ಅಕ್ಕ
Team Udayavani, Mar 4, 2018, 6:30 AM IST
ರಾಮ ಮತ್ತು ಲಕ್ಷ್ಮಣ ಎಂದು ನನ್ನನ್ನೂ ಅಕ್ಕನನ್ನೂ ಕರೆದದ್ದರಲ್ಲಿ ಬೇಕಾದಷ್ಟು ವ್ಯಂಗ್ಯವಿತ್ತು, ಹುಡುಕಿದರೆ. ಅಪ್ಪ ರಾಮಾಯಣ ಓದಿಯೂ ರಾಮಭಕ್ತರಾಗದೇ ಉಳಿದವರೆಂದು ಅಜ್ಜಿ ಗೊಣಗುತ್ತಿದ್ದುದು ಕೇಳಿ ಬೆಳೆದಿದ್ದ ನಾನು, ರಾಮಾಯಣವೇ ವ್ಯಂಗ್ಯವಾಗಿ ಕಂಡಿತ್ತೇ ಅಪ್ಪನಿಗೆ, ಹಾಗೇ ಸಿಕ್ಕಿದ ಹೆಸರುಗಳೇ ಎಂದು ಕಲ್ಪಿಸಿಕೊಳ್ಳುತ್ತಿದ್ದೆ.
ಹುಡುಗಿಯರಿಬ್ಬರಿಗೆ ಹೀಗೆ ಗಂಡು ಹೆಸರುಗಳನ್ನಿಟ್ಟಾಗ ಊರವರೆಲ್ಲ ನಕ್ಕಿದ್ದರಂತೆ. ಶಾಲೆಯಲ್ಲೂ ಸಾಕಷ್ಟು ತಮಾಷೆಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದೂ ಇದೆ. ತಂಗಿಯಾದ ನನಗೆ ರಾಮನ ಹೆಸರಿಟ್ಟು , ಅಕ್ಕನಿಗೆ ಲಕ್ಷ್ಮಣನೆಂಬ ಹೆಸರಿಟ್ಟಿದ್ದರಲ್ಲೂ ಬರೀ ವ್ಯಂಗ್ಯವಷ್ಟೇ ಕಂಡಿದ್ದಿದ್ದು ನನಗೆ. ನಿನ್ನೆ ಅವಳನ್ನು ಜರಿದು, ನಂಬಿಕೆಗೆ ಸಲ್ಲಳು ಎಂದೆಲ್ಲ ಕೂಗಾಡಿ ಬರುವವರೆಗೂ. ಬಂದ ಮೇಲೆ? ಬೆಂದೆ. ಈ ನಗರದಲ್ಲಿ ತಂಪೆರೆಯಲು ನೀರಿದೆಯೇ? ತುಂಬಿಸಿಬಿಟ್ಟ, ಆದರೆ ಹರಿವಿಲ್ಲದ ನದಿಯಿದೆ. ಅಷ್ಟೇ. ಆದರೆ, ಅದರ ಸಿಮೆಂಟು ದಡದಲ್ಲಿ ನಿಂತರೂ ಸಾಕು, ಅದೇನೋ ವಿಚಿತ್ರ ಸುಖ ಸಿಗುತ್ತೆ, ಹಠ ಸಾಧಿಸಿದ ಸುಖವೆಂದೆನಿಸಿದರೂ ಕರಗಿ, ನೀರಾಗಿ, ಅದೇ ನದಿಯ ಮೃತಶರೀರದ ಬಂಧನದಲ್ಲಿ, ಮೊಳೆಯದಲೆಗಳ ಮೂಕ ಮರ್ಮರ ಎಂದು ಬರೆದ ಕವಿ ಅರ್ಥವಾಗುತ್ತಾರೆ, ಮಾತಾಡದೇ, ಒಪ್ಪಿಸಬೇಕಾದವರಿಗೆ ಒಪ್ಪಿಸದೇ ಉಳಿಸಿದ ಮಾತುಗಳೆಲ್ಲ ಅಲ್ಲಿ ಮುಂದೆಹೋಗದ, ಹಿಂದೆಬಾರದ ತೆಳ್ಳಗಿನ ಅಲೆಗಳಾಗುತ್ತವೆ.
