ಒಂದು ಕಗ್ಗಾಡಿನ ಕತೆ


Team Udayavani, May 7, 2017, 3:45 AM IST

SAPT-9.jpg

ಜಿಯಾಲಜಿಸ್ಟುಗಳಿಂದ ಹಿಡಿದು ಅತೀಂದ್ರಿಯ ಶಕ್ತಿಗಳ ಅಧ್ಯಯನ ಮಾಡುವ ಪ್ಯಾರಾನಾರ್ಮಲ್‌ ಎಕ್ಸ್‌ಪರ್ಟ್‌ಗಳವರೆಗೆ, ಈ ಕಾಡನ್ನು ಸಂದರ್ಶಿಸಿದ ಒಬ್ಬೊಬ್ಬರೂ ಒಂದೊಂದು ಸಿದ್ಧಾಂತಗಳನ್ನು ಬರೆದಿಟ್ಟಿದ್ದರೂ ಈ ಕಾಡೇ ಜೀವ ಕಳೆದುಕೊಳ್ಳುವವರಿಗೆ ಇಷ್ಟವಾಗಿದ್ದೇಕೆಂದು ಯಾರಿಗೂ ಸ್ಪಷ್ಟವಾಗಿಲ್ಲ. 

ಮೌಂಟ್‌ ಫೀಜಿ ಅಥವಾ ಫ‌ುಜಿ, ಜಪಾನಿನ ಮಾತೃಪರ್ವತ ಎಂದೇ ಖ್ಯಾತ. ಆಸ್ಟ್ರೇಲಿಯದ ಟೂರಿಸಂ ಜಾಹೀರಾತುಗಳಲ್ಲಿ ದಿನಕ್ಕೆ„ದು ಸಲ ಬಣ್ಣ ಬದಲಿಸುವ ಉಲುರು ಪರ್ವತವನ್ನು ತೋರಿಸಿದ ಹಾಗೆ, ಬ್ರೆಜಿಲಿನ ಜಾಹೀರಾತುಗಳಲ್ಲಿ ಅಮೆಝಾನ್‌ ಕಾಡುಕೊಳ್ಳವನ್ನು ಹೈಲೈಟ್‌ ಮಾಡಿದ ಹಾಗೆ, ಜಪಾನ್‌ ದೇಶದ ಜಾಹೀರಾತು ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಆಕರ್ಷಣೆ ಎಂದರೆ ಫೀಜಿ ಪರ್ವತ. ಇದು ಆ ದೇಶದ ರಾಷ್ಟ್ರೀಯ ಸ್ಮಾರಕವೂ ಹೌದು. ಒಂದಾನೊಂದು ಕಾಲದಲ್ಲಿ, ಸರಿಯಾಗಿ ಹೇಳಬೇಕೆಂದರೆ 1707ನೇ ಇಸವಿಯ ಕೊನೆಯ ತಿಂಗಳಲ್ಲಿ ಲಾವಾದ ಬೆಂಕಿಯ ಮಳೆಯನ್ನು ಇಡೀ ಪ್ರದೇಶಕ್ಕೆ ಉಗುಳಿ ಶಾಂತವಾದ ಇದು ಮತ್ತೂಮ್ಮೆ ಎಂದಾದರೂ ಕೆರಳಿ ಮತ್ತಷ್ಟು ಕೆಂಪು ದ್ರವವನ್ನು ಉಗುಳಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಅಪಾಯ ತಂದೊಡ್ಡುವ ಭಯವಂತೂ ಇದ್ದೇ ಇದೆ. ಆದರೆ ಜಪಾನಿನ ಷಿಂಕಾನ್‌ಸೆನ್‌ ರೈಲುಗಳಲ್ಲಿ ಕೂತು ಈ ಪರ್ವತದ ತಪ್ಪಲಲ್ಲಿ ಹಾದುಹೋಗುವಾಗ, ಅದರ ಅಗಾಧತೆಗೆ ಮನಸ್ಸು ಮೂಕವಾಗುತ್ತದೆ. ಫೀಜಿ ಪರ್ವತ, ಶತಮಾನಗಳಿಂದ ಧ್ಯಾನಸ್ಥನಾಗಿ ಕೂತಿರುವ ತಲೆಬೆಳ್ಳಗಾದ ಸಂನ್ಯಾಸಿಯಂತೆ ಕಾಣುತ್ತದೆ. ಬಹುಶಃ ಅದಕ್ಕೇ ಇರಬೇಕು, ಜಪಾನೀಯರಿಗೆ ಅದು ಧ್ಯಾನಸ್ಥ ಮನಃಸ್ಥಿತಿಯ ಸಂಕೇತ. ಫೀಜಿಯ ಮೇಲೆ ಕಾಲೂರಬಾರದು ಎಂಬುದು ಅವರ ನಿಯಮ. 

