ಆಫ್ರಿಕದ ಕತೆ: ಮತ್ಸ್ಯ ರಾಜಕುಮಾರ
Team Udayavani, Oct 7, 2018, 6:00 AM IST
ಕಡಲಿನ ತೀರದಲ್ಲಿ ಗ್ರೇನಿ ಎಂಬ ಹುಡುಗಿ ಇದ್ದಳು. ಅವಳಿಗೆ ತಾಯಿಯನ್ನು ಬಿಟ್ಟರೆ ಬೇರೆ ಯಾರೂ ದಿಕ್ಕಿರಲಿಲ್ಲ. ದಿನವೂ ಕಡಲಿಗೆ ಹೋಗಿ ಬಲೆ ಬೀಸುತ್ತಿದ್ದಳು, ಅದರಲ್ಲಿ ಸಿಲುಕಿದ ಮೀನುಗಳನ್ನು ತಂದು ಮಾರಾಟ ಮಾಡಿ ಜೀವನ ನಡೆಸಿಕೊಂಡಿದ್ದಳು. ಒಂದು ದಿನ ಗ್ರೇನಿ ಬೀಸಿದ ಬಲೆಗೆ ಒಂದು ದೈತ್ಯ ಗಾತ್ರದ ಗಂಡು ಮೀನು ಬಿದ್ದಿತು. ಅದನ್ನು ನೋಡಿ ಅವಳಿಗೆ ತುಂಬ ಖುಷಿಯಾಯಿತು. ಈ ಒಂದೇ ಮೀನಿನ ಮಾರಾಟದಿಂದ ಸಾವಿರಾರು ನಾಣ್ಯಗಳು ಸಿಗುತ್ತವೆ. ಅದರಿಂದ ತಾನು ಒಳ್ಳೆಯ ಸಂಬಂಧ ನೋಡಿ ಮದುವೆಯಾಗಿ ಸುಖದಿಂದ ಇರಬಹುದು ಎಂದು ಮನಸ್ಸಿನಲ್ಲೇ ಹೇಳಿಕೊಂಡು ಬಲೆಯಿಂದ ಮೀನನ್ನು ಹೊರಗೆ ತೆಗೆಯತೊಡಗಿದಳು.
ಆಗ ಮೀನು ಮನುಷ್ಯರಂತೆ ಮಾತನಾಡುತ್ತ, “”ಹುಡುಗಿ, ನನ್ನನ್ನು ಮುಟ್ಟಬೇಡ. ದೂರ ಹೋಗು. ನನ್ನ ಮಾತು ಮೀರಿ ನೀನೆಲ್ಲಾದರೂ ಸ್ಪರ್ಶ ಮಾಡಿದರೆ ಸಾಕು, ನನ್ನ ಹಾಗೆ ಮೀನಿನ ಜನ್ಮ ಪಡೆಯುತ್ತೀಯೆ” ಎಂದು ಎಚ್ಚರಿಸಿತು. ಗ್ರೇನಿ ಅದರ ಮಾತನ್ನು ಲಕ್ಷಿಸಲಿಲ್ಲ. “”ಹೋಗು, ಇಂತಹ ಬೆದರಿಕೆಗಳಿಗೆ ನಾನು ಸೊಪ್ಪು ಹಾಕುವವಳಲ್ಲ. ಮೀನು ಮಾರಾಟ ಮಾಡಿಯೇ ಬದುಕುವ ಕುಟುಂಬ ನನ್ನದು. ಜೀವ ಉಳಿಸಿಕೊಳ್ಳಲು ಮೀನುಗಳು ಏನೇನೋ ಹೇಳುತ್ತವೆ. ನನಗೆ ಅದರಿಂದ ಯಾವ ಭಯವೂ ಇಲ್ಲ” ಎಂದು ಹೇಳಿ ಮೀನಿನ ಮೈಯನ್ನು ಸ್ಪರ್ಶಿಸಿದಳು. ಮರುಕ್ಷಣವೇ ಅವಳಿಗೆ ತನ್ನ ದೇಹದಲ್ಲಿ ಏನೋ ಬದಲಾವಣೆಯಾಗುತ್ತಿದೆ ಎಂಬ ವಿಷಯ ಅರ್ಥವಾಯಿತು. ಅವಳು ನಿಜವಾಗಿಯೂ ಒಂದು ಮೀನಿನ ದೇಹ ಪಡೆದು ನೀರಿಗೆ ಧುಮುಕಿದಳು. ಈಜುತ್ತ ಕಡಲಿನ ತಳಕ್ಕಿಳಿದು ಒಂದು ಸುಂದರವಾದ ಅರಮನೆಯನ್ನು ತಲುಪಿದಳು. ಅಲ್ಲಿ ಸಿಂಹಾಸನದ ಮೇಲೆ ಒಂದು ಮೀನು ಕುಳಿತಿತ್ತು. ಅರಮನೆಯ ಒಳಗೆ ಮನುಷ್ಯರಿಗೆ ಬೇಕಾದ ಸೌಲಭ್ಯಗಳೆಲ್ಲವೂ ಇದ್ದರೂ ಮೀನುಗಳಷ್ಟೇ ಕಂಡುಬಂದವು.
ಮೀನಿನ ರೂಪ ತಳೆದ ಗ್ರೇನಿಯನ್ನು ಕೆಲವು ಮೀನುಗಳು ಕರೆದುಕೊಂಡು ಸಿಂಹಾಸನದಲ್ಲಿ ಕುಳಿತಿದ್ದ ರಾಜನ ಬಳಿಗೆ ಕರೆದೊಯ್ದವು. ತಮ್ಮವರಲ್ಲಿ ಒಬ್ಬನನ್ನು ಅವಳು ಬಲೆ ಬೀಸಿ ಹಿಡಿದು, ಅವನ ಮಾತನ್ನು ಮೀರಿ ಮುಟ್ಟುವ ಅಪರಾಧವೆಸಗಿ ಮೀನಾಗಿರುವುದನ್ನು ಹೇಳಿದವು. ರಾಜ ಮೀನು, “”ಈ ಅಪರಾಧಕ್ಕಾಗಿ ಅವಳನ್ನು ಕತ್ತರಿಸಿ ಚೂರು ಮಾಡಿ ಎಲ್ಲರಿಗೂ ತಿನ್ನಲು ಕೊಡಿ” ಎಂದು ಆಜಾnಪಿಸಿತು. ಗ್ರೇನಿ ಅಳತೊಡಗಿದಳು. “”ನಾನು ಅಪರಾಧ ಮಾಡಿರುವುದು ನಿಜ. ಆದರೆ ನನ್ನನ್ನು ಕೊಂದರೆ ರೋಗಿಷ್ಠೆಯಾದ ನನ್ನ ವೃದ್ಧ ತಾಯಿ ದಿಕ್ಕಿಲ್ಲದೆ ಸಾಯುತ್ತಾಳೆ. ನನ್ನನ್ನು ಕ್ಷಮಿಸಬೇಕು” ಎಂದು ಕೇಳಿಕೊಂಡಳು.
ಆಗ ರಾಜನಾಗಿರುವ ಮೀನು, “”ಅದೋ ಅಲ್ಲಿ ಒಂದು ಬೆಟ್ಟ ಕಾಣುತ್ತಿದೆಯಲ್ಲ, ಅಲ್ಲೊಬ್ಬ ರಾಕ್ಷಸನಿದ್ದಾನೆ. ಅವನ ಅರಮನೆಯ ಒಳಗೆ ಒಂದು ಮುತ್ತಿನ ಕಿರೀಟವಿದೆ. ಅದನ್ನು ಹೇಗಾದರೂ ಮಾಡಿ ತಂದುಕೊಟ್ಟರೆ ನಿನ್ನನ್ನು ಮರಳಿ ಮನುಷ್ಯಳನ್ನಾಗಿ ಮಾಡಿ ಕಳುಹಿಸುತ್ತೇನೆ. ಇಲ್ಲವಾದರೆ ನಿನಗೆ ಸಾವಿನ ಶಿಕ್ಷೆ ತಪ್ಪುವುದಿಲ್ಲ” ಎಂದು ಹೇಳಿತು. ಗ್ರೇನಿಯು ಸ್ವಲ್ಪ$ ಹೊತ್ತು ಯೋಚಿಸಿದಳು. ಬಳಿಕ, “”ಅಡ್ಡಿಯಿಲ್ಲ. ನಾನು ಈ ಕೆಲಸ ಮಾಡಬಲ್ಲೆ. ಆದರೆ ನಾನು ಬಯಸಿದಾಗ ಯಾವುದೇ ಪ್ರಾಣಿ ಅಥವಾ ಪಕ್ಷಿಯಾಗುವ ಶಕ್ತಿ ಕೊಡಲು ಸಾಧ್ಯವೆ?” ಎಂದು ಕೇಳಿದಳು. “”ಆಗಬಹುದು, ನಾನೊಂದು ತಾಯಿತವನ್ನು ನಿನ್ನ ಕೊರಳಿಗೆ ಕಟ್ಟುತ್ತೇನೆ. ಇದು ಸಾಮಾನ್ಯವಾದುದಲ್ಲ, ಮಂತ್ರಶಕ್ತಿಯಿಂದ ಕೂಡಿದೆ. ಅದು ನಿನ್ನ ಇಚ್ಛೆಯನ್ನು ಪೂರೈಸುತ್ತದೆ” ಎಂದು ಹೇಳಿ ಮೀನು ಗ್ರೇನಿಯ ಕೊರಳಿಗೆ ತಾಯಿತವನ್ನು ಕಟ್ಟಿತು.