ಹುಟ್ಟಿ ಬೆಳೆದ ಪುಟ್ಟ ಊರಿನ ಅಷ್ಟೂ ಸಣ್ಣತನಗಳೂ ಸೇರಿ ಬೆಳೆದವಳು ನಾನು. ಮನೆಯವರ ಬುದ್ಧಿ ಅದೆಷ್ಟು ಬೆಳೆದಿದೆಯೆಂದು ಅರ್ಥವಾಗಲು ನಾವೂ ಬೆಳೆಯಬೇಕು. ನಾನು ಬೆಳೆದಿದ್ದು ನಿಧಾನ, ಅತಿ ನಿಧಾನ. ಹೆಸರು ಬದಲಿಸಿಬಿಟ್ಟರೆ ಅಕ್ಕ ತಂಗಿಯಾಗಿ ತಂಗಿ ಅಕ್ಕನಾಗಬಲ್ಲಳೆ? ಅಜ್ಜ-ಅಜ್ಜಿಯ ಮುದ್ದು ಅಷ್ಟೂ ಸಿಕ್ಕಿ ಬೆಳೆದಿದ್ದ ನಾನು, ಅಪ್ಪ ಹೇಗೋ ಹಾಗೆ ಎರಡು ಹೆಣ್ಣು ಮಕ್ಕಳನ್ನು ಬೆಳೆಸಿಯಾರೆಂದೆಲ್ಲ ಊರವರು ಅಂದುಕೊಂಡರೆ ಅಮ್ಮನ ಮನೆಯಿಂದ ಅಜ್ಜ-ಅಜ್ಜಿಯನ್ನು ಕರೆಸಿಕೊಂಡು, ತಾನೇ ತಾಯಾಗಿ ನಿಂತು ಮಮತೆಯಿಂದಲೇ ಬೆಳೆಸಿದರು. ಅಮ್ಮ ಇಲ್ಲ ಎಂಬುದು ಅರ್ಥವಾಗಿದ್ದು ಕೊರತೆ ಕಂಡು ಅಲ್ಲ, ಉಳಿದ ಸಮಪ್ರಾಯದ ಮಕ್ಕಳನ್ನು ನೋಡಿದಾಗಲೇ. ನಾನು ಚಿಕ್ಕವಳು. ಅಕ್ಕನಿಗೆ ಅಮ್ಮನಿಲ್ಲದ ನೋವು ಇನ್ನೂ ಕಾಡಿರಬೇಕು, ಅಮ್ಮ ಇದ್ದು ಇಲ್ಲವಾದದ್ದು ಅವಳ ಪಾಲಿಗೆ, ನನಗೆ ಅವರು ಇರಲೇ ಇಲ್ಲ.
ಸಮೃದ್ಧ ಬಾಲ್ಯ. ನಾನು ಬೆಳೆದು ಬರುವಷ್ಟರಲ್ಲಿ ಅಪ್ಪನ ಸಂಪಾದನೆ ನಮ್ಮ ಮನೆಯನ್ನು ಖುಷಿಯಾಗಿಡುವಷ್ಟಂತೂ ಆಗಿತ್ತು. ಸರಳತೆ ಎಲ್ಲರಿಗೂ ಸಿಕ್ಕ ಗುಣ. ಆದರೂ ನನ್ನ ಬಾಲ್ಯ ಕೋಣೆಯೊಳಗೆ ಒಂಟಿಯಾಗಿ ದಿನವಿಡೀ ಕುಳಿತು ಪುಸ್ತಕಗಳಲ್ಲೇ ಮುಳುಗಿ ಹೋಗುವಷ್ಟು ಐಷಾರಾಮಿಯಾಗಿತ್ತು. ಅಕ್ಕ ಆವಾಗ ಅದೇನು ಮಾಡುತ್ತಿದ್ದಳು? ಮನೆಯ ಅಷ್ಟೂ ಕೆಲಸಗಳನ್ನು ನಿಭಾಯಿಸುವ ತಾಳ್ಮೆ, ತಾಕತ್ತು ಶಾಲೆಯ ಕಾಲದಿಂದಲೂ ಅವಳಲ್ಲಿದ್ದಿದ್ದು ಆಗ ನನಗೆ ಅರ್ಥವಾಗಿರಲಿಲ್ಲ. ಅವಳು ಖುಷಿಯಾಗಿ ಅಡುಗೆ ಮಾಡಿ ಉಣ್ಣಿಸುತ್ತಿದ್ದರೆ, ನಾನು ಸುಖವಾಗಿ ಕೋಣೆಯೊಳಗಿನ ಏಕಾಂತದಲ್ಲಿರುತ್ತಿದ್ದೆ. ಪುಸ್ತಕಗಳೊಳಗಿನ ಲೋಕ ನನ್ನದೆಂಬ ಅಹಂಕಾರವೂ ಇತ್ತು. ಅವಳು ಊರಿನ ಪುಟ್ಟ ಲೋಕದಲ್ಲೇ ಸಿಕ್ಕಿಕೊಂಡಳು. ಸಮಾಜವಿಜ್ಞಾನದ ಅದೇನೋ ಬೊಗಳೆ ಪಾಠಗಳು. ಅವಳ ಮದುವೆಗೆ ನಾನು ಮೈಸೂರಿನ ಕಾಲೇಜಿನಿಂದ ಬಂದಿದ್ದೆ.
