ಆಧುನಿಕರಿಗೊಂದು ಆಸ್ತಿಕತೆಯ ಉಪಾಯನ
ಒಂದು ಹೊಸ ಓದು
Team Udayavani, Oct 6, 2019, 5:45 AM IST
ಕೆ. ವಿ. ಅಕ್ಷರ ಅವರ ಶಂಕರ ವಿಹಾರ ಒಂದು ಹೊಸ ರೀತಿಯ ಕೃತಿ. ಅವರೇ ಹೇಳಿಕೊಳ್ಳುವಂತೆ ಅದು ಆಧುನಿಕನೊಬ್ಬನ ಅದ್ವೆ„ತ ಯಾತ್ರೆ. ಒಬ್ಬ ಆಧುನಿಕನಾಗಿ ಆದಿಶಂಕರರನ್ನು ಹೇಗೆ ಮತ್ತು ಯಾಕೆ ಅಧ್ಯಯನ ಮಾಡಬೇಕು ಎಂದು ಕೇಳಿಕೊಳ್ಳುವ ಅಕ್ಷರ, ಹೊಸಬರಿಗೆ ಅದರಲ್ಲೂ ವೇದಾಂತ ಮತ್ತು ಆಧ್ಯಾತ್ಮದಲ್ಲಿ ಪರಿಶ್ರಮ ಇಲ್ಲದವರಿಗೆ ಇದೊಂದು ಪ್ರವೇಶಿಕೆಯೂ ಆಗಲಿ ಎನ್ನುವಂಥ ಪುಸ್ತಕ ಬರೆದಿ¨ªಾರೆ.
ಇದರಲ್ಲಿ ಅದ್ವೆ„ತ ವೇದಾಂತದ ಕೆಲವು ಮುಖ್ಯವಿಚಾರಗಳ ಸರಳ ಮತ್ತು ಪುನಾರೂಪಿತ ವ್ಯಾಖ್ಯಾನಗಳಿವೆ. ಆದಷ್ಟೂ , ರ್ಯಾಶನಲ್ ಎನ್ನಬಹುದಾದ ಮಾದರಿಯಲ್ಲಿ ಅದ್ವೆ„ತವನ್ನು ವಿವರಿಸುವ ಪ್ರಯತ್ನ ಇದು. ಅದಕ್ಕೂ ಒಂದು ಪರಂಪರೆಯೇ ಇದೆ. 19-20ನೇ ಶತಮಾನದ ನಡುವೆ ಜೀವಿಸಿದ್ದ ಎಫ್. ಎಚ್. ಬ್ರಾಡ್ಲೆà ಎನ್ನುವ ಇಂಗ್ಲಿಷ್ ತತ್ವಜ್ಞ ಅದ್ವೆ„ತದ ನೆಲೆಯಿಂದ ಇಂತಹ ಒಂದು ಪ್ರಯತ್ನ ಮಾಡಿದ್ದ. ನಮ್ಮÇÉೇ ತತ್ವಶಾಸ್ತ್ರ ಚಿಂತಕರಾದ ಹಿರಿಯಣ್ಣ, ಕೃಷ್ಣಸ್ವಾಮಿ ಐಯ್ಯರ್ ಮುಂತಾದವರು ಮತ್ತು ಇನ್ನೂ ಪ್ರಾಯೋಗಿಕ ಮಟ್ಟದಲ್ಲಿ ಹೊಳೆನರಸೀಪುರದ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿಗಳು ಇಂತಹ ರ್ಯಾಶನಲ್ ಎನ್ನಬಹುದಾದ ಪುನಾರೂಪಣೆಯನ್ನು ಮಾಡಿ¨ªಾರೆ. ಇವರೆಲ್ಲರೂ ವೇದಾಂತವನ್ನು ಅದರಲ್ಲೂ ಅದ್ವೆ„ತ ವನ್ನು ನಮ್ಮ ಅನುಭವದ ತಥ್ಯವನ್ನು ವಿವರಿಸುವ ಕ್ರಮ ಎಂದೇ ನೋಡಿ¨ªಾರೆ. ಅಕ್ಷರ ಅವ ರೂ ಇದೇ ದಾರಿಯಲ್ಲಿ ಸಾಗಿ, ನಂತರ
ಒಂದು ಕುತೂಹಲದ ಉಪಯಾತ್ರೆಗೆ ಹೊರಳುತ್ತಾರೆ. ನಮ್ಮ
ಆಧುನಿಕ ರಾಜಕೀಯ, ಸಾಮಾಜಿಕ ಸಮಸ್ಯೆಗಳನ್ನು ಅರಿಯಲು
ಅದ್ವೆ„ತದಲ್ಲಿ ಹತ್ಯಾರಗಳಿವೆಯೇ ಎಂದೂ ಅವರು ಕೇಳಿಕೊಳ್ಳುತ್ತಾರೆ.