ಈ ಪರ್ವತ ಕಳೆದ ಹಲವು ಲಕ್ಷ ವರ್ಷಗಳಿಂದ ಕಾಲಕಾಲಕ್ಕೆ ಲಾವಾರಸವನ್ನು ತನ್ನ ಬಾಯಿಯಿಂದ ಹೊರಹಾಕಿ ಸುತ್ತಮುತ್ತಲಿನ ಪ್ರದೇಶಗಳನ್ನು ಸಂಪದ್ಭರಿತಗೊಳಿಸಿದೆ. ಈ ಲಾವಾ ಎಲ್ಲೆಲ್ಲಿ ಹರಡಿ ಕಾಲಕ್ರಮೇಣ ತಣ್ಣಗಾಗಿ ಗಟ್ಟಿಗೊಂಡಿತೋ, ಅಲ್ಲೆಲ್ಲ ವರ್ಷಗಳು ಕಳೆವಷ್ಟರಲ್ಲಿ ಸಣ್ಣಪುಟ್ಟ ಮೊಳಕೆ ಹುಟ್ಟಿದವು. ಗರಿಕೆಹುಲ್ಲು ಬೆಳೆಯಿತು. ಪುಟ್ಟ ಪುಟ್ಟ ಗಿಡಬಳ್ಳಿಗಳು ಕಾಣಿಸಿಕೊಂಡವು. ಗಿಡವಾಗಿದ್ದದ್ದು ಕೆಲವೇ ವರ್ಷಗಳಲ್ಲಿ ಅಗಾಧ ಗಾತ್ರಕ್ಕೆ ಬೆಳೆದುನಿಂತು ಮಹಾವೃಕ್ಷವಾಯಿತು. ವೃಕ್ಷಗಳ ಜಾಲವೇ ನಿರ್ಮಾಣಗೊಂಡಿತು. ಫೀಜಿ ಪರ್ವತದಿಂದ ಹರಿದುಬಂದ ಲಾವಾ ಹರಡಿ ತಣ್ಣಗಾದ ಜಾಗದಲ್ಲಿ ಹೀಗೆ ಹಲವು ಸಾವಿರ ವರ್ಷಗಳ ನಂತರ ಅತ್ಯಂತ ನಿಬಿಡವಾದ ಅರಣ್ಯ ಹಬ್ಬಿತು. ಇಂದು ಇದು 60 ಚದರ ಕಿ. ಮೀ. ಗಳಿಗೂ ಅಧಿಕ ಜಾಗದಲ್ಲಿ ವ್ಯಾಪಿಸಿರುವ ದಟ್ಟ ಕಾಡು. ಇದರಲ್ಲಿ ಒಂದು ಭಾಗದ ಹೆಸರು ಔಕಿಗಹಾರ. ಸ್ಥಳೀಯರ ಭಾಷೆಯಲ್ಲಿ ಇದು ಜುಕಾಯ್‌. ಅದರರ್ಥ ವೃಕ್ಷಸಮುದ್ರ ಎಂದು. ಅರ್ಥ ಮಾತ್ರವಲ್ಲ, ಔಕಿಗಹಾರಕ್ಕೆ ಅದು ಅನ್ವರ್ಥವೂ ಕೂಡ. ಫೀಜಿ ಪರ್ವತ ಉಗುಳಿದ ಲಾವಾದ ಫ‌ಲಭರಿತ ನೆಲದ ಮೇಲೆ ಅರಳಿನಿಂತಿರುವ ಔಕಿಗಹಾರದಲ್ಲಿ ನಡುಹಗಲಿನಲ್ಲೂ ಟಾರ್ಚ್‌ ಹಿಡಿದು ಸಾಗಬೇಕಾದಷ್ಟು ನಿಬಿಡವೃûಾರ್ವತ ಪ್ರದೇಶಗಳಿವೆ. ಲಾವಾರಸದ ಅನಿಯಮಿತ ಹರಿಯುವಿಕೆಯಿಂದಾಗಿ ಹುಟ್ಟಿದ 200ಕ್ಕೂ ಹೆಚ್ಚಿನ ನೈಸರ್ಗಿಕ ಗುಹೆಗಳಿವೆ. ನೂರಾರು ವರ್ಷಗಳಿಂದ ಮನುಷ್ಯನ ಹಸ್ತಕ್ಷೇಪವಿಲ್ಲದೆ ಬೆಳೆದು ಉಳಿದಿರುವ ಈ ಗೊಂಡಾರಣ್ಯದಲ್ಲಿ ಕತ್ತೆತ್ತಿದರೆ ಹಸಿರಿನ ಚಪ್ಪರ, ನೆಲದಲ್ಲಿ ಹಸಿರಿನ ಹಾಸು. ಮರಗಳನ್ನು ತೂರಿ ಬರುವ ಬಿಸಿಲ ಕೋಲಿಗೂ ಹಸಿರಂಗಿ. 

