಡಗಿದ. ಅವನಿಗೆ ಚೈನೀಸ್ ಭಾಷೆ ಬರುತ್ತಿಲ್ಲ ಎನ್ನುವದು ನಿಜ, ಆದರೆ ಯಾವತ್ತೂ ಕಲಿತೇ ಇಲ್ಲವೆಂದ ಮೇಲೆ ಅದರ ಬಗ್ಗೆ ತಿಳಿದುಕೊಳ್ಳುವದೇ ಇಲ್ಲ ಎನ್ನುವುದಾದರೂ ಏನು ಚೆನ್ನ?
ಅವನು ಎದ್ದು ನಿಂತು ಮೊದಲು ನಾನು ಯಾವು ಯಾವುದನ್ನು ತಿಳಿಯುವದಕ್ಕೆ ಇಷ್ಟಪಡುವದಿಲ್ಲ ಎನ್ನುವದನ್ನು ತಿಳಿಯಬೇಕು ಎಂದು ಘೋಷಿಸಿದವನೇ ತತ್‌ಕ್ಷಣ ಕಿಟಕಿಯ ಬಾಗಿಲುಗಳಿಗೆ ಮೆತ್ತಿದ ರದ್ದಿಯ ಪೇಪರುಗಳನ್ನು, ನಂತರ ಮುಚ್ಚಿದ್ದ ಕಿಟಕಿಯ ಬಾಗಿಲುಗಳನ್ನು ತೆರೆದ. ಹೊರಗೆ ಮಳೆ ಸುರಿಯುತ್ತಿತ್ತು. ಅವನು ಸ್ವಲ್ಪ ಹೊತ್ತು ಮೌನವಾಗಿ ಸುರಿಯುತ್ತಿದ್ದ ಮಳೆಯನ್ನ ದಿಟ್ಟಿಸಿದ.
ನಂತರ ಅವನು ಪೇಟೆಗೆ ಹೋಗಿ ಪುಸ್ತಕದ ಅಂಗಡಿಯಿಂದ “ಚೈನೀಸ್ ಕಲಿಯಿರಿ’ ಪುಸ್ತಕವನ್ನು ಖರೀದಿಸಿ ತಂದ. ಮುಂದಿನ ಹಲವಾರು ವಾರ ಅವನು ಚೈನೀಸ್ ಕಲಿಯುವದರಲ್ಲಿ , ಚೈನೀಸ್ ವರ್ಣಮಾಲೆಯ ಅಕ್ಷರಗಳನ್ನು ಪೇಪರಿನ ಮೇಲೆ ಚಿತ್ರಿಸುವದರಲ್ಲಿ ಮಗ್ನನಾದ. ಈ ನಡುವೆ ಬಂದವರು ಅವನ ಹೆಂಡತಿಯಲ್ಲಿ ಅವನ ಬಗ್ಗೆ ವಿಚಾರಿಸಿದರು.
“”ನಿಜಹೇಳಬೇಕು ಎಂದರೆ, ಅವರು ಈಗ ಚೈನೀಸ್ ಕಲಿಯುತ್ತ ಇದ್ದಾರೆ” ಅವಳು ಬಂದವರಿಗೆ ವಿವರಿಸಿದಳು. ಅದನ್ನು ಕೇಳಿದ್ದೇ ಜನ ಮನೆಗೆ ಬರುವದನ್ನು ನಿಲ್ಲಿಸಿದರು. ಚೈನೀಸ್ ಕಲಿಯುವದು ಎಂದರೆ ಅದೇನು ಸುಲಭದ ಕೆಲಸವಲ್ಲ . ಅದಕ್ಕೆ ಹಲವಾರು ತಿಂಗಳುಗಳು, ವರ್ಷಗಳೇ ಬೇಕಾಗುತ್ತದೆ. ಕೊನೆಗೊಮ್ಮೆ ಚೈನೀಸ್ ಭಾಷೆಯ ಬಗ್ಗೆ ಕಲಿಯಲಿಕ್ಕೆ ಏನೇನಿದೆಯೋ ಅದೆಲ್ಲವನ್ನೂ ಕಲಿತಾದ ಮೇಲೆ ಅವನು ಘೋಷಿಸಿದ: “”ನನಗೆ ಇನ್ನೂ ಸಾಕಷ್ಟು ವಿಷಯಗಳು ತಿಳಿದಿಲ್ಲ. ನಾನು ಎಲ್ಲ ವಿಷಯಗಳನ್ನೂ ತಿಳಿದುಕೊಳ್ಳಬೇಕು ಅಂದರೆ ಮಾತ್ರವೇ ನನಗೆ, ಯಾವುದು ತಿಳಿಯುವದು ಬೇಡ ಎನ್ನುವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ”
