ಆಗುಂಬೆ ಕಾಡಿನ ಮರವೊಂದರ ಸ್ವಗತ
Team Udayavani, Sep 15, 2019, 5:00 AM IST
ದೂರದಿಂದ ಬೇಟೆ ಮಾಡಿ ಬಂದ ಕಾಡು ಸಿಳ್ಳಾರ ಹಕ್ಕಿಯೊಂದು ನನ್ನ ಕೊಂಬೆ ಮೇಲೆ ಕೂತು ಯಾವಾಗಲೂ ಬಾಯ್ತುಂಬ ಹಾಡುತ್ತಿದ್ದರೆ ನಂಗೆ ಸತ್ತೇ ಹೋಗುವಷ್ಟು ಸಂತಸವಾಗುತ್ತದೆ. ನನ್ನೆಲ್ಲ ನೋವುಗಳನ್ನು ಕಳೆದು ಹಾಕುವ, ನನ್ನೊಳಗೆ ಹೊಸತೊಂದು ಜೀವ ಸಂಚಾರ ಮೂಡಿಸಿ ನಾನು ಮತ್ತಷ್ಟು ತೂಗುವಂತೆ ಮಾಡುವ ಆ ಸಿಳ್ಳೆ ಹಕ್ಕಿಯ ಹಾಡೆಂದರೆ ನನಗೆ ತುಂಬಾ ಪ್ರೀತಿ. ಈ ಸಿಳ್ಳಾರ ಹಕ್ಕಿ ನನ್ನಲ್ಲಿ ಗೂಡು ಕಟ್ಟಿ ಎಷ್ಟೋ ವರುಷಗಳಾಗಿ ಹೋಗಿದೆ. ನನ್ನ ಕೊಂಬೆಗಳಲ್ಲೇ ಪುಟ್ಟದ್ದೊಂದು ಮನೆ ಮಾಡಿ, ಮರಿಗಳನ್ನು ಪೋಷಿಸಿ ನನಗೋಸ್ಕರವೇ ಆಗಾಗ ಹಾಡು ಹಾಡುವ ಸಿಳ್ಳಾರ ಹಕ್ಕಿಯೆಂದರೆ ನಂಗೆ ಜೀವದ ಗೆಳೆಯ. ನಾನು ಈ ಆಗುಂಬೆಯ ಮಳೆ ಕಾಡಿನಲ್ಲಿ ಹುಟ್ಟಿ ಎಷ್ಟು ವರುಷಗಳಾಯಿತೋ ನನಗೆ ನೆನಪಿಲ್ಲ. ಈ ಕಾಡಿನ ಸಾವಿರಾರು ಮರಗಳ ನಡುವೆ ನಾನೊಂದು ಪುಟ್ಟ ಜೀವವಾಗಿ ಹುಟ್ಟಿ, ಚಿಗುರಾಗಿ, ಈಗ ಆಕಾಶವನ್ನೇ ಮಾತಾಡಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದೇನೆ. ಅತೀ ಹೆಚ್ಚು ಮಳೆ ಬೀಳುವ ಈ ಕಾಡಿನಲ್ಲಿ ಬಳುಕುತ್ತಾ ಜಲಪಾತವಾಗುವ ಸೀತೆಯಿಂದ, ತುಂಗೆಯಿಂದ, ಇಲ್ಲಿನ ಪರಿಮಳಭರಿತ ಮಣ್ಣಿನಿಂದ, ನನ್ನ ಪಕ್ಕದಲ್ಲೇ ನಿಂತು ತೂಗುತ್ತ ಮಾತಾಡುವ ಕಾಡು ಮಾವು, ತೇಗ, ಹೊನ್ನೆ, ಅರಳಿ, ಶ್ರೀಗಂಧ ಮೊದಲಾದ ನನ್ನ ಗೆಳೆಯರ ಸ್ಪರ್ಶದಿಂದ ನಾವಿವತ್ತು ಎಷ್ಟು ಚೆಂದಾಗಿ ಅರಳಿ ನಿಂತಿದ್ದೇನೆ ನೋಡಿ.