ಆದರೇನು ಮಾಡೋಣ! ಔಕಿಗಹಾರ ಎಂದರೆ ಜಪಾನೀಯರ ಕಿವಿಗಳು ನೆಟ್ಟಗಾಗುತ್ತವೆ. ಕಣ್ಣುಗಳು ಪ್ರಶ್ನಾರ್ಥಕವಾಗುತ್ತವೆ. ಒಂದು ವಿಚಿತ್ರ ಭಯ, ಕಳವಳ, ದುಃಖ ಆ ಮುಖಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕಾರಣ ಇಷ್ಟೆ: ಔಕಿಗಹಾರ, ಜಗತ್ತಿನಲ್ಲೇ ಅತ್ಯಂತ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಳ್ಳುವ ಟಾಪ್‌ ಮೂರು ಸ್ಥಳಗಳ ಪೈಕಿ ಸ್ಥಾನ ಗಿಟ್ಟಿಸಿರುವ (ಕು)ಪ್ರಸಿದ್ಧ ಜಾಗ. ಜಪಾನಿನಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳು ಸಂಭವಿಸುವ ಪ್ರದೇಶ. ನೋಡಲು ಅತ್ಯಂತ ಪ್ರಶಾಂತವಾಗಿರುವ ಈ ಪ್ರದೇಶವನ್ನೇ ಜನ ಯಾಕೆ ಆತ್ಮಹತ್ಯೆಯಂಥ ದಾರುಣ ಸಂಗತಿಗೆ ಆರಿಸಿಕೊಳ್ಳಬೇಕು ಎಂಬುದು ಇಂದಿಗೂ ವಿವರಿಸಲಾಗದ ಸಂಗತಿ. ಜಿಯಾಲಜಿಸ್ಟುಗಳಿಂದ ಹಿಡಿದು ಅತೀಂದ್ರಿಯ ಶಕ್ತಿಗಳ ಅಧ್ಯಯನ ಮಾಡುವ ಪ್ಯಾರಾನಾರ್ಮಲ್‌ ಎಕ್ಸ್‌ಪರ್ಟ್‌ಗಳವರೆಗೆ, ಈ ಕಾಡನ್ನು ಸಂದರ್ಶಿಸಿದ ಒಬ್ಬೊಬ್ಬರೂ ಒಂದೊಂದು ಸಿದ್ಧಾಂತಗಳನ್ನು ಬರೆದಿಟ್ಟಿದ್ದರೂ ಈ ಕಾಡೇ ಜೀವ ಕಳೆದುಕೊಳ್ಳುವವರಿಗೆ ಇಷ್ಟವಾಗಿದ್ದೇಕೆಂದು ಯಾರಿಗೂ ಸ್ಪಷ್ಟವಾಗಿಲ್ಲ. ವರ್ಷಪೂರ್ತಿ ಇಲ್ಲಿ ಒಂದಿಲ್ಲೊಂದು ಆತ್ಮಘಾತದ ಪ್ರಕರಣ ನಡೆಯುತ್ತಲೇ ಇದ್ದರೂ ಮಾರ್ಚ್‌-ಎಪ್ರಿಲ್‌ ತಿಂಗಳುಗಳಲ್ಲಿ ಸಿಗುವ ಶವಗಳ ಸಂಖ್ಯೆ ಹೆಚ್ಚಂತೆ. ಅವರಲ್ಲಿ ಹೆಚ್ಚಿನವರು ವ್ಯಾಪಾರಿಗಳು, ಬ್ಯುಸಿನೆಸ್‌ಮನ್‌ಗಳು. ಹಣಕಾಸು ವರ್ಷದಲ್ಲಿ ಸಂಕಷ್ಟ ಅನುಭವಿಸಿದವರು, ಬ್ಯುಸಿನೆಸ್‌ ಮುಂದುವರಿಸಲಾಗದೆ ಬೀದಿಗೆ ಬಿದ್ದವರು, ನಷ್ಟದ ಮೇಲೆ ನಷ್ಟ ಅನುಭವಿಸಿ ದಿವಾಳಿಯಾದವರು, ನಷ್ಟದಿಂದ ಸಮಾಜದಲ್ಲಿ ಮಾನ ಹರಾಜಾಗುವ ಭೀತಿ ಎದುರಿಸುತ್ತಿರುವವರು ಭವಿಷ್ಯವೆಲ್ಲ ಕತ್ತಲೆ ಕತ್ತಲೆಯಾಗಿದೆ ಎಂಬುದು ಖಚಿತವಾದ ಮೇಲೆ ಔಕಿಗಹಾರಕ್ಕೆ ಬಂದು ನೇಣು ಅಥವಾ ಮಾತ್ರೆಯ ಸಹಾಯದಿಂದ ಬದುಕಿಗೆ ವಿದಾಯ ಹೇಳುತ್ತಾರೆ. ಈ ಕಾಡನ್ನು ಪ್ರವೇಶಿಸುವ ದ್ವಾರದಲ್ಲಿರುವ ಪಾರ್ಕಿಂಗ್‌ ಸ್ಥಳದಲ್ಲಿ ಕಾರೊಂದು ನಾಲ್ಕೈದು ದಿನಗಳಿಂದ ನಿಂತಿದೆಯೆಂದರೆ ಅದರ ಯಜಮಾನ ಅರಣ್ಯದ ಒಳಹೊಕ್ಕು ಹಿಂದಿರುಗಲಾರದ ಜಾಗಕ್ಕೆ ಹೋಗಿಬಿಟ್ಟಿದ್ದಾನೆಂದೇ ಅರ್ಥ! ನಂಬಿದರೆ ನಂಬಿ, ವರ್ಷಕ್ಕೆ ಸರಾಸರಿ 120 ಆತ್ಮಹತ್ಯೆಗಳು ಈ 30 ಚದರ ಕಿ. ಮೀ. ವ್ಯಾಪ್ತಿಯ ಕಾಡಿನಿಂದ ವರದಿಯಾಗುತ್ತವೆ!