ಒಂದು ರೀತಿಯಿಂದ ಇದು ಬಹಳ ಅಪಾಯದ ದಾರಿ. ಉಭಯಭ್ರಷ್ಟತೆಯ ಅಪಾಯವಿರುವ ದಾರಿ. ವೇದಾಂತಿಗಳ ದೃಷ್ಟಿಯಿಂದ ನೋಡಿದರೆ ಸಾಮಾಜಿಕ ಸಮಸ್ಯೆಗಳಿಗೂ ಅವಿದ್ಯೆ, ಮಿಥ್ಯಾಜ್ಞಾನವೇ ಕಾರಣ. ಹಾಗಾಗಿ, ಅದಕ್ಕಾಗಿ ವೇದಾಂತದ ಅಥವಾ ಅದ್ವೆ„ತದ ಹೊಸದೊಂದು ವ್ಯಾಖ್ಯಾನ ಬೇಕಿಲ್ಲ.
ಆಧುನಿಕರ ದೃಷ್ಟಿಯಿಂದ ನೋಡಿದರೆ, ಸಾಮಾಜಿಕ-ಚಾರಿತ್ರಿಕ ಬದಲಾವಣೆಯ ಒಂದು ಸ್ಥೂಲ ವಿವರಣಾ ಮಾದರಿಯೇ ಇಲ್ಲದ ಯಾವ ಚಿಂತನೆಯಿಂದಲೂ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಬರುವುದಿಲ್ಲ. ಹಾಗಾಗಿ, ಅದಕ್ಕೆ ವೇದಾಂತ ಅಥವಾ ಅದ್ವೆ„ತದ ಅಗತ್ಯವೇ ಇಲ್ಲ.
ಇಂತಹ ಕಡಿದಾದ ವೈಚಾರಿಕ ಪ್ರದೇಶದಲ್ಲಿ ಅಕ್ಷರ ಅವ ರು ಒಂದು ಪ್ರಯೋಗ ಮಾಡಿ¨ªಾರೆ. ಈ ಎರಡನ್ನೂ ಒಂದರ ಪಕ್ಕ ಒಂದನ್ನು ಇಟ್ಟು ನೋಡಿದರೆ ಏನಾದರೂ ಹೊಸ ಚಿಂತನೆ ಹುಟ್ಟಬಹುದೋ ಎನ್ನುವುದು ಅವರ ಪ್ರಯತ್ನ. ಅವರು ಈ ಪ್ರಯತ್ನದಲ್ಲಿ ಒಂದು ವಿಚಿತ್ರ ರೀತಿಯಲ್ಲಿ ಸಫಲರಾಗಿ¨ªಾರೆ. ಅದ್ವೆ„ತದಿಂದ ನಮ್ಮ ತತ್ಕಾಲದ ಸಮಸ್ಯೆಗಳಿಗೆ ಯಾವುದೋ ಪರಿಹಾರ ನೀಡಿ¨ªಾರೆಯೋ ಇಲ್ಲವೋ ಎನ್ನುವುದು ಇಲ್ಲಿ ಮುಖ್ಯವಲ್ಲ. ಅಥವಾ ಅದ್ವೆ„ತವನ್ನು ವೈಜ್ಞಾನಿಕ ಎಂದು ಸಾಧಿಸಿಬಿಟ್ಟಿ¨ªಾರೆಯೋ ಎನ್ನುವುದೂ ಮುಖ್ಯವಲ್ಲ. ಅದಕ್ಕೂ ಮುಖ್ಯವಾದದ್ದು, ಒಂದು ವಿಶಾಲವಾದ ಆಸ್ತಿಕ ಭಾವದಿಂದ ಬದುಕುವ, ಚಿಂತಿಸುವ ಸಾಧ್ಯತೆಯನ್ನು ಆಧುನಿಕರಿಗೂ ಪರಿಚಯಿಸಿ¨ªಾರೆ. ಒಂದು ರೀತಿಯಲ್ಲಿ ಅಕ್ಷರ ಅವ ರು ತಾವು ಬದುಕುತ್ತಿರುವ ರೀತಿಯ ಬದುಕಿನ ಹರವನ್ನು ಕುರಿತೇ ಚಿಂತನೆ ಮಾಡಿ¨ªಾರೆ.
ದಿ ಅಮೆರಿಕನ್ ಕನ್ಸರ್ವೇಟಿವ್ ಪತ್ರಿಕೆಯ ಸಂಪಾದಕನಾದ ರಾಡ್ ಡ್ರೆಹರ್ ಇತ್ತೀಚೆಗೆ ಬರೆದ ಪುಸ್ತಕವೊಂದನ್ನು ಓದುತ್ತಿ¨ªೆ. ದ ಬೆನೆಡಿಕr… ಆಪ್ಶನ್ ಎಂದು ಅದರ ಹೆಸರು. ಅದರಲ್ಲಿ ಅವನು ಆಧುನಿಕ ಜಗತ್ತಿನಲ್ಲಿ ಸಾಂಪ್ರದಾಯಿಕ ಕ್ರಿಶ್ಚಿಯನ್ನರಾಗಿ ಬದುಕುವುದೇ ದುಸ್ತರ ಆಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸುತ್ತಾನೆ. ಜೊತೆಗೆ ಸಾಂಪ್ರದಾಯಿಕರು ಸಭ್ಯವಾಗಿ ಮತ್ತು ತಮ್ಮ ಸಂಪ್ರದಾಯಗಳಿಗೆ ಕುಂದಾಗದಂತೆ ಬದುಕುವ ಬಗೆ ಹೇಗೆ ಎಂದು ಚಿಂತಿಸುತ್ತಾನೆ. ಅಕ್ಷರರನ್ನು ಓದಿದಾಗ ಇಂತಹದೇ ಒಂದು ಕಾಳಜಿ ನನಗೆ ಕಾಣಿಸಿತು. ಡ್ರೆಹರ್‌ನಂತೆ ಅಕ್ಷರರು ಯಾವ ನಿರ್ದಿಷ್ಟ ಸಂಪ್ರದಾಯವನ್ನೂ ಸಮರ್ಥಿಸುವ ಅಥವಾ ಯಾವ ನಿರ್ದಿಷ್ಟ ಮೌಲ್ಯಗಳನ್ನೂ ಪ್ರತಿಪಾದಿಸುವ ಕೆಲಸಕ್ಕೆ ಇಳಿದಿಲ್ಲ. ಆದರೆ, ಮೊದಲೇ ಹೇಳಿದಂತೆ, ಮತ್ತು ಡ್ರೆಹರ್ ಕೂಡ ಮಾಡುತ್ತಿರುವಂತೆ, ಒಂದು ವಿಶಾಲ ರೀತಿಯ ಆಸ್ತಿಕ್ಯ ಭಾವದ ಅಗತ್ಯ ಮತ್ತು ಪ್ರಾಮುಖ್ಯವನ್ನು ಎತ್ತಿ ತೋರಿಸುವಲ್ಲಿ ಸಫಲರಾಗಿ¨ªಾರೆ. ಇದರಲ್ಲಿ ವೇದಾಂತಿಗಳಿಗೂ ಒಂದು ಪಾಠವಿದೆ. ಅದೇನೆಂದರೆ, ಅದ್ವೆ„ತವನ್ನು ಶಾಸ್ತ್ರ ವ್ಯಾಖ್ಯಾನಗಳ ಆಚೆಗೆ, ಒಂದು ಠಿಛಿcಜnಛಿಯಾಗಿ ಅಂದರೆ ಒಂದು ನಿತ್ಯ ಜೀವನದ ಸಾಧನೆಯಾಗಿ ಹೇಗೆ ಬೆಳೆಸುವುದು ಎನ್ನುವುದು. ಹಾಗೆಯೇ ಆಧುನಿಕರಿಗೂ ಒಂದು ಪಾಠವಿದೆ. ಸಾಮಾಜಿಕ ಒಳಿತನ್ನು ಕೇವಲ ತೆಳುವಾದ ಲಿಬರಲ್ ಸೆಕ್ಯುಲರ್ ಆದರ್ಶಗಳ ಮೇಲೆ ಬೆಳೆಸುವ ಬದಲು, ಇಂತಹ ಒಳಿತಿನ ಕುರಿತು ಬೇರೆ ಬೇರೆ ಸಂಪ್ರದಾಯಗಳಿಂದ ಕಲಿಯುವಂಥದ್ದೇನಿದೆ ಎಂದೂ ನಮ್ರವಾಗಿ ಗಮನಿಸುವುದು.
ಶಂಕರ ವಿಹಾರ ಹೀಗೆ ನಮಗೆ ಬಳುವಳಿಯಾಗಿ ಬಂದಿರುವುದನ್ನು ಬಳಸಿ ಕೊಳ್ಳುವ ಬಗೆ ಹೇಗೆ ಎಂದು ತೋರಿಸುವ ಒಂದು ಪುಸ್ತಕ.
– ಎ. ಪಿ. ಅಶ್ವಿನ್ ಕುಮಾರ್
**
“ಶಂಕರ ವಿಹಾರ’ದ ಮೊದಲ ಅಧ್ಯಾಯದ ಆಯ್ದ ಭಾಗ
ಗತಕಾಲದ ಭಾರತದ ಬೌದ್ಧಿಕ ಲೋಕದೊಳಗೆ ಇವತ್ತಿನ ಸಂದಿಗ್ಧ ಮತ್ತು ಸಂಕ್ಲಿಷ್ಟ ಸನ್ನಿವೇಶದಲ್ಲಿ ಪ್ರವಾಸ ಮಾಡುವಾಗ, ಹಲವು ದಿಕ್ಕಿನ ಅಪಾಯಗಳನ್ನು ಎದುರು ಹಾಕಿಕೊಳ್ಳದೆ ವಿಧಿಯಿಲ್ಲ. ಕಾರಣ, ಏಕಕಾಲದಲ್ಲಿ ಮೇಲರಿಮೆಯೂ ಇಲ್ಲದೆ, ಅಥವಾ ಕೀಳರಿಮೆಯೂ ಇಲ್ಲದೆ ಗತಭಾರತವನ್ನು ಇವತ್ತು ನೋಡುವುದೇ ಕಠಿಣ. ದೀರ್ಘಕಾಲದ ವಸಾಹತು ಅನುಭವವು ಭಾರತದ ಗತಕಾಲವನ್ನು ನಮ್ಮೆಲ್ಲರ ಮನಸ್ಸಿನಲ್ಲಿ ಸಿದ್ಧಬಿಂಬಗಳಾಗಿ ರೂಪಿಸಿಟ್ಟಿದೆ. ಅಂಥ ಸಿದ್ಧಬಿಂಬಗಳ ಒಂದು ಆವೃತ್ತಿಯು ಈ ನಾಡಿನ ಗತಕಾಲದ ಸಮಾಜ ಮತ್ತು ಸಂಸ್ಕೃತಿಯನ್ನು ಹಲವು ರೀತಿಯ ಅವಿಚಾರ, ಅಂಧತ್ವ, ಅನ್ಯಾಯಗಳ ಆಗರವೆಂದು ಚಿತ್ರಿಸುವ ರೂಢಿಯನ್ನು ಆಳವಾಗಿ ಊರಿದೆ. ತತ್ಪರಿಣಾಮವಾಗಿ ಭಾರತೀಯ ಮನಸ್ಸುಗಳಲ್ಲಿ ಉಂಟಾಗಿರುವ ಕೀಳರಿಮೆಯನ್ನು ಪಕ್ಕಕ್ಕಿಟ್ಟು ಇವತ್ತು ಯೋಚಿಸುವುದೇ ಅಸಾಧ್ಯವೆನಿಸುವಷ್ಟು ಕಷ್ಟ. ಅದಕ್ಕೆ ಪ್ರತಿಯಾಗಿ, ಅಂಥದೊಂದು ಕೀಳರಿಮೆಯನ್ನು ಮೀರುವ ಪರೋಕ್ಷ ಉಪಾಯವೋ ಎಂಬಂತೆ, ನಮಗೆ ಗೊತ್ತಿಲ್ಲದಂತೆಯೇ ನಮ್ಮೊಳಗೆ ಆವರಿಸಿಕೊಳ್ಳುವಂಥ ಗತಕಾಲದ ಸಮರ್ಥನೆಯ ಚಾಪಲ್ಯವನ್ನು ಹತ್ತಿಕ್ಕುವುದು ಕೂಡ ಸುಲಭವಲ್ಲ.
ಇಷ್ಟರಮೇಲೆ, ಇವೆರಡು ಬೌದ್ಧಿಕ ಪ್ರವೃತ್ತಿಗಳೂ ಸಮಕಾಲೀನ ರಾಜಕೀಯ ನಿಲುವುಗಳೊಂದಿಗೆ ಬೆರೆತುಕೊಂಡುಬಿಟ್ಟರೆ, ಆಗ ಈ ವಿಚಾರದ ಬಗ್ಗೆ ಹೇಗೆ ಮಾತಾಡಿದರೂ ಅದು ಅರ್ಥಕ್ಕಿಂತ ಹೆಚ್ಚು ಅನರ್ಥಗಳನ್ನು ಉತ್ಪಾದಿಸುವ ಕೆಲಸವಾಗುತ್ತದೆ- ಇದು ಇವತ್ತಿನ ಸ್ಥಿತಿ. ಆದರೆ, ಮೇಲರಿಮೆ ಮತ್ತು ಕೀಳರಿಮೆಗಳೆರಡೂ ಒಂದೇ ಬಗೆಯ ಆತಂಕದಿಂದ ಹುಟ್ಟುವ ಮನೋರೋಗದ ಎರಡು ಮುಖಗಳೆಂದು ನಾವು ಭಾವಿಸುವುದಾದರೆ, ಮತ್ತು ಇವೆರಡನ್ನೂ ಮೀರಿದ ಸ್ವಾಸ್ಥ್ಯವನ್ನು ಸಾಧಿಸಿಕೊಳ್ಳುವುದು ನಮ್ಮ ಗುರಿಯಾಗಿದ್ದರೆ, ಹೊಸಬಗೆಯ ಹುಡುಕಾಟ ಮಾಡದೆ ಬೇರೆ ದಾರಿಯೇ ಇಲ್ಲ. ಅಂಥ ಹುಡುಕಾಟದ ಒಂದು ಖಾಸಗಿ ಪ್ರವಾಸಕ್ಕೆ ಈ ಬರಹವು ಹೊರಟಿದೆ.