“”ನಾನು ವೈನ್‌ಗಳಲ್ಲಿ ಉತ್ಕೃಷ್ಟವಾದ ಹಾಗೂ ಕೆಟ್ಟದಾದ ವೈನ್‌ಗಳೆರಡರ ಬಗ್ಗೆಯೂ ತಿಳಿಯಬೇಕು ಮತ್ತು ಆಲೂಗಡ್ಡೆ ತಿಂದಾಗ, ಆಲೂಗಡ್ಡೆ ಬೆಳೆಯುವದು ಹೇಗೆ ಎಂದು ತಿಳಿದುಕೊಳ್ಳಬೇಕು. ನನಗೆ ಆಕಾಶದಲ್ಲಿ ಚಂದ್ರ ಹೇಗಿರುತ್ತಾನೆ ಎನ್ನುವದನ್ನು ತಿಳಿಯಬೇಕು ಯಾಕೆಂದರೆ, ನಾನು ಚಂದ್ರನನ್ನು ನೋಡುತ್ತಿದ್ದೇನೆ ಎಂದ ಮಾತ್ರಕ್ಕೆ ನನಗೆ ಅವನ ಬಗ್ಗೆ ಗೊತ್ತಿದೆ ಎಂದಲ್ಲ , ನಾನು ಚಂದ್ರನಲ್ಲಿಗೆ ತಲುಪುವದು ಹೇಗೆ ಎನ್ನುವದನ್ನು ಕೂಡ ತಿಳಿಯಬೇಕು ಮತ್ತು ಎಲ್ಲ ಪ್ರಾಣಿಗಳ ಹೆಸರು, ವಿವರ, ಅವುಗಳು ಆಹಾರವೇನು, ಅವು ಎಲ್ಲಿರುತ್ತವೆ ಹಾಗೂ ಅವು ನೋಡಲಿಕ್ಕೆ ಹೇಗಿರುತ್ತವೆ ಎನ್ನುವದನ್ನು ತಿಳಿದುಕೊಳ್ಳಬೇಕು” ಇಷ್ಟಾದ ಮೇಲೆ ಅವನು ಮೊಲಗಳ ಬಗ್ಗೆ ಒಂದು ಪುಸ್ತಕ, ಕೋಳಿಗಳ ಬಗ್ಗೆ ಒಂದು ಪುಸ್ತಕ, ಕಾಡುಪ್ರಾಣಿಗಳ ಬಗ್ಗೆ ಒಂದು ಪುಸ್ತಕ ಮತ್ತು ಇನ್ನೊಂದು ಪುಸ್ತಕ ಕ್ರಿಮಿಕೀಟಗಳ ಬಗ್ಗೆ ಖರೀದಿಸಿದನು.
ಅದಾದ ಮೇಲೆ ಅವನು ಖಡ್ಗಮೃಗದ ಕುರಿತಾದ ಒಂದು ಪುಸ್ತಕ ಖರೀದಿಸಿದನು. ಪುಸ್ತಕದಲ್ಲಿ ಹೇಳಿದ್ದ ಖಡ್ಗಮೃಗ ಅವನನ್ನು ಬಹುವಾಗಿ ಆಕರ್ಷಿಸಿತು. ಎಷ್ಟು ಎಂದರೆ ಅವನು ಮಾರನೆಯ ದಿನವೇ ಮೃಗಾಲಯಕ್ಕೆ ಖಡ್ಗಮೃಗವನ್ನು ಹುಡುಕಿಕೊಂಡು ಹೋದ. ಖಡ್ಗಮೃಗ ಪಂಜರದಲ್ಲಿ ಎಳ್ಳಷ್ಟೂ ಚಲನೆಯಿರದೆ ಮೌನವಾಗಿ ನಿಂತಿತ್ತು. ನಂತರ ಅವನು ಗಮನಿಸಿದ ಹಾಗೆ ಖಡ್ಗಮೃಗ ಯಾವುದೋ ಒಂದು ವಿಷಯದ ಬಗ್ಗೆ ಗಹನವಾಗಿ ಯೋಚಿಸುತ್ತಿತ್ತು. ಅದು ಯಾವುದೋ ವಿಷಯವನ್ನು ತಿಳಿಯುವ ಪ್ರಯತ್ನದಲ್ಲಿದ್ದ ಹಾಗೆ ಗಂಭೀರ ಭಂಗಿಯಲ್ಲಿ ನಿಂತುಕೊಂಡಿತ್ತು ಮತ್ತು ಈ ಗಹನ ಚಿಂತನೆ ಖಡ್ಗಮೃಗಕ್ಕೆ ಅತ್ಯಂತ ತ್ರಾಸದಾಯಕವಾಗಿದ್ದ ಹಾಗೆ ತೋರುತ್ತಿತ್ತು. ಹೀಗೆ, ಆಳವಾಗಿ ಚಿಂತಿಸುತ್ತಿರುವಾಗ ಖಡ್ಗಮೃಗಕ್ಕೆ ಅಕಸ್ಮತ್ತಾಗಿ ಯಾವುದೋ ವಿಷಯ ಹೊಳೆದರೆ ಅದು ಅತ್ಯಂತ ಖುಷಿಯಿಂದ ಇದ್ದಕ್ಕಿದ್ದಂತೆ ಪಂಜರದ ಸುತ್ತ ಓಡಲು