ಶೋಧನೆ-ಸಂಶೋಧನೆ
ಅಝುಸ ಹಯಾನೋ ಎಂಬ ಭೂಗರ್ಭಶಾಸ್ತ್ರಜ್ಞ ಔಕಿಗಹಾರದಲ್ಲಿ ಕಳೆದ ಎರಡೂವರೆ ದಶಕಗಳಿಂದ ಕೆಲಸ ಮಾಡುತ್ತಿ¨ªಾರೆ. ಅಗ್ನಿಪರ್ವತ ಮತ್ತು ಅಗ್ನಿಶಿಲೆಗಳ ತಜ್ಞರಾಗಿರುವ ಅಝುಸ, ಫೀಜಿ ಪರ್ವತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತನ್ನ ಸಂಶೋಧನೆ ನಡೆಸುತ್ತಿ¨ªಾಗ ಔಕಿಗಹಾರದ ವಿಚಿತ್ರ ಆತ್ಮಹತ್ಯಾ ಕತೆಗಳಿಂದ ಆಕರ್ಷಿತರಾದರು. ತನ್ನ ಶಿಲಾಸಂಶೋಧನೆಯ ಜೊತೆಗೇ ಈ ಕಾಡಿನಲ್ಲಿ ಆತ್ಮಹತ್ಯೆಯ ಕುರಿತಾದ ಸಂಶೋಧನೆಗಳನ್ನೂ ಹವ್ಯಾಸದಂತೆ ಶುರುಮಾಡಿದರು. ಬರಬರುತ್ತ ಆ ವಿಷಯದಲ್ಲಿ ಅವರೊಬ್ಬ ತಜ್ಞರೇ ಆಗಿಬಿಟ್ಟರು. ಅಝುಸ ಹೇಳುವ ಪ್ರಕಾರ, ಈ ಕಾಡಿನಲ್ಲಿ ಅಲ್ಲಲ್ಲಿ ಮರಗಳಿಗೆ ರಿಬ್ಬನ್‌, ಕಲರ್‌ ಟೇಪ್‌ ಕಟ್ಟಿರುತ್ತಾರೆ. ಅವುಗಳನ್ನು ಹಿಂಬಾಲಿಸಿ ಹೊರಟರೆ ಆ ರಿಬ್ಬನ್‌ಗಳ ಇನ್ನೊಂದು ತುದಿಯಲ್ಲಿ ಒಂದೋ ಯಾರೋ ಅಲ್ಲಿ ಶಿಬಿರ ನಡೆಸಿದ್ದ ಕುರುಹುಗಳು ಕಾಣುತ್ತವೆ, ಇಲ್ಲವೇ ಶವವೊಂದು ಸಿಗುತ್ತದೆ. ಹಾಗೆ ಸಿಗುವ ಶವ ನಿನ್ನೆ ಮೊನ್ನೆ ಕೊನೆಯುಸಿರೆಳೆದ ನತದೃಷ್ಟರ ಶರೀರವಾಗಿರಬಹುದು ಅಥವಾ ಮೂರ್ನಾಲ್ಕು ವರ್ಷಗಳ ಹಿಂದೆಯೇ ಸತ್ತವರ ದೇಹದ ಅಸ್ಥಿಪಂಜರವೂ ಆಗಿರಬಹುದು. ಕಾಡಿನ ನಡುವೆ ದಾರಿ ತಪ್ಪದಿರಲಿ ಎಂಬ ಉದ್ದೇಶದಿಂದ ಸುತ್ತಿಡುವ ಈ ರಿಬ್ಬನ್‌ಗಳನ್ನು ಬಳಸುವವರು ಇಬ್ಬರೇ. ಒಂದು – ಕಾಡಿನ ನಟ್ಟನಡುವಲ್ಲಿ ಕ್ಯಾಂಪ್‌ ಅಥವಾ ಶಿಬಿರ ನಡೆಸಲು ಹೋಗುವವರು ಅಥವಾ ಸಾಯಲೋ ಬೇಡವೋ ಎಂಬ ಅನಿಶ್ಚಿತತೆಯಲ್ಲಿರುವವರು. ಹಾಗೆ ಹೋಗಿ ಸಾಯಲು ಯತ್ನಿಸಿ, ಯತ್ನಿಸುವಾಗ ಸಾಯುವ ಭಾವನೆಯಿಂದ ಈಚೆ ಬಂದವರು ಮತ್ತೆ ಕಾಡಿಂದ ಹೊರಬರಲು ಅನುಕೂಲವಾಗಲಿ ಎಂದು ಮೊದಲೇ ಮರದಿಂದ ಮರಕ್ಕೆ ರಿಬ್ಬನ್‌ ಸುತ್ತಿಕೊಂಡು ಹೋಗುತ್ತಾರೆ. ಸಾಯಲು ಬಂದು ಕೊನೆ ಗಳಿಗೆಯಲ್ಲಿ ಒಂದೋ ತಾವಾಗಿ ಮನಃಪರಿವರ್ತನೆ ಮಾಡಿಕೊಂಡು ಅಥವಾ ಬೇರೆಯವರಿಂದ ರಕ್ಷಿಸಲ್ಪಟ್ಟು ವಾಪಸು ಹೋಗುವವರು ಕೂಡ ಇ¨ªಾರೆ ಎನ್ನುತ್ತಾರೆ ಅಝುಸ. ಕಾಡಿಗೆ ಬರುವವರೆಲ್ಲರೂ ಸಾಯಲು ಬರುವವರಲ್ಲ; ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಬರುವವರೂ ಇರುತ್ತಾರೆ. ಆದರೆ ಕೆಲವೊಂದು ವ್ಯಕ್ತಿಗಳು ಮಾತ್ರ ಸಾಯುವ ಸಂಕಲ್ಪ ಮಾಡಿಕೊಂಡು ಈ ಕಾಡಿನೊಳಗೆ ಅಡಿ ಇಡುತ್ತಾರೆ. ಅಂಥವರನ್ನು ಉದ್ದೇಶಿಸಿಯೇ ಕಾಡಿನ ಪ್ರವೇಶ ದ್ವಾರದಲ್ಲಿ ದೊಡ್ಡ ದೊಡ್ಡ ಸೂಚನಾಫ‌ಲಕಗಳನ್ನು ಹಾಕಲಾಗಿದೆ. ನಿಮ್ಮ ಸಂಗಾತಿ, ಮಕ್ಕಳು, ಹೆತ್ತವರ ಬಗ್ಗೆ ಯೋಚಿಸಿ. ಜೀವನ ಎಂಬುದು ನಿಮಗೆ ಈ ಭೂಮಿಯ ಮೇಲೆ ಸಿಕ್ಕಿರುವ ಬಹುದೊಡ್ಡ ಉಡುಗೊರೆ. ಬದುಕು ವಿಶಾಲವಾಗಿದೆ. ಆತ್ಮಹತ್ಯೆಯ ಭಾವನೆ ಬರುತ್ತಿದ್ದರೆ ಈ ಕೆಳಗಿನ ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡಿ. ನಾವು ನಿಮಗೆ ಕಿವಿಯಾಗುತ್ತೇವೆ ಎಂಬ ಫ‌ಲಕಗಳನ್ನು ಸರಕಾರವೇ ದೊಡ್ಡದಾಗಿ ಬರೆಸಿದೆ. 

ಕಾಡಿನ ಹಿಂದೆ…
ಅದೇಕೆ ಜನ ಈ ಕಾಡಿಗೇ ಬರಬೇಕು ಎಂಬುದು ಕುತೂಹಲಕರ. ಒಂದಾನೊಂದು ಕಾಲದಲ್ಲಿ ಜಪಾನಿನಲ್ಲಿ ಓರ್ವ ರಾಜನ ಆಡಳಿತದಲ್ಲಿ ವೃದ್ಧರನ್ನು ಕಾಡಲ್ಲಿ ಬಿಟ್ಟುಬರಬೇಕು ಎಂಬ ರಾಜಾಜ್ಞೆಯಿತ್ತಂತೆ. ಆ ಸಮಯದಲ್ಲಿ ಜಪಾನೀಯರು ತಮ್ಮ ಮನೆಗಳ ಹಿರಿಯರನ್ನು ಹೊತ್ತುತಂದು ಈ ಕಾಡಲ್ಲಿ ಬಿಟ್ಟುಹೋಗುತ್ತಿದ್ದರು. ಬಂದು ಸೇರುವವರೆಲ್ಲ ವೃದ್ಧರೇ ಆದ್ದರಿಂದ ಅವರೆಲ್ಲ ಕಾಲಕ್ರಮೇಣ ಇಲ್ಲಿ ಹಸಿವಿನಿಂದ ಕಂಗೆಟ್ಟು ತೀರಿಕೊಳ್ಳುತ್ತಿದ್ದರು. ಔಕಿಗಹಾರ ಹಾಗೆ ಸಾಯುವವರ ನೆಲೆ ಎಂಬ ಹೆಸರು ಪಡೆಯಿತು. ರಾಜ ಬದಲಾದ, ರಾಜವಂಶ ಬದಲಾಯಿತು, ವೃದ್ಧರನ್ನು ಕಾಡಿನಲ್ಲಿ ಬಿಡುವ ಅಮಾನವೀಯ ಕ್ರಮಕ್ಕೂ ಕಡಿವಾಣ ಬಿತ್ತು. ಆದರೇನಂತೆ, ಔಕಿಗಹಾರ ಸಂಪಾದಿಸಿದ್ದ ಹೆಸರು ಮಾತ್ರ ಅಳಿಸಿಹೋಗಲಿಲ್ಲ. 1960ರಲ್ಲಿ ಜಪಾನೀ ಸಾಹಿತಿ ಸಾಯಿಷೋ ಮ್ಯಾತ್ಸಮೊಟೋ, ವೃಕ್ಷಗಳ ಕಪ್ಪುಸಮುದ್ರ (ಕುರೊಯ್‌ ಜುಕಾಯ್‌) ಎಂಬ ಹೆಸರಿನ ಕಾದಂಬರಿ ಬರೆದ. ಅದು ದೇಶಾದ್ಯಂತ ಪ್ರಸಿದ್ಧವಾಯಿತು. ಕಾದಂಬರಿಯಲ್ಲಿ ಇಬ್ಬರು ಪ್ರೇಮಿಗಳು, ನೂರಾರು ವಿಘ್ನಗಳು ಬಂದು ಮದುವೆ ಮುರಿದುಬಿ¨ªಾಗ, ಬೇಸರಗೊಂಡು ಔಕಿಗಹಾರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವ ಕತೆ ಇತ್ತು. ಕಾದಂಬರಿಯೇನೋ ಜನಪ್ರಿಯವಾಯಿತು; ಆದರೆ ಅದರೊಂದಿಗೆ ಕಾದಂಬರಿ ಯಂತೆಯೇ ಭಗ್ನಪ್ರೇಮಿಗಳು ಈ ಕಾಡಿಗೆ ಬಂದು ತಮ್ಮ ಪ್ರಾಣ ಕಳೆದುಕೊಳ್ಳುವ ಪ್ರಕರಣಗಳೂ ಜಾಸ್ತಿಯಾದವು! ಸಾಲದ್ದಕ್ಕೆ 1993ರಲ್ಲಿ ಪ್ರಕಟವಾದ ಆತ್ಮಹತ್ಯೆಯ ಕೈಪಿಡಿ ಎಂಬ ವಿಚಿತ್ರ ವಿಷಯದ ಪುಸ್ತಕದಲ್ಲಿಯೂ ಔಕಿಗಹಾರ, ಸಾಯಲು ಅತ್ಯಂತ ಪ್ರಶಸ್ತ ಸ್ಥಳ ಎಂದು ಹೊಗಳಲಾಗಿತ್ತು. ಇಂದಿಗೂ ಔಕಿಗಹಾರದಲ್ಲಿ ಕಾಣಸಿಗುವ ಶವಗಳ ಅಕ್ಕಪಕ್ಕದಲ್ಲಿ ಸಿಗುವ ವಸ್ತುಗಳನ್ನು ತಡಕಾಡಿದಾಗ ಹೆಚ್ಚಿನ ಕಡೆಗಳಲ್ಲಿ ಈ ಪುಸ್ತಕಗಳು ಸಿಕ್ಕಿವೆ, ಸಿಗುತ್ತಿವೆ. ಅಂದರೆ, ಅವರ ಆತ್ಮಹತ್ಯೆಯ ನಿರ್ಣಯ ಗಟ್ಟಿಯಾಗಲು ಈ ಪುಸ್ತಕಗಳು ಕೂಡ ಕಾರಣವಾಗಿವೆ ಎಂದು ಒಂದು ಅಸ್ಪಷ್ಟ ನಿರ್ಣಯದ ಗೆರೆಯನ್ನಾದರೂ ಎಳೆಯಬಹುದು. 

ಔಕಿಗಹಾರ ವಿಕ್ಷಿಪ್ತ ಎನ್ನಿಸಲು ಇನ್ನೊಂದು ಕಾರಣ, ಇದರ ಮಣ್ಣಿನಲ್ಲಿರುವ ಅಗ್ನಿಶಿಲೆಯ ಅಂಶ. ಅದರಲ್ಲಿ ಅತಿ ಹೆಚ್ಚು ಪ್ರಮಾಣದ ಕಾಂತೀಯ ಕಬ್ಬಿಣದಂಶ ಇರುವುದರಿಂದ ಕಾಡಿನೊಳಗೆ ಜಿಪಿಎಸ್‌, ನಾವಿಕರ ದಿಕ್ಸೂಚಿ ಮುಂತಾದ ಉಪಕರಣಗಳು ಕೆಲಸಕ್ಕೆ ಬಾರವು. ಹಾಗಾಗಿ ಕಾಡಿನ ನಡುಮಧ್ಯಕ್ಕೆ ಹೋಗಿ ದಾರಿ ತಪ್ಪಿದರೆ ದಿಕ್ಸೂಚಿ ಬಳಸಿಕೊಂಡು ಹೊರಬರಬಹುದು ಎಂದು ನಂಬುವಂತಿಲ್ಲ. 