ಹಾಗಂತ, ಪ್ರಸ್ತುತ ಯಾತ್ರಾಕಥನವು ಈ ಕ್ಷೇತ್ರದಲ್ಲಿ ಗಹನವಾದ ಶಾಸ್ತ್ರೀಯ ಅಧ್ಯಯನ ನಡೆಸಿ ಮಂಡಿತ ವಾಗುತ್ತಿರುವ ಪ್ರಬಂಧವಲ್ಲ. ಬದಲು, ಈ ಬರಹದ ಉದ್ದಿಶ್ಯ ಸೀಮಿತವಾದದ್ದು. ಈ ವಿಚಾರಗಳನ್ನು ಕುರಿತು ಲಭ್ಯವಿರುವ ಮತ್ತು ಅಷ್ಟೇನೂ ಕ್ಲಿಷ್ಟವಲ್ಲದ ಪುಸ್ತಕಗಳನ್ನಷ್ಟೇ ಓದಿದರೂ ಸಾಕು, ಹಾಗೂ ದಿನನಿತ್ಯದ ಅನುಭವದಲ್ಲೇ ಕಂಡ ಸಂಗತಿಗಳನ್ನು ಅದಕ್ಕೆ ತಾಳೆ ಹಾಕಿಕೊಳ್ಳುತ್ತ ಸೂಕ್ಷ್ಮವಾಗಿ ನೋಡಿದರೂ ಸಾಕು, ಗತಕಾಲದ ಭಾರತದ ವೈಚಾರಿಕತೆಯನ್ನು ಕುರಿತು ವರ್ತಮಾನದಲ್ಲಿ ಚಾಲ್ತಿಯಲ್ಲಿರುವ ಕಲ್ಪನೆಗಳು ಎಷ್ಟು ಅಸಂಗತವಾದವು ಎಂಬುದು ಕಾಣಸಿಗುತ್ತದೆ. ಅಂಥ ಅಪಕಲ್ಪನೆಗಳ ಕೆಲವು ದೃಷ್ಟಾಂತಗಳನ್ನು ಆರಂಭವಾಗಿಟ್ಟುಕೊಂಡು, ಅದಕ್ಕಿಂತ ಭಿನ್ನವಾದ ಶಂಕರ ಚಿಂತನೆಯ ಮತ್ತು ಅದ್ವೆ„ತ ಗ್ರಹಿಕೆಯ ಅನುಸಂಧಾನವೊಂದನ್ನು ಪ್ರಾರಂಭಿಸಬಹುದೇ ಎಂಬ ಕಿರುಪ್ರಯತ್ನಕ್ಕೆ ತೊಡಗುವುದಷ್ಟೇ ಪ್ರಸ್ತುತ ಕಥನದ ಸೀಮಿತ ಗುರಿ. ಆದಿಶಂಕರರು ಇಂಥ ಅಪಕಲ್ಪನೆಗಳಿಗೆ ಆಧಾರವಾಗಿರುವ ಪ್ರಮುಖ ಪ್ರವಾಸ ತಾಣವೊಂದನ್ನು ಪ್ರತಿನಿಧಿಸುವುದರಿಂದ, ಅಲ್ಲಿ ಓಡಾಡಿ ನೋಡುವ ಮೂಲಕವೇ ಅದ್ವೆ„ತವನ್ನು ಗ್ರಹಿಸುವ ಪ್ರಯತ್ನ ಮಾಡಬಹುದಲ್ಲವೆ?- ಎಂಬುದು ಈ ಯಾತ್ರಾಕಥನದ ಆಶಯ. ಆದರೆ, ಭಾರತದ ತೀರ್ಥಕ್ಷೇತ್ರಗಳಲ್ಲಿ ಹೆಚ್ಚಿನವು ಅನೇಕ ಮತಪಂಥಗಳ ಆವಾಸವಾಗಿರುವುದರಿಂದ- ಅಂತೆಯೇ ಭಾರತದ ಯಾವುದೇ ದರ್ಶನವನ್ನು ಪ್ರತ್ಯೇಕವಾಗಿ ಇಟ್ಟು ನೋಡಲಾಗದ್ದರಿಂದ- ಈ ಯಾತ್ರೆಯು ಸ್ವಲ್ಪಮಟ್ಟಿಗೆ ಭಾರತದ ಇನ್ನೂ ಹಲವು ದಾರ್ಶನಿಕ ಧಾರೆಗಳ ಸುತ್ತಾಟವೂ ಆಗಿದೆ.