ಹಮ್ಮಿನಲ್ಲಿ. ನೋಡು, ನಾನಿನ್ನೂ ಓದಬಹುದೆಂಬ ಗತ್ತಿನಲ್ಲಿ. ಪ್ರೀತಿಯಿರಲಿಲ್ಲವೆಂದಲ್ಲ, ನನಗವಳು ಬಿಟ್ಟರೆ ಬೇರೆ ಲೋಕವೇ ಇಲ್ಲವೆಂಬಷ್ಟು ಪ್ರೀತಿ. ಅವಳ ಪುಟ್ಟ ಲೋಕದ ಸುಖ ನನಗರಿವಾಗುವುದಕ್ಕಿಂತಾಚೆಗೆ ಇನ್ನಾರಿಗೂ ಆಗಲೇ ಸಾಧ್ಯವಿಲ್ಲವೇನೋ. ಅವಳು ಭಾವನ ಮನೆಗೆ ಹೊರಟು ನಿಂತಾಗ ನಾನು ಎಲ್ಲಿಲ್ಲದ ಸಿಟ್ಟಲ್ಲಿ ಭುಸುಗುಟ್ಟಿದ್ದೆ- ಹೆಣ್ಣೇ ಏಕೆ ಗಂಡಿನ ಮನೆಗೆ ಹೋಗಬೇಕೆಂದು. ಅವಳೂ ಒಪ್ಪಿ , ತಲೆದಡವಿ, ಕಣ್ಣಂಚಿನ ಮಿಂಚಿನ ಮುತ್ತಿಟ್ಟು ಹೋದವಳು, ನಾಲ್ಕಾರು ತಿಂಗಳಲ್ಲಿ ಅಪ್ಪ ಕಟ್ಟಿದ್ದ ತೋಟದ ಮನೆಗೆ ದಿಕ್ಕಾಗಿದ್ದಳು. ಭಾವ ಬಂದು ನಿಂತು, “”ನೋಡೇ, ನಿನ್ನ ಮನೆ, ಎಷ್ಟು ಹಸಿರಾಗುವುದೋ ನೋಡು” ಅಂದಿದ್ದರು. ಅವಳು ಲಕ್ಷ್ಮಣನಲ್ಲ, ರಾಮ ಅಂತ ಅಜ್ಜಿ ರಾಮಭಕ್ತಿಯಿಂದ ಹೇಳುವಾಗ ಅಪ್ಪನ ಕಣ್ಣಿಂದ ಅದೇ ಮಿಂಚಿನ ಮುತ್ತುದುರುತ್ತಿತ್ತು.
ನಾನು ಓದಿದ್ದೆಲ್ಲ ಸಲ್ಲುವ ಸಂಬಳದ ಕೆಲಸ ಬೆಂಗಳೂರಿನಲ್ಲಿ ದಕ್ಕಿದಾಗ ಹೆಮ್ಮೆಯೆನಿಸಿತ್ತು. ಆಗ ಅಕ್ಕನೂ ಭಾವನೂ ಬಂದು ಮನೆ ಹುಡುಕಿ, ನೆಲೆ ಮಾಡಿಟ್ಟು ಕೊಟ್ಟು ಹೋದರು. ಆಗ ಜೀವನದಲ್ಲಿ ಮನು ಬಂದಿದ್ದ. ಅವನ ಕನಸುಗಳಲ್ಲಿ ಅವನಂಥಾದ್ದೇ ಸ್ವಾತಂತ್ರ್ಯವಿತ್ತು. ಅವನಿಗೆ ನನಗಿಂತ ಆಚೆ ಅಕ್ಕನ ಮೇಲದೇನೋ ಹೆಮ್ಮೆ. ನಮ್ಮ ಪ್ರತೀ ಜಗಳಕ್ಕೂ ಅವನ ಮಾತು, “ರಾಮನಿಗೇನು ಗೊತ್ತು ಲಕ್ಷ್ಮಣನ ಪ್ರೌಢಿ’ ಎಂಬ ಒಗ್ಗರಣೆ ಬೀಳುತ್ತಲೇ ಇತ್ತು. ಬೆಂಗಳೂರಿಗೆ ಬಂದಾಗ ಹುಡುಕಿದ್ದ ಸ್ವಾತಂತ್ರ್ಯ, ನನ್ನತನವೆಲ್ಲ ಅಲ್ಲಿನ ಕೆರೆಗಳಷ್ಟೇ ಕಲುಷಿತವೆಂದೆನಿಸತೊಡಗಿದಾಗ ಬೆಂಗಳೂರಿಗೆ ಬಂದು ಆಗ ಇನ್ನೂ ಒಂದು ವರ್ಷ. ಕೆಲಸ ಬೇಡವಾಗಿತ್ತು. ಊರಿಗೆ ಹೋಗುವಾಸೆ. ಹೋದರೂ ಮಾಡಲು ಕೆಲಸ ಬಾರದು.
ಬೆಂಗಳೂರಿನ ಕೆಲಸ ಏನಿಲ್ಲವಾದರೂ ದುಡ್ಡಿನ ರುಚಿ ತೋರಿಸಿ ಹಿಡಿದಿಟ್ಟಾಗಿತ್ತು. ಅಕ್ಕ ಊರಲ್ಲಿ ನಮ್ಮದೇ ಶಾಲೆಯ ಟೀಚರು. ಅವಳ ಜೀವನ ಕನಸಿನಂತಿತ್ತು. ನಾನು ಅಡಕತ್ತರಿಯ ಅಲಗಿನಲ್ಲಿದ್ದ ಕಾಲ. ಮುಂದೆ ಓದಿದರೆ ಇದರಿಂದ ಬಿಡುಗಡೆಯೆಂದು, ಮತ್ತೂಂದು ಮರೀಚಿಕೆಯ ಹಿಂದೆ ಬಿದ್ದಿದ್ದೆ. ಆಗ ಭಾವ ಊರಿಗೆ ಕರೆದು, “”ಬಾ, ಇಲ್ಲೇ ಕೆಲಸ ಕಲಿ” ಎಂದಿದ್ದರು. ಅಪ್ಪ , “”ಬೇಡ, ಮುಂದಿನಧ್ದೋದು, ನಿನಗೀ ಕೆಲಸ ಹಿಡಿಸದು, ಇಲ್ಲಿ ಬಂದರೆ ನೀನು ಮತ್ತೆ ಮುಂದೆ ಹೋಗಲಾರೆ” ಅಂದುಬಿಟ್ಟಿದ್ದರು. ಮುಂದೆ ಹೋಗದಿರುವ ಮಾತೇ ಭಯ ಹುಟ್ಟಿಸುವ ಕಾಲ. ನಾನೂ ಅಕ್ಕನೂ ಅಂದು ಜಗಳವಾಡಿದ್ದೆವು. ಅವಳು, “”ನೀನೀಗ ಓಡಿಹೋಗುತ್ತಿರುವುದೆಲ್ಲಿಗೆ?” ಅಂದಿದ್ದಳು. ನಾನಾಗಲೂ ಕೋಣೆಯೊಳಗಿನ ಪುಸ್ತಕದ ರಾಶಿಯೊಳಗಿದ್ದೆ. ಮನು ನನ್ನನ್ನು ನನ್ನಷ್ಟಕ್ಕೇ ಇರಗೊಟ್ಟು ಅವನ ಪಾಡಿಗೆ ಅವನಿದ್ದ ಅಥವಾ ನಾನು ಹಾಗಂದುಕೊಂಡಿದ್ದೆ. ಅವಳ ಪ್ರಕಾರ ನಾನು ಲೋಕ ನೋಡೇ ಇಲ್ಲ, ಬರೀ ಪುಸ್ತಕದಲ್ಲೇ ಮುಳುಗಿಹೋಗಿದ್ದೇನೆ. ನನ್ನ ಪ್ರಕಾರ ನಾನು ಬೇಕಷ್ಟು ನೋಡಿದ್ದಾಗಿದೆ ಲೋಕ. ಅಕ್ಕನಿಗಿಂತ ಹೆಚ್ಚು. ಅಕ್ಕ ಊರಲ್ಲಿದ್ದು, ಅಲ್ಲೇ ಮುಳುಗಿ ಹೋಗುತ್ತಿದ್ದಾಳೆ. ನಾನು ಇನ್ನೊಂದಿಷ್ಟು ನೋಡಹೊರಟಿದ್ದೇನೆ. ಅಪ್ಪನೂ ಹೇಳಿಲ್ವೇ, ಊರಲ್ಲಿದ್ದರೆ ಸಿಕ್ಕಿಹಾಕ್ಕೊಂತೀಯಾ ಅಂತ. ಅಕ್ಕನ ಪ್ರಕಾರ ನಾನಾಗಲೇ ಸಿಲುಕಿ ಒದ್ದಾಡುತ್ತಿದ್ದೇನೆ. ನನಗೆ ಸಿಟ್ಟು , ಅಕ್ಕನಿಗೆ ಹೇಳದೇ ಉಳಿಸಿದ್ದ ವಿಷಯಗಳು ಅಷ್ಟರಲ್ಲಿ ಸಾಕಷ್ಟಾಗಿತ್ತು. ಅಕ್ಕನ ಲೋಕ ನನ್ನ ಲೋಕ ಬೇರೆ ಬೇರೆಯದಾಗಿ, ಅಕ್ಕನ ಲೋಕದ ಸುಖ ನನಗೆ ಒಳಗೊಳಗೇ ಸ್ಪಷ್ಟವಾಗಿ ಹೋಗಿ, ಆದರೆ ಒಪ್ಪಿಕೊಳ್ಳಲೂ ಬಿಡಲೂ ಆಗದೇ, ಒದ್ದಾಡುತ್ತಿದ್ದೆ. ಅಕ್ಕನಿಗಾಗ ಸರಿಗಳ ಹುಡುಕಾಟಕ್ಕಿಂತ ಬದುಕಿನ ಸುಖದ ಹುಡುಕಾಟದ ದಾರಿ ಒಲಿದಿತ್ತು. ಅದೇನೇನೋ ಕೃಷಿ, ತಮ್ಮದೇ ನೀರು, ತಮ್ಮದೇ ಮಣ್ಣಲ್ಲಿ ಆಹಾರ ಬೆಳೆಯುವುದು, ಹುಟ್ಟಲಿರುವ ಮಕ್ಕಳಿಗಾಗಿ ಅವರದ್ದೇ ಲೋಕ, ಅವರಿಗೆ ಮರ ಹತ್ತಲೂ, ತೆಂಗಿನಕಾಯಿ ಕೊಯ್ಯಲೂ ಹೇಳಿಕೊಡುವ ಕನಸು. ನಾನು ಚಿಕ್ಕಂದಿನಲ್ಲಿ ಕೋಣೆಯೊಳಗೇ ಕುಳಿತು ಓದಿದ ಪುಸ್ತಕಗಳೆಲ್ಲ ಇವಳ ತೋಟದ, ಅಡುಗೆ ಮನೆಯ, ಶಾಲೆಯ ಅನುಭವಗಳಿಂದಲೇ ಸಿಕ್ಕಿದೆಯೆಂಬ ತಿಳಿವು ನನಗಾಗಿದ್ದ ಕಾಲ. ಆದರೆ ನಾನು ಬಿಟ್ಟು ಹೋಗಲೊಲ್ಲೆ ಈ ಕೆಲಸ, ಮುಂದಿನ ಓದು ಎಂಬ ಆಸೆಗಳನ್ನು. ಊರಿಗೆ ಹೋದಾಗೆಲ್ಲ ನನಗೆ ಸಿಕ್ಕುವ ಗೌರವ ಕಡಿಮೆಯದೇನಲ್ಲ. ಮಮತೆಗೂ ಕೊರತೆಯಿಲ್ಲ. ಆಗ ತಿಳಿವಾಗತೊಡಗಿತ್ತು, ನಮ್ಮ ಊರಿಗೆ ಎಲ್ಲವನ್ನೂ ತಿಳಿಯುವ ಕುತೂಹಲ, ಅರ್ಥಮಾಡಿಕೊಳ್ಳುವ ಹಂಬಲ ಬೇಕಾದಷ್ಟಿದೆಯೆಂದು. ಊರಿನ ದಾರಿಗಳು, ತಿಳಿಯುವ ರೀತಿಗಳು ಪುಸ್ತಕಗಳಷ್ಟೇ ಅಲ್ಲವೆಂದು. ಅಕ್ಕ ಅಲ್ಲೇ ನಿಂತು ಬೆಳೆಯುತ್ತಿದ್ದಳು. ನನಗವಳ ಬಗ್ಗೆ ಅಪಾರ ಹೆಮ್ಮೆಯೆನಿಸುತ್ತಿದ್ದಾಗಲೇ ನಾನು ಕಳೆದುಹೋದೆನೆಂಬ ದುಃಖ ನನ್ನ ಪುಸ್ತಕಗಳ ಕೋಣೆಯ ಪುಟಗಳಲ್ಲಿ ತುಂಬುತ್ತಲೇ ಹೋಗಿತ್ತು. “ಸಾಕು ಕಣೇ, ಅಲೆದಿದ್ದು, ಸುಮ್ಮನಾಗು’ ಅಂದರೂ ನನಗಾಗ ಒಳಗೇ ಉಮ್ಮಳಿಸುವ ದುಃಖ, ಹೊರಬರುವಾಗ ಹೇಳಲಾಗದ ಸಂಕಟವಾಗಿ ಅವಳ ಮೇಲೇ ಹೊಗೆ ಕಾರುತ್ತಿದ್ದೆ. ಅವಳ ಕ್ಷಮೆಯೊಳಗೆ ನಾನು ಮಲಗಿಬಿಡುತ್ತಿದ್ದೆ. ಅವಳು ಸರಿ, ಆದರೆ ನನ್ನದೂ ತಪ್ಪಲ್ಲವೆಂಬ ಅವಳ ಭಾವವೇ ಇರಿಸುಮುರಿಸಾಗಿಸುತ್ತಿದ್ದುದು. ಭಾವನ ಮಮತೆ, ಅಪ್ಪನ ಓದು, ಆಗಲೂ ತೋಟದಲ್ಲಿರುತ್ತಿದ್ದ ಅಜ್ಜ-ಅಜ್ಜಿ. ನಾನು ಬೇರೆಯವಳಾದೆ. ಹೇಗೋ ಹೊರಗಿನವಳಾದೆ. ಮತ್ತೆ ಬೆಂಗಳೂರೇ ಸರಿ, ಹೋಗಿಬಿಡೋಣ ಅಂತನಿಸಿ ಓಡಿಬಿಡುತ್ತಿದ್ದೆ. ಅಕ್ಕನಿಗೆ ಹೇಳದೇ ಹೇಗೋ ಇದೆಲ್ಲ ಹೊಳೆದು ಬಿಡುತ್ತಿತ್ತು. ಸಂಕಟವನ್ನು ಮನುವಿಗೂ ಒಪ್ಪಿಸಿಕೊಳ್ಳಲಾಗದ ಸ್ಥಿತಿಗೆ ಬಂದಿದ್ದೆ. ದೂರವಾಗಿದ್ದೆ ಎಲ್ಲರಿಂದ. ಬೆಂಗಳೂರು ಎಲ್ಲರಿಂದ ದೂರ ಅಡಗಿ ನಿಲ್ಲಲು ಸಿಗುವ ಅಡ್ಡವಾಗುತ್ತಿತ್ತು ಅಷ್ಟೇ. ಅಲ್ಲಿನ ಗೆಳೆಯರೂ ಕೆಲಸವೂ ಎಲ್ಲ ಅರ್ಥಹೀನವಾಗಿ ಮುಗಿದಿತ್ತು. ಅಲ್ಲಿಂದಲೂ ಓಡಿಹೋಗುವ ಆಸೆ ಬಂದಾಗಿತ್ತು.