ದುರ್ಬಲ ಮನಸ್ಸಿನವರು ಇವೆಲ್ಲ ಅತೀಂದ್ರಿಯ ಶಕ್ತಿಗಳ ಆಟ ಎಂದೇ ನಂಬುತ್ತಾರೆ. ಹೀಗೆ, ದಾರಿ ತಪ್ಪಿ ಅಲೆದೂ ಅಲೆದು ಕೊನೆಗೆ ಹಸಿವು-ನೀರಡಿಕೆಯಿಂದ ಮತ್ತು ಇನ್ನರ್ಧ ಭಯದಿಂದ ಸಾವಿಗೀಡಾದವರು ಕೂಡ ಇರಬಹುದು. ಬಹುಶಃ ಅದಕ್ಕೇ ಇರಬೇಕು ಫೀಜಿ ಪರ್ವತದ ತಪ್ಪಲಿನ ಹಳ್ಳಿಗಳ ಜನ ಈ ಕಾಡಿನೊಳಗೆ ಹೋಗದೆ ದೂರ ಉಳಿದಿದ್ದಾರೆ. ಮಕ್ಕಳಿಗೆ ಇದೊಂದು ದೆವ್ವಗಳ ಕಾಡು ಎಂದೇ ಪರಿಚಿತ. ವರ್ಷ ಹೋದಂತೆ ಈ ಗೊಂಡಾರಣ್ಯಕ್ಕೆ ಬಂದು ನೇಣು ಬಿಗಿದುಕೊಳ್ಳುವ ಅಥವಾ ಮಾತ್ರೆ ನುಂಗುವ ನಿರಾಶಾವಾದಿಗಳ ಸಂಖ್ಯೆ ಹೆಚ್ಚಾಗಿದೆ. 80ರ ದಶಕದಿಂದ ಇಲ್ಲಿ ಪ್ರತಿವರ್ಷವೂ ಆತ್ಮಹತ್ಯೆಗಳ ಸಂಖ್ಯೆ ಏರುತ್ತಾ ಹೋದದ್ದರಿಂದ ಕೆಲವರ್ಷಗಳ ಹಿಂದೆ ಸರಕಾರ ಅಂಥ ಅಂಕಿ-ಅಂಶಗಳನ್ನು ಪ್ರಕಟಿಸುವುದನ್ನೇ ನಿಲ್ಲಿಸಿಬಿಟ್ಟಿದೆ. 1998ರಲ್ಲಿ ಇಲ್ಲಿ 74 ಸಾವುಗಳು ವರದಿಯಾಗಿದ್ದವು. 2002ರಲ್ಲಿ 78 ಆಗಿತ್ತು. ಅದರ ಮರುವರ್ಷ ಅದು 100 ಮುಟ್ಟಿತು. ಮತ್ತದರ ಮುಂದಿನ ವರ್ಷ 108 ಆಯಿತು. 2008ರ ಆರ್ಥಿಕ ಕುಸಿತದ ನಂತರವಂತೂ ಔಕಿಗಹಾರ ಕುಣಿಕೆಯನ್ನು ಕೊರಳಿಗೆ ಬಿಗಿದುಕೊಳ್ಳುವವರ ಫೇವರಿಟ್‌ ಡೆಸ್ಟಿನೇಶನ್‌ ಆಯಿತು! 2010ರಲ್ಲಿ ಇಲ್ಲಿ ಸಾಯಲೆಂದು ಬಂದವರ ಸಂಖ್ಯೆ 247. ಇದರಲ್ಲಿ ಕೆಲವರು ತಮ್ಮ ಸಾಧನೆಯಲ್ಲಿ ಯಶಸ್ವಿಯಾಗಿ ಪರಲೋಕಕ್ಕೆ ಪ್ರಯಾಣ ಮಾಡಿದರೆ ಉಳಿದವರು ಪ್ರಯಾಣದಲ್ಲಿ ಆದ ವ್ಯತ್ಯಯಗಳಿಂದಾಗಿ ಭೂಲೋಕದಲ್ಲಿಯೇ ಉಳಿದುಕೊಂಡರು. 2010ರ ನಂತರ ಸರಕಾರವಾಗಲೀ ಪೊಲೀಸ್‌ ಇಲಾಖೆಯಾಗಲೀ ಔಕಿಗಹಾರದ ಪ್ರತಿ ವರ್ಷದ ಅಂಕಿ-ಅಂಶಗಳನ್ನು ಸಾರ್ವಜನಿಕರಿಗೆ ಕೊಡುತ್ತಿಲ್ಲ. ತಾನು ಪ್ರಕಟಿಸುವ ಮಾಹಿತಿಯಿಂದ, ಖನ್ನ ಜನ, ಇದು ನಿಜಕ್ಕೂ ಆತ್ಮಹತ್ಯೆಗೆ ಪ್ರಶಸ್ತ ಸ್ಥಳ ಎಂದು ಭಾವಿಸಬಹುದೆಂಬ ಭಯ ಸರಕಾರದ್ದು! 