ಗ್ರೇನಿಯು ಕಡಲಿನ ದಡಕ್ಕೆ ಬಂದಳು. ತಾನೊಂದು ಕಪ್ಪೆಯಾಗಬೇಕೆಂದು ನೆನೆಸಿದಳು. ಮರುಕ್ಷಣವೇ ದೊಡ್ಡ ಕಪ್ಪೆಯಾಗಿ ನೀರಿನಿಂದ ದಡಕ್ಕೆ ಜಿಗಿದು ಬೆಟ್ಟದ ಕಡೆಗೆ ಸಾಗತೊಡಗಿದಳು. ಆಗ ಒಂದು ಕಾಳಿಂಗ ಸರ್ಪವು ಕಪ್ಪೆಯನ್ನು ನೋಡಿತು. ನುಂಗಿಬಿಡುತ್ತೇನೆಂದು ವೇಗವಾಗಿ ಅದರ ಕಡೆಗೆ ಬರತೊಡಗಿತು. ಸರ್ಪದಿಂದ ಪಾರಾಗಲು ಅವಳು ತನಗೆ ಜಿಂಕೆಯಾಗಿ ಬದಲಾಗಬೇಕೆಂದು ಯೋಚಿಸಿದಳು. ಕಪ್ಪೆಯು ಮಾಯವಾಗಿ ಜಿಂಕೆಯಾದ ಕೂಡಲೇ ಸರ್ಪವು ದೂರ ಹೋಯಿತು. ವೇಗವಾಗಿ ಓಡುತ್ತ ಬೆಟ್ಟದ ಬಳಿಗೆ ತಲುಪಲು ಅವಳಿಗೆ ಸುಲಭವಾಯಿತು. ಆದರೆ ರಾಕ್ಷಸನು ನೆಲೆಸಿದ್ದ ಬೆಟ್ಟದ ಸುತ್ತಲೂ ಕಲ್ಲುಗಳಿಂದ ನುಣುಪಾದ ಗೋಡೆಯನ್ನು ನಿರ್ಮಿಸಿದ್ದ. ಜಿಂಕೆಯಾಗಿ ಗೋಡೆಯನ್ನೇರಿ ಕೋಟೆಯೊಳಗೆ ಹೋಗಲು ಸಾಧ್ಯವೇ ಇಲ್ಲ, ಹಕ್ಕಿಯಾಗಿ ಹಾರಿದರೂ ಅಷ್ಟೆತ್ತರ ತಲುಪುವುದು ಸುಲಭವಲ್ಲ ಎಂದು ಗ್ರೇನಿಗೆ ಅರಿವಾಯಿತು.