ಓಡಿ ತಲುಪಿದ ಊರಿಗೆ ಸತ್ತ ನದಿಯ ಅನುಭವವಿತ್ತು. ಬದುಕು ಮತ್ತೆ ಹುಟ್ಟುವ ಬವಣಿಕೆಯಲ್ಲಿತ್ತು. ತಪ್ಪುಗಳನ್ನು ತಪ್ಪಾಗಿ ಒಪ್ಪಿಕೊಂಡು ಮುಂದೆ ಹೋಗುವ ಮನಸ್ಸಿದ್ದ ಊರು. ಇಲ್ಲಿ ರಸ್ತೆಯ ಮೇಲೆ ಇನ್ನೆಲ್ಲೂ ಕಾಣದಷ್ಟು ಹುಚ್ಚುಚ್ಚಾಗಿ, ಅಪಾಯಕರವಾಗಿ ಗಾಡಿ ಓಡಿಸುತ್ತಾರೆ, ಆದರೆ ಇಲ್ಲಿ ಜಗಳಗಳೇ ಇಲ್ಲ, ತಪ್ಪಾದ ಮೇಲೂ ನಕ್ಕು, “ನಮಸ್ತೇ’ ಎಂದು, ಗೆರೆ ಬಿದ್ದರೆ ದುಡೂx ಕೊಟ್ಟು ಮುಂದೆ ಹೋಗುತ್ತಾರೆ. ಕೋಣೆಯೊಳಗೇ ಕೂತು ಓದುತ್ತಲೇ ಎರಡೇ ತುಂಡು ಬಟ್ಟೆಯುಟ್ಟು ಊರು ಸುತ್ತಿದ ಗಾಂಧಿಯನ್ನು ನೆನೆಯುತ್ತಾರೆ. ಮತದ ಹುಚ್ಚಲ್ಲಿ ನರಬಲಿಗಳಾದ ಊರು, ಸತ್ತ ನದಿಯ ಆ ಕಡೆಗೂ ಈ ಕಡೆಗೂ ಎಂದು ತುಂಡಾಗಿ, ಆತ್ಮವೇ ಬಿರುಕುಬಿಟ್ಟಂತೆ ಮಲಗಿದೆ. ಶಾಂತಿಯೆನ್ನುತ್ತಾರೆ. ಯಾರಧ್ದೋ ರಾಣಿಯ ಕಥೆಯ ಚಲನಚಿತ್ರ ಬಂದಾಗ ಬೀದಿಗಿಳಿದು ಬೆಂಕಿಯಿಡುವುದನ್ನೂ ಕಂಡಾಗಿದೆ. ಇಲ್ಲಿನವರ ಸುಮ್ಮನಾಗುವ ಬುದ್ಧಿ ನೋಡಿದರೆ ಇವರೆಂತು ಬೆಂಕಿಯಿಡಬಲ್ಲರೆಂದು ಕಂಗಾಲಾಗಿ ಕೂರುತ್ತೇನೆ. ಕಂಡವರೆಲ್ಲ, ಚಹಾದ ಅಂಗಡಿಗಳಿಂದ ಹಿಡಿದು ದೊಡ್ಡ ಸಂಸ್ಥೆಗಳ ತಲೆಯಲ್ಲಿ ಕುಳಿತವರವರೆಗೆ, ಮಮತೆಯಿಂದ, ಗೌರವದಿಂದ ಚಹಾ ಕುಡಿಸಿ ಮಾತಾಡಿಸಿದ್ದಾರೆ. ರಾತ್ರಿ ತಾನಿಲ್ಲವೇ ಇಲ್ಲವೆಂದು ಕೂರುವ, ಕಪ್ಪಾಗುವ ರಿವರ್‌ಫ್ರಂಟಿನಲ್ಲಿ ಬಂದು ನಿಂತರೆ, ಇಷ್ಟೂ ದಿನ, ಸುಮ್ಮನಿರುವ, ನಗುವ, ಚಹಾ ಕುಡಿಸುವ ಈ ಊರು ಹೊತ್ತಿ ಉರಿಯುವುದೆಂತು ಎಂದು ಗಾಬರಿಯಾಗಿದ್ದಿದೆ. ರಾತ್ರಿಯ ಎರಡು ಗಂಟೆಗೂ ಒಬ್ಬಳೇ ಊರಿನಲ್ಲಿ ಓಡಾಡಿದ್ದೇನೆ, ಹುಡುಗಿಯಾಗಿದ್ದೂ. ಅರ್ಥವಾಗುವುದಿಲ್ಲ. ನನ್ನ, ನಾನು ಹುಡುಕಿ ನಡೆದ ಸರಿಗಳೂ, ಸಿದ್ಧಾಂತಗಳೂ, ಆದರ್ಶಗಳೂ ಎಲ್ಲ ಹೇಗೋ ಈ ಸತ್ತ ನದಿಯಲ್ಲಿ ಮುಖ ನೋಡಿ ಕುಣಿಯುವ ರಾತ್ರಿದೀಪಗಳಂತಾಗುತ್ತವೆ.