ಆಗುಂಬೆ ಕಾಡಲ್ಲಿ ಭೋರೋ ಭೋರೋ ಎಂದು ಮಳೆಯಾಗುವಾಗ ಮತ್ತು ಬಣ್ಣ ಬಣ್ಣದ ಕಾಡಿನ ಹಕ್ಕಿಗಳು ನನ್ನನ್ನೇ ನಂಬಿಕೊಂಡು ಕೊಂಬೆ ಮೇಲೆಲ್ಲ ಗೂಡು ಕಟ್ಟಿ ಖುಷಿಯಿಂದ ಹಾಡುತ್ತಿರುವಾಗ ನಾನು ಕಾಡಲ್ಲಿ ಹುಟ್ಟಿದ್ದೂ ಸಾರ್ಥಕವೆನ್ನಿಸುತ್ತದೆ. ರಾಬಿನ್ ಹಕ್ಕಿ, ಹರಟೆಮಲ್ಲ ಹಕ್ಕಿ, ಕಾಡು ಮೈನಾ ಹಕ್ಕಿ, ಕಳ್ಳಪೀರ, ಮಂಗಟ್ಟೆ ಹಕ್ಕಿ, ಕಾಜಾಣ ಇವೆಲ್ಲ ಹಕ್ಕಿಗಳ ಸ್ನೇಹ ನನಗೆ ಪಂಚಪ್ರಾಣ. ಜೋರಾಗಿ ಸುರಿಯೋ ಮಳೆಗೆ ಚಿಗುರಾಗಿ ನನಗಿಂತಲೂ ಎತ್ತರಕ್ಕೆ ಬೆಳೆಯುವ ಕನಸು ಕಾಣುವ ನನ್ನ ಪುಟ್ಟ ಪುಟ್ಟ ಮಕ್ಕಳನ್ನು ನೋಡುವಾಗ ನನಗೂ ಖುಷಿಯಾಗಿ ಮಳೆ ನೀರನ್ನು ನನ್ನೊಳಗೂ ಸಾಧ್ಯವಾದಷ್ಟು ಹಿಡಿದಿಟ್ಟುಕೊಳ್ಳುತ್ತೇನೆ.
ಈ ಮಳೆ ಮತ್ತು ಹಕ್ಕಿ ಹಾಡೂ ಇವೇ ನನ್ನ ಜೀವಧ್ವನಿಗಳಾಗಿ ಎಷ್ಟೋ ವರುಷಗಳಾಗಿದೆ. ಮಳೆ ಬಂದಾಗ ನನ್ನ ಅಕ್ಕ ಪಕ್ಕವೇ ರಂಗೋಲಿ ಹಾಕಿದಂತೆ ಹಾಸಿಕೊಳ್ಳುವ ದಟ್ಟ ಪೊದೆಗಳು, ಹೂವ ಬಳ್ಳಿಯಲ್ಲಿರುವ ಬಣ್ಣದ ಹೂವುಗಳ ಬಣ್ಣವೇ ಆಗಿಹೋಗಿತ್ತೇನೆ ನಾನು. ಮಳೆಗಾಲಕ್ಕೆ ನನ್ನ ಅಕ್ಕ-ಪಕ್ಕವೆಲ್ಲ ಹೊಸ ಹೊಸ ಜೀವ ಲೋಕ ಹುಟ್ಟಿಕೊಳ್ಳುವುದನ್ನು ನೋಡುವಾಗ ಸೃಷ್ಟಿಕರ್ತನ ಮೋಡಿಗೆ ನಾನೂ ಬೆರಗಾಗಿಬಿಡುತ್ತೇನೆ.
ಆದರೆ, ನನ್ನಂತೆಯೇ ಇರುವ ದೊಡ್ಡ ದೊಡ್ಡ ಮರಗಳನ್ನು ಮನುಷ್ಯರು ಬಂದು ಕಡಿಯುವಾಗ ಕರುಳು ಚುರುಕ್ಕೆನ್ನುತ್ತದೆ. ನನ್ನಷ್ಟೇ ವಯಸ್ಸಾಗಿದ್ದ, ತಾನು ತುಂಬಿಕೊಳ್ಳಬೇಕು, ಸಾವಿರಾರು ಜೀವಗಳಿಗೆ ನೆರಳಾಗಬೇಕು ಎಂದು ನನ್ನಂತೆಯೇ ಕನಸು ಕಾಣುತ್ತಿದ್ದ, ನಮ್ಮ ಕಾಡಿನ ಅಪರೂಪದ ಸಿಂಗಳೀಕಗಳಿಗೆ ಮನೆಯೇ ಆಗಿದ್ದ ಮರಗಳು ಜೀವ ಬಿಟ್ಟು ವಿಲಿವಿಲಿ ಎನ್ನುತ್ತಿದ್ದರೆ ಇಲ್ಲಿ ನನ್ನ ಜೀವ ಅದೆಷ್ಟು ತಲ್ಲಣಿಸಬೇಡ ಹೇಳಿ.
ನನಗೆ ಮನುಷ್ಯರೆಂದರೆ ಭಯವಾಗತೊಡಗಿದೆ. ಹಿಂದೆ ಇದೇ ಆಗುಂಬೆ ಕಾಡಲ್ಲಿ ಗೊಲ್ಲ ಹಸುಗಳನ್ನು ಮನೆಯತ್ತ ಸಾಗಿಸುವಾಗ, ನಿದ್ದೆ ಬಂದ ಮನಷ್ಯನೊಬ್ಬ ನಮ್ಮ ಬುಡದಲ್ಲೇ ಬಂದು ಮಲಗಿಕೊಂಡಾಗ, ಪುಟ್ಟ ಮಗುವೊಂದು ಗಾಡಿಯಲ್ಲಿ ಹೋಗುತ್ತ ನಮ್ಮನ್ನು ನೋಡುತ್ತಿದ್ದಾಗ, ನಾವೆಲ್ಲ ಎಷ್ಟು ಖುಷಿಪಡುತ್ತಿದ್ದೆವು. ಆದರೆ, ಈಗೀಗ ಒಳ್ಳೆ ದಾರಿಯಾಗಬೇಕು, ತುಂಬಾ ವೇಗದಲ್ಲಿ ಊರು ಸೇರಬೇಕು ಅನ್ನೋ ಆಶೆಯಿಂದ ನಮ್ಮ ಸಂಸಾರವನ್ನೆಲ್ಲಾ ನಾಶ ಮಾಡಿ ನೀವೆಲ್ಲ ದಾರಿ ಮಾಡಲು ಹೊರಟಿರುವಾಗ ನಾವು ಹೇಗೆ ಪ್ರತಿಭಟಿಸೋದು ಹೇಳಿ! ಕೆಲವು ಜನ ಬಂದು ನಮ್ಮನ್ನೇ ನೋಡಿ ಅಬ್ಟಾ ಎಂಥ ದೊಡ್ಡ ಮರ, ತೆಗೆದರೆ ಲಕ್ಷಕ್ಕಂತೂ ಮೋಸವಿಲ್ಲ ಅಂತ ಹೇಳುವಾಗ ನಾವು ಕುಸಿದೇ ಹೋಗುತ್ತೇವೆ. ನಾವೆಂದರೆ ಹಣದ ಯಂತ್ರವಾಗಿಬಿಟ್ಟೆವಲ್ಲ , ಯಾಕೆ ನಮ್ಮನ್ನು ಹಣದಿಂದ ಅಳೆಯುತ್ತಿದ್ದಾರೆ. ನಾವು ಕೊಡುವ ಗಾಳಿ, ಉಸಿರು, ಮಳೆ, ನೆರಳು, ತಂಪು, ಹಣ್ಣು ಇವುಗಳ ಬಗ್ಗೆ ನಿಮಗೆ ನೆನಪೇ ಆಗೋದಿಲ್ಲವಾ? ಎಂದು ಬಿಕ್ಕುತ್ತೇನೆ.
ನನ್ನ ಜೊತೆಗೇ ಬದುಕುತ್ತಿರುವ ಸಿಂಗಳೀಕಗಳು, ನನ್ನ ಬಡದಲ್ಲಿರುವ ತೊರೆಯಲ್ಲಿ ಹರಿಯುವ ನೂರಾರು ಜಾತಿಯ ಕಪ್ಪೆಗಳು, ಸಾವಿರಾರು ಜಾತಿಯ ಹಕ್ಕಿಗಳು, ಮಳೆ ಕೀಟಗಳು, ಚಿಟ್ಟೆಗಳು ಇವರೆಲ್ಲಾ ನಿಮ್ಮ ಅಭಿವೃದ್ದಿಗೆ ತತ್ತರಿಸಿ ಜೀವಬಿಡೋದನ್ನು ಕಂಡು ನಾನೆಷ್ಟು ಸಲ ಅತ್ತಿದ್ದೇನೆ ಅಂತ ನಿಮಗೇನಾದರೂ ಗೊತ್ತಾ!
ನೋಡಿ, ನಾನು ಇಷ್ಟೆಲ್ಲ ಹೇಳುವಾಗ ಅಲ್ಲಿ ಇನ್ನೊಂದು ಮರದ ಕೊಂಬೆ ಉರುಳಿಬಿತ್ತು. ಅದರಲ್ಲೇ ಮನೆ ಮಾಡಿದ್ದ ಹನುಮ ಬಾಲದ ಸಿಂಗಳೀಕಗಳು, ಕಾಡು ಮೈನಾಗಳು ಅಸಹಾಯಕರಾಗಿ ನನ್ನತ್ತಲೇ ಬರುತ್ತಿವೆ. ನಾನೇನೋ ಒಂದಷ್ಟು ಹೊತ್ತು ಅವುಗಳಿಗೆ ಕಾವಲಾಗಬಲ್ಲೆ, ಆದರೆ, ಆ ಯಂತ್ರ ಹಿಡಿದ ಮನುಷ್ಯರು ನನ್ನ ಮೇಲೆಯೂ ನುಗ್ಗಿ ಬಂದರೆ ಸಾವಿಗೆ ಕೊರಳೊಡ್ಡದೇ ಬೇರೆ ಗತಿ ಇಲ್ಲ. ಇಂದೋ ನಾಳೆಯೋ ಸಾಯೋ ಮರ ನಾನು. ಸಾಯುವ ಮೊದಲು ನನ್ನ ಕೊನೆಯಾಸೆಯನ್ನು ನಿಮಗಾದರೂ ಹೇಳಬೇಡವೆ? ನನ್ನ ಸುತ್ತಲಿರುವ ಜೀವವೈವಿಧ್ಯ, ನನ್ನ ಎಲ್ಲಾ ಸ್ನೇಹಿತರ ಬದುಕು ನನಗೆ ತುಂಬಾ ಮುಖ್ಯ. ನಮ್ಮನ್ನೆಲ್ಲ ಪೊರೆಯೋ ನದಿ ನನ್ನ ಮೈ ತಬ್ಬಿದರೆ, ನನಗೆ ಹೋದ ಜೀವ ಒಮ್ಮೆಗೇ ಬಂದಂತಾಗುತ್ತದೆ. ನನ್ನನ್ನು ಯಾವಾಗ ಸಾಯಿಸುತ್ತಾರೋ ಗೊತ್ತಿಲ್ಲ, ತುಂಬಾ ಪ್ರೀತಿಸುತ್ತಿರುವ ಈ ಕಾಡಲ್ಲಿ ನನ್ನ ಬಾಳಿನ ಕೊನೆ ಕ್ಷಣ ಯಾವಾಗ ಬರುತ್ತದೆಯೋ ಗೊತ್ತಿಲ್ಲ. ನಾನು ಸಾಯೋ ಮೊದಲು ನನ್ನದೊಂದು ಕೊನೆಯಾಸೆ ಈಗಲೇ ಹೇಳಿಬಿಡೋಣವೆನ್ನಿಸುತ್ತಿದೆ. ನನ್ನ ಪ್ರೀತಿಯ ಗೆಳೆಯರನ್ನು, ತಾಯಿಯಂತೆ ನಾವು ಪ್ರೀತಿಸುವ ನದಿಯನ್ನು ಯಾವತ್ತೂ ನಮ್ಮಿಂದ ಕಸಿಯಬೇಡಿ. ನಾವು ಬರೀ ನಮಗಾಗಿಯಷ್ಟೇ ಬಾಳುತ್ತಿಲ್ಲ. ನಿಮಗೂ ಬೇಕಾದಷ್ಟು ಜೀವದುಸಿರ ನೀಡುತ್ತೇವೆ. ದಯವಿಟ್ಟೂ ನಮ್ಮ ಹಸಿರನ್ನು, ನಮ್ಮ ಸಹಜ ಚೆಲುವನ್ನು ಹಾಗೇ ಇರಲು ಬಿಡಿ. ನನ್ನ ಆಗುಂಬೆ ಕಾಡನ್ನು ಸಾಯಿಸದಿರಿ, ಇಲ್ಲಿರುವ ನದಿ, ಕಾಡುಹೂವಿನ ಪರಿಮಳ, ಹಕ್ಕಿಗಳ ಹಾಡು,ಜೀವಿಗಳ ಕಲರವ ಅದರ ಪಾಡಿಗದು ಬೆಚ್ಚಗಿರಲಿ.
ಪ್ರಸಾದ್ ಶೆಣೈ ಆರ್. ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.