ವಿಶೇಷವೆಂದರೆ, ಅದೆಂಥ ವಿಶಾಲವಾದ ದಟ್ಟ ವನರಾಜಿಯಾದರೂ ಔಕಿಗಹಾರದಲ್ಲಿ ಕಾಡುಪ್ರಾಣಿಗಳ ಸುಳಿವಿಲ್ಲ. ಪಕ್ಷಿಗಳ ಚಿಲಿಪಿಲಿ ಕೂಡ ಆಗಾಗ ಅಷ್ಟೆ. ಇಡೀ ಅರಣ್ಯವನ್ನು ಒಂದೇ ಮರ ಹಬ್ಬಿಬಿಟ್ಟಿದೆಯೋ ಎಂಬ ಭಾವನೆ ತರುವ ಬೇರುಗಳ ಜೋಡಣೆ ಅರಣ್ಯದ ತುಂಬ ಹಬ್ಬಿದೆ. ಕಾಡು ಸುತ್ತಾಡಲು ಹೊರಟರೆ ಒಂದಿಲ್ಲೊಂದು ಕಡೆಯಲ್ಲಿ ಕಾಲಿಟ್ಟ ಜಾಗ ಪುಸಕ್ಕನೆ ಒಳಜಾರಿ ಆಯ ತಪ್ಪಬಹುದು. ನಡೆವ ದಾರಿಯುದ್ದಕ್ಕೂ ಅಲ್ಲಲ್ಲಿ ಮರಗಳ ಬೇರುಗಳ ಹಾಸಿನ ಕೆಳಗೆ ನೈಸರ್ಗಿಕ ಗುಹೆಗಳಿರುವುದೇ ಇದಕ್ಕೆ ಕಾರಣ. ಇನ್ನು ಮಳೆಗಾಲದಲ್ಲಿ ನಡೆದಾಡುವವರನ್ನು ಬೀಳಿಸಿ ಖುಷಿಪಡಲು ಪಾಚಿಗಳು ಸದಾ ಸನ್ನದ್ಧ. ಇವಿಷ್ಟು ಬಿಟ್ಟರೆ ಇಡೀ ಕಾಡು ಹಸಿರೇ ಹಸಿರು. ಆದರೂ ಈ ಕಾಡಿನ ನೀರವತೆ ಭಯ ಹುಟ್ಟಿಸುತ್ತದೆ. ಕಾಡಿನಲ್ಲಿ ಒಬ್ಬರೇ ನಡೆದಾಡುವಾಗ ಹೃದಯ ನಗಾರಿಯಂತೆ ಹೊಡೆದುಕೊಳ್ಳುತ್ತದೆ. ನಮ್ಮದೇ ಉಸಿರು ನಮಗೆ ದೊಡ್ಡ ಬಿರುಗಾಳಿಯಂಥ ಅನುಭವ ಕೊಡುತ್ತದೆ. “”ಈ ಕಾಡಿನೊಳಗಿನ ಚಾರಣ ಒಂದು ವಿಚಿತ್ರ ಅನುಭವ. ಭೂತ-ಪಿಶಾಚಿಗಳ ಬಗ್ಗೆ ನಂಬಿಕೆ ಇಲ್ಲದವನಿಗೂ ಈ ಅರಣ್ಯದಲ್ಲಿ ಎದುರಾಗುವ ಮೌನ ಅಸಹನೀಯ” ಎಂಬುದು ಪ್ರಪಂಚದ ಹಲವು ಕಾಡುಗಳಲ್ಲಿ ಸುತ್ತಿಸುಳಿದು ಔಕಿಗಹಾರಕ್ಕೆ ಭೇಟಿಕೊಟ್ಟ ರಷ್ಯದ ನಿಕೊಲಾಯ್‌ನ ಮಾತುಗಳು. “”ಇಂಥ ಜಾಗದಲ್ಲಿ ಮನುಷ್ಯ ಧ್ಯಾನಸ್ಥನಾಗಬೇಕಿತ್ತು. ಪ್ರಕೃತಿಯ ಸೌಂದರ್ಯವನ್ನು ಕಂಡು ಮೂಕವಿಸ್ಮಿತನಾಗಬೇಕಿತ್ತು. ಮನುಷ್ಯಜನ್ಮ ಎಷ್ಟು ಅದ್ಭುತ, ಅದು ಪ್ರಕೃತಿ ನಮಗೆ ಕೊಟ್ಟ ಅದೆಂಥ ಅಮೂಲ್ಯ ಅವಕಾಶ ಎಂಬ ಜ್ಞಾನೋದಯ ಮನುಷ್ಯನಿಗೆ ಈ ಅರಣ್ಯದ ನಡುವಲ್ಲಿ ಕೂತಾಗ ಆಗಬೇಕಿತ್ತು. ಆದರೆ, ಸಾಯುವುದಕ್ಕೂ ಇಂಥ ಸುಂದರ ವಾತಾವರಣವನ್ನು ಆಯ್ದುಕೊಳ್ಳುವ ಮನುಷ್ಯ ಅದೆಷ್ಟು ನಿರಾಶಾವಾದಿಯಾಗಿರಬೇಕು!” ಎನ್ನುತ್ತಾರೆ ಅಝುಸ. ಅಲ್ಲವಾ? ಎನ್ನುತ್ತವೆ ಹಾವಿನಂಥ ಬೇರುಗಳನ್ನು ಹಬ್ಬಿಸಿ ಹರಡಿಕೊಂಡ ಮರಗಳ ಎಲೆಮರೆಯಲ್ಲಿ ಕಾಣದಂತೆ ಕೂತ ಹಕ್ಕಿಗಳು ತಮ್ಮದೇ ಭೂತಭಾಷೆಯಲ್ಲಿ.

ಆರ್‌. ಸಿ. 

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.