.
ಆದಿಶಂಕರರನ್ನು ಕೇಂದ್ರವಾಗಿಟ್ಟುಕೊಂಡು ಈ ಅದ್ವೆ„ತ ಯಾತ್ರೆಯನ್ನು ನಾನು ರೂಪಿಸುತ್ತಿರುವುದಕ್ಕೆ ವೈಯಕ್ತಿಕ ನೆಲೆಯ ಕಾರಣಗಳೂ ಇವೆ. ಶಂಕರ ನಮ್ಮ ಸಂಪ್ರದಾಯದ ಆದಿಮ ಆಚಾರ್ಯ ಎಂದು ಪೂಜ್ಯಭಾವನೆಯಿಂದ ಕಾಣುವ ಕುಟುಂಬದಿಂದ ಬಂದವನು ನಾನು. ಅಂಥ ಭಾವನೆಯನ್ನು ನನ್ನ ಹಿರೀಕರು ಮತ್ತು ಅವರ ಸರೀಕರು ಇಟ್ಟುಕೊಂಡಿದ್ದು ಯಾತಕ್ಕೆ ಎಂಬ ಪ್ರಶ್ನೆಯನ್ನು ನಾನು ಬಹುಕಾಲದವರೆಗೂ ಕೇಳಿಕೊಂಡಿರಲಿಲ್ಲ. ಭಾರತೀಯ ದರ್ಶನಗಳಲ್ಲಿ ನನ್ನ ಆಸಕ್ತಿಯು ಕುದುರಿದ ಬಳಿಕ, ಕಳೆದ ಸುಮಾರು ಎರಡು ದಶಕಗಳಲ್ಲಿ ನಾನು ಈ ಪ್ರಶ್ನೆಯನ್ನು ಬೇರೆ ಬೇರೆ ನೆಲೆಗಳಲ್ಲಿ ಎತ್ತಿಕೊಂಡು ನನಗೆ ಸಾಧ್ಯವಾದಷ್ಟು ಆ ಬಗ್ಗೆ ಅಭ್ಯಾಸ ಮತ್ತು ಆಲೋಚನೆಗಳನ್ನು ನಡೆಸುತ್ತ ಬಂದೆ. ಅಂಥ ಮನೋವಿಹಾರದ ಒಂದು ಮಜಲಿನ ತುದಿಗೆ ನಾನು ಗಳಿಸಿರುವ ತಿಳಿವುಗಳು ಈ ಪುಸ್ತಕದಲ್ಲಿ ದಾಖಲಾಗಿವೆ.
ಈ ಅಭ್ಯಾಸಾವಧಿಯಲ್ಲಿ ನನ್ನ ಅನುಭವಕ್ಕೆ ಬಂದ ಹಾಗೂ ವಿರೋಧಾಭಾಸವಾಗಿಯೂ ನನಗೆ ಕಂಡ ಕೆಲವು ಸಂಗತಿಗಳನ್ನು ಇಲ್ಲಿ ಉಲ್ಲೇಖೀಸಬೇಕು. ಮೊದಲನೆಯದಾಗಿ, ಭಾರತದ ದರ್ಶನಗಳ ಮತ್ತು ಆಚರಣೆಗಳ ಹಿನ್ನಲೆಗಿರುವ ತಿಳುವಳಿಕೆಯನ್ನು ಸಾರಾಸಗಟಾಗಿ ಮೂಢವೆಂದು ತಳ್ಳಿಹಾಕುವುದು ಯಾವತ್ತಿಗೂ ನನಗೆ ಸಾಧ್ಯವಾಗಲಿಲ್ಲ. ಹಾಗೆ ಮಾಡುವುದು ನಮ್ಮದೇ ಪೂರ್ವಿಕರ ಕುರಿತು ನಾವು ತೋರಿಸಬಹುದಾದ ಅಜ್ಞಾನದ ಅಗೌರವವೆಂದು ನನಗೆ ಬಹಳ ಹಿಂದೆಯೇ ಅನ್ನಿಸಿದೆ.