ಶುರುಮಾಡುತ್ತಿತ್ತು. ಪಂಜರದ ಸುತ್ತ ಎರಡು-ಮೂರು ಅಥವಾ ನಾಲ್ಕು ಸುತ್ತು ಹೊಡೆಯುವಾಗ ಯಾವುದಾದರೂ ಸುತ್ತಿನ ಮಧ್ಯೆ ಇದ್ದಕ್ಕಿದ್ದ ಹಾಗೆ ಖಡ್ಗಮೃಗಕ್ಕೆ ತಾನು ವಿಚಾರ ಮಾಡುತ್ತಿದ್ದುದು ಏನು ಎನ್ನುವದು ಮರೆತುಹೋಗುತ್ತಿದ್ದುದರಿಂದ ಅದು ಓಡುವದನ್ನು ನಿಲ್ಲಿಸಿ ಆ ಜಾಗದಲ್ಲಿಯೇ ಮತ್ತೆ ನಿಶ್ಚಲವಾಗಿ ನಿಲ್ಲುತ್ತಿತ್ತು. ಅರ್ಧ-ಮುಕ್ಕಾಲು ಕೆಲವೊಮ್ಮೆ ಎರಡು-ಮೂರು ತಾಸುಗಳ ತನಕವೂ, ಮತ್ತೂಂದು ವಿಚಾರ ಹೊಳೆಯುವವರೆಗೆ ಖಡ್ಗಮೃಗ ಅಲುಗಾಡದೆ ಹಾಗೆಯೇ ನಿಂತಿರುತ್ತಿತ್ತು. ವಿಚಾರವೊಂದು ಹೊಳೆದದ್ದೇ ಆದರೆ ಮತ್ತೆ ಅಲ್ಲಿಂದ ಓಟ ಕೀಳುತ್ತಿತ್ತು. ಖಡ್ಗಮೃಗ ಯಾವಾಗಲೂ ಬೇಕಾದ್ದಕ್ಕಿಂತ ಸ್ವಲ್ಪ ಮೊದಲೇ ಓಟ ಕೀಳುತ್ತಿದ್ದುದರಿದ ಹಾಗೂ ಈ ಓಟದ ಮಧ್ಯೆ ತಾನು ಆಲೋಚಿಸುತ್ತಿದ್ದ ವಿಚಾರವನ್ನೇ ಮರೆಯುತ್ತಿದ್ದುದರಿಂದ ಅದು ನಿಜವಾಗಿಯೂ ಯಾವುದೇ ಆಲೋಚನೆಗಳನ್ನೇ ಹೊಂದಿರಲಿಲ್ಲ .
“”ನಾನು ಸಹ ಈ ಖಡ್ಗಮೃಗದಂತೆ ಆಗಬೇಕು, ಆದರೆ ಹಾಗಾಗಲು ಬಹುಶಃ ಈಗ ಕಾಲಮಿಂಚಿ ಹೋಗಿದೆ ಅನ್ನಿಸುತ್ತದೆ” ಇಷ್ಟನ್ನು ಹೇಳಿ ಅವನು ಮನೆಗೆ ತೆರಳಿದ ಮತ್ತು ಅವನಲ್ಲಿನ ಖಡ್ಗಮೃಗದ ಬಗ್ಗೆ ಯೋಚಿಸತೊಡಗಿದ. ಈಗ ಅವನು ಬೇರೇನನ್ನೂ ಮಾತನಾಡಲಿಲ್ಲ. ಈ ಖಡ್ಗಮೃಗ ತುಂಬಾ ನಿಧಾನಕ್ಕೆ ಯೋಚನೆ ಮಾಡುತ್ತದೆ ಮತ್ತು ಶೀಘ್ರವಾಗಿ ಓಟಕೀಳುತ್ತದೆ ಮತ್ತು ಅದು ಹಾಗೆಯೇ ಇರಬೇಕು, ಇಷ್ಟು ಹೇಳಿದ ನಂತರ ಅವನಿಗೆ ತಾನು ಏನನ್ನು ತಿಳಿಯಬಾರದು ಎಂದು ಯಾವುದನ್ನೆಲ್ಲ ತಿಳಿಯಲು ಯತ್ನಿಸುತ್ತಿ¨ªೆ ಎನ್ನುವದೇ ಮರೆತುಹೋಯಿತು. ಇಷ್ಟಾದ ಮೇಲೆ ಅವನ ಜೀವನ ಮುಂಚಿನಂತೆಯೇ ಮುಂದುವರೆಯಿತು. ಒಂದೇ ವ್ಯತ್ಯಾಸ ಎಂದರೆ ಅವನಿಗೆ ಈಗ ಚೈನೀಸ್ ಭಾಷೆ ಬರುತ್ತದೆ.
ಜರ್ಮನ್ ಮೂಲ : ಪೀಟರ್ ಬಿಕ್ಸೆಲ…
ಇಂಗ್ಲಿಶ್ ಅನುವಾದ : ಇಮೋಜೆನ್ ಟೈಲರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.