ಆಗ ಗ್ರೇನಿಗೆ ತಾನು ಇರುವೆಯಾದರೆ ಮಾತ್ರ ಯಾರ ಕಣ್ಣಿಗೂ ಬೀಳದ ಹಾಗೆ ಗೋಡೆಯನ್ನೇರಲು ಸಾಧ್ಯವೆಂಬ ಯೋಚನೆ ಬಂತು. ಅವಳ ತಾಯಿತದ ಬಲದಿಂದ ಇರುವೆಯಾಗಿ ಕೋಟೆಯ ಗೋಡೆಯನ್ನೇರಿದಳು. ಸುತ್ತಲೂ ಬಿಚ್ಚುಗತ್ತಿ ಹಿಡಿದು ನೂರಾರು ಮಂದಿ ರಾಕ್ಷಸರು ಕಾವಲು ಕಾಯುತ್ತಿದ್ದರು. ಅವರಲ್ಲಿ ಒಬ್ಬನ ಬಳಿ ರಾಕ್ಷಸನ ಅರಮನೆಯ ಬೀಗ ತೆಗೆಯುವ ಕೀಲಿಕೈ ಇತ್ತು. ಗ್ರೇನಿ ಇರುವೆಯಾಗಿ ಅವನ ಕಾಲಿನ ಹೆಬ್ಬೆರಳಿಗೆ ಬಲವಾಗಿ ಕಡಿದಳು. ನೋವು ತಾಳಲಾಗದೆ ರಾಕ್ಷಸನು ಒದ್ದಾಡುತ್ತ ಕೈಯಲ್ಲಿ ಭದ್ರವಾಗಿದ್ದ ಕೀಲಿಕೈಯನ್ನು ಕೆಳಗೆ ಹಾಕಿಬಿಟ್ಟ.
ಮರುಕ್ಷಣವೇ ಗ್ರೇನಿ ಒಂದು ಗಿಣಿಯ ರೂಪ ಹೊಂದಿ ಕೀಲಿಕೈಯನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಅರಮನೆಯ ಬಳಿಗೆ ಹೋಗಿ ಬಾಗಿಲಿನ ಬೀಗ ತೆಗೆದಳು. ಒಳಗೆ ಹೋದಳು. ಹೆಗ್ಗಣವಾಗಿ ಬದಲಾಯಿಸಿ ಅರಮನೆಯೊಳಗೆ ಹುಡುಕಿ ಮುತ್ತಿನ ಕಿರೀಟವಿರುವ ಜಾಗವನ್ನು ಕಂಡುಹಿಡಿದಳು. ಗಿಣಿಯಾಗಿ ಅದನ್ನು ಕಚ್ಚಿಕೊಂಡು ಹೊರಗೆ ತಂದಳು. ಆಗ ನಿದ್ರೆಯಲ್ಲಿದ್ದ ರಾಕ್ಷಸ ಎದ್ದುಬಂದ. ಗಿಣಿಯನ್ನು ಮುಷ್ಟಿಯಲ್ಲಿ ಹಿಡಿದುಕೊಂಡ. “”ಯಾಕೆ ನನ್ನ ಅರಮನೆಯೊಳಗೆ ಬಂದೆ? ಸತ್ಯ ಹೇಳು” ಎಂದು ಕೇಳಿದ. ಗ್ರೇನಿ ಸತ್ಯ ಸಂಗತಿ ಹೇಳಲಿಲ್ಲ. “”ಕಾಡಿನಲ್ಲಿ ಬರಗಾಲ ಬಂತು. ಹಣ್ಣು ಹುಡುಕಿಕೊಂಡು ಈ ಕಡೆಗೆ ಬಂದೆ. ದಯವಿಟ್ಟು ನನಗೆ ಜೀವದಾನ ಮಾಡು” ಎಂದು ಬೇಡಿದಳು.