ಸಂಪ್ರದಾಯವನ್ನು ಅರ್ಥಮಾಡಿಕೊಳ್ಳುವ ಕಷ್ಟವನ್ನು ತೆಗೆದುಕೊಳ್ಳದೆ ಅದನ್ನು ನಿರಾಕರಿಸುವುದು ಬೌದ್ಧಿಕ ಸೋಮಾರಿತನ ಮತ್ತು ಸಾಮಾಜಿಕ ಬೇಜವಾಬ್ದಾರಿ- ಎರಡೂ ಹೌದೆಂದು ನನಗೀಗ ಹೆಜ್ಜೆ ಹೆಜ್ಜೆಗೂ ಸ್ಪಷ್ಟವಾಗುತ್ತಿದೆ. ಆದರೆ, ಕೇವಲ ನಂಬಿಕೆಯ ನೆಲೆಯಿಂದ ಈ ಆಚರಣೆಗಳನ್ನೂ ದಾರ್ಶನಿಕತೆಯನ್ನೂ ಒಪ್ಪಿ ಕಾಪಾಡಿಕೊಳ್ಳಲು ಕೂಡ ನನಗೂ ನನ್ನಂಥ ಹಲವು ಸಮಕಾಲೀನರಿಗೂ ಸಾಧ್ಯವಿಲ್ಲ. ಪರಂಪರೆಯನ್ನು ಅನುಸರಿಸುತ್ತಲೇ ಅದನ್ನು ಆವಿಷ್ಕರಿಸಿಕೊಳ್ಳುವ ಹಳೆಗಾಲದ ದಾರಿಯನ್ನು ನಾವು ಬಿಟ್ಟುಕೊಟ್ಟಾಗಿದೆ; ಅದನ್ನು ಮರಳಿ ಹಿಡಿಯುವುದೀಗ ಸಾಧ್ಯವಿಲ್ಲ.
ಆದರೆ, ಹಾಗೆ ಸಾಂಪ್ರದಾಯಿಕ ಹಾದಿ ಹಿಡಿದವರನ್ನು ನಾನಂತೂ ಅತಾರ್ಕಿಕರೆಂದೋ ಅವಿಚಾರಿಗಳೆಂದೋ ಕರೆಯಲಾರೆ. ಅಂಥ ಹಲವರ ಜತೆಗೆ ಸಮೀಪದ ಒಡನಾಟ ನನಗಿದೆ; ಅವರು ಬೇರೊಂದು ಬಗೆಯ ತಾರ್ಕಿಕತೆಯನ್ನೂ, ವೈಚಾರಿಕತೆಯನ್ನೂ ಆವಿಷ್ಕರಿಸಿಕೊಂಡಿದ್ದಾರೆ ಎಂದೂ ಕಂಡಿದೆ. ಹಾಗಿದ್ದರೂ ನನ್ನಂಥವರು ಅವರ ದಾರಿಯನ್ನೂ ಹಿಡಿಯಲಾರೆವು; ಪ್ರಾಯಶಃ ಪ್ರತಿಯೊಂದು ತಲೆಮಾರು ಕೂಡ ಇಂಥ ಹುಡುಕಾಟದ ತನ್ನದೇ ಆವೃತ್ತಿಯನ್ನು ಕಂಡುಕೊಳ್ಳುವುದು ಅನಿವಾರ್ಯವೇನೋ ಎಂದೂ ನನಗೆ ಅನ್ನಿಸಿದೆ.
– ಕೆ. ವಿ. ಅಕ್ಷರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.