ನಿನ್ನೆ ತುಮುಲದ ಆಳದಲ್ಲಿದ್ದಾಗ ಅಕ್ಕನ ಕರೆ ಬಂದಿತ್ತು. ಮನು ಮಾತಾಡಿದ್ದನಂತೆ. ಯಾಕೋ ಎಂದಿನಂತೆಯೇ ನನ್ನ ಎಡೆಬಿಡಂಗಿತನವನ್ನೂ ಅವನ ಮಮತೆಯನ್ನೂ ನೆನೆದು, ನನ್ನನ್ನು ಮುದ್ದಿನಿಂದ ಗದರಿದಳು. ಮಾತು ಹಾಗೇ ಸರಿದು ಛೇಡಿಸುತ್ತ ನಾನು ಅವನ ಪ್ರೇಮಕ್ಕೆ ತಕ್ಕದ್ದೇನೂ ಕೊಟ್ಟಿಲ್ಲವೆಂಬ ಮಾತು ಬಂತು. ಒಳಗೇ ನಾನೂ ಒಪ್ಪಿಕೊಂಡು, ತಪ್ಪೆನಿಸಿ ಹಿಂಡಿಹೋಗುವ ವಿಷಯ. ಸುಮ್ಮನಾದೆ. ಜಗಳದ ಸಂಕಟಕ್ಕೀಗ ಅವಳನ್ನು ತಳ್ಳಬಾರದೆಂದು, ಈಗೀಗ ಜಗಳಗಳು ತೀರ ಗಂಭೀರವಾಗುತ್ತಿವೆಯೆಂದೆನಿಸಿ ತುಂಬ ಶ್ರಮಪಟ್ಟು ನಗುವ ನಾಟಕದಲ್ಲೇ ಮಾತು ಮಗಿಸಿದೆ.
ಭಾವನೂ ಮಾತಾಡಿದ್ದಾಯ್ತು. ಅಪ್ಪನಲ್ಲಿ ವಿಷಯ ಇನ್ನೇನೋ ಹೇಳಿ ನನ್ನ ಗಮನವನ್ನೇ ಈ ವಿಷಯದಿಂದ ಸರಿಸಲು ನೋಡಿದ್ದೂ ಆಯ್ತು. ಕರೆ ಮುಗಿಯಿತು. ನಾನು ಒಂಟಿಯಾದೆ. ದೂರದ ಊರಲ್ಲಿ. ಯಾರಿಂದಲೋ ಓಡಿ ಓಡಿ ತಲುಪಿನ ಕೋಣೆಯೊಳಗಿನ ಪುಸ್ತಕದ ರಾಶಿಯೆಡೆಯಲ್ಲಿ. ಸಿಟ್ಟು. ಇವಳಿಗೇಕೆ ನನ್ನ ಮತ್ತು ಮನುವಿನ ವಿಷಯ. ನನಗಿಷ್ಟವಾಗದ್ದೆಂದು ತಿಳಿದೂ ಕಾಡುವುದೇಕೆ? ನಾನ್ಯಾಕೆ ಸುಮ್ಮನಾದೆ? ಹೇಳಿಬಿಡಬೇಕು. ಅಕ್ಕನೆಂದಾದರೆ, ಮುಗಿಸಿಬಿಡಬೇಕು. ಅದು ಸರಿ.
ಅಡಗಿಸಿಡುವುದಲ್ಲ. ಹೇಳಿದಾಗ ಅದು ಸಿಟ್ಟಿನಲ್ಲಿ ಮುಳುಗಿ ಚಿಮ್ಮಿತ್ತು. ಅವಳು ಕಂಗಾಲಾಗಿರಬಹುದು. ಅವಳಿಗೂ ಸುಮ್ಮನೇ ಛೇಡಿಸಿದ್ದಕ್ಕೂ ಈಗೀಗ ಇವಳಿಗೇಕಿಷ್ಟು ಸಿಟ್ಟಿಂದೆಲ್ಲ ಅನಿಸಿರಬಹುದು. ಏನೇನೋ ಹೇಳಿದಳು. ನನಗಿನ್ನೂ ಉರಿದು ಇನ್ನೂ ಮೂರು ಸಾಲು ಕಳಿಸಿದ್ದೆ. ಮತ್ತವಳ ಮಾತಿಲ್ಲ. ಅಯೋಧ್ಯೆಗೆ ಮರಳಿದ ರಾಮನ ಜೊತೆಗೆ ಲಕ್ಷ್ಮಣನಿದ್ದನೆ? ತನ್ನ ಸರಿಗಳನ್ನು ಸಾಧಿಸಲು, ಸೀತೆಯನ್ನು ಕಾಡಿಗಟ್ಟಿದ ರಾಮನೊಡನೆ, ಲಕ್ಷ್ಮಣನಿದ್ದನೆ? ತನ್ನೊಡನಿರಲು ಹಾತೊರೆದ, ಕಾಡಿಗೂ ಬಂದ ರಾಜಕುಮಾರಿಯನ್ನು ಕಾಡಿಗಟ್ಟಬೇಕಾದಾಗ ತಾನೂ ಇಳಿದು ಹೋಗದ ರಾಮನೊಡನೆ, ಲಕ್ಷ್ಮಣನಿದ್ದನೆ? ರಾಜ್ಯವನ್ನೂ ರಾಜಕೀಯತೆಯನ್ನೂ ಮೀರಿದ ಹಸಿ ಮನುಷ್ಯನಾದ ಲಕ್ಷ್ಮಣ! ಅಕ್ಕ ಛೇಡಿಸಿದಾಗ ಅದರೊಳಗಿದ್ದ ಸಂಕಟ, ಸೀತೆಯಂಥ ಮನುವಿನ ಮನಸ್ಸರಿತೇ ಇರಬೇಕು. ಬೆಂಗಳೂರಲ್ಲಿ ಬಿಟ್ಟುಬಂದಾಗಲೂ, ನಾನು ಬೆಳೆಯಬೇಕೆಂದು ನಿಂತಾಗಲೂ, ಅವಗಣನೆಯ ಪರಿಧಿಯೊಳಕ್ಕೆ ಸರಿದಾಗಲೂ ಸುಮ್ಮನಾದ, ಹೇಳಿದರೂ ಅರ್ಥವಾಗದ ಸ್ಥಿತಿಯಲ್ಲಿ ನಾನಿದ್ದೇನೆಂದು ತಿಳಿದು, ಕ್ಷಮಿಸಿ, ಹಿಡಿದ ಕೈ ಬಿಡದ ಸೀತೆಯಂಥ ಮನು ನನಗಿಂತ ಹೆಚ್ಚು ಅಕ್ಕನಿಗೇ ಅರ್ಥವಾಗಿರಬೇಕು. ಅವಳಿಗೆ ಜತೆಯಿರುವ ಸೊಂಪು ಗೊತ್ತು. ನನಗೆ ಎಲ್ಲ ಬಿಟ್ಟು ಹಾರುವ ಜೋನಾಥನ್ ಲಿವಿಂಗÕ$rನ್ ಸೀಗಲ್ಲು ಗೊತ್ತು. ಲಕ್ಷ್ಮಣನಿಗೆ ಸೀತೆಯೂ, ರಾಮನೂ ಇಬ್ಬರೂ ಗೊತ್ತು.
ನಿನ್ನೆ ರಾತ್ರಿ ನನ್ನ ಜೀವನದ ಅಷ್ಟೂ ಏಕಾಂತ ಅಲ್ಲಿ ನದಿಯಲ್ಲಿ, ಅವಳಿಲ್ಲದೇ, ಅವಳ ಸ್ವರ ಕೇಳದೇ ತೆಳುವಾದ ಅಲೆಗಳಾಗಿ ಮರ್ಮರಿಸುತ್ತಿತ್ತು. ಯಾರೋ ಹುಡುಗ ಗಾಂಜಾ ಸೇದಿ ಅವನ ಪುಟ್ಟ ಸಂಚಾರಿ ಸ್ಪೀಕರಿನೊಂದಿಗೆ ಕುಳಿತು ಹಾಡುತ್ತಿದ್ದ. ನಾನು ಕೇಳದ ಇಂಗ್ಲಿಷ್ ಹಾಡು. ತಲೆದೂಗುತ್ತಿದ್ದೆ. ನಾನು ಬಾವರಾಮನ್ ಎಂಬ ಹಾಡಿನ ಗುಂಗಿನಲ್ಲಿದ್ದೆ. ಹುಚ್ಚುಚ್ಚಾಗಿ ಲೋಕವೆಲ್ಲ ಸುತ್ತಿ ಕೊನೆಗೆ ಬಿಹಾರದ ಪುಟ್ಟ ಹಳ್ಳಿಯಲ್ಲಿ ನೆಲೆಗೂಡುವ ಹುಡುಗಿಯೊಬ್ಬಳ ಕಥೆ ಹೇಳಿದ ಹಸಾರೇ ಖ್ವಾಯಿಷೇ ಏಸೀ ಎಂಬ ಚಿತ್ರ. ಅದರ ಕಥೆಯಲ್ಲಿ ಒಪ್ಪಿಕೊಳ್ಳಲಾಗದಂತೆ ಒಂದಿಡೀ ಚಿಂತಾಗತಿಯನ್ನು ಚಿಕ್ಕದಾಗಿಸಿ ತೋರಿಸಿದ್ದರೆಂದು ಹಳಿಯುತ್ತಲೇ ಗಾಂಧಿವಾದದ ಕೆಲವೇ ತುಣುಕುಗಳೂ, ಅಪ್ಪನೂ, ಅಕ್ಕನೂ, ಮನುವೂ ಎಲ್ಲ ಬೆಳೆದು, ನದಿಯಾಗಿ ಹರಿಯತೊಡಗಿದರು ಮುಂದೆ. ಮನುವಿನೊಡನೆ ಸುತ್ತಿದ ದಾರಿಗಳಲ್ಲಿ ಹಸಿರಾಗಿ ಹರಿದ ಗಂಗೆಯಿದ್ದಳು.
ಲಕ್ಷ್ಮಣನೇ ಅಣ್ಣನಾಗಬೇಕಾದವನು. ರಾಮ ಚಿಕ್ಕವನು.
– ರಾಜೇಶ್ವರಿ ಚೆನ್ನಂಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.