ರಾಕ್ಷಸನು ಗಿಣಿಗೆ ಜೀವದಾನ ಮಾಡಲು ಒಪ್ಪಿದ. ಆದರೆ, “”ಆಕಾಶದಲ್ಲಿ ಮಿನುಗುತ್ತಿರುವ ನಕ್ಷತ್ರಗಳನ್ನು ನೋಡು. ಒಂದು ಪಾತ್ರೆ ತುಂಬ ನಕ್ಷತ್ರಗಳನ್ನು ತಂದುಕೊಟ್ಟರೆ ಜೀವದೊಂದಿಗೆ ಬಿಡುತ್ತೇನೆ, ಇಲ್ಲವಾದರೆ ಕೊಲ್ಲುತ್ತೇನೆ” ಎಂದು ಹೇಳಿದ. ಗಿಣಿ ಅದಕ್ಕೊಪ್ಪಿ$ ಹೊರಗೆ ಹೋಯಿತು. ಒಂದು ಪಾತ್ರೆಯಲ್ಲಿ ಅರ್ಧದಷ್ಟು ನೀರು ತುಂಬಿಸಿತು. ರಾಕ್ಷಸನ ಬಳಿಗೆ ತಂದು, “”ಇಣುಕಿ ನೋಡು, ಇದರಲ್ಲಿ ನಕ್ಷತ್ರಗಳಿವೆ” ಎಂದಿತು. ಆಕಾಶದಲ್ಲಿರುವ ನಕ್ಷತ್ರಗಳ ಪ್ರತಿಬಿಂಬ ನೀರಿನಲ್ಲಿ ರಾಕ್ಷಸನ ದೃಷ್ಟಿಗೆ ನಕ್ಷತ್ರಗಳ ಹಾಗೆಯೇ ಕಾಣಿಸಿತು. ಅವನು ಅದನ್ನು ಹೆಕ್ಕಲು ಪ್ರಯತ್ನಿಸುತ್ತಿರುವಾಗ ಗಿಣಿಯಾಗಿದ್ದ ಗ್ರೇನಿ ಮೆಲ್ಲಗೆ ಕಿರೀಟವನ್ನು ಕಚ್ಚಿ ಕೊಂಡಳು. ವೇಗವಾಗಿ ಹಾರಿಕೊಂಡು ಕೋಟೆಯನ್ನು ದಾಟಿ ಕಡಲಿನ ತೀರವನ್ನು ತಲುಪಿದಳು.
ಗ್ರೇನಿ ಮತ್ತೆ ಮೀನಿನ ರೂಪ ಧರಿಸಿ ಕಿರೀಟವನ್ನು ಹಿಡಿದುಕೊಂಡು ಸಿಂಹಾಸನದಲ್ಲಿರುವ ಮೀನಿನ ಬಳಿಗೆ ಹೋದಳು. ಕಿರೀಟವನ್ನು ಮುಟ್ಟಿದ ಕೂಡಲೇ ಮೀನು ಒಬ್ಬ ರಾಜಕುಮಾರನಾಯಿತು. ಉಳಿದ ಮೀನುಗಳು ಕಿರೀಟವನ್ನು ಹೀಗೆಯೇ ಮುಟ್ಟಿ ಅರಮನೆಯ ಕೆಲಸಗಾರರಾಗಿ, ಪ್ರಜೆಗಳಾಗಿ ಬದಲಾದವು. ಗ್ರೇನಿಯೂ ಮೊದಲಿನ ರೂಪ ಪಡೆದಳು. ಅರಮನೆಯ ಸುತ್ತಲಿದ್ದ ನೀರು ಮಾಯವಾಗಿ ಅದೊಂದು ನಗರವಾಯಿತು. ಅವಳು ವಿಸ್ಮಯದಿಂದ, “”ಇದೆಲ್ಲ ಹೇಗಾಯಿತು?” ಎಂದು ಕೇಳಿದಳು.
ರಾಜಕುಮಾರನು, “”ಆ ದೈತ್ಯ ರಾಕ್ಷಸ ಮಾಯೆಯಿಂದ ನನ್ನನ್ನೂ ಪ್ರಜೆಗಳನ್ನೂ ಮೀನುಗಳಾಗಿ ಮಾಡಿದ್ದ. ಆ ಮುತ್ತಿನ ಕಿರೀಟದಿಂದ ಮಾತ್ರ ನಮಗೆ ಮರುಜನ್ಮ ಬರುವುದೆಂದು ಗೊತ್ತಿತ್ತು. ಅದನ್ನು ತರಲು ಧೈರ್ಯವಂತರು ಯಾರೂ ಸಿಕ್ಕಿರಲಿಲ್ಲ. ಜಾಣೆಯಾದ ಕಾರಣ ಅದು ನಿನ್ನಿಂದ ಸಾಧ್ಯವಾಯಿತು” ಎಂದು ಹೇಳಿ, ಗ್ರೇನಿಯನ್ನು ಮದುವೆ ಮಾಡಿಕೊಂಡು ಸುಖವಾಗಿದ್ದ.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.